ಫೇಕ್ ಬುಕ್ಕೀಸ್ ಮತ್ತು ಫೇಕ್ ಸ್ಟೋರೀಸ್….ಎ ಸ್ಮಾಲ್ ರಿಸರ್ಚ್ ಸ್ಟಡೀ…(ಕನಸಿನಲ್ಲೀ :) )

ನೋಡೀ ಸ್ವಾಮಿ ನಾವಿರೋದು ಹೀಗೆ…… ಪ್ರೊಫೈಲ್……..

ಇರುವುದೊಂದೇ ಪ್ರೊಫೈಲ್. ಸದ್ಯಕ್ಕೆ ಅದನ್ನು ಅಪ್ಡೇಟ್ ಮಾಡೋಕೇ ಇವರಿಗೆ ಸಮಯವಿರುವದಿಲ್ಲ. ಇವರಿಗೆ ಸಮಯವೊದಗಿ ಬಂದಾಗ ಈ ಪ್ರೊಫೈಲ್ಗಳ ಅಪ್ಡೇಟ್ ನೋಡಬಹುದು. ಇವರಿಗೆ ಪ್ರೊಫೈಲ್ಗಳ ಅಪ್ಡೇಟ್ ಮಾಡೋದು ಬಿಟ್ಟು ಇವರ ಜಗತ್ತಿನಲ್ಲಿ ಬೆಟ್ಟದಷ್ಟು ಬೇರೆ ಕೆಲಸವಿರುತ್ತೆ. ಇವರ ಪ್ರೊಫೈಲ್ಗಳ ಅಪ್ಡೇಟ್ ಸಹಜವಾಗಿ ಬೆಳಗ್ಗೆಯೋ ಇಲ್ಲಾ ರಾತ್ರಿಯ ಯಾವುದೋ ನಿಗದಿತ ಸಮಯದಲ್ಲಿ ಕೆಲವು ನಿಮಿಷಗಳೋ ಇಲ್ಲಾ ಘಂಟೆಯಷ್ಟು ಸಮಯದ ಚಟುವಟಿಕೆ ಕಾಣಿಸುತ್ತೆ. ಇವರು ತಮ್ಮ ವೃತ್ತಿಯ ಇತರ ಜವಾಬ್ದಾರಿಗಳಲ್ಲಿ ತೊಡಗಿರುವದರಿಂದ ಇತ್ತ ತಿರುಗಿ ನೋಡಲೂ ಪುರುಸೊತ್ತಿರುವುದಿಲ್ಲ. ಇದು ಈ ರೀತಿಯ ಜನರ ಸಹಜರೀತಿಯ ನಡವಳಿಕೆ. ಅವರು ಇರುವುದೂ ಹಾಗೆಯೇ, ತೋರಿಸಿಕೊಳ್ಳುವುದೂ ಹಾಗೆಯೇ.

ಇವರಿಗೆ ಹಗಲೆಂದರೆ ಹಗಲೇ, ಇರುಳೆಂದರೆ ಇರುಳೇ. ನಡೆಯುವುದೂ ಹಾಗೇ ನುಡಿಯುವುದೂ ಮತ್ತು ನುಡಿಯುವುದೂ ಹಾಗೇ ನಡೆಯುವುದೂ ಇವರ ಜಾಯಮಾನ. ಇವರಿಗೆ ಅವರಿವರ ಯೋಚನೆಗಳ, ಭ್ರಮೆಗಳ ಚಿಂತೆಯಿಲ್ಲ,ಕೊಂಬು,ಕಿರೀಟಗಳ ಕಾಟವಿಲ್ಲ.ಇವರನ್ನು ಇವರಿರುವಂತೆಯೇ ಬೇರೆಯವರು ನೋಡಿದರೆ ಮುಜುಗರವೇನಿಲ್ಲ. ಯಾವ ಒಣ ಜಂಭ, ಡೌಲು, ದೊಂಬರಾಟಗಳ ಅಗತ್ಯವೂ ಇವರಿಗೆ ಇರುವುದಿಲ್ಲ. ನವಿಲುಗರಿ ಸಿಕ್ಕಿಸಿಕೊಂಡು ಕುಣಿಯೋ ಕೆಂಬೂತವಾಗೋ ಯಾವ ಅನಿವಾರ್ಯತೆಗಳೂ ಇರುವುದಿಲ್ಲ. ಇವರ ಬಣ್ಣವಿಲ್ಲದ ಬದುಕ ಯಾರಿಂದಲಾದರೂ ಕದ್ದು ಮುಚ್ಚಿಡಬೇಕು,ಬೆಚ್ಚಿ ಬಚ್ಚಿಡಬೇಕು,ಎಂಬ ಯಾವ ಅಡ್ಡಿ ಆತಂಕಗಳೂ ಇವರಿಗೆದುರಾಗುವುದಿಲ್ಲ.

