ಖಾಲಿಯಾಗಿದೆ

ಮೈಲುದ್ದ ಜನರ ಸರತಿ,
ಮನೆ ಮಕ್ಕಳು ಬೆಳಗಿಗೆ,
ಗಂಡ ಹೆಂಡತಿ ರಾತ್ರೀ ಪಾಳಿಗೆ,
ಹರಿದ ಒಂಟಿ ಚಪ್ಪಲಿಯೊಂದು,
ತೆವಳೀ ತೆವಳೀ ಅಂಗಡಿಯ,
ಮುಂಬಾಗಿಲಿಗೆ ತಲುಪಿವೆ.

ಹಗಲೆರಡು ಮೂರು ರಾತ್ರಿ,
ಮುಗಿದರೂ ಈ ಮನೆಯ,
ಮಂದಿಗಿಲ್ಲ ರೇಷನ್ನು ಸಿಗುವ ಖಾತ್ರಿ.

ಅಂತೂ ಇಂತೂ ಕೊನೆಗೂ,
ತೆರೆದಿದೆ ಮುಚ್ಚಿದ್ದ ಮುಂಬಾಗಿಲು,
ಆಗೊಮ್ಮೆ ಮುಂದೆ ಚಲಿಸಲು ಬಿಡದವರು,
ಈಗ ಹಿಂದಿನಿಂದ ತಳ್ಳುತ್ತಿದ್ದಾರೆ,
ಆದಷ್ಟೂ ಬೇಗ ಮುಗಿಸು,
ನಿನ್ನ ಕೊಡು ಕೊಳ್ಳುವ ವ್ಯಾಪಾರವ ಎಂದು.

ಅಂಗಡಿಯ ಮಾಲೀಕನೋ ಲೋಕ ನಿಂದಿತ,
ಅವನ ಮುಖದ ಮೇಲೆ ನಗುವು,
ಎಂದೂ ನಕ್ಕಿದ್ದ ಯಾರೂ ಕಂಡಿಲ್ಲ,
ಗಂಟು ಬಿದ್ದ ಮುಖದ ಸುಕ್ಕುಗಳು,
ಸಡಿಲಿಸಿದ್ದನ್ನೂ ಕೂಡಾ.

ಗಂಭೀರವೆಂಬುದು ಅವನ,
ಘನ ಗಟ್ಟಿದ ಮುಖದ ಸೌಂದರ್ಯ.
ಕಿರುನಗೆಯೆಂಬುದೂ ಬತ್ತಿ ಹೋದ ನದಿಯ,
ಮರಳು ಬಗೆದ ಕಾಲಿಯೊಡಲು.

ಕೈಗಳು ಮಾತ್ರಾ ನಾಮುಂದು,
ತಾಮುಂದೆಂದು ಬಗೆದು ಮೊಗೆದು,
ಅಳೆದು ಸುರಿದು ತುಂಬುತ್ತಿವೆ,
ಬಾಗಿಲ ಹೊರಗೆ ಕೈಚಾಚಿ ಮುಂದಿಡಿದ,
ಖಾಲಿ ಚೀಲಗಳೊಳಗಿರುವ ಹಸಿದ ಹೊಟ್ಟೆಗಳ.

ಆದರೂ ಸಾಲಿನ ಸರತಿಯಲಿ,
ನಿಂತವರ ಗೋಳಾಟ ಗೊಣಗಾಟ,
ಎಂದೂ ಮುಗಿಯದ ವ್ಯಥೆಯ ಕಥೆ.
ಮಾಲೀಕನೋ ಅವನ ಬೋರ್ಡಿಗೆ,
ಅದರ ಮಾಮೂಲಿ ಅಕ್ಷರಗಳಿಗೆ,
ಎಂದೂ ನಿಯಮ ಮೀರದ ನಿಯತ್ತು.
ಇಂದೂ ಮರುಕಳಿಸಿದ್ದು ಅದೇ ಕಥೆ,
ಸಕ್ಕರೆ, ಸೀಮೆ ಎಣ್ಣೆ, “ಖಾಲಿಯಾಗಿದೆ”.

ಸರ್ಕಾರ ಸಕ್ಕರೆ ಕೊಟ್ಟಿದ್ದೇ ಕಡಿಮೆ,
ಜನರಿಗೂ ಸಕ್ಕರೆ ಬಳಸಲು,
ಸಿಹಿಮೂತ್ರದ ಕಾಯಿಲೆಯ ಭಯ.

ಸೀಮೆಎಣ್ಣೆ ಸಾಕಷ್ಟು ಸರಬರಾಜಿತ್ತು,
ಅತ್ತೆ ಸೊಸೆಗೆ, ಗಂಡ ಹೆಂಡತಿಗೆ ಸುಡಲು,
ಕೊಳೆಗೇರಿಯ ಜನರ ಭಸ್ಮ ಮಾಡಲು,
ಕಾಳಸಂತೆಕೋರರ ಮುಂಗಡ,
ಕಾಯ್ದಿರಿಸುವಿಕೆಗೆ “ನ್ಯಾಯ ಬೆಲೆ”
ಅಂಗಡಿಯ ಬೋರ್ಡ್ “ಖಾಲಿಯಾಗಿದೆ”
ಸುಂದರ ಅಕ್ಷರಗಳಿಗೆ ಸಾಕ್ಷಿಯಾಯಿತು.

ಅಂಗಡಿಯೂ ಅವರದೇ, ಬೋರ್ಡೂ ಅವರದೇ,
ಅಕ್ಷರವೂ ಅವರದೇ, ಕಾಳಸಂತೆಯೂ ಅವರದೇ,
ಅವರದೇ ನ್ಯಾಯಬೆಲೆ ಅಂಗಡಿಯಲ್ಲಿ!
ಹೊಸತೇನಿದೆ? ಖಾಲಿ ಮಾಡಿಸದೇ ಇರಲು!
ಖಾಲಿಯಾಗದೇ ಉಳಿದ ಮುಗ್ಗುಲಿಕ್ಕಿದ ಅಕ್ಕಿ ಮೂಟೆ,
ಹುಳಬಿದ್ದು ತೂತಾದ ಗೋದಿ ಕಾಳಿನ ಮೂಟೆ,
ಹೊರಗಿನ ಜನರ ಸರತಿ ನೋಡಿ ಅಣಕಿಸಿ ನಕ್ಕವು.

“ಖಾಲಿಯಾಗಿದೆ” ಬೋರ್ಡ್ ಬಡಿದ,
ನ್ಯಾಯಬೆಲೆ ಅಂಗಡಿ ಮುಂಬಾಗಿಲ ಮುಚ್ಚಿ,
ಹಿಂಬಾಗಿಲ ವ್ಯಾಪಾರದಲ್ಲಿ ಮುಳುಗಿತ್ತು.

ಬೇಸರಗೊಂಡ ಜನ ಜಂಗುಳಿ,
ಹೀರೋ ಒಬ್ಬನ ಚಲನಚಿತ್ರ ನೂರು ದಿನ ಪೂರೈಸಿದ,
ಸಂಭ್ರಮದ ಬೋರ್ಡಾಕಿಸಲು,ಉಚಿತ ಟಿಕೇಟ್ ಪಡೆದು,
ಚಿತ್ರ ಮಂದಿರದೊಳಗೆ ನುಗ್ಗಿ, “ಚಿತ್ರ ಮಂದಿರ ತುಂಬಿದೆ”
ಎಂಬ ಬೋರ್ಡ್ ಕಿಲ ಕಿಲ ನಕ್ಕಿತ್ತು.

b935f3563a793c2e18c5e0814c384eaf

Advertisements

ಮರು ಜೀವವಾದಳು

ಅವಳದರ ಕಾವಾದಳು
ಮರು ಜೀವವಾದಳು…

ಹಾರುವ ಹಕ್ಕಿಗೆ
ಪ್ರೀತಿ,
ರೆಕ್ಕೆ ಮೇಲೆ.
ಹಾರುವ ಮುನ್ನ
ಚಿಮ್ಮಲು ಬಳಸಿದ
ಕಾಲು?

ಹಕ್ಕಿ ಹಾರುವುದಾದರೂ
ಏಕೆ?
ನೆಲದಿ ತೆವಳುವ
ಜೀವಗಳ ನೋಡಲೇ?
ಇಲ್ಲ, ಕಬಳಿಸಿ
ಹೊಟ್ಟೆ ತುಂಬಲೇ?
ರೆಕ್ಕೆಗೆ ಕಸುವ
ತುಂಬಲೇ!
ರೆಕ್ಕೆ ಬಲಿಯಲು ಬೇಕು
ಕಾಳು ಮೊಳಕೆ,
ರಕ್ತ ಮಾಂಸ.
ಹಕ್ಕಿ ಆಗಸದಿ ತೇಲಲು,
ಇರಬೇಕು ಅದಕೂ ಶಕ್ತಿ.

ರೆಕ್ಕೆ ಹಾರಿದರೂ
ಹಿಡಿಯಲಾರದು
ಬೇಟೆ,ಮಾಂಸ,

ಇವೆಲ್ಲಕೂ ಬೇಕು
ಕಾಲಿನ ನೆರವಿನ,
ನೆನಪು.

ರೆಕ್ಕೆ ಬಿರುಸು
ಮರೆ ಮಾಡಿದರೂ
ಕಾಲಿನ ನೆನಪು,
ಕಹಿ ಸತ್ಯ,
ಪ್ರತಿಕ್ಷಣದ
ಹಕ್ಕಿಯ ಬದುಕಿಗೆ.

ಮೇಲೆ ಮೇಲೆ ಹಾರುವ
ಆಕಾಶದೆತ್ತರಕೇರುವ,
ಆನಂದದಿ,
ತನಗಿರುವ ಕಾಲ
ನೆನಪು ಸತ್ತು
ಘೋರಿಸೇರಿದ
ಪಾಪಕೆ
ಪ್ರಾಯಶ್ಚಿತ್ತ,
ಕಾಲಿಲ್ಲದ ಹಕ್ಕಿ.

ಈಗ ಹಕ್ಕಿಗೆ,
ಹಾರಲಿಕ್ಕೆ ಬಲವುಂಟು,
ಮುಟ್ಟಲಾಗದು ನೆಲ
ಹಿಡಿಯಲಾಗದು
ಬೇಟೆಯ ಪಟ್ಟು
ತುಂಬಲಾರದು ಹೊಟ್ಟೆ.
ಸೋಲುತಿವೆ
ಮೇಲೇರಿಸಿದ ರೆಕ್ಕೆ.

ಇಳಿಯಲಾರದು ಭುವಿಗೆ,
ಹಾರಲೂ ಆಗದು,
ಬದುಕುವ ಕೊನೆ ಆಸೆಯ
ಕನಸು ಗಾಳಿಯೊಂದಿಗೆ ಲೀನ
ಹಕ್ಕಿಯ ಶವವೊಂದು
ಧ್ಯಾನಸ್ಥ ಸ್ಥಿತಿಯಲ್ಲಿ
ತೇಲುತ್ತಾ ತಲ್ಲೀನ
ನೀಲಾ ಕಾಶದಲ್ಲಿ ವಿಲೀನ.

ಕೆಳಗೆ ಕಾದು
ನಿಂತವರೆಷ್ಟೋ ಜನ.
ಹಾರುವುದೊಂದೇ ಕಲಿತ
ಹಕ್ಕಿಯ ಸಮಾಧಿ ಮಾಡಲು.
ಉದುರಲಿಲ್ಲ ಅದರ ಭೂದಿಯೂ,
ಸೇರಲಿಲ್ಲ ಮಣ್ಣಿನ ದಾರಿಯೂ,

ಹಕ್ಕಿಯ ದೇಹ ಸುಟ್ಟ
ಭೂದಿಯೇ,
ಮರು ಹುಟ್ಟಿನ ಮೊಳಕೆಯೊಡೆದ
ಬೀಜದ ಮೊಟ್ಟೆಯಾಗಿ
ಅವಳ ಪ್ರೀತಿಯ ಬೊಗಸೆಯೊಳಗೆ
ತಾನೇ ತಾನಾಗಿ ಬಂದು
ಕುಳಿತಿತ್ತು….
ಅವಳದರ ಕಾವಾದಳು
ಮರು ಜೀವವಾದಳು…

ನಮ್ಮಿಬ್ಬರ ನಿಷ್ಕಲ್ಮಶ ಪ್ರೀತಿಗೆ ಅರ್ಪಣೆ.
(ನಮ್ಮ ನಡುವೆ ಯಾರೇನೇ ಅಂದರೂ)

article-2531133-1A581D3500000578-598_634x401

article-2531133-1A581E1900000578-476_306x423

Phoenix-Mieshka-Files

7575218_f520

22. Phoenix tattoo art

newborn-bird-in-color-POSTER-ARTcrop4

ಮುಂಗಾರು ಮಳೆಯ ಮೊದಲ ನೆನಪು

ಎಲ್ಲೆಲ್ಲೂ ಸುಡು ಸುಡು ಬಿಸಿಲು.ರಾತ್ರಿ ಹಗಲುಗಳೆನ್ನದೆ ಮೈ ಬೆವರು ಸುರಿದು ಮೈಯೆಲ್ಲಾ ಕಟು ವಾಸನೆ. ಜನ ಮೈ ಉಜ್ಜಿಕೊಂಡರೆ ಸಾಕು ಕೈ ತುಂಬಾ ಮೆತ್ತಿಕೊಂಡು ಬರುವ ಮೈಕಸ. ಊರಿನ ಅರಳೀ ಮರದ ಕೆಳಗೆ, ಕೆಲ ಜನ ಆ ಮೈಕಸವನ್ನೇ ಉಂಡೆ ಮಾಡಿ ನಕ್ಕು ನಗಿಸುತ್ತಾ ಆಟವಾಡುವ ಸೊಬಗು. ಎಲ್ಲಿ ಹೋದವೋ ಈ ಮಳೆ ಮೋಡಗಳೂ? ಒಮ್ಮೆಯಾದರೂ ಬಂದು ಸುರಿದು ಈ ಧಗೆಯ ಬಿಸಿ ಕಡಿಮೆ ಮಾಡಲಾರವೇ? ಎಂಬ ಮಾತು ದಿನಕ್ಕೆ ಹತ್ತು ಬಾರಿಯಾದರೂ ಹಳ್ಳಿತುಂಬಾ ಪ್ರತಿಧ್ವನಿಸುತ್ತಿತ್ತು.

