ಅದು ನನ್ನ ಹುಟ್ಟಿದ ಹಬ್ಬವೋ ಅಥವಾ ಮರುಹುಟ್ಟೋ !!!

ಅದೇನು ಹಣೇಬರವೋ ಏನೋ? ನಾನು ನಿನ್ನನ್ನು ಹೀಗೇ ಭೇಟಿಮಾಡಬೇಕೆಂದು ಪೂರ್ವ ನಿಶ್ಚಯವಾದಂತೆ ಕಾಣುತ್ತದೆ. ನನ್ನೆಲ್ಲ ಕಾರ್ಯಕ್ರಮಗಳೂ ಕನಿಷ್ಠ ವರ್ಷವೊಂದರಷ್ಟು ಮುಂಚಿತವಾಗಿ ಯೋಜಿತವಾಗಿರುತ್ತವೆ. ಅದನ್ನು ತಿಂಗಳಿಗೊಮ್ಮೆ ಮರು ಪರಿಶೀಲಿಸಿ ಪ್ರತೀ ವಾರಕ್ಕಾಗುವಷ್ಟು ಸಿದ್ಧತೆ ಮಾಡಿಕೊಂಡಿರುತ್ತೇನೆ. ಕನಿಷ್ಟ ನಾನು ಮಾಡುವ ರಾತ್ರಿ ನಿದ್ದೆಯಾದರೂ ಆ ದಿನ ಯಾವ ಹೋಟೆಲಿನಲ್ಲಿ ಅಥವಾ ಕಾಡಿನಲ್ಲಿ ಎಂಬುದೂ ನನಗೆ ಮೊದಲೇ ಗೊತ್ತಿರುತ್ತದೆ. ಅಂಥದ್ದರಲ್ಲಿ ಅದೆಲ್ಲೋ ಕಾಡಿನಲ್ಲಿ ತುರ್ತು ಕರೆಯೊಂದರ ಕಾರಣ ಕಣ್ಮರೆಯಾಗಿದ್ದವನಿಗೆ ನಿನ್ನಿಂದ ಬಂದ ತುರ್ತು ಕರೆಯೊಂದು ಏನೆಲ್ಲ ಮಾಡಿಬಿಟ್ಟಿತು.

ನಾನು ಮೊದಲೇ ನನ್ನ ಅತೀ ಸನಿಹದಲ್ಲಿರುವ ಬಂಧುಗಳಿಗೆ ಕನಿಷ್ಠ ನನ್ನ ಮುಂದಿನ ಒಂದು ವಾರದ ದಿನಚರಿಯ ವಿವರ ತಿಳಿಸಿರುತ್ತೇನೆ. ಅವರಲ್ಲಿ ನೀನೂ ಸೇರಿಕೊಂಡು ಬಹಳ ದಿನಗಳಾದವಲ್ಲವೇ! ಇತ್ತೀಚೆಗೆ ನೀನು ಯಾವಾಗಲೂ ನಾನು ನಿನಗೆ ಎಷ್ಟು ಹತ್ತಿರವಿರುವೆ? ಎಂಬ ಪ್ರಶ್ನೆ ಪದೇ ಪದೇ ಕೇಳಿ ಖಾತರಿ ಬೇರೆ ಮಾಡಿಕೊಂಡಿರುತ್ತೀ. ನನಗೂ ಅದೇ ಈರುಳ್ಳಿ ಸಿಪ್ಪೆ ಸುಲಿದು ಸುಲಿದು ಕೊನೆಗೆ ಮಧ್ಯದಲ್ಲಿ ಉಳಿಯುವ ಏಕೈಕ ಹಸಿರಿನ ಕೊಳವೆ ಒಳಗೆ ಇದ್ದೀಯ ಕಣೇ ಎಂದು ಹೇಳೀ ಹೇಳೀ ಸಾಕಾಗಿದೆ. ಅಷ್ಟು ಮನದಟ್ಟು ಮಾಡಿದರೂ ಹಠಕ್ಕೆ ಬಿದ್ದವಳಂತೆ ಆ ಕೊಳವೆಯಲ್ಲಿ ಎಗ್ಜಾಕ್ಟ್ಲೀ ಎಲ್ಲಿದ್ದೀನಿ ಹೇಳು ಮಾಮನ ಮಗನೇ ಅಂತ ಪೀಡಿಸುತ್ತೀ ಎಳೇ ಮಗುವಿನಂತೆ.