ನೋಡೀ ಸ್ವಾಮಿ ನಾವಿರೋದು ಹೀಗೆ ಎಂಬ ಸರಳ ಮನಸ್ಸಿನವರಾಗಿರುವುದರಿಂದ ಪರರ ಚಿಂತೆ ನಮಗೇಕೆ ಅಯ್ಯಾ? ಎಂದು ನಿರ್ಲಿಪ್ತರಿರುತ್ತಾರೆ. ಇವರ ಪಾಡಿಗೆ ಇವರು,ತಾವು ಹಾಡಿದ್ದೇ ಹಾಡು, ನೋಡಿದ್ದೇ ನೋಟ,ಬೇರೆಯವರಿಂದ ಇಂದು ನನಗೆ ತಿಳಿದಿದ್ದೇ ತಿಳಿವು ಎಂಬಂತೆ ಯಾರಿಗೂ ಕಾಟಕೊಡದೇ ತಮ್ಮ ಪಾಡಿಗೆ ತಾವು ಇರುತ್ತಾರೆ.ಇವರಿಂದ ಬೇರೆಯವರಿಗೆ ಹೀಗಿರಬೇಕು, ಹಾಗಿರಬೇಕು, ಜಗತ್ತನ್ನೇ ಬದಲಿಸಬೇಕಿದೆ, ಅದನ್ನು ಮಾಡಲಿಕ್ಕೆ ಇಂಥವರಿಂದಲೇ ಸಾಧ್ಯವೆಂಬ ಯಾವ ಭೋದನೆ, ಪಾಠ, ಪ್ರವಚನಗಳೂ ಇಲ್ಲಿ ಕಾಣುವುದಿಲ್ಲ. ಬೇರೆಯವರ ಮನೆ ಮಕ್ಕಳನ್ನು ಭಾವನೆಗಳ ಬಾವಿಗೆ ತಳ್ಳಿ ಆಳ ನೋಡುವ ಕಪಟ ನಾಟಕ ಮಾಡಬೇಕಿರುವುದಿಲ್ಲ. ಹಾಗಾಗಿ ಇವರು ತುಂಬಾ ಸೇಫ್ಆಗಿರುತ್ತಾರೆ. ಇವರಿಗೆ ಯಾವ ಕಾಕಾಸುರರು ಇವರ ಮನೆಬಾಗಿಲಿಗೆ ಬಂದು ಗೋಡೆಮೇಲೆ ಕುಳಿತು ಹೇಲುವುದಿಲ್ಲ. ಅವನು ಗಂಡೋ, ಅವಳು ಹೆಣ್ಣೋ, ಭೂತವೋ, ಪಿಚಾಚಿಯೋ, ಪೀಡೆಗಳೋ, ಎಳೇ ಹುಡುಗಿಯರೋ, ಮುದಿರಾಕ್ಷಸರೋ, ಗೊತ್ತಾಗದ ಹೆಸರಿನಲ್ಲಿ ಫೇಕ್ ಪ್ರೊಫೈಲ್ ಹುಟ್ಟಾಕಿ ಧಾಳಿ ಮಾಡುವವರ ಕಾಟವೂ ಇರುವುದಿಲ್ಲ.