ಊರ ಹೆಣ್ಣು ಮಕ್ಕಳಂತೂ ಮನೆಯ ಒಳಗೂ ಮತ್ತು ಹೊರ ಅಂಗಣವನ್ನು ದಿನಕ್ಕೆ ಕನಿಷ್ಟ ಎರಡು ಬಾರಿ ಗುಡಿಸುತ್ತಿದ್ದವರು ಈಗ ಹಲವು ಬಾರಿ ಗುಡಿಸುತ್ತಾರೆ. ಅವರು ಮನೆ, ಅಂಗಳ ಗುಡಿಸುವಾಗೆಲ್ಲಾ ಈ ಕೆಟ್ಟ ಬಿಸಿಗಾಳಿ ಅದೇನೆಲ್ಲ ಹೊತ್ತು ತಂದು ಮನೆಯಂಗಳಕ್ಕೆ ಬಿಸುಟು ಹೋಗುತ್ತೆ ಅಂತಾ ಗುನುಗುತ್ತಾರೆ. ಹೆಂಗೆಳೆಯರಿಗೆ ಕಸ ಬಳಿಯುವ ಹೆಚ್ಚುವರಿ ಕೆಲಸ ಕೊಟ್ಟ ಬೇಸಿಗೆಯ ಬಿಸಿಗಾಳಿ, ಜನ ದನ ಎಂಬ ಬೇಧವೆಣಿಸದೆ ಎಲ್ಲರ ಮೈಯಿನ ನೀರು ಬಸಿದು ಬಸಿದು ಸುಸ್ತು ಮಾಡಿ ಬಿಟ್ಟಿರುತ್ತೆ. ಜನ ಯಾವಾಗಪ್ಪಾ ಮಳೆ ಬರುತ್ತೆ? ಎಂಬ ನಿರೀಕ್ಷೆಯಲ್ಲಿ ದಿನಕ್ಕೆ ನೂರು ಬಾರಿಯಾದರೂ ಮುಗಿಲ ದೇನಿಸಿ ನೋಡುತ್ತಾ ನಿಟ್ಟುಸಿರುಯ್ಯುತ್ತಿರುತ್ತಾರೆ.

ಇಂತಿಪ್ಪ ದಿನ ರಾತ್ರಿಗಳಲ್ಲಿ ಜನರೆಲ್ಲ ಮನೆಯೊಳಗೆ ನಿದ್ರಿಸುವ ಸುಖದಿಂದ ವಂಚಿತರಾಗಿ ಮನೆಯ ಅಂಗಳಗಳಲ್ಲೇ ನಿದ್ರಿಸುತ್ತಿರುತ್ತಾರೆ. ಯಾವುದೋ ಒಂದು ಸರೀ ರಾತ್ರಿ ಇದ್ದಕ್ಕಿದ್ದಂತೆ ಬಿಸಿಗಾಳಿ ತಂಪಾಗಿ ಬೀಸತೊಡಗುತ್ತೆ. ಮಲಗಿದ್ದ ಜನ ಎಚ್ಚರಗೊಳ್ಳುವ ಮುನ್ನವೇ ಟಪ ಟಪ ಟಪ ಅಂತಾ ಅದೆಲ್ಲಿಂದಲೋ ಯಾರೋ ಮರೆಯಿಂದ ಗುಂಡು ಹೊಡೆದಂತೆ ಬಿರುಸಾಗಿ ಮೊದಲ ಮಳೆಯ ಹನಿಗಳು ನೆಲಕ್ಕೆ ತಲುಪುತ್ತವೆ. ಎಚ್ಚರಗೊಂಡ ಹಿರಿಯರು ಮೈಮರೆತು ನಿದ್ರಿಸುತ್ತಿದ್ದ ನಮ್ಮಂಥ ಮಕ್ಕಳು ಮರಿಗಳನ್ನೆಲ್ಲಾ ಹೆಗಲ ಮೇಲೆ ಬಟ್ಟೆ ಎಸೆದುಕೊಂಡಂತೆ ಎಸೆದುಕೊಂಡು ಮನೆಯೊಳಕ್ಕೆ ಓಡಿಹೋಗುತ್ತಾರೆ. ಅರೆ ಬರೆ ನಿದ್ರೆಯಾದ ನಮ್ಮಂಥ ಮಕ್ಕಳು ಕಣ್ಣು ಉಜ್ಜಿ ಉಜ್ಜಿ ಮನೆಯ ಹೊರಗೆ ಧೋಎಂದು ಸುರಿವ ಮೊದಲ ಮಳೆ ನೋಡುತ್ತೇವೆ. ಹಿರಿಯರಿಗೆ ಬಯಲಲ್ಲಿ ಬಿಸಿಲಲ್ಲಿ ಒಣಗಲು ಬಿಟ್ಟಿದ್ದ ವಸ್ತುಗಳನ್ನು ಮನೆಯ ಒಳಕ್ಕೆ ಸೇರಿಸುವ ತವಕವಾದರೆ ನಮ್ಮಂಥ ಮಕ್ಕಳ ಪುಳಕವೇ ಬೇರೆ.

ನನಗಂತೂ ಮೊದಲಮಳೆಯೇ ಆಗಲೀ, ಯಾವುದೇ ಮಳೆಯಾಗಲಿ ಅದರಲ್ಲಿ ನೆಂದು ಮಿಂದು ಒದ್ದೆ ಒದ್ದೆಯಾದರೇ ನನಗೆ ಸಮಾಧಾನ. ಇಂತಹ ಸರಿರಾತ್ರಿಯ ಮಳೆಯಾದರೂ ಸರಿ, ನಾನು ನಿದ್ದೆಯಿಂದೆಬ್ಬರಿಸಿದ ಹಿರಯರ ಅವಸರವಸರದ ಗಡಿಬಿಡಿಯ ಕೆಲಸಗಳ ನಡುವೆಯೂ ಅದ್ಹೇಗೋ ನುಸುಳಿ ಮನೆಯ ಅಂಗಳದಲ್ಲಿರುತ್ತಿದ್ದೆ. ಆ ಮೊದಲ ಮಳೆಯ ಘಮದ ಸುವಾಸನೆ ನನ್ನ ಮೂಗಿನ ತುಂಬಾ ಆಸ್ವಾದಿಸಿಕೊಂಡು ನನ್ನನ್ನೇ ಮರೆತು ಕತ್ತಲಲ್ಲಿ ನಿಂತಿರುತ್ತಿದ್ದೆ. ಆ ಮಧ್ಯರಾತ್ರಿಯ ಮಳೆಯಲ್ಲಿಯೂ ಒಂಚೂರು ನೆನೆದು ಒದ್ದೆಯಾದರೇ ನಾನು ನನ್ನ ಹೆಸರಿನ ಹಿರಿಮೆಗೆ ಹುಟ್ಟಿದವನು. ಯಾರಾದರೂ ಕತ್ತಲಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತ ನನ್ನ ಗಮನಿಸುವ ತನಕ, ಅಥವಾ ಮನೆಯ ಮುಂಬಾಗಿಲು ಮುಚ್ಚುವ ಮುನ್ನ ಒಮ್ಮೆ ನನ್ನ ಇಲ್ಲದಿರುವಿಕೆಯ ಗಮನಿಸುವ ತನಕ ನಾನು ಮಳೆಗೆ ಹುಟ್ಟಿದ ಮಣ್ಣಿನ ಮಗ.

ನನ್ನ ತಲೆಮೇಲೊಂದು ಬಾರಿಸಿ ಯಾರಾದರೂ ಒಳಗೆ ಎಳೆದುಕೊಂಡು ಬಂದು ಟವೆಲ್ಲಿನಿಂದ ಮೈ ಒರೆಸಿ ಬೆಚ್ಚಗೆ ಕಂಬಳಿ ಹೊದಿಸಿ ಮಲಗಿಸಿದರೂ ನನಗೆ ಹೊರಗಿನ ಮಳೆಯದ್ದೇ ಧ್ಯಾನ. ಮನೆಯ ಹಿರಿಯರಾಗಲೇ ನನ್ನ ಮಳೆಯ ಹುಚ್ಚಿಗೆ “ಇವನಿಗೆ ಬೆಳಗ್ಗೆ ಜ್ವರ ಬಂದರೆ? ನೆಗಡಿಯಾದರೆ? ಮನೆಯ ಡಾಕ್ಟರ್ ಪರಮೇಶ್ವರಪ್ಪನವರ ಬಳಿಗೆ ಕರೆದುಕೊಂಡು ಹೋಗುವ! ಎಂಬ ಕಾಳಜಿಯ ಮಾತುಕತೆಯಲ್ಲಿ ಮುಳುಗಿರುತ್ತಿದ್ದರು. ಅವರ ಚಿಂತೆ ಅವರಿಗೆ, ನನಗೆ ಮಣ್ಣಲ್ಲಿ ಸಮಾಧಿಯಾಗಿದ್ದ ಬೀಜಗಳು ಮಳೆಯಲ್ಲಿ ನೆನೆದು ಬೆಳಗ್ಗೆ ಮೊಳಕೆಯೊಡೆಯುವ ಬೆರಗ ನೋಡುವ ತವಕ.

ಬೆಳಗ್ಗೆ ಎದ್ದವನೇ ಮನೆಯ ಸುತ್ತ ಮುತ್ತ ಇದ್ದ ಮರಗಿಡಗಳಿಂದ ಬಿದ್ದ ಒಣ ಬೀಜಗಳ ವೀಕ್ಷಣೆಯ ಕೆಲಸ. ಆ ಬೀಜಗಳ ತೆಳು ಸಿಪ್ಪೆಯೆಲ್ಲಾ ನೆನೆದು, ಬಿರಿದು ಅದರೊಳಗಿಂದ ಎರಡು ಹರಿಶಿಣ ಹಸಿರು ಮಿಶ್ರಿತ ಎಲೆಗಳೂ ಕೆಳಗೊಂದು ಬಿಳೀ ಬೇರೂ ಇಳೆಬಿದ್ದು ನೆಲದೊಳಗೆ ಇಳಿಯುವ ತಯಾರಿ ಮಾಡುತ್ತಿರುವುದನ್ನೇ ಕೈಗೆತ್ತಿಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾ ನನ್ನನ್ನೆ ಮರೆತ ನೆನಪುಗಳು. ಆ ಬೀಜವನ್ನ ಮತ್ತೆ ಮತ್ತೆ ನೋಡುವುದು ತಣಿದ ಮೇಲೆ ಅಲ್ಲೇ ನೆನೆದ ನೆಲ ಬಗೆದು ಅದರೊಳಗೆ ಮುಚ್ಚಿ ಮೆದುವಾಗಿ ಮಣ್ಣು ಮುಚ್ಚಿ ಹಿತ್ತಲಿನಲ್ಲಿದ್ದ ಕನಕಾಂಬರ ಗಿಡದ ಬಳಿಗೆ ಓಡುತ್ತಿದ್ದೆ. ಅದರ ಒಣಗಿದ ಬೀಜಗಳು ರಾತ್ರಿಯ ಮಳೆಗೆ ನೆನೆದು ಬೆಳಗಿನ ಮೊದಲ ಕಿರಣಗಳಿಗೆ ಮತ್ತೆ ಒಣಗಲಾಗಿ ಪಟ್ ಪಟ್ ಅಂತಾ ಸಿಡಿದು ಅದರ ಬೀಜಗಳನ್ನೆಲ್ಲ ದೂರ ದೂರ ಹಾರಿ ಹಾರಿ ಬೀಳುತ್ತಿದ್ದ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದೆ. ಈ ಕನಕಾಂಬರ ಗಿಡದ ಸಿಡಿವ ಬೀಜದ ನೆನಪು ನನ್ನನ್ನು ಮತ್ತೆಲ್ಲೋ ಕರೆದೊಯ್ಯುತ್ತಿದೆ.