ಇಂತಿಪ್ಪ ನಿನಗೆ ನಾನು ಬೇರೆಲ್ಲರಿಗೆ ಹೇಳಿದಂತೆ ಈ ವಾರ ನಾನು ಕಾಡು ಹೊಕ್ಕು ವಾರದ ನಂತರ ಮರಳಿ ಬರುತ್ತೇನೆ ಅಷ್ಠೇ ಎಂದರೆ ಬಿಡುತ್ತೀಯಾ? ಯಾವ ಕಾಡು? ಅಲ್ಲಿ ಎಲ್ಲಿ? ಎಲ್ಲಿ ಊಟಮಾಡುತ್ತಿಯಾ? ಎಲ್ಲಿ ಮಲಗುತ್ತೀಯಾ? ಯಾಕೆ ಹೀಗೆ ಕಣ್ಮೆರೆಯಾಗುತ್ತೀಯಾ? ನಿನ್ನ ಮೊಬೈಲ್ ಯಾಕೆ ಬಳಸೊಲ್ಲ? ಎಂಬ ನಿನ್ನ ಪ್ರಶ್ನೆಗಳ ಎನ್ಕೌಂಟರ್ ಎದುರಿಸಿದ ಮೇಲೆಯೇ ತಾನೆ ನನ್ನ ಪಯಣದ ದಿನಗಳಿಗೆ ನಿನ್ನ ಒಪ್ಪಿಗೆಯ ಗ್ರೀನ್ ಸಿಗ್ನಲ್ ಸಿಗೋದು. ಹೀಗೆಲ್ಲ ನಿನಗೆ ವಿವರವಾಗಿ ತಿಳಿಸಿ ಒಪ್ಪಿಸಿ ಕಾಡಿನಲ್ಲಿ ಕಳೆದು ಹೋಗಿದ್ದವನಿಗೆ ಈ ಬಾರಿ ಯಾಕೋ ನನಗೇ ಅರಿಯದ ತಳಮಳ ಒಳಗೊಳಗೆ.

ನಾನು ಕಾಡಲ್ಲಿದ್ದರೂ ಅಲ್ಲಿ ಕಳೆಯುವ ಪ್ರತಿಯೊಂದೂ ಕ್ಷಣವೂ ಮ್ರುತ್ಯುವಿನ ಎದುರಿಗೆ ಎದೆಯೊಡ್ಡಿ ನಿಂತು ಸಾವಿನ ವೀರಮಾಲೆಯ ಧರಿಸಲು ತಲೆಯೊಡ್ಡಿ ಕಾಲವೇ ಚಲಿಸದೆ ನಿಂತಂತ ಅನುಭವದೊಳಗೆ ಸಿಕ್ಕಿಕೊಂಡಿದ್ದವನಿಗೆ ನಿನ್ನ ನೆನಪು ಮತ್ತೂ ಕಂಗೆಡಿಸಿತ್ತು. ನಾನು ಎಣಿಸಿದಂತೆ ಗಂಭೀರವಾದದ್ದು ಅಂಥದ್ದೇನು ಆಗದಿದ್ದರೂ ಯಾಕೋ ಮನಸ್ಸು ವಾರ ಪೂರಾ ಸರಿಯಿರಲೇ ಇಲ್ಲ. ನನ್ನೆಲ್ಲ ವೃತ್ತಿ ಸಂಭಂದಿಸಿತ ಪೂರ್ವಯೋಜಿತ ಭೇಟಿ,ಸಂಗ್ರಹ,ವಿನಿಮಯದ ಕೆಲಸ ಮುಗಿಸಿ ಅಂದು ರಾತ್ರಿ ಮುಂದಿನ ಊರಿಗೆ ಪಯಣ ಬೆಳೆಸುವವವಿದ್ದೆ. ಕಾಡು ಬಿಟ್ಟು ಹತ್ತಿರದ ಪಟ್ಟಣಕ್ಕೆ ನನ್ನ ಮುಂದಿನ ಪಯಣದ ಸಲುವಾಗಿ ಬಂದಿದ್ದೆ.

