ಅದೇ ಮಲ್ಲಿಗೆ ಬಳ್ಳಿ, ಅದೇ ಹೂ ಹುಡುಗನ ನನಸು.

ಆ ದಿನವೇ ನೆನಪಾಗುತ್ತೆ, ಮತ್ತೆ ಮತ್ತೆ ಬೇಡವೆಂದರೂ, ಬೇಕೆಂದರೂ.ನನ್ನ ನಿನ್ನ ನಡುವೆ ಮಲ್ಲಿಗೆ ಬಳ್ಳಿಯೊಂದು ಹುಟ್ಟಿತ್ತು, ಹಬ್ಬಿತ್ತು, ಹೂ ಬಿಟ್ಟಿತ್ತು. ನಾನೂ ಅದೇ ಮಲ್ಲಿಗೆ ಹೂಗಳ ಬೊಗಸೆ ತುಂಬಾ ತಂದು ನಿನ್ನ ಮುಡಿತುಂಬಾ ಮುಡಿಸುವ ಕನಸು ಕಂಡಿದ್ದೆ. ಆ ಸುದಿನ ಅದೆಷ್ಟು ಬೇಗನೆ ಬಂದಿತ್ತು. ಇಬ್ಬರಲ್ಲೂ ಒಬ್ಬರನ್ನೊಬ್ಬರು ಕಣ್ತುಂಬಾ ನೋಡುವ ಕಾತುರ. ಇಬ್ಬರೂ ಒಪ್ಪಿ ಕೆಲವು ನಿಮಿಷಗಳ ಭೇಟಿಯಿದ್ದುದನ್ನು ಮತ್ತೆ ಘಂಟೆಗಳಾಗಿ ಬದಲಾಯಿಸಿಕೊಂಡಿದ್ದೆವು. ನಾನು ನಿನ್ನ ನೋಡುವ ದಾರಿ ಹಿಡಿಯುವ ಮುನ್ನ ನನ್ನ ಮೊದಲ ಹೆಜ್ಜೆಯಿಟ್ಟದ್ದನ್ನು ನಿನಗೆ ತಿಳಿಸಿದ್ದೆ. ನೀನೂ ನಿನ್ನೆಡೆಗಿನ ನನ್ನ ಪಯಣಕ್ಕೆ ಶುಭ ಕೋರಿದ್ದೆ.ಅವತ್ತೂ ನಮ್ಮ ಸುತ್ತ ಮುತ್ತ ಜನರ ಭಯ, ಭೀತಿ,ನಿರಾಸೆ,ಸಾವಿನ ನೆಪ,ಕಳೆದು ಹೋಗುವ ಚಿಂತೆ, ಹೀಗೆ ನೂರೆಂಟು ಮಾಮೂಲಿಯಲ್ಲದ ರಗಳೆಗಳೇ ಇದ್ದವು. ಆದರೂ ಇವೆಲ್ಲದರ ಮಧ್ಯೆ ನಾವಿಬ್ಬರು ಮಾತ್ರ ಸಿಗುವ, ಸೇರುವ, ಖುಷಿಪಡುವ,ಹಂಚಿಕೊಳ್ಳುವ,ಒಂದಾಗುವ,ನಿರೀಕ್ಷೆ, ತವಕದಲ್ಲಿದ್ದೆವು.