{ ನಮ್ಮ ಮನೆಗಳಲ್ಲಿ ಆ ದಿನಗಳಲ್ಲೇ ಶೌಚಾಲಯವಿದ್ದರೂ ಸಹ ನಮ್ಮಂತಹ ಮಕ್ಕಳಿಗೆ ಅದರ ಬಳಕೆಯಿಂದ ವಿನಾಯಿತಿ ಇತ್ತು. ಒಮ್ಮೆ ನನಗೆ ಬೆಳಗ್ಗೆ ಬೆಳಗ್ಗೆ ತುಂಬಾ ಅರ್ಜೆಂಟಾಗಿ ಬಿಟ್ಟಿತ್ತು. ಕಣ್ಣು ಸರಿಯಾಗಿ ಬಿಟ್ಟಿರದೇ ಇದ್ದರೂ ನಮ್ಮ ಮನೆಯ ಹಿತ್ತಲಿನಲ್ಲಿದ್ದ ಶೌಚಾಲಯದ ಬಳಿ ಓಡಿದೆ. ಆದರೆ ಒಳಗೆ ಸೇರಿ ಕೆಲಸ ಮುಗಿಸುವ ಪರಿಸ್ಥಿತಿಯಲ್ಲಿರದಿದ್ದರಿಂದ ಹೊರಗೇ ನಿಂತು ಜಲ ಪಿರಂಗಿ ಹಾಯಿಸಿದ್ದೆ. ಇದ್ದಕಿದ್ದಂತೆ ಫಟ್ ಫಟ್ ಫಟ್ ಎಂದು ಸದ್ದು, ಮತ್ತು ಮುಖಕ್ಕೂ ಕೆಲವು ಸಣ್ಣ ಸೂಜಿಯಂತದ್ದರಿಂದ ಹೊಡೆದ ಹಾಗೆ ಹೊಡೆತ ಬಿತ್ತು. ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಆ ಕನಕಾಂಬರ ಗಿಡದ ತುಂಬಾ ತುಂಬಿದ್ದ ಒಣಗಿದ ಬೀಜದ ಗೊಂಚಲುಗಳ ನಡುವೆ ಪೈಪೊಟಿಯಲ್ಲಿ ಸರಣಿ ಪಟಾಕಿ ಹೊಡೆವ ಸಂಭ್ರಮ!.}

ಇಂತೆಲ್ಲಾ ನೆನಪುಗಳ ಮಧ್ಯೆ ಮೈ ಮರೆತವನಿಗೆ, “ಎಲ್ಲಿದ್ದೀಯೋ ಬಾಬು? ಬರ್ತೀಯೇನೋ ಗುಡ್ಡದ ಕಡೆ ಹೋಗುತ್ತಿದ್ದೀನಿ” ಎಂದು ಕೂಗು ಹಾಕುತ್ತಿದ್ದ ಸೋದರ ಮಾವನ ಮಾತು ಕೇಳಿದ್ದೇ ಚಿಗರೆಯಂತೆ ನೆಗೆದು ಅವರೂಡಿದ್ದ ಎತ್ತಿನ ಗಾಡಿಯೇರಿರುತ್ತಿದ್ದೆ. ಅದರಲ್ಲಿ ಎಲ್ಲ ಆ ದಿನದ ಸಂಭ್ರಮಕ್ಕೆ ಸಿಧ್ದ ಮಾಡಿಕೊಂಡು ಕುಳಿತ ಅಕ್ಕ ಮತ್ತು ಅಜ್ಜಿಯಿರುತ್ತಿದ್ದರು.ಮೂರು ಮೈಲಿ ದೂರವಿದ್ದ ಗುಡ್ಡ ಸೇರಿದ ನಾವು ಅಂದು ರೈತರೆಲ್ಲಾ ಅವರ ಜಮೀನಿನಲ್ಲಿ ಮಾಡುವ ಹೊನ್ನಾರಿನ ಸಂಭ್ರಮದ ಆಚರಣೆಯಲ್ಲಿ ತೊಡಗುತ್ತಿದ್ದೆವು. ಸೋದರ ಮಾವ ಗಾಡಿ ಮರದ ನೆರಳಿಗೆ ನಿಲ್ಲಿಸಿ ಎತ್ತುಗಳನ್ನು ಹೊನ್ನಾರಿನ ಮೊದಲ ಉಳುಮೆಗೆ ಸಿದ್ಧ ಮಾಡುತ್ತಿದ್ದರು. ಮೈತೊಳೆದು ಮಡಿಯುಟ್ಟು ಬಂದಿದ್ದ ಅಕ್ಕ ಹೊನ್ನಾರಿನ ನೇಗಿಲಿಗೆ ಹೂಡಿದ ಎತ್ತುಗಳಿಗೆ ಪೂಜಿಸಿ ಪ್ರಸಾದದ ಬಾಳೆ ಹಣ್ಣು ತಿನ್ನಿಸಿ ನೆಲಕ್ಕೆ ನಮಸ್ಕರಿಸಿ ಬದಿಗೆ ಸರಿಯುತ್ತಿದ್ದರು. “ಹೇಯ್ ಹೇಯ್, ಅಚ್ಚಾ ಅಚ್ಚಾ, ಎಂದು ಮಧ್ಯೆ ಮಧ್ಯೆ ಚ್ಚ್ ಚ್ಚ್ ಚ್ಚ್, ಹಾ ಹಾ ಹಾ, ಎಂದು ಹುರಿದುಂಬಿಸುತ್ತಾ ಸೋದರ ಮಾವ ಇಡೀ ಜಮೀನಿನ ಹೊರ ವಿಸ್ತಾರಕ್ಕೆ ಒಂದು ಸುತ್ತು ಬರುತ್ತಿದ್ದರು.

ಇದೆಲ್ಲಾ ನಡೆಯುವ ಹೊತ್ತಿಗೆ ಅಕ್ಕ ನಮಗೆಲ್ಲಾ ಬಾಳೆಹಣ್ಣಿನ ರಸಾಯನ ಹಂಚಿರುತ್ತಿದ್ದರು. ಅದನ್ನೆಲ್ಲಾ ತಿಂದು ಮುಗಿಸುವುದರೊಳಗೆ ಅದೆಲ್ಲಿರುತ್ತಿದ್ದವೋ ಆ ಕಾಗೆ, ಮೈನಾ, ಬಿಳಿ ಕೊಕ್ಕರೆ, ಎಲ್ಲ ಹಾರಿ ಬಂದು ನಮ್ಮ ಮಾವ ಗೀಚಿದ ನೇಗಿಲ ಸಾಲುಗಳ ಸುತ್ತ ಮುತ್ತ ಮೇಲಕ್ಕೆದ್ದು ಬರುತ್ತಿದ್ದ ಹುಳು ಹುಪ್ಪಡಿಗಳೂ ಎರೆ ಹುಳುಗಳನ್ನೂ ಹಿಡಿದು ಹೊಟ್ಟೆತುಂಬಾ ತಿಂದು ಮುಗಿಸುತ್ತಿದ್ದವು. ಮದ್ಯಾಹ್ನದ ಬಿಸಿಲೇರುವ ಮುನ್ನ ಮಾವ ನೊಗ ಕಳಚಿ ಎತ್ತುಗಳನ್ನು ಮೇಯಲು ಬಿಡುತ್ತಿದ್ದರು.ಅಗ ನನಗೆ ಅಲ್ಲಲ್ಲೇ ಮೊದಲ ಮಳೆಗೆ ತುಂಬಿ ನಿಂತ ಗುಂಡಿಗಳಲ್ಲಿದ್ದ ಕೆಂಪು ಕೆಂಪು ನೀರಿನಲ್ಲಿ ಈಜುವ ಯೋಗ. ನನ್ನ ಹೊಟ್ಟೆ ಕೆಳಗೆ ಬಳಸಿ ಹಿಡಿದು ಮಾವ ಆ ನೀರಿನಲ್ಲಿ ನಾನು ಮುಳುಗದಂತೆ ಹಿಡಿದು ಕಾಲು ಕೈ ಬಡಿದು ಈಜಲು ಹುರಿದುಂಬಿಸುತ್ತಿದ್ದರು.

ನಾನಂತೂ ಮೈ ಹಣ್ಣಾಗುವವರೆಗೂ ಕೈ ಕಾಲು ಬಡಿದು ಸುಸ್ತಾಗುವವವರೆಗೂ ನೀರು ಬಿಟ್ಟು ಈಚೆ ಬರುತ್ತಿರಲಿಲ್ಲ.
ನಂತರ ಮದ್ಯಾಹ್ನ ಮರದ ನೆರಳಲ್ಲಿ ಕುಳಿತು ಅಕ್ಕ ಅಜ್ಜಿ ಮಾವ ಎಲ್ಲರೊಂದಿಗೆ ಊಟ ಮುಗಿಸುತ್ತಿದ್ದೆ. ಬಿಸಿಲಿಗೆ ಬಳಲಿದ ಎತ್ತುಗಳಿಗೂ ನೀರು ತುಂಬಿದ ಹೊಂಡಗಳಲ್ಲಿ ಸ್ನಾನ ಮಾಡಿಸುವ ಮಾವನ ಜೊತೆ ನಾನೂ ಮತ್ತೆ ಸ್ನಾನ ಮುಗಿಸುತ್ತಿದ್ದೆ. ನೀರಿನಲ್ಲಿ ದೇಹ ಪೂರ ಮುಳುಗದಂತೆ ಈಜಿ ಬರುತ್ತಿದ್ದ ಎತ್ತುಗಳ ಬೆನ್ನ ಮೇಲೇರಿ ಮಲಗಿ ಗಟ್ಟಿಯಾಗಿ ತಬ್ಬಿ ಹಿಡಿದು ನಾನೂ ಹಲವು ಬಾರಿ ನೀರಿನಲ್ಲಿ ಉಚಿತ ಎತ್ತಿನ ಬೋಟಿಂಗ್ ಮಜಾ ಅನುಭವಿಸುತ್ತಿದ್ದೆ. ಎಲ್ಲ ಮುಗಿದ ಮೇಲೆ ದಡದಲ್ಲಿ ಕುಳಿತು ನಾನೂ ಮಾವ ಇಬ್ಬರೂ ಕಲ್ಲಿನ ಬಿಲ್ಲೆಗಳ ಹಿಡಿದು ನೀರಿನ ಮೇಲ್ಮೈಗೆ ಬೀಸಿ ಅದೆಷ್ಟು ದೂರ ಹಾರಿ ಹಾರಿ ನೀರ ಮುಟ್ಟಿ ಮುಟ್ಟಿ ಮುಳುಗಿತು ಎಂದು ಪಂದ್ಯ ಕಟ್ಟಿ ಸೋತು ಗೆಲ್ಲುತ್ತಿದ್ದೆವು.

ಎಲ್ಲ ಮುಗಿಸಿ ಸಂಜೆ ಮನೆಗೆ ಮರಳುವ ದಾರಿಯ ಇಕ್ಕೆಲದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವೊಂದು ನಡೆದಿರುತ್ತಿತ್ತು. ಬೆಳಗ್ಗೆ ಹೋಗುವಾಗ ಬರೀ ಬಿಸಿಲಿಗೆ ಒಣಗೀ ಒಣಗೀ ಬಟಾ ಬಯಲಿನಂತೆ ಬೋಳು ಬೋಳಾಗಿದ್ದ ದಾರಿ ಇದ್ದಕ್ಕಿದ್ದಂತೆ ಪೂರಾ ಹರಿಶಿನ ಮಿಶ್ರಿತ ಹಸಿರಿನ ಬಣ್ಣ ಬಳಿದುಕೊಂಡಿರುತ್ತಿತ್ತು. ಬರೀ ಧೂಳಿನಿಂದ ಮುಚ್ಚಿ ಮಸುಕಾಗಿದ್ದ ಬಯಲಿನ ಮರಗಳೆಲ್ಲಾ ಯಾರೋ ಬಂದು ಹೊಸದಾಗಿ ಸುಣ್ಣ ಬಣ್ಣ ಬಳಿದಿರುವರೇನೋ ಎಂಬಂತೆ ಸಿಂಗರಿಸಿಕೊಂಡಿರುತ್ತಿದ್ದವು. ಇದ್ದ ಬದ್ದ ಹರಿಶಿಣದ ಎಲೆಗಳನ್ನೆಲ್ಲ ಕಳೆದುಕೊಂಡು ಉದುರಿಸಿ ಬೋಳು ಬೋಳಾಗಿದ್ದ ಮರಗಳಲ್ಲಿ ಅದೆಲ್ಲಿಂದಲೋ ಕೆಂಪು ಮಿಶ್ರಿತ ಎಳೆ ಚಿಗುರಿನ ಹಸಿರಿನ ಎಲೆಗಳು ಈಚೆ ಬರಲು ಹೊಂಚು ಹಾಕುತ್ತಿರುತ್ತಿದ್ದವು.

children-play-rain-india_18731_990x742

ಅದೇ ಮಲ್ಲಿಗೆ ಬಳ್ಳಿ, ಅದೇ ಹೂ ಹುಡುಗನ ನನಸು****

ಪ್ರೀತಿಸುವ ಮನಸ್ಸುಗಳ ನಡುವೆ ಯಾವ ಕಾಲದ, ವಯದ, ನಿರೀಕ್ಷೆಯ, ಅಡೆ ತಡೆಯ ಗೋಡೆಗಳೂ, ಕೋಟೆಗಳೂ, ಮುಚ್ಚಿದ ಬಾಗಿಲುಗಳೂ, ಬೀಗ ಜಡಿವ ಜನರೂ ಯಾವ ಕಾಲದಲ್ಲೂ ಇರಬಾರದು.