ಕಣ್ಮುಚ್ಚಿ ಮಲಗಿದ್ದ ನನ್ನ ಮೊಬೈಲ್ ಎಬ್ಬಿಸಿದ ತಕ್ಷಣವೇ ಒಳ ಬಂದದ್ದು ನಿನ್ನದೇ ನೂರೆಂಟ್ ಮೆಸೇಜ್ಗಳು. ನಾನು ಕಾಡಿನಲ್ಲಿದ್ದ ಪ್ರತೀ ದಿನದ ಬೆಳಗು ಮಧ್ಯಾಹ್ನ ರಾತ್ರಿಯ ಎಲ್ಲಾ ಸಮಯಗಳಲ್ಲಿ ನನ್ನ ಅತೀ ಅವಶ್ಯಕ ಜವಾಬ್ಧಾರಿಗಳನ್ನು ತಪ್ಪದೇ ನೆನಪಿಸಿದ್ದೆ. ಮರೆಯದೇ ನನ್ನ ಆರೋಗ್ಯದ ಬಗ್ಗೆ ಪ್ರತೀ ದಿನ ವಿಚಾರಿಸಿಕೊಂಡಿದ್ದೆ. ಎಲ್ಲವನ್ನೂ ಇನ್ನೂ ಓದಿ ಮುಗಿಸಿರಲೇ ಇಲ್ಲಾ. ಸರಿಯಾಗಿ ನೀನೇ ಕರೆಮಾಡಿದ್ದೆ. ನಿನ್ನ ಮಾತಿನಲ್ಲಿ ನನ್ನ ಆರೋಗ್ಯದ ಬಗ್ಗೆ ಇದ್ದ ಕಾಳಜಿ ಕಣ್ಣಿಗೆ ಕಟ್ಟಿದಂತೆ ವ್ಯಕ್ತವಾಗುತ್ತಿತ್ತು. ಅದೂ ಇದೂ ಒಂದು ವಾರದಿಂದ ಬಾಕಿ ಇದ್ದ ಎಲ್ಲಾ ವಿಷಯಗಳ ವರದಿ ಒಪ್ಪಿಸಿಬಿಟ್ಟಿದ್ದೆ.

ನಾನು ಏನೇ ಹೂ ಗುಟ್ಟಿದರೂ ನನ್ನ ಒಳ ಮನಸ್ಸಿನಲ್ಲಿದ್ದ ಕಳವಳ ಅರ್ಥವಾದವಳಂತೆ ಯಾಕೆ ಒಂಥರಾ ಇದ್ದೀರಾ, ಏನಾಯ್ತು? ಯಾಕೆ ಬಾಯ್ಬಿಟ್ಟು ಕೇಳ್ತಿಲ್ಲಾ? ಕೇಳೀ ಪ್ಲೀಸ್. ಮನಸ್ಸಿನಲ್ಲಿ ಏನನ್ನೂ ಇಟ್ಟುಕೋ ಬೇಡಿ ನೀವು ಕೊರಗೋದು ನೋಡೋಕಾಗುತ್ತಿಲ್ಲ, ನನಗೆ ಗೊತ್ತಾಗುತ್ತಿದೆ. ಬೇಗ ಹೇಳು ಬಾಬು ಎಂದಾಗ ನನಗೆ ಇನ್ನು ತಡೆಯದಾಗದೇ ಕೇಳಿಯೇ ಬಿಟ್ಟೆ. ಏನಾಯ್ತು ಹೇಳು? ಯಾಕೆ ನನ್ನಿಂದಾ ಏನನ್ನೋ ಮುಚ್ಚಿಡುತ್ತಿದ್ದೀಯಾ ಕೋತಿ? ಎಂದ ತಕ್ಷಣ ನಿನ್ನ ಧ್ವನಿ ಉಡುಗಿತ್ತು, ನೀನು ಅತ್ತಲಿಂದ ಅಳುತ್ತಿರುವ ಶಬ್ಧ ಕೇಳಿಸಿಕೊಳ್ಳದಾದೆ.