ಇವರಿಗೆ ಈ ಪ್ರೊಫೈಲ್ನಿಂದ ಯಾವ ಸೇಲ್ಸ್, ವ್ಯಾಪಾರವೂ, ಲಾಭವೂ ಅಗಬೇಕೆಂಬ ನಿರೀಕ್ಷೆಗಳಿಲ್ಲದಿರುವುದರಿಂದ ಇವರಿಗೆ ಯಾವ ನಿರಾಸೆಗಳಾಗಲೀ, ನಷ್ಟಗಳಾಗಲೀ ಸಂಭವಿಸುವುದಿಲ್ಲ. ಇಂಥವರಿಗೆ ಇಲ್ಲಿ ಇರುವ 5000ದ ಗಡಿದಾಟಿ “ಸೆಲೆಬ್ರಿಟಿ”ಗಳಾಗುವ??? !!! ಜೀವನದ ಪರಮೋಚ್ಛ ಗುರಿಯೂ ಇರುವುದಿಲ್ಲ. ಹಾಗಾಗಿ ಇವರ ಬತ್ತಳಿಕೆಯಲ್ಲಿ ಕಡಿಮೆ ಬಾಣಗಳಿರುತ್ತವೆ. ಇವರು ಇವರ ಗೋಡೆಯಲ್ಲಿ ಬರೆದುಕೊಳ್ಳುವ ಯಾವುದೇ ಮನಸ್ಥಿತಿಯ ಚಿತ್ರಣ ನೈಜವಾಗಿರುತ್ತದೆ ಮತ್ತು ಸಹಜ ಮಾನವೀಯ ಗುಣಹೊಂದಿರುತ್ತದೆ. ಇವರ ಖುಷಿ, ನಿರಾಸೆ, ಕನಸುಗಳ ಬಗ್ಗೆ ಬರೆದುಕೊಂಡಿರುತ್ತಾರೆ. ಯಾರಾದರೂ ಇಷ್ಟೇ ಸಂಖ್ಯೆಯಲ್ಲಿ ಲೈಕ್ ಮಾಡೀ, ಕಾಮೆಂಟೂ ಮಾಡಬೇಕೆಂಬ ದುರಾಸೆ ಇಲ್ಲದಿರುವುದರಿಂದ ಇವರಿಗೆ ಬಿದ್ದಷ್ಟೇ ಲೈಕ್ ಕಾಮೆಂಟ್ಗಳಿಗೇ ಅಲ್ಪ ತೃಪ್ತರಿವರು. ನನ್ನ ಈ ಸ್ಟೇಟಸ್ಸಿಗೆ ಇವತ್ತು ಇಷ್ಟು ಕಾಮೆಂಟ್, ಇಷ್ಟು ಲೈಕ್ ಎಂದು ಲೆಕ್ಕ ಬುಕ್ಕು ಸಮೇತ ಎಲ್ಲಾದರೂ ಬರೆದುಕೊಳ್ಳೋ ಅಥವಾ ಅದರ ಗುಂಗಿನಲ್ಲಿ ತಲೆತಿರುಗಿ ಬಿದ್ದು ಬೇರೆಯವರನ್ನು ನಿಕೃಷ್ಟವಾಗಿ ನೋಡುವ ದುರಬ್ಯಾಸವೂ ಇರುವುದಿಲ್ಲ.

ಇವರಿಗೆ ಇವರ ವಾಲ್ ಸ್ಟೇಟಸ್ಗಳನ್ನ ಪ್ರಮೋಟ್ ಮಾಡೋಕೇ ಅಂಥಾಲೇ ಹುಟ್ಟಿರೋ, ಅಥವಾ ಹುಟ್ಟಿಸಿರೋ, ಅಥವಾ ಇವರಿಗೋಸ್ಕರವೇ ಬದುಕಿ ಉಸಿರಾಡುತ್ತಿರುವ, ಫೇಕೋ ಇಲ್ಲಾ ಜಿನೈನೋ ಫ್ರೊಫೈಲ್ಗಳ ದಂಡು ಇರುವುದಿಲ್ಲ. ಇಂಥವರಿಂದ ಸಮಾಜಕ್ಕೂ ಸಮುದಾಯಕ್ಕೂ ಯಾವ ತೊಂದರೆಗಳೂ ಇರುವುದಿಲ್ಲ. ಅಷ್ಟರ ಮಟ್ಟಿಗೆ ಇವರು ಹುಟ್ಟಿದ ಭೂಮಿಗೆ ಭಾರವಾಗಿ ಬದುಕುತ್ತಿರುತ್ತಾರೆ!!! ??? ಈ ಫೇಕ್ ಬುಕ್ಕು ಪರಪಂಚದಲ್ಲಿ… 🙂

ಸರಣಿ ಮುಂದುವರಿಯುವುದು…..

sorry facebook

Leave a comment