ಆ ದಿನವೇ ನೆನಪಾಗುತ್ತೆ, ಮತ್ತೆ ಮತ್ತೆ ಬೇಡವೆಂದರೂ, ಬೇಕೆಂದರೂ.ನನ್ನ ನಿನ್ನ ನಡುವೆ ಮಲ್ಲಿಗೆ ಬಳ್ಳಿಯೊಂದು ಹುಟ್ಟಿತ್ತು, ಹಬ್ಬಿತ್ತು, ಹೂ ಬಿಟ್ಟಿತ್ತು. ನಾನೂ ಅದೇ ಮಲ್ಲಿಗೆ ಹೂಗಳ ಬೊಗಸೆ ತುಂಬಾ ತಂದು ನಿನ್ನ ಮುಡಿತುಂಬಾ ಮುಡಿಸುವ ಕನಸು ಕಂಡಿದ್ದೆ. ಆ ಸುದಿನ ಅದೆಷ್ಟು ಬೇಗನೆ ಬಂದಿತ್ತು. ಇಬ್ಬರಲ್ಲೂ ಒಬ್ಬರನ್ನೊಬ್ಬರು ಕಣ್ತುಂಬಾ ನೋಡುವ ಕಾತುರ. ಇಬ್ಬರೂ ಒಪ್ಪಿ ಕೆಲವು ನಿಮಿಷಗಳ ಭೇಟಿಯಿದ್ದುದನ್ನು ಮತ್ತೆ ಘಂಟೆಗಳಾಗಿ ಬದಲಾಯಿಸಿಕೊಂಡಿದ್ದೆವು. ನಾನು ನಿನ್ನ ನೋಡುವ ದಾರಿ ಹಿಡಿಯುವ ಮುನ್ನ ನನ್ನ ಮೊದಲ ಹೆಜ್ಜೆಯಿಟ್ಟದ್ದನ್ನು ನಿನಗೆ ತಿಳಿಸಿದ್ದೆ. ನೀನೂ ನಿನ್ನೆಡೆಗಿನ ನನ್ನ ಪಯಣಕ್ಕೆ ಶುಭ ಕೋರಿದ್ದೆ.ಅವತ್ತೂ ನಮ್ಮ ಸುತ್ತ ಮುತ್ತ ಜನರ ಭಯ, ಭೀತಿ,ನಿರಾಸೆ,ಸಾವಿನ ನೆಪ,ಕಳೆದು ಹೋಗುವ ಚಿಂತೆ, ಹೀಗೆ ನೂರೆಂಟು ಮಾಮೂಲಿಯಲ್ಲದ ರಗಳೆಗಳೇ ಇದ್ದವು. ಆದರೂ ಇವೆಲ್ಲದರ ಮಧ್ಯೆ ನಾವಿಬ್ಬರು ಮಾತ್ರ ಸಿಗುವ, ಸೇರುವ, ಖುಷಿಪಡುವ,ಹಂಚಿಕೊಳ್ಳುವ,ಒಂದಾಗುವ,ನಿರೀಕ್ಷೆ, ತವಕದಲ್ಲಿದ್ದೆವು.

ಅದೇ ಹೋಟೆಲ್ಲು. ಅದೇ ಜಾಗ.ಮೊನ್ನೆ ಹೋಗಿದ್ದೆ. ನಮ್ಮ ನಡುವೆ ನಡೆದ ಮೊದಲ ಭೇಟಿಯ ದಿನ ನೆನಪಾಯ್ತು. ನಾನು ಅಲ್ಲಿ ತಲುಪುತ್ತಿರುವ ಸುದ್ದಿ ಪ್ರತಿಕ್ಷಣ ನಿನ್ನ ಫೋನಲ್ಲಿ. ನಾನು ಇಳಿದವನೇ ನನ್ನ ಮಾಮೂಲಿ ಹವ್ಯಾಸದಂತೆ ಮೊದಲು ಕೂರುವ ಜಾಗ ಹುಡುಕಿದೆ. ಅದೇ ಟೇಬಲ್ಲಿಗೆ ನನ್ನ ಸಿಬ್ಬಂದಿಗೆ ಕಣ್ಣ ಸನ್ನೆಯಲ್ಲೇ ಹೇಳಿ ರಿಸೆರ್ವ್ ಮಾಡಿಸಲು ತಿಳಿಸಿದೆ. ಆಚೆ ನಿಂತು ನಿನ್ನ ಬರುವಿಗೆ ಕಾದಿದ್ದೆ. ನೀನು ಆಟೋ ಇಳಿದೆ. ಕೈಯಲ್ಲಿ ಸತತವಾಗಿ ವರದಿ ಮಾಡುತ್ತಿದ್ದ ಅದೇ ಮೊಬೈಲು ಹುಡುಗಿಯ ನೋಡಿ ಹಿಂತಿರುಗಿ ಹೋಟೆಲ್ ದ್ವಾರದ ಬಳಿ ನೋಡಲು ತಿಳಿಸಿದೆ. ತಿರುಗಿ ನೋಡಿದ ನೀನು ನಕ್ಕು ಮೊಬೈಲ್ ಆಫ್ ಮಾಡಿದೆ.

ಇಬ್ಬರೂ ಒಳ ನಡೆದೆವು. ಮತ್ತವರೆಲ್ಲ ಅದೇ ಹೋಟೆಲ್ಲಿನ ಅಲ್ಲಲ್ಲಿ ಆಸೀನರಾದರು. ನಮ್ಮ ಟೇಬಲ್ಲಿಗೆ ಮಾತ್ರ, ಸುತ್ತ ಮುತ್ತ ಯಾರೂ ಕುಳಿತುಕೊಳ್ಳದ ವ್ಯವಸ್ಥೆಯಾಗಿದ್ದು ನಿನಗೆ ಗೋಚರಿಸಲೇ ಇಲ್ಲ. ಯಾಕೆಂದರೆ ನೀನು ನಿನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದೆ. ಮುಂದೆ ನಡೆದಿದ್ದೆಲ್ಲವೂ ಇಬ್ಬರಿಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಕೊಡು ಕೊಳ್ಳುವ ಸಹಜ ಕ್ರಿಯೆಗಳು. ನನ್ನಲ್ಲಿದ್ದದ್ದನ್ನು ನಿನಗೆ ಕೊಟ್ಟೆ. ನೀನು ಪ್ರೀತಿಯಿಂದ ಬರೆದದ್ದೆನ್ನಲ್ಲಾ ಅದೇ ಚೆಂದದ ಮರು ಬಳಕೆಯ ಕಾಗದದ ಚೀಲದಲ್ಲಿ ಕೊಟ್ಟೆ. ನಿನ್ನ ಆ ಒಂದು ಪುಸ್ತಕ ಮಾತ್ರಾ ಇರಲಿಲ್ಲ ಅದರಲ್ಲಿ. ಅದಕ್ಕಾಗಿ ನೀನೆಷ್ಟು ಶ್ರಮಪಟ್ಟು ಅದರದೊಂದೂ ಪ್ರತಿ ನಿನ್ನ ಬಳಿ ಉಳಿಸಿಕೊಳ್ಳಲಾಗದ ಅಸಹಾಯಕತೆ ತೋಡಿಕೊಂಡೆ.

ಇಬ್ಬರ ಬಳಿಯೂ ಕುಳಿತುಕೊಳ್ಳಲೂ, ಸುಮ್ಮ ಸುಮ್ಮನೇ ಹರಟಲೂ ಸಮಯವೇ ಇರಲಿಲ್ಲ.ಪ್ರೀತಿಯೊಂದು ಕಳೆದುಹೋದದ್ದರ ಚಿಂತೆಯ ನಿನ್ನ ಕಣ್ಣಿರ ನಡುವೆ ನೀನಿದ್ದೆ, ಜೊತೆಯಲ್ಲಿ ನಾನೂ ಇದ್ದೆ. ನಿನ್ನ ನಿಜದ ರೂಪ ಅಂದು ಅರಿತ ನಾನು, ನನ್ನ ಜೀವಕಣಗಳ ಮತ್ತೊಂದು ಭಾಗದ ಪ್ರತಿರೂಪ ಅಲ್ಲೇ ಕಂಡು, ಜೋಡಿಸಿಕೊಂಡಿದ್ದೆ. ತದನಂತರ ನಾವಿಬ್ಬರೂ ಮತ್ತೆಂದೂ ಬೇರಾಗದ ಮಾತು ಇಬ್ಬರೂ ಶಪಥಗೈದಿದ್ದು ಎಲ್ಲ ಮನದೊಳಗೆ ಮತ್ತೆ ಮತ್ತೆ ಮರುಕಳಿಸಿದೆ. ನಂತರ ನಡೆದ ಭೇಟಿಗಳೆಷ್ಟೋ, ಮಾತುಕಥೆಗಳೂ ಲೆಕ್ಕಕ್ಕೆ ಸಿಗದಷ್ಟು, ಮತ್ತು ಮೌನದ ನಿಟ್ಟುಸಿರುಗಳೂ ಹಿಡಿದಿಡಲಾಗದ ಬೆಳಕಿನಷ್ಟು. ಇಬ್ಬರೂ ಜೊತೆ ಜೊತೆ ನಡೆದ ಹೆಜ್ಜೆಗಳೆಷ್ಟೋ, ಲೆಕ್ಕವಿಟ್ಟವರಾರು,ನೆನಪುಗಳ ಖಾಲಿ ಖಾಲಿ ಪುಟಗಳಿಗೆ ದಿನಾಂಕ ಬರೆದು ಮೊಳೆಯೊಡೆದು ತಗುಲಿಹಾಕಿದವರಾರು.
****
ಇಂದೂ ಅದೇ ರೀತಿಯ ಸಮಯ. ನಿನ್ನಲ್ಲಿ ನೀನು ಕಳೆದುಕೊಂಡಿದ್ದೆಷ್ಟೋ, ಹಾಗೇ ನಾನೂ ಕೂಡ. ಇಬ್ಬರೂ ಸಾಕಷ್ಟು ಗಳಿಸಿರಬಹುದು ಜನರ ಕಣ್ಣಿಗೆ ಕಾಣುವಂತೆ. ಆದರೆ ಒಳಗೆ ಕಳೆದುಕೊಂಡಿರುವುದು ನಮ್ಮಿಬ್ಬರ ಮನಸ್ಸಿಗೆ ಮಾತ್ರಾ ಗೊತ್ತು ಅಲ್ವಾ.ಆ ದಿನದಿಂದ ನಾವಿಬ್ಬರೂ ಜೀವಿಸಿದ ನಮ್ಮ ಪ್ರತೀ ಕ್ಷಣಗಳ ಕಿವಿಗಳಿಗೆ ನಮ್ಮ ತೊಳಲಾಟ, ನಿಟ್ಟುಸಿರುಗಳ ಬಿಸಿಯ ಬೇಗೆ ಕೇಳಿಸಿದೆಯಂತೆ. ಹೊರಗೆ ನೋಡಲು ಇಬ್ಬರೂ ಮಾಮೂಲಿಯಂತೆ ಕಂಡರೂ ಒಳಗೊಳಗೆ ಪ್ರತೀ ಕ್ಷಣ ಹಂಚಿಕೊಂಡ ಎಲ್ಲ ಭಾವನೆಗಳು ನಿಗಿ ನಿಗಿ ಕೆಂಡದ ಉಂಡೆಗಳಾಗಿ ಸುಡುತ್ತಿರುವುದರ ಶಾಖ ನಮಗೆ ಮಾತ್ತ ಅರಿವಾಗುತ್ತಿದೆಯಲ್ಲವೇ. ನಿನ್ನ ಪ್ರತೀ ಅಕ್ಷರ, ನಮ್ಮಿಬ್ಬರ ನಡುವೆ ನಡೆದ ಎಲ್ಲ ಮಧುರ, ಅಮಧುರ ಅನುಭವಗಳ ದಾಖಲಾತಿಯಲ್ಲದೆ ಮತ್ತೇನು ಗೆಳತಿ.