ಮುಂದೆ ನೀನು ನಡೆದದ್ದೆಲ್ಲಾ ವಿವರಿಸಿದ್ದೆ.ನಿನ್ನ ಪ್ರತಿಯೊಂದೂ ಖಾಸಗೀ ವಿಷಯಕ್ಕೆ ಧಕ್ಕೆ ಮಾಡಿದವನ ವಿವರಗಳನ್ನು ನೀನು ನೀಡುತ್ತಿದ್ದರೇ ನಾನಾಗಲೇ ನನ್ನ ಮುಂದಿನೂರಿನ ಪಯಣವನ್ನು ರದ್ದುಪಡಿಸಿದ ವಿವರವಾದ ಈಮೈಲ್ ನಿನಗೇ ಗೊತ್ತಿಲ್ಲದಂತೆ ರವಾನಿಸಿದ್ದೆ. ನನ್ನ ಅಂದಿನ ರಾತ್ರಿಯ ಪಯಣದ ಸುಖಕರ ಪಯಣದ ವ್ಯವಸ್ಥೆ ನನ್ನ ಮೊಬೈಲಿನ ಎಸ್ ಎಮ್ ಎಸ್ ನಲ್ಲೇ ಮಾಡಿ ಮುಗಿಸಿದ್ದೆ. ನಿನ್ನ ಕಥೆ ಮುಗಿಸಿದವಳಿಗೆ ನಾನು ಹೇಳಿದ್ದೆ ನಾಳೆ ಬೆಳಗ್ಗೆ ನಿನ್ನೊಂದಿಗಿರುತ್ತೇನೆ ಮತ್ತು ಆ ಎಲ್ಲಾ ಸುರಕ್ಷತಾ ವಿಧಿವಿದಾನಗಳನ್ನು ಮರು ಪರಿಶೀಲಿಸಿ ನಿನ್ನೆಲ್ಲ ಭಯಗಳನ್ನೂ ನಿವಾರಿಸಿರುತ್ತೇನೆ ಎಂದಿದ್ದೆ.

ನಿನಗಂತೂ ನಂಬಲೂ ಆಗದ ಬಿಡಲೂ ಆಗದ ಪರಿಸ್ಥಿತಿ. ನನ್ನಲ್ಲಿ ನೀ ಅದೆಷ್ಟು ಬೇಡಿಕೊಂಡಿದ್ದೆ ಇದನ್ನೆಲ್ಲಾ ನಾನೇ ನಿಭಾಯಿಸುತ್ತೇನೆ ನೀವೇನು ಬರುವುದು ಬೇಡವೆಂದಿದ್ದೆ. ಆದರೂ ನಾನು ನಿನಗೇ ತಿಳಿಸದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಾಗಿತ್ತು. ಆ ರಾತ್ರಿ ಪೂರಾ ನನ್ನ ಪ್ರತೀ ಕ್ಷಣಗಳಲ್ಲಿ ನೀನಿದ್ದೆ. ನನ್ನ ಮೊಬೈಲ್ ತನ್ನ ಕೊನೆಯುಸಿರು ಬಿಡುವತನಕವೂ ನಮ್ಮಿಬ್ಬರ ಮಾತುಕಥೆ ಸಾಗಿತ್ತು. ಬೆಳಗ್ಗೆ ಬೆಳಗ್ಗೆ ನಮ್ಮ ಮನೆಯ ಮುಂದಿದ್ದೆ. ಎಂದೆಂದೂ ತೆರೆದಿಟ್ಟಿರದ ಮೊದಲ ಗೇಟ್ ಓಪನ್ ಇತ್ತು. ಅದಕ್ಕೂ ಮುಂದೆ ನಾನು ಕಾಲಿಡಲು ಆಗದಂತೆ ನೀನು ಬಿಟ್ಟಿದ್ದ ಬಣ್ಣ ಬಣ್ಣ ತುಂಬಿದ ಹಸೀ ಹಸೀ ರಂಗೋಲಿ ನೆಲದ ಮೇಲೆ ನಗುತ್ತಾ ಸುಸ್ವಾಗತ ಹೇಳಿತ್ತು.

ನನ್ನ ಶೂ ಕಳಚಿದವನಿಗೆ ಆಗಿನ್ನ ನೀರಿನಲ್ಲಿ ತೊಳೆದು ಶುಧ್ಧವಾಗಿದ್ದ ನೆಲದ ಮೇಲೆ ನಡೆದು ನನ್ನ ಪಾದ ನೆನೆಯಬಾರದೆಂಬಂತೆ ಮೊದಲೇ ಯೋಚಿಸಿ ನೀನು ಒಣ ಬಟ್ಟೆಯೊಂದ ನೆಲಕ್ಕೆ ಹಾಸಿದ್ದೆ. ಮನೆಯ ಹೊಸಿಲು ದಾಟಿ ಒಳಗೆ ಹೆಜ್ಜೆ ಇಟ್ಟು ಅಲ್ಲೆ ಕದದ ಹಿಂದೆ ಕಾದು ನಿಂತಿದ್ದ ನಿನ್ನನ್ನು ನೋಡಿದವನಿಗೆ ಸೋಜಿಗವೊಂದು ಕಾದಿತ್ತು. ನಾನು ತುಂಬಾ ಇಷ್ಟ ಪಡುವ ಅದೇ ನವಿಲು ನವಿಲು ಬಣ್ಣಗಳ ಸೀರೆಯಲ್ಲಿ ಕೆತ್ತಿದ ಶಿಲ್ಪದಂತೆ ನಿಂತಿದ್ದೆ. ನಿನಗೆ ಅಲುಗಾಡಲೂ ಆಗದಂತೆ ಸ್ತಭ್ಧಳಾಗಿದ್ದೆ. ಯಾಕೋ ನನಗೆ ಮನಸ್ಸಿನೊಳಗೆ ಉಕ್ಕಿ ಬಂದ ಎಲ್ಲಾ ಭಾವನೆಗಳ ಅಲೆಗಳನ್ನೂ ಅದುಮಿಟ್ಟು ಅಲ್ಲೇ ಪಕ್ಕದ ಸೋಫಾದಲ್ಲಿ ಕುಳಿತುಕೊಂಡೆ.