ಅದೇ ಹೋಟೆಲ್ಲು. ಅದೇ ಜಾಗ.ಮೊನ್ನೆ ಹೋಗಿದ್ದೆ. ನಮ್ಮ ನಡುವೆ ನಡೆದ ಮೊದಲ ಭೇಟಿಯ ದಿನ ನೆನಪಾಯ್ತು. ನಾನು ಅಲ್ಲಿ ತಲುಪುತ್ತಿರುವ ಸುದ್ದಿ ಪ್ರತಿಕ್ಷಣ ನಿನ್ನ ಫೋನಲ್ಲಿ. ನಾನು ಇಳಿದವನೇ ನನ್ನ ಮಾಮೂಲಿ ಹವ್ಯಾಸದಂತೆ ಮೊದಲು ಕೂರುವ ಜಾಗ ಹುಡುಕಿದೆ. ಅದೇ ಟೇಬಲ್ಲಿಗೆ ನನ್ನ ಸಿಬ್ಬಂದಿಗೆ ಕಣ್ಣ ಸನ್ನೆಯಲ್ಲೇ ಹೇಳಿ ರಿಸೆರ್ವ್ ಮಾಡಿಸಲು ತಿಳಿಸಿದೆ. ಆಚೆ ನಿಂತು ನಿನ್ನ ಬರುವಿಗೆ ಕಾದಿದ್ದೆ. ನೀನು ಆಟೋ ಇಳಿದೆ. ಕೈಯಲ್ಲಿ ಸತತವಾಗಿ ವರದಿ ಮಾಡುತ್ತಿದ್ದ ಅದೇ ಮೊಬೈಲು ಹುಡುಗಿಯ ನೋಡಿ ಹಿಂತಿರುಗಿ ಹೋಟೆಲ್ ದ್ವಾರದ ಬಳಿ ನೋಡಲು ತಿಳಿಸಿದೆ. ತಿರುಗಿ ನೋಡಿದ ನೀನು ನಕ್ಕು ಮೊಬೈಲ್ ಆಫ್ ಮಾಡಿದೆ.

ಇಬ್ಬರೂ ಒಳ ನಡೆದೆವು. ಮತ್ತವರೆಲ್ಲ ಅದೇ ಹೋಟೆಲ್ಲಿನ ಅಲ್ಲಲ್ಲಿ ಆಸೀನರಾದರು. ನಮ್ಮ ಟೇಬಲ್ಲಿಗೆ ಮಾತ್ರ, ಸುತ್ತ ಮುತ್ತ ಯಾರೂ ಕುಳಿತುಕೊಳ್ಳದ ವ್ಯವಸ್ಥೆಯಾಗಿದ್ದು ನಿನಗೆ ಗೋಚರಿಸಲೇ ಇಲ್ಲ. ಯಾಕೆಂದರೆ ನೀನು ನಿನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದೆ. ಮುಂದೆ ನಡೆದಿದ್ದೆಲ್ಲವೂ ಇಬ್ಬರಿಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಕೊಡು ಕೊಳ್ಳುವ ಸಹಜ ಕ್ರಿಯೆಗಳು. ನನ್ನಲ್ಲಿದ್ದದ್ದನ್ನು ನಿನಗೆ ಕೊಟ್ಟೆ. ನೀನು ಪ್ರೀತಿಯಿಂದ ಬರೆದದ್ದೆನ್ನಲ್ಲಾ ಅದೇ ಚೆಂದದ ಮರು ಬಳಕೆಯ ಕಾಗದದ ಚೀಲದಲ್ಲಿ ಕೊಟ್ಟೆ. ನಿನ್ನ ಆ ಒಂದು ಪುಸ್ತಕ ಮಾತ್ರಾ ಇರಲಿಲ್ಲ ಅದರಲ್ಲಿ. ಅದಕ್ಕಾಗಿ ನೀನೆಷ್ಟು ಶ್ರಮಪಟ್ಟು ಅದರದೊಂದೂ ಪ್ರತಿ ನಿನ್ನ ಬಳಿ ಉಳಿಸಿಕೊಳ್ಳಲಾಗದ ಅಸಹಾಯಕತೆ ತೋಡಿಕೊಂಡೆ.