“ಲೈಫ್ ಬಾಯ್” ಎಲ್ಲಿದೆಯೋ ಅಲ್ಲಿದೇ ಆರೋಗ್ಯ, ಎಂಬ ಹಳೇ ಇಟ್ಟಿಗೆಯಂಥ ಎಷ್ಟು ಹಚ್ಚಿದರೂ ಸುಲಭಕ್ಕೆ ಸವೆಯದ ಚಿರ ನೆನಪಿನ ಸೋಪಿನ ಹಾಡು ನನ್ನ ಯೂ ಟೂಬಿನಲ್ಲಿ ನೋಡುತ್ತಿರುವೆ ಈಗ. ನನಗನ್ನಿಸುತ್ತೆ “ಪ್ರೀತಿ ಎಲ್ಲಿದೆಯೋ ಅಲ್ಲಿದೇ ತಾಪ” ಅಂತಾ. ಇಬ್ಬರಿಗೂ ಇದನ್ನು ವಿವರಿಸ ಬೇಕಿಲ್ಲ ಅಲ್ಲವೇ. ಇಬ್ಬರೂ ಅನುಭವಿಸಿರುವ ಸಮಾನ ಸುಖವಿದು. ನಿನಗೆ ನಿನ್ನದೇ ಒಲವಿನ ನೀರುಣಿಸುವ ಝರಿ ತೊರೆಗಳು, ನನಗೆ ಭಾವವೂ ಇಲ್ಲದ, ನಿರ್ಭಾವದ ಅರಿವೂ ಇಲ್ಲದ ನೀನಿಲ್ಲದ ಕೊರತೆಗಳು ಮಾತ್ರ ಸಾಗರದಷ್ಟಿವೆ. ಈ ಬದುಕೇ ಹಾಗಲ್ಲವೇ. ಒಮ್ಮೆ ಬಿಟ್ಟು ಇರಲಾರೆ ಎನ್ನಿಸುವುದು ಮತ್ತೊಮ್ಮೆ ಯಾಕೋ ಇದು ಅತೀ ಎನಸುವುದು ಸಹಜವೂ ಕೂಡ.

ಹಾಗೆ ಆದಾಗಲೇ ಎಲ್ಲವೂ ಒಂದು ಹಂತ ಮೀರಿ ಮೇಲಕ್ಕೋ ಕೆಳಕ್ಕೋ ಏರುವುದೋ ಇಳಿಯುವುದೋ ತೋರಿಸುವ ಬದುಕಿನ ಸಹಜ ಗ್ರಾಫಿನ ಪುಟದಂತಾಗುವುದು. ಯಾವುದೇ ಜೀವನ ಸರಳ ರೇಖೆಯಂತಿರುವುದು ನಿನ್ನ ಅಷ್ಟೂ ಓದಿನ ತಿಳುವಳಿಕೆಯಲ್ಲಿ ಕಂಡಿದ್ದರೆ ಈ ಬಾರಿ ಬಂದಾಗ ಮರೆಯದೆ ತಿಳಿಸು. ನಾನು ನಿನ್ನನ್ನೂ ನೀನು ನನ್ನನ್ನೂ ಎಲ್ಲಾದರೂ ಎಂದಾದರೂ ಯಾವ ಕ್ಷಣದಲ್ಲಾದರೂ ಒಮ್ಮೆಯಾದರೂ ಬಿಟ್ಟು ಬದುಕಿದ ಸಾಧ್ಯತೆ ಇದೆಯೇ ಗೆಳತಿ? ನನಗಂತೂ ನೂರಕ್ಕೆ ನೂರೂ ಖಾತರಿ, ಅದು ಸಾಧ್ಯವಾಗುವುದೂ ಇಲ್ಲ ಯಾರು ಬೇಕೆಂದರೂ ಬೇಡವೆಂದರೂ.
****
ನಮ್ಮಿಬ್ಬರ ಜೀವಿಸಿದ ಪ್ರತೀ ಕ್ಷಣಗಳ ದಾಖಲಾತಿ ನಮ್ಮ ಮನದಲ್ಲಿ ಅಚ್ಚಳಿಯದೇ ನಡೆದಿರುವಂತೆ ಸಮಾನಾಂತರವಾಗಿ ನಮ್ಮಿಬ್ಬರ ನಡುವೆ ನಡೆಯುತ್ತಿರುವ ಎಲ್ಲ ಪ್ರಾಪಂಚಿಕ ಅನುಭವವೂ ನಮಗೇ ತಿಳಿಯದಂತೆ ಯಾಂತ್ರಿಕವಾಗಿಯೂ ದಾಖಲಾತಿ ನಡೆದಿದೆ. ನಾವಿಬ್ಬರೂ ಬಾಯಿ ಬಡಿದುಕೊಳ್ಳುವುದರಲ್ಲಿ ನಿಸ್ಸೀಮರು ಎಂದೇ ಹೇಳಬೇಕಾಗಿದೆ ಈಗ. ಈ ವಿಷಯದಲ್ಲಿ ನೀನೇ ಮೊದಲು ಮತ್ತು ನನಗಿಂತ ತುಂಬಾ ಮುಂದು ಕೂಡಾ. ಅದೆಷ್ಟು ತವಕ ನಿನಗೆ, ನಡೆದದ್ದನೆಲ್ಲ ಬರೆದೋ, ಕಿವಿ ಕಚ್ಚಿಯೋ ಜಗಜಾಹೀರು ಮಾಡುವ ಮಗುವಿನ ಮನಸ್ಸು ನಿನ್ನದು.

ನಮ್ಮಿಬ್ಬರಲ್ಲಿ ಯಾರು ಭೌತಿಕವಾಗಿ ಇಲ್ಲವಾದರೂ ನಮ್ಮ ನಡುವೆ ನಡೆದ, ನಮ್ಮಿಬ್ಬರ ಸುತ್ತಮುತ್ತ ಇರುವ ಜನರೊಂದಿಗೆ ನಡೆದ ಪ್ರತಿಯೊಂದೂ ಕ್ಷಣದ ಮಾಹಿತಿ ಜಗ ಜಾಹೀರಾಗುವುದಂತೂ ತಪ್ಪುವುದಿಲ್ಲ. ನಮ್ಮ ಕೈ ಕೈಹಿಡಿದು ನಾವಿಬ್ಬರೂ ನಡೆದಾಡಿದ, ಸವೆಸಿದ ಪ್ರತೀ ಹೆಜ್ಜೆಯೂ, ಚೌಕಿಯಲ್ಲಿರುವ ದಾರಿ ದೀಪದ ಮೇಲಿರುವ ಯಾಂತ್ರಿಕ ಕಣ್ಣುಗಳಲ್ಲಿ ಧಾಖಲಿದೆ. ನಮ್ಮ ಖಾಸಗೀತನದ ಖಾಸ್ ಬಾತ್ ಗಳೂ ಯಾವಾಗ ಬೇಕೆಂದಾಗ ಕೇಳಬಹುದು. ನಮ್ಮೆಲ್ಲರ ಖಾಸಗಿ ಬದುಕೂ ಇಂದು ಬೆಳಕಿನಷ್ಟು ಬೆತ್ತಲೆ, ಬೆತ್ತಲೆ. ಅದೆಷ್ಟು ಕಷ್ಟ ಪಟ್ಟು ಸೊಳ್ಳೆಪರದೆಯಲ್ಲಿ ನೀರು ತುಂಬಿಡಲು ಪ್ರಯತ್ನಿಸುತ್ತಾರೆ ಬುಧ್ದನಷ್ಟೇ ಬುದ್ದಿಯುಳ್ಳ ಜನ. ಇಂದು ನಮ್ಮ ಕತ್ತಲೆಯ ಬದುಕು ಮುಚ್ಚಲಾರದ ಲಕ್ಷಾಂತರ ತೂತುಗಳ ತೂತು ಬಿದ್ದ ಸೊಳ್ಳೆಪರದೆಯಿದ್ದಂತೆ.
****
ಪ್ರೀತಿ ಹುಟ್ಟಬೇಕು ಎರಡು ಮನಗಳ ನಡುವೆ. ಅದಕ್ಕೆ ಯಾರಪ್ಪನ ಅಪ್ಪಣೆಯೂ, ಅನುಮತಿಯೂ, ಅಂಗೀಕಾರವೂ,ರಾಜನ ಒಪ್ಪಿಗೆಯ ಗೊಡವೆಯೂ ಇರಬೇಕಿಲ್ಲ, ಅವನ ಆಸ್ಥಾನದ ರಾಜ ಮುದ್ರೆಯೂ ಬೇಕಿಲ್ಲ. ಪ್ರೀತಿಸುವ ಮನಸ್ಸುಗಳ ನಡುವೆ ಯಾವ ಕಾಲದ, ವಯದ, ನಿರೀಕ್ಷೆಯ, ಅಡೆ ತಡೆಯ ಗೋಡೆಗಳೂ, ಕೋಟೆಗಳೂ, ಮುಚ್ಚಿದ ಬಾಗಿಲುಗಳೂ, ಬೀಗ ಜಡಿವ ಜನರೂ ಯಾವ ಕಾಲದಲ್ಲೂ ಇರಬಾರದು.

ಹಾಗೇ ಮತ್ತೆ ನಾವು ಸಂಧಿಸುವ ಕಾಲ ಬಂದಿದೆ. ನಡುವೆ ಸಾಕಷ್ಟು ದಾರಿ ಸವೆದಿದೆ. ನಾನೂ ನೀನೂ ಅದೇ ದಾರಿಯ ಮಗ್ಗುಲಿನಲ್ಲಿ ನಡೆದದ್ದೂ ಮುಗಿದಿದೆ. ಇಬ್ಬರಿಗೂ ನಡುವೆ ವಿಷಹಿಣಿದ ಜನರ ವರ್ತನೆಗಳೂ ಅರ್ಥವಾಗಿದೆ. ಅದೆಲ್ಲ ಸಹಜವೆಂಬ ಅರಿವೂ ನಮ್ಮಿಬ್ಬರಿಗೂ ಯಾವತ್ತೂ ಇದೆ. ಮಾತೆತ್ತಿದರೆ ಅಲ್ಲಮ, ಅಕ್ಕ, ಬುಧ್ದನ ಹೆಸರಿಡಿದೇ ಮಾತನಾಡುವ ಜನರ ನಡುವೆ ಬದುಕಿ ಉಸಿರಾಡುವ ನಾವುಗಳು ಮತ್ತೆ ನಾವಿಬ್ಬರು ನಡೆದ ಅದೇ ಮುಖ್ಯದಾರಿಗೆ ಬರಲಿಕ್ಕಿದೆ. ಅಂದಿನಿಂದ ಇಲ್ಲಿಯವರೆಗೆ ಮಲ್ಲಿಗೆ ಬಳ್ಳಿಯೂ ಹೆಚ್ಚು ಹೆಚ್ಚು ಹಬ್ಬಿದೆ. ಕೈತುಂಬಾ ಮಲ್ಲಿಗೆಯಿಡಿದು,ಮೊಳಗಟ್ಟಳೆ ಮನಸಾರೆ ಪೋಣಿಸಿ, ನಿನ್ನ ಮುಡಿಯೇರಿಸುವ ಸಮಧುರ ಕ್ಷಣಗಳು ಆದಷ್ಟೂ ಬೇಗ ಬರಲಿ ಎಂಬ ನಮ್ಮಿಬ್ಬರ ಕನಸು ನನಸಾಗಲೀ. ಎಂದೆಂದೂ ಅದೇ ಹಾರೈಕೆಗಳೊಂದಿಗೆ ನಿನ್ನ ಅದೇ ಎಂದೂ ಬದಲಾಗದ ಹೂ ಹುಡುಗ.

friendship-8422

ಅವಳ ಗೋಡೆ,

ಅವಳ ಗೋಡೆ,
ಅವಳ ಬರಹ.
ಅವಳವನ ಬಗ್ಗೆ,
ಬರೆದರೂ…

ಅವನ ಗೋಡೆ,
ಅವನ ವಿರಹ.
ಅವನವಳ ಬಗ್ಗೆ,
ನೆನೆದರೂ….

ಇವನಾವನೋ,
ಅವನಾವನೋ,
ಇವಳಾವಳೋ,
ಅವಳಾವಳೊ,

ಅವರವರ ಬಗ್ಗೆ,
ಅವರವರವರ ,
ಗೋಡೆಗಳಲ್ಲಿ,
ಗೋಳಾಡಿಕೊಳ್ಳಲಿ……..