ಮುಂದುವರಿಯಲಿದೆ….

???????????????????????????????

Advertisements

ಚೆರಿಯನ ಕಾರಿನ ಸವಾರಿ ಗೀಳೂ…

ಮೊನ್ನೆ ಬಾನುವಾರ ಮನೆಯಲ್ಲಿದ್ದೆ. ಅಂದು ನಮ್ಮ ತೋಟದಲ್ಲಿ ಮಕ್ಕಳಿಗೆ ವರ್ಲಿ ಚಿತ್ರಕಲೆಯ ಕಾರ್ಯಾಗಾರವೂ ಇತ್ತು. ಬೆಳಗ್ಗೆ ಬೆಳಗ್ಗೆ ಎದ್ದು ಎಲ್ಲಾ ವ್ಯವಸ್ಥೆ ಮಾಡಬೇಕಿತ್ತು. ಅಥಿತಿಗಳು, ಮಕ್ಕಳು, ಸಂಪನ್ಮೂಲ ವ್ಯಕ್ತಿಗಳು ಎಲ್ಲರ ಅಂದಿನ ಅವಶ್ಯಕತೆಗಳನ್ನು ಗಮನಿಸಬೇಕಿತ್ತು. ಶಿವು ಕೇಳಿದ್ದ ಕೆಲವು ಚಿತ್ರಕಲೆಗೆ ಸಂಭಂದಿಸಿದ ಮುಖ್ಯವಾದ ವಸ್ತು ಖರೀದಿಸಲು ಚಿನಾಹಳ್ಳಿಗೆ ಹೋಗಬೇಕಾಗಿ ಬಂತು. ಕಾರು ಈಚೆ ತೆಗೆದೆ.

ಒಳಗಿಂದ ಅನೀಶ ಕೂಗಿ ಹೇಳಿದ “ಅಪ್ಪಾ ನಾನೂ ಬರ್ತೀನಿ ತಡಿಯಪ್ಪಾ”. ಓಕೆ, ಬೇಗ ಬಾ ಎಂದ ನಾನು ಕಾರಿನ ಹಿಂದಿನ ಬಾಗಿಲು ತೆರೆದಿಟ್ಟೆ. ನಾನು ಚಾಲಕನ ಸೀಟಿಗೆ ಕುಳಿತೆ. ಅವಸರವಾಗಿ ಬಟ್ಟೆ ಧರಿಸಿ ಓಡಿಬಂದ ಅನಿಶ ಕಾರಿನೊಳಗೆ ತೂರಿಕೊಂಡ.ನಾನು ನನ್ನ ಆಲೋಚನೆಗಳಲ್ಲಿ ಕಳೆದುಹೋಗಿದ್ದವನಿಗೆ ಹಿಂದಿನ ಸೀಟಿನಲ್ಲಿ ನಡೆದ ಗಲಾಟೆ ಎಚ್ಚರಿಸಿತ್ತು.

ಅನಿಶನಿಗಿನ್ನ ಮುಂಚೆ ಒಳಬಂದು ಸೇರಿದ್ದ ನಮ್ಮ “ಚೆರಿಯ” ಕಿಟಕಿ ಪಕ್ಕ ಆಸೀನನಾಗಿದ್ದ. ಯಾವಾಗಲೂ ಕಿಟಕಿ ಪಕ್ಕ ಕುಳಿತುಕೊಳ್ಳಲು ಗಲಾಟೆ ಮಾಡುವ ಅನಿಶ ಇದರಿಂದ ಸಹಜವಾಗಿ ಇರುಸುಮುಸುರುಗೊಂಡಿದ್ದ. ಅನಿಶ ಚೆರಿಯನೊಂದಿಗೆ ಜಗಳಕ್ಕಿಳಿದಿದ್ದ. ಚೆರಿಯನನ್ನು ಪೂಸಿ ಮಾಡುತ್ತಿದ್ದ, ಅದು ನಡೆಯದಾದಾಗ ಗದರಿಸುತ್ತಿದ್ದ. ಯಾವುದಕ್ಕೂ ಚೆರಿಯ ಬಗ್ಗಿದಂತೆ ಕಾಣಲಿಲ್ಲ.