ಇಬ್ಬರ ಬಳಿಯೂ ಕುಳಿತುಕೊಳ್ಳಲೂ, ಸುಮ್ಮ ಸುಮ್ಮನೇ ಹರಟಲೂ ಸಮಯವೇ ಇರಲಿಲ್ಲ.ಪ್ರೀತಿಯೊಂದು ಕಳೆದುಹೋದದ್ದರ ಚಿಂತೆಯ ನಿನ್ನ ಕಣ್ಣಿರ ನಡುವೆ ನೀನಿದ್ದೆ, ಜೊತೆಯಲ್ಲಿ ನಾನೂ ಇದ್ದೆ. ನಿನ್ನ ನಿಜದ ರೂಪ ಅಂದು ಅರಿತ ನಾನು, ನನ್ನ ಜೀವಕಣಗಳ ಮತ್ತೊಂದು ಭಾಗದ ಪ್ರತಿರೂಪ ಅಲ್ಲೇ ಕಂಡು, ಜೋಡಿಸಿಕೊಂಡಿದ್ದೆ. ತದನಂತರ ನಾವಿಬ್ಬರೂ ಮತ್ತೆಂದೂ ಬೇರಾಗದ ಮಾತು ಇಬ್ಬರೂ ಶಪಥಗೈದಿದ್ದು ಎಲ್ಲ ಮನದೊಳಗೆ ಮತ್ತೆ ಮತ್ತೆ ಮರುಕಳಿಸಿದೆ. ನಂತರ ನಡೆದ ಭೇಟಿಗಳೆಷ್ಟೋ, ಮಾತುಕಥೆಗಳೂ ಲೆಕ್ಕಕ್ಕೆ ಸಿಗದಷ್ಟು, ಮತ್ತು ಮೌನದ ನಿಟ್ಟುಸಿರುಗಳೂ ಹಿಡಿದಿಡಲಾಗದ ಬೆಳಕಿನಷ್ಟು. ಇಬ್ಬರೂ ಜೊತೆ ಜೊತೆ ನಡೆದ ಹೆಜ್ಜೆಗಳೆಷ್ಟೋ, ಲೆಕ್ಕವಿಟ್ಟವರಾರು,ನೆನಪುಗಳ ಖಾಲಿ ಖಾಲಿ ಪುಟಗಳಿಗೆ ದಿನಾಂಕ ಬರೆದು ಮೊಳೆಯೊಡೆದು ತಗುಲಿಹಾಕಿದವರಾರು.
****
ಇಂದೂ ಅದೇ ರೀತಿಯ ಸಮಯ. ನಿನ್ನಲ್ಲಿ ನೀನು ಕಳೆದುಕೊಂಡಿದ್ದೆಷ್ಟೋ, ಹಾಗೇ ನಾನೂ ಕೂಡ. ಇಬ್ಬರೂ ಸಾಕಷ್ಟು ಗಳಿಸಿರಬಹುದು ಜನರ ಕಣ್ಣಿಗೆ ಕಾಣುವಂತೆ. ಆದರೆ ಒಳಗೆ ಕಳೆದುಕೊಂಡಿರುವುದು ನಮ್ಮಿಬ್ಬರ ಮನಸ್ಸಿಗೆ ಮಾತ್ರಾ ಗೊತ್ತು ಅಲ್ವಾ.ಆ ದಿನದಿಂದ ನಾವಿಬ್ಬರೂ ಜೀವಿಸಿದ ನಮ್ಮ ಪ್ರತೀ ಕ್ಷಣಗಳ ಕಿವಿಗಳಿಗೆ ನಮ್ಮ ತೊಳಲಾಟ, ನಿಟ್ಟುಸಿರುಗಳ ಬಿಸಿಯ ಬೇಗೆ ಕೇಳಿಸಿದೆಯಂತೆ. ಹೊರಗೆ ನೋಡಲು ಇಬ್ಬರೂ ಮಾಮೂಲಿಯಂತೆ ಕಂಡರೂ ಒಳಗೊಳಗೆ ಪ್ರತೀ ಕ್ಷಣ ಹಂಚಿಕೊಂಡ ಎಲ್ಲ ಭಾವನೆಗಳು ನಿಗಿ ನಿಗಿ ಕೆಂಡದ ಉಂಡೆಗಳಾಗಿ ಸುಡುತ್ತಿರುವುದರ ಶಾಖ ನಮಗೆ ಮಾತ್ತ ಅರಿವಾಗುತ್ತಿದೆಯಲ್ಲವೇ. ನಿನ್ನ ಪ್ರತೀ ಅಕ್ಷರ, ನಮ್ಮಿಬ್ಬರ ನಡುವೆ ನಡೆದ ಎಲ್ಲ ಮಧುರ, ಅಮಧುರ ಅನುಭವಗಳ ದಾಖಲಾತಿಯಲ್ಲದೆ ಮತ್ತೇನು ಗೆಳತಿ.