ಎಲ್ಲರೂ ಬರೆಯಲಿ,
ಎಲ್ಲರೂ ಬೆರೆಯಲಿ,
ಅವನವಳ,
ಅವಳವನ,
ಮರೆಯಲಿ….
ಅವರವರಿಗೆ,
ಜ್ಞಾನವುದಯಿಸಲಿ… ….

luncheon-on-the-grass-1961 (1)

ನೇಮ್ ಲೆಸ್ಸ್… ಒನ್.

ನಿಂತ ಗೋಡೆಗಳ
ಕರ್ಮವೋ
ಅಥವಾ ಚಲಿಸುವ ನಾರಾಯಣರ
ನಿತ್ಯ ಕರ್ಮವೋ….
ತುಪ್ಪ ಸವಿದವರೇ ತಿಳಿಸಬೇಕು.

{ಹೀಗೊಂದು ಹೊಸ ರೀತಿಯ ಪದ್ಯದಂಥದೋ ಗದ್ಯದಂಥದೋ ಏನೋ ಬರೀ ಬರೆಯುವ ಪ್ರಯತ್ನವಷ್ಟೇ…}

all-mammals-empty-their-bladders-in-the-same-amount-of-time

ತೆರೆದ ಬಾಗಿಲು***

ನನ್ನ ಬೆತ್ತಲಾಗಿಸಿ
ನೀನೂ ಬಯಲಾದ
ಮರೆಯಲಾಗದ
ಕ್ಷಣದಿ

ಚಿಲಕ, ಕೊಂಡಿ,
ಗೊಣಸು,ಬೀಗ,
ಯಾವುದರ
ರಕ್ಷಣೆಯ ಹಂಗಿಲ್ಲದ
ಋಣದ ಭಾರವಿಲ್ಲದ
ತೆರೆದ ಬಾಗಿಲು…
ಕಟ್ಟಿದ ಗೋಡೆಗಳ
ಕೆಡವಿ,
ಮುಚ್ಚಿದ್ದ ಕಿಟಕಿಗಳ
ಮುರಿದು,
ಭದ್ರವಿದ್ದ ಬಾಗಿಲ
ಚಿಲಕ ತೆಗೆದು,
ನನ್ನ ಬೆತ್ತಲಾಗಿಸಿ
ನೀನೂ ಬಯಲಾದ
ಮರೆಯಲಾಗದ
ಕ್ಷಣದಿ
ನಮ್ಮಿಬ್ಬರೊಳುದಿಸಿದ
ಸೂರ್ಯನ
ಖಾಲಿ ಕಿರಣ
ಗಳಿಗೆದರಿ
ಉದಿಸಿದ
ಚಂದ್ರ ನೀರವ
ಮೌನಕೆ
ಸತ್ತು ಸಮಾಧಿಸ್ಥನಾದ
ಗಳಿಗೆಯ
ಹೊಗೆಯ ಧೂಳು
ಕಣ್ಣಿಗೆ ಕಂಡ
ಈ ಕಿಟಕಿಯ
ನೋಟವದೆಷ್ಟು
ಚೆಂದ….

the_empty_house__i__by_hyrith-d3e28fi

ಖಾಲಿ ಯ ಖಯಾಲಿ ***

ಮಾತು,ಮೌನ,ವೂ ಖಾಲಿಯಾಗಿದೆ”

ಖಾಲಿಯಾಗಿದೆ….
ಮೋಡ, ಮಳೆ,
ನಿರು, ನದಿ,
ಪಾತ್ರೆ,ಸಮುದ್ರ,
ನೆಲ, ಆಕಾಶ.

ಖಾಲಿಯಾಗಿದೆ….
ಮುಟ್ಟು,ಮೈಲಿಗೆ,
ವೀರ್ಯ,ಗರ್ಭ,
ಬ್ರೂಣ,ಬದುಕು,
ಉಸಿರು,ಧ್ವನಿ.

ಖಾಲಿಯಾಗಿದೆ….
ಮಾನ,ಸನ್ಮಾನ,
ಧ್ಯಾನ,ಸಮಾಧಿ,
ಪ್ರೀತಿ, ಪ್ರೇಮ,
ಮಾತು,ಮೌನ.

ಷಡಕ್ಷರಿ.ತರಬೇನಹಳ್ಳಿ.
94496 84491.

images (5)

ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…

ಆದರೆ ಈ ಬಾರಿ ನಾನು ಸಾಕಷ್ಟು ಹ್ಯೂಮನ್ ಬಯೋ ಸೆನ್ಸರ್ಗಳ ಬಳಕೆ ಮಾಡಿದ್ದು ಗೊತ್ತಿಲ್ಲದ ಆ ಇಬ್ಬರೂ ಬೇಸ್ತು ಬಿದ್ದಿದ್ದರು.

ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೊಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ ನಂತರ ಒಮ್ಮೆ ನನ್ನನ್ನು ವಿಶೇಷವಾಗಿ ದಿಟ್ಟಿಸಿ ನೋಡಿ ಜಾಗ ಖಾಲಿ ಮಾಡಿದ.

ನಿನ್ನ ಕಣ್ಣುಗಳಲ್ಲೂ ಅದೇ ರೀತಿಯ ತೀರದ ಕುತೂಹಲ ನಮ್ಮಿಬ್ಬರ ಎರಡನೇ ಭೇಟಿಯಲ್ಲಿ ನಾನು ಕಂಡಿದ್ದು ನೆನಪಿಗೆ ಬರಲಾರಂಭಿಸಿತ್ತು. ಹಾಗೆಯೇ ಆ ದಿನಗಳ ಹಸಿರು ಕಾಡುಗಳೂ, ಜಿಟಿ ಜಿಟಿ ಹನಿಯುವ ಮಳೆಯೂ ರಕ್ತ ಹೀರುವ ಜಿಗಣೆಗಳೂ ಮತ್ತು ನಿನ್ನ ನನ್ನ ನಿಘೂಡ ಜಗತ್ತೂ. ಅಂದು ಇಬ್ಬರೂ ಆರಾಮವಾಗಿ ದಿನವಿಡೀ ಒಟ್ಟಿಗೆ ಇರುವುದೆಂದು ಒಪ್ಪಿಕೊಂಡಿದ್ದೆವು. ನಮ್ಮಿಬ್ಬರ ಜೀವನದ ಅಕೌಂಟಿನಲ್ಲಿ ಎಂದೂ ಬ್ಯಾಲೆನ್ಸ್ ನಿಲ್ ಇರುವ ಸಮಯದ ಕೊರತೆ ಬಜೆಟ್ಟಿನಲ್ಲೂ ಸರಿದೂಗಿಸಿಕೊಂಡು. ನಿನ್ನ ಹಾರುವ ಹಕ್ಕಿಯ ಸ್ವಚ್ಛಂದ ಹಾಡುವ ಜೀವನ ನಿನ್ನದಾದರೆ ನನ್ನ ನೆಲದ ರಕ್ಷಣೆಯ ಹೊಟ್ಟೆ ಪಾಡು ನನ್ನದಾಗಿತ್ತು. ಇಬ್ಬರದ್ದೂ ಒಂದೊಂದು ದಿಕ್ಕು ದೆಸೆ. ಆದರೂ ಅನೇಕ ವಿರೋಧಗಳ, ಅಭಾಸಗಳ, ಅನಿರೀಕ್ಷಿತಗಳ ಮೀರಿ ಒಟ್ಟಾಗಿದ್ದೆವು.

ಇಬ್ಬರೂ ವಿರಾಮ ಗಾಗಿ ಮಂಚದ ಮೇಲೆ ಮಲಗಿದಂತೆ ಕುಳಿತು ಲ್ಯಾಪ್ಟಾಪಿನಲ್ಲಿ ಪ್ರಶಸ್ತಿ ಪಡೆದ ಚಿತ್ರಗಳ ನೋಡಿ ಮುಗಿಸಿದ್ದೆವು. ನಮ್ಮಿಬ್ಬರ ನಡುವೆ ಉಳಿದ ಸಮಯಕ್ಕೆ ಸಾಕಾಗುವಷ್ಟಿದ್ದ ಚಾಕೋಲೇಟ್, ಜೇನು ಬೆರೆಸಿದ ಹಸಿರು ಚಹಾ, ನನ್ನ ಬ್ಯಾಗಿನಲ್ಲಿ ತುಂಬಿ ತಂದಿದ್ದ ರೆಡ್ ವೈನ್ ಬಾಟಲ್ಲುಗಳು ಎಲ್ಲವೂ ಮುಗಿಯುತ್ತಾ ಬಂದಿದ್ದವು. ನೀನು ಮಲಗಿದ್ದ ನನ್ನ ಮೊಳಕಾಲ ಮೇಲಿದ್ದ ಅದೇ ಕಲೆಯನ್ನೇ ದಿಟ್ಟಿಸಿ ನೋಡಲಾರಂಭಿಸಿದ್ದೆ. ಸುಮ್ಮನಿರಲಾರದ ನಿನ್ನ ಮಗುವಿನ ಮನಸ್ಸಿನ ಕುತೂಹಲವೂ ಅವನಂತೆಯೇ ನನ್ನ ಅದೇ ನಾಲ್ಕಾಣೆಯಗಲದ ಬಿಳಿ ಮಚ್ಚೆಯನ್ನೊಮ್ಮೆ ಮುಟ್ಟಿ ನೋಡುವಂತೆ ಮಾಡಿತ್ತು. ನೀನು ಮುಟ್ಟಿ ನೋಡಿ ಅದರ ಅಗಲ ಅಳೆಯುವಷ್ಟರಲ್ಲೆ ನಾನು ನಿನ್ನ ಗಮನ ಬೇಕಂತಲೇ ಬೇರೆಡೆ ಸೆಳೆದಿದ್ದೆ. ನೀನು ಅಲ್ಲೇ ಸ್ವಲ್ಪ ಪ್ರೆಸ್ ಮಾಡಿ ನೋಡಿದ್ದರೆ ನಿನಗೂ ಅದು ಗೊತ್ತಾಗಿರುತಿತ್ತು. ಅದೊಂದು ಬಂದೂಕಿನ ಗುಂಡು ಒಳಹೊಕ್ಕು ಮಾಡಿದ ಗುಂಡಿಯ ಮುಚ್ಚಿದ ಮೇಲ್ಮೈ ಮಚ್ಚೆಯೆಂಬುದು.
****

ನಕ್ಸಲರ ಹಾವಳಿ ನಮ್ಮಿಂದ ದೂರದಲ್ಲಿದೆ ಎಂದು ನಿರಾಳವಾಗಿದ್ದ ನಮ್ಮ ರಾಜ್ಯ ಸರ್ಕಾರಕ್ಕೂ ಅವರ ನುಸುಳುವಿಕೆಯ ಬಿಸಿ ತಟ್ಟಿತ್ತು. ಮಲೆನಾಡಿನ ಒಳಗಿನ ದಟ್ಟ ಕಾಡುಗಳಲ್ಲಿ ಅವರ ಓಡಾಟ, ತಾತ್ಕಾಲಿಕ ತರಬೇತಿ ಕ್ಯಾಂಪ್, ಶೇಕರಣಾ ಬಂಕರ್ಸ್ಗಳ ನಿರ್ಮಾಣ ಎಲ್ಲದರ ಗುಪ್ತಚರ ಮಾಹಿತಿ ರವಾನೆಯಾಗಿತ್ತು. ಅವರ ಸುಲಿಗೆಯ ನೇರ ಗುರಿಯಾಗಿದ್ದವರಿಗೂ ಅವರಿಗೂ ತಿಕ್ಕಾಟಗಳೂ, ಸಂಘರ್ಷಗಳೂ ಸಂಭವಿಸಿದ್ದರ ವರದಿ ನಮ್ಮ ಮುಂದಿತ್ತು. ಮುಂದಿನ ದಿನಗಳ ಅವರ ಕಾರ್ಯತಂತ್ರಗಳಿಗೆ ಪ್ರತಿತಂತ್ರ ಹೆಣೆಯುವ ಹೊಣೆಗಾರಿಕೆ ನನ್ನದಾಗಿತ್ತು.