ಅನಿಶ ಚೆರಿಯನೊಂದಿಗೆ ಮುನಿಸಿಕೊಂಡಿದ್ದ. ಅದರೂ ಜಗಮೊಂಡ ಚೆರಿಯ ವಿಚಲಿತನಾಗಿರಲಿಲ್ಲ. ನನಗೂ ಇವರಿಬ್ಬರ ಗಲಾಟೆಯ ಮುಂದುವರಿದ ಭಾಗ ಮೊದಲೇ ಗೊತ್ತಿರುವುದರಿಂದ ಜಗಳ ಬಗೆಹರಿಸದೇ ಕಾರು ಚಲಿಸುವಂತಿರಲಿಲ್ಲ. ಅದಕ್ಕಾಗಿ ನಾನು ಇಬ್ಬರಲ್ಲೂ ಯಾರಾದರೂ ಸೋತು ಗೆಲ್ಲಲು ವಿನಂತಿಸಿಕೊಂಡೆ. ಆದರೆ ಇಬ್ಬರೂ ತಮ್ಮ ತಮ್ಮ ಜಾಗಗಳಿಂದ ಕದಲುವ ಸೂಚನೆಗಳೇನೂ ಕಾಣಲಿಲ್ಲ.

ಕೊನೆಗೆ ನಾನು ಕಾರಿನಿಂದ ಕೆಳಗಿಳಿದೆ. ನಿಮ್ಮಿಬ್ಬರ ಜಗಳ ಬಗೆಹರಿಯದೇ ನಾನು ಕಾರು ಚಲಿಸುವುದಿಲ್ಲವೆಂದು ಇಬ್ಬರಿಗೂ ಹೇಳಿದೆ. ನನ್ನ ಈ ನಿರ್ಧಾರಕ್ಕೆ ಬೇಸರಗೊಂಡ ಅನಿಶ, ಚೆರಿಯನನ್ನು ಶಪಿಸುತ್ತಿದ್ದ. ತಕ್ಷಣ ಎಚ್ಚೆತ್ತುಕೊಂಡ ಚೆರಿಯ ನನ್ನನ್ನು ಅವನ ಮಾಮೂಲಿ ಪೂಸಿಯ ಬಾಷೆಯಲ್ಲಿ ಕರೆಯಲಾರಂಭಿಸಿದ. ನನಗೂ ಅವನ ಒಳಮನಸ್ಸು ಗೊತ್ತಾಯ್ತು. ಏನಪ್ಪಾ ನಿನ್ನ ಸಮಸ್ಯೆ ಎಂದು ವಿಚಾರಿಸುವವನಂತೆ ಅವನ ಬಳಿ ಸಾರಿದೆ. ಚಕ್ಕಂತ ನನ್ನ ಕೈಗಳನ್ನು ಅವನ ಮುಂಗಾಲುಗಳಲ್ಲಿ ಸವರಲು ಪ್ರಾರಂಭಿಸಿದ ಅವನು ನನಗೆ ಕಾರು ಚಲಿಸಲು ಒತ್ತಾಯಪೂರ್ವಕವಾಗಿ ಸೂಚಿಸಲಾರಂಭಿಸಿದ.

ಒಳಗೊಳಗೇ ನಗುತ್ತಿದ್ದ ನನಗೆ ಚೆರಿಯ ನನ್ನ ಅಂಗೈಯೊಳಗೆ ಅವನ ತಲೆಯಿರಿಸಿ ನಾಲಗೆಯಿಂದ ನೆಕ್ಕಿ ನೆಕ್ಕಿ ತಪ್ಪಾಯ್ತು ಪ್ಲೀಸ್ ಕಾರಲ್ಲಿ ಕರೆದುಕೊಂಡು ಹೋಗೆಂದ. ಅನಿಶನ ಕಣ್ಣಲ್ಲೂ ಕಣ್ಣಿರು ಜಿನುಗುತ್ತಿತ್ತು. ಓಕೆ ಓಕೆ ಬಿಡ್ರಪ್ಪಾ ಎಲ್ಲರೂ ಜೊತೆಗೇ ಹೋಗೋಣವೆಂದು ಹೇಳಿ ಕಾರಿನೊಳಗೆ ಸೇರಿಕೊಂಡೆ.ಕೀ ತಿರುಗಿಸಿ ಕಾರ್ ಚಾಲೂ ಮಾಡಿದೆ.