“ಲೈಫ್ ಬಾಯ್” ಎಲ್ಲಿದೆಯೋ ಅಲ್ಲಿದೇ ಆರೋಗ್ಯ, ಎಂಬ ಹಳೇ ಇಟ್ಟಿಗೆಯಂಥ ಎಷ್ಟು ಹಚ್ಚಿದರೂ ಸುಲಭಕ್ಕೆ ಸವೆಯದ ಚಿರ ನೆನಪಿನ ಸೋಪಿನ ಹಾಡು ನನ್ನ ಯೂ ಟೂಬಿನಲ್ಲಿ ನೋಡುತ್ತಿರುವೆ ಈಗ. ನನಗನ್ನಿಸುತ್ತೆ “ಪ್ರೀತಿ ಎಲ್ಲಿದೆಯೋ ಅಲ್ಲಿದೇ ತಾಪ” ಅಂತಾ. ಇಬ್ಬರಿಗೂ ಇದನ್ನು ವಿವರಿಸ ಬೇಕಿಲ್ಲ ಅಲ್ಲವೇ. ಇಬ್ಬರೂ ಅನುಭವಿಸಿರುವ ಸಮಾನ ಸುಖವಿದು. ನಿನಗೆ ನಿನ್ನದೇ ಒಲವಿನ ನೀರುಣಿಸುವ ಝರಿ ತೊರೆಗಳು, ನನಗೆ ಭಾವವೂ ಇಲ್ಲದ, ನಿರ್ಭಾವದ ಅರಿವೂ ಇಲ್ಲದ ನೀನಿಲ್ಲದ ಕೊರತೆಗಳು ಮಾತ್ರ ಸಾಗರದಷ್ಟಿವೆ. ಈ ಬದುಕೇ ಹಾಗಲ್ಲವೇ. ಒಮ್ಮೆ ಬಿಟ್ಟು ಇರಲಾರೆ ಎನ್ನಿಸುವುದು ಮತ್ತೊಮ್ಮೆ ಯಾಕೋ ಇದು ಅತೀ ಎನಸುವುದು ಸಹಜವೂ ಕೂಡ.

ಹಾಗೆ ಆದಾಗಲೇ ಎಲ್ಲವೂ ಒಂದು ಹಂತ ಮೀರಿ ಮೇಲಕ್ಕೋ ಕೆಳಕ್ಕೋ ಏರುವುದೋ ಇಳಿಯುವುದೋ ತೋರಿಸುವ ಬದುಕಿನ ಸಹಜ ಗ್ರಾಫಿನ ಪುಟದಂತಾಗುವುದು. ಯಾವುದೇ ಜೀವನ ಸರಳ ರೇಖೆಯಂತಿರುವುದು ನಿನ್ನ ಅಷ್ಟೂ ಓದಿನ ತಿಳುವಳಿಕೆಯಲ್ಲಿ ಕಂಡಿದ್ದರೆ ಈ ಬಾರಿ ಬಂದಾಗ ಮರೆಯದೆ ತಿಳಿಸು. ನಾನು ನಿನ್ನನ್ನೂ ನೀನು ನನ್ನನ್ನೂ ಎಲ್ಲಾದರೂ ಎಂದಾದರೂ ಯಾವ ಕ್ಷಣದಲ್ಲಾದರೂ ಒಮ್ಮೆಯಾದರೂ ಬಿಟ್ಟು ಬದುಕಿದ ಸಾಧ್ಯತೆ ಇದೆಯೇ ಗೆಳತಿ? ನನಗಂತೂ ನೂರಕ್ಕೆ ನೂರೂ ಖಾತರಿ, ಅದು ಸಾಧ್ಯವಾಗುವುದೂ ಇಲ್ಲ ಯಾರು ಬೇಕೆಂದರೂ ಬೇಡವೆಂದರೂ.
****
ನಮ್ಮಿಬ್ಬರ ಜೀವಿಸಿದ ಪ್ರತೀ ಕ್ಷಣಗಳ ದಾಖಲಾತಿ ನಮ್ಮ ಮನದಲ್ಲಿ ಅಚ್ಚಳಿಯದೇ ನಡೆದಿರುವಂತೆ ಸಮಾನಾಂತರವಾಗಿ ನಮ್ಮಿಬ್ಬರ ನಡುವೆ ನಡೆಯುತ್ತಿರುವ ಎಲ್ಲ ಪ್ರಾಪಂಚಿಕ ಅನುಭವವೂ ನಮಗೇ ತಿಳಿಯದಂತೆ ಯಾಂತ್ರಿಕವಾಗಿಯೂ ದಾಖಲಾತಿ ನಡೆದಿದೆ. ನಾವಿಬ್ಬರೂ ಬಾಯಿ ಬಡಿದುಕೊಳ್ಳುವುದರಲ್ಲಿ ನಿಸ್ಸೀಮರು ಎಂದೇ ಹೇಳಬೇಕಾಗಿದೆ ಈಗ. ಈ ವಿಷಯದಲ್ಲಿ ನೀನೇ ಮೊದಲು ಮತ್ತು ನನಗಿಂತ ತುಂಬಾ ಮುಂದು ಕೂಡಾ. ಅದೆಷ್ಟು ತವಕ ನಿನಗೆ, ನಡೆದದ್ದನೆಲ್ಲ ಬರೆದೋ, ಕಿವಿ ಕಚ್ಚಿಯೋ ಜಗಜಾಹೀರು ಮಾಡುವ ಮಗುವಿನ ಮನಸ್ಸು ನಿನ್ನದು.