ಸಮಯ ಸಿಕ್ಕಾಗಲೆಲ್ಲಾ ನಮ್ಮವರ ದೈಹಿಕ ಬಲ ಬಳಸಿ ಅವರನ್ನು ಅಲ್ಲಲ್ಲೇ ಮಟ್ಟಹಾಕುತ್ತಾ ಇದ್ದರೂ ಅವರ ಬಲ ಕುಂದಿರಲಿಲ್ಲ. ಅವರ ಮಾಂತ್ರಿಕ ಮಾತಿನ ಮೋಡಿಗೆ ಮರುಳಾಗಿ ಸುಲಭವಾಗಿ ಅವರ ಸುಳಿಗೆ ಸಿಗುತ್ತಿದ್ದ ಸ್ಥಳಿಯ ಯುವಕ ಯುವತಿಯರು ಅವರ ಬತ್ತದ ಶಕ್ತಿಯಾಗಿದ್ದರು. ಕಾಲ ಕ್ರಮೇಣ ನಮ್ಮವರ ನಿರಂತರ ಗುಂಡಿನ ದಾಳಿಗಳಲ್ಲಿ ಏಟುತಿಂದವರು, ಸ್ಪೋಟಕಗಳ ಬಳಕೆಯ ತರಬೇತಿಯ ಸಮಯದಲ್ಲಿ ಕೈ ಕಾಲು ಕಳೆದುಕೊಂಡವರು ಅವರ ಕಡೆ ಹೆಚ್ಚಾದರು. ಸೋಲುವುದು ಖಚಿತವಾದಾಗ ಸಂಧಾನಕ್ಕೆ ಅವರು ನಂಬುವ ಆತ್ಮೀಯ ಮಿತ್ರರಾದ ಮಾಧ್ಯಮದವರ ಮೂಲಕ ಕರೆಬಂತು. ನಾನೂ ಮಾಧ್ಯಮ ಪ್ರತಿನಿಧಿಯಾಗಿ ಅವರ ಅರಿವಿಗೆ ಬರದಂತೆ ತಂಡದೊಳಗೆ ಕಣ್ಣಿಗೆ ಬಟ್ಟೆಕಟ್ಟಿಸಿಕೊಂಡು ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ನಡೆದ ಸಂಧಾನ ಸ್ಥಳಕ್ಕೆ ಹೋಗಿಬಂದಿದ್ದೆ.
****

ಅವರ ನಾಯಕ ಕೇಳಿದಂತೆಯೇ ಎಲ್ಲ ಹದಿಹರೆಯದ ಯುವಕರೂ ಅಷ್ಟೇ ಸಂಖ್ಯೆಯ ಯವತಿಯರನ್ನೂ ಅವರ ಬಳಿ ಕಳಿಸಿಕೊಡುವ ಗುರುತರ ಜವಾಬ್ದಾರಿ ನನ್ನ ಹೆಗಲಿಗೇರಿತ್ತು.ನಾನೂ ನನ್ನ ಮಾಮೂಲಿ ಕಾರ್ಯಾಚರಣೆ ಶುರುವಿಟ್ಟುಕೊಂಡೆ. ನಾನು ಯಾವತ್ತೂ ಚಕ್ರವ್ಯೂಹದೊಳಕ್ಕೆ ನುಗ್ಗುವ ಮುನ್ನ ಸಾವಿರ ಬಾರಿ, ಅನ್ನ ನೀರು ಕಡೆಗಣಿಸಿ, ಅಲ್ಲಿಂದ ಹೊರ ಬರುವ ದಾರಿ ಹುಡುಕುತ್ತಿರುತ್ತೇನೆ. ನಮ್ಮ ಸೆಟಲೈಟ್ ಮ್ಯಾಪಿನ ಪ್ರತೀ ಮಿಲ್ಲೀ ಮೀಟರಿನ ಕೂಲಂಕುಶ ಅಧ್ಯಯನ ಮಾಡಿ ಮುಗಿಸಿದ್ದೆ. 30 ಸಮಬಲ ಯುವಕ ಯುವತಿಯರ ತಂಡದೊಂದಿಗೆ, ನೋಡಿದವರಿಗೆ ಚಾರಣಿಗರೆಂಬಂತೆ ಕಾಣುವಂತೆ ಟ್ರಿಪ್ ಹೊರಟಿರೋ ಟ್ರೆಕ್ಕರ್ಸ್ ಥರಾ ಅಲ್ಲಿಗೆ ತಲುಪಿದ್ದಾಯ್ತು.

ನನ್ನ ಮೂಲ ಯೋಜನೆಯಂತೆಯೇ ಅಮಾವಾಸ್ಯೆಯ ಕರಾಳ ರಾತ್ರಿಗಳಲ್ಲೇ ನಮ್ಮ ಬಿಡಾರ ಬೇಸ್ ಕ್ಯಾಂಪಿನಲ್ಲಿ ಬೀಡು ಬಿಟ್ಟಿತ್ತು. ಅಲ್ಲಿದ್ದ ಎಲ್ಲರೂ ಆ ಮೋಡಗಳ ಮೀರಿ ನಿಗುರಿ ನಿಂತ ಅತೀ ದೊಡ್ಡ ಘಟ್ಟದ ತುದಿ ತಲುಪುವುದೇ ನಮ್ಮ ಜೀವನದ ಗುರಿಯೆಂಬಂತೆ ಕಾಣಿಸಿಕೊಳ್ಳುತ್ತಿದ್ದರು ಹಾಗೇ ಮಾತನಾಡುತ್ತಿದ್ದರೂ ಕೂಡಾ. ನಮ್ಮೊಳಗೆ ತೀರ್ಮಾನವಾದಂತೆ ಬೆಳಗೆಲ್ಲಾ ಯಾರಿಗೂ ಕಾಣದಂತ ಜಾಗದಲ್ಲಿ ಮಲಗುವುದು ಹಾಗೂ ರಾತ್ರಿಯ ಸಂಪೂರ್ಣ ಕಪ್ಪು ಕತ್ತಲಿನಲ್ಲಿ ಮೃಗಗಳಂತೆ ಚಲಿಸುವುದು ಮಾಡುತ್ತಾ 3 ರಾತ್ರಿ ಕಾಡಿನಲ್ಲಿ ನಡೆದಿದ್ದೆವು. ಅವರ ಮೂಲ ಕ್ಯಾಂಪಿನ ಸನಿಹಕ್ಕೆ ಬಂದ ಕುರುಹು ನನಗೆ ಸಿಕ್ಕಿತ್ತು.
****

ಮೂರು ಟೆಂಟುಗಳಲ್ಲಿ 10 ಜನರ ತಂಡಗಳಾಗಿ ಮಲಗಿದ್ದೆವು. ರಾತ್ರೀ ಪೂರಾ ನಡೆದು ಸುಸ್ತಾಗಿದ್ದ ಎಲ್ಲರೂ ಬೆಳಗಿನಜಾವದ ಸಕ್ಕರೆ ನಿದ್ದೆಗೆ ಜಾರಿದ್ದರು. ಇದ್ದಕ್ಕಿದ್ದಂತೆ ನಮ್ಮ ಪಕ್ಕದ ಡೇರೆಯಲ್ಲಿ ಗುಂಡು ಹಾರಿದ ಸದ್ದು ಬೆಚ್ಚಿ ಬೀಳಿಸಿತ್ತು. ನಮ್ಮ ಕ್ಯಾಂಪ್ ಮೇಲೆ ಅವರು ಮುಗಿ ಬಿದ್ದಿರುವುದು ಖಚಿತವಾಯ್ತು. ತಕ್ಷಣ ನನ್ನ ನೈಟ್ ವಿಷನ್ ಲೆನ್ಸ್ ಹಾಕಿಕೊಂಡು ಹೊರಗೆ ನೋಡಿದೆ. ಆ ಡೇರೆಯಲ್ಲಿ ಅವರು ನನ್ನನ್ನು ಹುಡುಕುತ್ತಿರುವುದು ಗೋಚರಿಸಿತ್ತು. ನಮ್ಮೊಡನೆ ಬೆಟ್ಟ ಗುಡ್ಡ ಹತ್ತುವ ಮಾಸ್ಟರ್ ಟ್ರೈನರ್ ಆಗಿ ಬಂದಿದ್ದ ಕೀರ್ತಿಯ ಮೆದುಳು ಚಿದ್ರವಾಗಿ ಅವನ ಅರಿವಿಗೂ ಬಾರದೇ ಚಿರನಿದ್ರೆಗೆ ಜಾರಿದ್ದ. ಮರು ಕ್ಷಣವೇ ನನ್ನ ವಾರ್ ಟೈಮ್ ಅಲೆರ್ಟ್ ಸಿಗ್ನಲ್ ಸೈರನ್ ಹೊಡೆದಿತ್ತು. ಮುಂದೆ ಬರೀ ಗುಂಡಿನ ಸುರಿಮಳೆಯ ಸದ್ದು, ಎಲ್ಲೆಂದರಲ್ಲಿಂದ ಬಂದು ನಮ್ಮನ್ನು ಸೀಳುತ್ತಿದ್ದ ಬುಲ್ಲೆಟ್ಗಳ ಹಾರಾಟ. ಅಲ್ಲಲ್ಲೇ ಬುಲ್ಲೆಟ್ಟ್ ಹೊಕ್ಕವರ ಚೀರಾಟ, ಕೆಲವೇ ನಿಮಿಷಗಳಲ್ಲಿ ಹಲವರ ನಿಂತುಹೋದ ಉಸಿರುಗಳ ನಿಶಬ್ಧ ನೆಲೆಸಿತ್ತು.

ನನ್ನ ಪಕ್ಕವೇ ಮಲಗಿದ್ದ ಆ ಅಭಿರಾಮಿಯೆಂಬ ಎಲ್ ಟಿ ಟಿ ಇ ನಿಗ್ರಹಕ್ಕಾಗಿ ತರಬೇತಿ ಪಡೆದ ಹೆಣ್ಣುಮಗಳು ನನ್ನ ದೇಹವನ್ನೇ ಅವಳ ರಕ್ಷಣೆಗಾಗಿ ತಡೆಗೋಡೆಯಂತೆ ಒಡ್ಡಿದ್ದಳು. ಪಾಪ ಅವಳ ಮದುವೆಯ ಕನಸು ಚಿದ್ರಗೊಳ್ಳುವುದು ಅವಳಿಗೆ ಇಷ್ಟವಿರಲಿಲ್ಲವೆಂಬುದು ನನಗೆ ಗೊತ್ತಿದ್ದರೂ ಅವಳನ್ನು ಅವಳ ಅನುಭವದ ಹಿನ್ನೆಲೆ ಪರಿಗಣಿಸಿ ಕರೆತಂದ ತಪ್ಪಿಗೆ ನನಗೆ ಶಿಕ್ಷೆವಿಧಿಸಲೆಂಬಂತೆ. ಆದರೆ ಅವಳ ಲೆಕ್ಕಾಚಾರ ತಪ್ಪಾಗಿ ಅವಳ ದೇಹದುದ್ದಕ್ಕೂ ಪಯಣಿಸಿದ ಆ ಗುಂಡು ನನ್ನ ಮೊಳಕಾಳಿನ ಮಾಂಸದೊಳಗೆ ಸೇರುವಷ್ಟರಲ್ಲಿ ಅದರ ಗತಿ ಕಳೆದುಕೊಂಡು ಅಲ್ಲೇ ಉಳಿದು ಬಿಟ್ಟಿತು.
****

ನನ್ನ ಈ ಅನಿರೀಕ್ಷಿತ ದಾಳಿಯನ್ನು ಊಹಿಸಿರದಿದ್ದ ಆ ಸೂರ್ಯನೆಂಬ ನಾಯಕ ಅಲ್ಲೇ ಬಂಡೆಯ ಹಿಂದೆ ಅಡಗಿ ಕುಳಿತಿರುವುದರ ಮಾಹಿತಿ ನನ್ನ ಮೈಕ್ರೋ ಫ್ಲೈಯಿಂಗ್ ಕ್ಮಾಮೆರಾಗಳು ಒದಗಿಸುತ್ತಿದ್ದವು. ನಾನು ಬದುಕಿ ಉಳಿದು ಎದುರೇಟು ಕೊಡುವ ಶಕ್ತಿಯಿರುವುದು ಗೊತ್ತಿಲ್ಲದ ಆತ ಅಲ್ಲೇ ಅವನ ಸತ್ತ ಸಹಚರರ ಲೆಖ್ಖಹಾಕುತ್ತಿದ್ದ. ಅಳಿದುಳಿದ ಬಾಂಬುಗಳಲ್ಲಿ ಒಂದನ್ನು ಕೈಗೆ ತೆಗೆದು ಕೊಳ್ಳುವುದರಲ್ಲಿದ್ದ. ಅವನ ಮುಂದಿನ ನಡೆಯೇನೆಂದು ಗೊತ್ತಿದ್ದ ನಾನು ಕ್ಷಣಾರ್ಧದಲ್ಲಿ ಅವನ ಮುಂದಿದ್ದೆ. ನನ್ನ ರಿವಾಲ್ವರ್ರಿನ ನಳಿಗೆ ಅವನ ನೆತ್ತಿಗೆ ಒತ್ತಿ ಮುತ್ತಿಕ್ಕುತ್ತಿತ್ತು. ನನ್ನ ಬೆರಳುಗಳೂ ತಡಮಾಡದೇ ಮಿಂಚಿನಂತೆ ಟ್ರಿಗ್ಗರ್ರ್ ಒತ್ತಿಬಿಟ್ಟಿದ್ದವು. ಅವನ ಕಣ್ಣುಗಳಲ್ಲಿದ್ದ ನಂಬಲಾಗದ ಆಶ್ಚರ್ಯವೂ ಹಾಗೇ ಸ್ಟಿಲ್ ಆಗಿ ನಿಂತಿರುವಂತೆಯೇ ಅವನ ಮೆದುಳು ಕದರಿ ಬಂಡೆಯ ಮೇಲೆ ನೆತ್ತರಾಗಿ ಹರಿದಿತ್ತು. ಅಲ್ಲಿಗೆ ನಮ್ಮ ರಾಜ್ಯದಲ್ಲೂ ಕೆಂಪು ರಕ್ತದೋಕುಳಿಯಾಡುವ ಅವನ ಅರಾಜಕತೆಯ ಬೀಜ ಬಿತ್ತುವ ಆಸೆ ನೆಲಸಮವಾಗಿತ್ತು.