ಹಿಂದಿನ ಸೀಟಿನಲ್ಲಿ ಖುಷಿಯ ಅಲೆ ಉಕ್ಕೇರಿತ್ತು. ನನ್ನ ಕಾರಿನ ಸೈಡ್ ಮಿರ್ರರಿನಲ್ಲಿ ಅದೇ ಒಂದೇ ಕಿಟಕಿಯಲ್ಲಿ, ಇಬ್ಬರೂ ಒಬ್ಬರಿಗೊಬ್ಬರು ಮುಖವೊತ್ತಿಕೊಂಡು ಒಟ್ಟಿಗೆ ಸಂಭ್ರಮಿಸುತ್ತಿದ್ದ ಕಂಡು ನನ್ನ ಕಣ್ಣಲ್ಲಿ ತಿಳಿನೀರು ಅರಿವಿಲ್ಲದಂತೆ ಜಿನುಗಿತ್ತು.
ಕಾರು ಮುಂದೆ ಚಲಿಸಿತ್ತು.

(ನಮ್ಮ ಚೆರಿಯನ ಕಾರ್ ಸವಾರಿಯ ಗಲಾಟೆಯನ್ನು ನಿಮ್ಮ ಮುಂದಿಡಲು ನಡೆದ ಘಟನೆಯನ್ನು ಅವನ ಮಾಮೂಲಿ ಸ್ಟೈಲಲ್ಲಿ ಚಿತ್ರೀಕರಿಸಿದ್ದ ನನ್ನ ಮೊದಲ ಮಗ ನಕ್ಷತ್ರನನ್ನ ಹೇಗೆ ಮರೆಯಲಿ… )

???????????????????????????????

???????????????????????????????

???????????????????????????????

???????????????????????????????

???????????????????????????????

???????????????????????????????

???????????????????????????????

ಮುಂಗಾರು ಮಳೆಯ ಮೊದಲ ನೆನಪು

ಎಲ್ಲೆಲ್ಲೂ ಸುಡು ಸುಡು ಬಿಸಿಲು.ರಾತ್ರಿ ಹಗಲುಗಳೆನ್ನದೆ ಮೈ ಬೆವರು ಸುರಿದು ಮೈಯೆಲ್ಲಾ ಕಟು ವಾಸನೆ. ಜನ ಮೈ ಉಜ್ಜಿಕೊಂಡರೆ ಸಾಕು ಕೈ ತುಂಬಾ ಮೆತ್ತಿಕೊಂಡು ಬರುವ ಮೈಕಸ. ಊರಿನ ಅರಳೀ ಮರದ ಕೆಳಗೆ, ಕೆಲ ಜನ ಆ ಮೈಕಸವನ್ನೇ ಉಂಡೆ ಮಾಡಿ ನಕ್ಕು ನಗಿಸುತ್ತಾ ಆಟವಾಡುವ ಸೊಬಗು. ಎಲ್ಲಿ ಹೋದವೋ ಈ ಮಳೆ ಮೋಡಗಳೂ? ಒಮ್ಮೆಯಾದರೂ ಬಂದು ಸುರಿದು ಈ ಧಗೆಯ ಬಿಸಿ ಕಡಿಮೆ ಮಾಡಲಾರವೇ? ಎಂಬ ಮಾತು ದಿನಕ್ಕೆ ಹತ್ತು ಬಾರಿಯಾದರೂ ಹಳ್ಳಿತುಂಬಾ ಪ್ರತಿಧ್ವನಿಸುತ್ತಿತ್ತು.