ನಮ್ಮಿಬ್ಬರಲ್ಲಿ ಯಾರು ಭೌತಿಕವಾಗಿ ಇಲ್ಲವಾದರೂ ನಮ್ಮ ನಡುವೆ ನಡೆದ, ನಮ್ಮಿಬ್ಬರ ಸುತ್ತಮುತ್ತ ಇರುವ ಜನರೊಂದಿಗೆ ನಡೆದ ಪ್ರತಿಯೊಂದೂ ಕ್ಷಣದ ಮಾಹಿತಿ ಜಗ ಜಾಹೀರಾಗುವುದಂತೂ ತಪ್ಪುವುದಿಲ್ಲ. ನಮ್ಮ ಕೈ ಕೈಹಿಡಿದು ನಾವಿಬ್ಬರೂ ನಡೆದಾಡಿದ, ಸವೆಸಿದ ಪ್ರತೀ ಹೆಜ್ಜೆಯೂ, ಚೌಕಿಯಲ್ಲಿರುವ ದಾರಿ ದೀಪದ ಮೇಲಿರುವ ಯಾಂತ್ರಿಕ ಕಣ್ಣುಗಳಲ್ಲಿ ಧಾಖಲಿದೆ. ನಮ್ಮ ಖಾಸಗೀತನದ ಖಾಸ್ ಬಾತ್ ಗಳೂ ಯಾವಾಗ ಬೇಕೆಂದಾಗ ಕೇಳಬಹುದು. ನಮ್ಮೆಲ್ಲರ ಖಾಸಗಿ ಬದುಕೂ ಇಂದು ಬೆಳಕಿನಷ್ಟು ಬೆತ್ತಲೆ, ಬೆತ್ತಲೆ. ಅದೆಷ್ಟು ಕಷ್ಟ ಪಟ್ಟು ಸೊಳ್ಳೆಪರದೆಯಲ್ಲಿ ನೀರು ತುಂಬಿಡಲು ಪ್ರಯತ್ನಿಸುತ್ತಾರೆ ಬುಧ್ದನಷ್ಟೇ ಬುದ್ದಿಯುಳ್ಳ ಜನ. ಇಂದು ನಮ್ಮ ಕತ್ತಲೆಯ ಬದುಕು ಮುಚ್ಚಲಾರದ ಲಕ್ಷಾಂತರ ತೂತುಗಳ ತೂತು ಬಿದ್ದ ಸೊಳ್ಳೆಪರದೆಯಿದ್ದಂತೆ.