ಮೈಯಲ್ಲಿದ್ದ ನೆತ್ತರೆಲ್ಲಾ ಕುದಿಯುತ್ತಿದ್ದ ನಾನು ಮಾಡಿದ ಮೊದಲ ಕರೆ ಅದೇ ಆ ಸಹೋದ್ಯೋಗಿ ದೇಶದ್ರೋಹಿಗಾಗಿತ್ತು. ನನ್ನ ನಂಬರ್ ನಿಂದ ಬಂದ ಕರೆ ನೋಡಿದ ಅವನು ಅಲ್ಲೇ ಲಘು ಹೃದಯಾಘಾತವಾಗಿ ಕುಸಿದು ಬಿದ್ದು ಸತ್ತಿದ್ದ. ನನ್ನಇಡೀ ಕಾರ್ಯತಂತ್ರವನ್ನು ಮಣ್ಣುಗೂಡಿಸಿ ನನ್ನ ಉಸಿರನ್ನೂ ಇದೇ ಮಲೆನಾಡಿನ ಕಾಡಿನೊಳಗೆ ಲೀನ ಮಾಡುವ ಮಹದಾಸೆಹೊಂದಿದ್ದ ಅವನ ಕನಸು ಚೂರುಚೂರಾಗಿತ್ತು. ಈ ಮೂಗುನತ್ತಿನ ಶೋಕಿಯ ಅರಿವಿದ್ದು ಅವನ ಬೆನ್ನು ಬಿದ್ದು ನಮ್ಮ ಇಲಾಖೆಯ ಅತಿ ಸೆನ್ಸಿಟೀವ್ ವಿಷಯಗಳ ಕಲೆಹಾಕುತ್ತಿದ್ದ ಪತ್ರಿಕೆಯ ವರದಿಗಾರ್ತಿಯೊಬ್ಬಳ ಹುಚ್ಚು ಸೆನ್ಸೇಷನಲ್ ಸಾಹಸದ ಕಥೆ ನನ್ನ ಎಚ್ಚರದ ಮೂಲಕ ನಾಡಿನ ನಂಬರ್ ಒನ್ ಪತ್ತಿಕೆಯಲ್ಲಿ ಪ್ರಕಟವಾಗದೇ ಹೋಯಿತು.
****

ಪಾಪ ಈ ಘಟನೆ ನಡೆದು ಅದೆಷ್ಟು ವರ್ಷಗಳಾದವು. ಮತ್ತೆ ಮತ್ತೆ ಮರುಕಳಿಸುವ ನೆನಪುಗಳು ಮುಂದಿನ ತಿಂಗಳ ಅದೇ 6 ರಂದು ಮತ್ತೆ ಮತ್ತೆ ನೆನಪಾಗುತ್ತವೆ. ನಾನು ಅವರು ಹೆಣೆದ ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೇ ಇದ್ದಿದ್ದರೆ ಅದೇ 6 ರಂದು ನಮ್ಮ ಮನೆಯಲ್ಲಿ ನನ್ನ ಪುಣ್ಯತಿಥಿಯ ವಾರ್ಷಿಕ ಸೂತಕವಿರುತಿತ್ತು. ಅದಕ್ಕಿನ್ನ ಘೋರವೆಂದರೆ ನಮ್ಮ ಕಾರ್ಯಾಚರಣೆಯಲ್ಲಿ ಒಂದೇ ಒಂದು ಜೀವವೂ ಸಾಯದೆ ಅವನನ್ನು ಅತೀ ಸಮೀಪದಿಂದ ನಾನು ಗುಂಡಿಕ್ಕುವ ಅವಕಾಶ ಕಸಿದಿದ್ದ ಆ ದ್ರೋಹಿಗಳ ದೆಸೆಯಿಂದ ಇಂದು 29 ಮನೆಗಳಲ್ಲಿ ಅದೇ ದಿನ ಶ್ರಾಧ್ದದ ಸೂತಕ. ನನ್ನ ಜೊತೆ ಬಂದಿದ್ದ ಯಾರೊಬ್ಬರೂ ಉಳಿಯದೆ ಅಸು ನೀಗಿದ್ದು ಅಂದಿನ ದುರಂತ. ಅದರಲ್ಲೂ ಆ ಕೀರ್ತಿ ಮತ್ತು ಅಭಿರಾಮಿ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡು ಇನ್ನು ಕೆಲವೇ ದಿನಗಳಲ್ಲಿ ಮಧುಮಗ/ಳಾಗುವವರಿದ್ದರು. ಅವರೆಲ್ಲರ ನೆನಪಿಗಾಗಿ ಅಂದು ನಾನು ಉಪವಾಸ, ಮೌನವ್ರತ ಆಚರಿಸಿ ಇನ್ನಷ್ಟು ವಿದ್ರೋಹಿಗಳ ಕುತಂತ್ರಗಳನ್ನು ಛೇದಿಸುವ ಪಣ ತೊಡುತ್ತೇನೆ ಪ್ರತೀ ವರ್ಷ.

ಈ ಇಡೀ ಕಾರ್ಯಾಚರಣೆಯನ್ನು ನಾನು ನನ್ನ ಜವಾಬ್ದಾರಿಯಲ್ಲಿ ತೆಗೆದುಕೊಂಡಿದ್ದು ನಮ್ಮ ಗುಪ್ತದಳದ ಆ ವಿದ್ರೋಹಿಗೆ ಮಾತ್ರಾ ಗೊತ್ತಿತ್ತು. ಅವನು ಅವನ ಮಾಧ್ಯಮ ಗೆಳತಿಯ ತೊಡೆಮೇಲೆ ಮಲಗಿ ಮೈಮರೆತು ಉಸಿರಿದ್ದ ತಪ್ಪಿಗೆ ನಮ್ಮ 29 ಜನರ ತಂಡ ಬಲಿಯಾಗಬೇಕಾಯಿತು. ಈ ವಿಷಯ ಅವನ ಖಾಸಾ ಬದುಕಿನ ಗೆಳತಿಯಾದ ಅವಳಿಂದ ತಿಳಿದ ಸೂರ್ಯ ನನ್ನ ಕಾರ್ಯಾಚರಣೆಯ ಶೈಲಿ ಅರಿತಿದ್ದರಿಂದ ಅವನ ಅಡಗು ತಾಣ ನಾವು ತಲುಪುವ ಮುನ್ನವೇ ನಮ್ಮ ಮೇಲೆ ಧಾಳಿಮಾಡಿದ್ದ. ಆದರೆ ಈ ಬಾರಿ ನಾನು ಸಾಕಷ್ಟು ಹ್ಯೂಮನ್ ಬಯೋ ಸೆನ್ಸರ್ಗಳ ಬಳಕೆ ಮಾಡಿದ್ದು ಗೊತ್ತಿಲ್ಲದ ಆ ಇಬ್ಬರೂ ಬೇಸ್ತು ಬಿದ್ದಿದ್ದರು. ಅವರ ಇಡೀ ದೇಹದ ಪ್ರತೀ ಚಲನೆಯ ಕಾರ್ಯಕ್ರಮಗಳು ನನ್ನ ಕಪ್ಪು ಕನ್ನಡಕದ ಮಾನಿಟರ್ನಲ್ಲಿ ದಾಖಲಾಗುತ್ತ ನನಗೆ ಅವರ ಪ್ರತೀ ಕ್ಷಣಗಳ ವರದಿಯೊಪ್ಪಿಸಿದ್ದರಿಂದ ನಾನು ಇಂದು ನಿಮಗೆ ಈ ಕಥೆ ಬರೆಯಲು ಉಳಿದುಕೊಂಡಿದ್ದೀನಿ.

ಓ ಮೈ ಗಾಡ್ ಅನೀಶನೂ ಮೊದಲೇ ನನ್ನಂತೆಯೇ ಅನ್ವೇಷಣೆಯೆಂದರೆ ಎತ್ತಿದ ಕೈ. ಅವನಾಗಲೇ ನನ್ನ ರಿವಾಲ್ವರ್ರಿನಲ್ಲಿ ಹುದುಗಿರುವ / ಕಡಿಮೆಯಾಗಿರುವ ಟೋಟಲ್ಲು ಬುಲ್ಲೆಟ್ಟುಗಳನ್ನು ನನ್ನ ಬೆಡ್ ರೂಮಿನಲ್ಲಿ ಕುಳಿತು ಎಣಿಸುತ್ತಿರಬಹುದು. ಆಮೇಲೆ ಮತ್ತೆ ಕಥೆ ಮುಂದುವರಿಸೋಣಾ, ಬಂದೆ ಇರೀ, ಮೊದಲು ಅವನ ಕೈಲಿರುವ ಆಯುಧ ಸೇಫ್ ಮಾಡಿ ಬರಬೇಕಿದೆ.

20lead

ನಾನು ಖಾಲಿ ಖಾಲಿಯೂ ಅಲ್ಲಾ ….

ಐ ಆ್ಯಮ್ ನಥಿಂಗ್….

“ಆದರೂ
ಇಂದು ನನ್ನ ಹುಟ್ಟು ಹಬ್ಬ
ಆಚರಿಸದವರು,
ನನ್ನ ವಾರ್ಷಿಕ ತಿಥಿಯ
ಊಟ ಬಡಿಸುತ್ತಿದ್ದಾರೆ ”

ನನ್ನೊಳಗೂ ನಾ ಇಲ್ಲಾ.
ನಾ ಹೊರಗೂ ಇಲ್ಲಾ.
ನಾ ಸುತ್ತಮುತ್ತಾ ಸುಳಿಯೋಲ್ಲಾ,
ಮೊದಲೇ ನಾ ನಾನಲ್ಲಾ!

ನಾ ತಿಳಿಯೋ ಗೋಜಿಲ್ಲಾ,
ನಾ ಮರೆಯೋ ರೇಜಿಗೆಯಿಲ್ಲಾ
ನಾ ಬೆಳೆಯ ಬೇಕಿಲ್ಲಾ,
ನನಗೇ ನಾ ಗೊತ್ತಿಲ್ಲಾ,

ನಾ ಕಥೆರಚಿಸೋಲ್ಲಾ
ನಾ ಕವಿಯಲ್ಲಾ,
ನಾ ವಾಚಿಸೋಲ್ಲಾ
ನಾ ನಾಚುವುದಿಲ್ಲಾ.

ನಾ ಆಲಿಸೋಲ್ಲಾ,
ನಾ ಸೊಲ್ಲೆತ್ತೋಲ್ಲಾ,
ನಾ ದೃಷ್ಟಿಸೋಲ್ಲಾ,
ನಾ ಅನುಭವಿಸೋಲ್ಲಾ,

ನಾ ನಡೆಯೋಲ್ಲಾ,
ನಾ ಎಡವೊಲ್ಲಾ,
ನಾ ನೋಯುವುದಿಲ್ಲಾ,
ನಾ ಸಾಯುವುದಿಲ್ಲಾ.

ನಾ ಉರುಹೊಡೆಯೊಲ್ಲಾ,
ನಾ ಬಣ್ಣ ಹಚ್ಚೋಲ್ಲಾ
ನಾ ನಿರ್ದೇಶಿಸೋಲ್ಲಾ,
ನಾ ನಟಿಸೋಲ್ಲಾ,

ನಾ ಘೋರಿಯಾಗಿರಲಿಲ್ಲಾ
ನಾ ಮೆರೆದಿರಲಿಲ್ಲಾ
ನಾ ಬದುಕಿರಲಿಲ್ಲಾ
ನಾ ಹುಟ್ಟೇ ಇರಲಿಲ್ಲಾ.

“ಆದರೂ
ಇಂದು ನನ್ನ ಹುಟ್ಟು ಹಬ್ಬ
ಆಚರಿಸದವರು,
ನನ್ನ ವಾರ್ಷಿಕ ತಿಥಿಯ
ಊಟ ಬಡಿಸುತ್ತಿದ್ದಾರೆ ”

ರಿ @ ಐ ಆ್ಯಮ್ ನಥಿಂಗ್….

2t395NothingHear