****
ಪ್ರೀತಿ ಹುಟ್ಟಬೇಕು ಎರಡು ಮನಗಳ ನಡುವೆ. ಅದಕ್ಕೆ ಯಾರಪ್ಪನ ಅಪ್ಪಣೆಯೂ, ಅನುಮತಿಯೂ, ಅಂಗೀಕಾರವೂ,ರಾಜನ ಒಪ್ಪಿಗೆಯ ಗೊಡವೆಯೂ ಇರಬೇಕಿಲ್ಲ, ಅವನ ಆಸ್ಥಾನದ ರಾಜ ಮುದ್ರೆಯೂ ಬೇಕಿಲ್ಲ. ಪ್ರೀತಿಸುವ ಮನಸ್ಸುಗಳ ನಡುವೆ ಯಾವ ಕಾಲದ, ವಯದ, ನಿರೀಕ್ಷೆಯ, ಅಡೆ ತಡೆಯ ಗೋಡೆಗಳೂ, ಕೋಟೆಗಳೂ, ಮುಚ್ಚಿದ ಬಾಗಿಲುಗಳೂ, ಬೀಗ ಜಡಿವ ಜನರೂ ಯಾವ ಕಾಲದಲ್ಲೂ ಇರಬಾರದು.

ಹಾಗೇ ಮತ್ತೆ ನಾವು ಸಂಧಿಸುವ ಕಾಲ ಬಂದಿದೆ. ನಡುವೆ ಸಾಕಷ್ಟು ದಾರಿ ಸವೆದಿದೆ. ನಾನೂ ನೀನೂ ಅದೇ ದಾರಿಯ ಮಗ್ಗುಲಿನಲ್ಲಿ ನಡೆದದ್ದೂ ಮುಗಿದಿದೆ. ಇಬ್ಬರಿಗೂ ನಡುವೆ ವಿಷಹಿಣಿದ ಜನರ ವರ್ತನೆಗಳೂ ಅರ್ಥವಾಗಿದೆ. ಅದೆಲ್ಲ ಸಹಜವೆಂಬ ಅರಿವೂ ನಮ್ಮಿಬ್ಬರಿಗೂ ಯಾವತ್ತೂ ಇದೆ. ಮಾತೆತ್ತಿದರೆ ಅಲ್ಲಮ, ಅಕ್ಕ, ಬುಧ್ದನ ಹೆಸರಿಡಿದೇ ಮಾತನಾಡುವ ಜನರ ನಡುವೆ ಬದುಕಿ ಉಸಿರಾಡುವ ನಾವುಗಳು ಮತ್ತೆ ನಾವಿಬ್ಬರು ನಡೆದ ಅದೇ ಮುಖ್ಯದಾರಿಗೆ ಬರಲಿಕ್ಕಿದೆ. ಅಂದಿನಿಂದ ಇಲ್ಲಿಯವರೆಗೆ ಮಲ್ಲಿಗೆ ಬಳ್ಳಿಯೂ ಹೆಚ್ಚು ಹೆಚ್ಚು ಹಬ್ಬಿದೆ. ಕೈತುಂಬಾ ಮಲ್ಲಿಗೆಯಿಡಿದು,ಮೊಳಗಟ್ಟಳೆ ಮನಸಾರೆ ಪೋಣಿಸಿ, ನಿನ್ನ ಮುಡಿಯೇರಿಸುವ ಸಮಧುರ ಕ್ಷಣಗಳು ಆದಷ್ಟೂ ಬೇಗ ಬರಲಿ ಎಂಬ ನಮ್ಮಿಬ್ಬರ ಕನಸು ನನಸಾಗಲೀ. ಎಂದೆಂದೂ ಅದೇ ಹಾರೈಕೆಗಳೊಂದಿಗೆ ನಿನ್ನ ಅದೇ ಎಂದೂ ಬದಲಾಗದ ಹೂ ಹುಡುಗ.

ಇಂತಿ ನಿನ್ನ
ಅನ್ ಲಿಮಿಟೆಡ್ ಪ್ಲಾನ್ ನ ಫೋನ್ ಗೆಳೆಯ,
@ 9-30-60-90-420.

hacked-thieves-bypass-lock-screen-your-samsung-galaxy-note-2-galaxy-s3-more-android-phones.1280x600

Leave a comment