ಊರ ಹೆಣ್ಣು ಮಕ್ಕಳಂತೂ ಮನೆಯ ಒಳಗೂ ಮತ್ತು ಹೊರ ಅಂಗಣವನ್ನು ದಿನಕ್ಕೆ ಕನಿಷ್ಟ ಎರಡು ಬಾರಿ ಗುಡಿಸುತ್ತಿದ್ದವರು ಈಗ ಹಲವು ಬಾರಿ ಗುಡಿಸುತ್ತಾರೆ. ಅವರು ಮನೆ, ಅಂಗಳ ಗುಡಿಸುವಾಗೆಲ್ಲಾ ಈ ಕೆಟ್ಟ ಬಿಸಿಗಾಳಿ ಅದೇನೆಲ್ಲ ಹೊತ್ತು ತಂದು ಮನೆಯಂಗಳಕ್ಕೆ ಬಿಸುಟು ಹೋಗುತ್ತೆ ಅಂತಾ ಗುನುಗುತ್ತಾರೆ. ಹೆಂಗೆಳೆಯರಿಗೆ ಕಸ ಬಳಿಯುವ ಹೆಚ್ಚುವರಿ ಕೆಲಸ ಕೊಟ್ಟ ಬೇಸಿಗೆಯ ಬಿಸಿಗಾಳಿ, ಜನ ದನ ಎಂಬ ಬೇಧವೆಣಿಸದೆ ಎಲ್ಲರ ಮೈಯಿನ ನೀರು ಬಸಿದು ಬಸಿದು ಸುಸ್ತು ಮಾಡಿ ಬಿಟ್ಟಿರುತ್ತೆ. ಜನ ಯಾವಾಗಪ್ಪಾ ಮಳೆ ಬರುತ್ತೆ? ಎಂಬ ನಿರೀಕ್ಷೆಯಲ್ಲಿ ದಿನಕ್ಕೆ ನೂರು ಬಾರಿಯಾದರೂ ಮುಗಿಲ ದೇನಿಸಿ ನೋಡುತ್ತಾ ನಿಟ್ಟುಸಿರುಯ್ಯುತ್ತಿರುತ್ತಾರೆ.

ಇಂತಿಪ್ಪ ದಿನ ರಾತ್ರಿಗಳಲ್ಲಿ ಜನರೆಲ್ಲ ಮನೆಯೊಳಗೆ ನಿದ್ರಿಸುವ ಸುಖದಿಂದ ವಂಚಿತರಾಗಿ ಮನೆಯ ಅಂಗಳಗಳಲ್ಲೇ ನಿದ್ರಿಸುತ್ತಿರುತ್ತಾರೆ. ಯಾವುದೋ ಒಂದು ಸರೀ ರಾತ್ರಿ ಇದ್ದಕ್ಕಿದ್ದಂತೆ ಬಿಸಿಗಾಳಿ ತಂಪಾಗಿ ಬೀಸತೊಡಗುತ್ತೆ. ಮಲಗಿದ್ದ ಜನ ಎಚ್ಚರಗೊಳ್ಳುವ ಮುನ್ನವೇ ಟಪ ಟಪ ಟಪ ಅಂತಾ ಅದೆಲ್ಲಿಂದಲೋ ಯಾರೋ ಮರೆಯಿಂದ ಗುಂಡು ಹೊಡೆದಂತೆ ಬಿರುಸಾಗಿ ಮೊದಲ ಮಳೆಯ ಹನಿಗಳು ನೆಲಕ್ಕೆ ತಲುಪುತ್ತವೆ. ಎಚ್ಚರಗೊಂಡ ಹಿರಿಯರು ಮೈಮರೆತು ನಿದ್ರಿಸುತ್ತಿದ್ದ ನಮ್ಮಂಥ ಮಕ್ಕಳು ಮರಿಗಳನ್ನೆಲ್ಲಾ ಹೆಗಲ ಮೇಲೆ ಬಟ್ಟೆ ಎಸೆದುಕೊಂಡಂತೆ ಎಸೆದುಕೊಂಡು ಮನೆಯೊಳಕ್ಕೆ ಓಡಿಹೋಗುತ್ತಾರೆ. ಅರೆ ಬರೆ ನಿದ್ರೆಯಾದ ನಮ್ಮಂಥ ಮಕ್ಕಳು ಕಣ್ಣು ಉಜ್ಜಿ ಉಜ್ಜಿ ಮನೆಯ ಹೊರಗೆ ಧೋಎಂದು ಸುರಿವ ಮೊದಲ ಮಳೆ ನೋಡುತ್ತೇವೆ. ಹಿರಿಯರಿಗೆ ಬಯಲಲ್ಲಿ ಬಿಸಿಲಲ್ಲಿ ಒಣಗಲು ಬಿಟ್ಟಿದ್ದ ವಸ್ತುಗಳನ್ನು ಮನೆಯ ಒಳಕ್ಕೆ ಸೇರಿಸುವ ತವಕವಾದರೆ ನಮ್ಮಂಥ ಮಕ್ಕಳ ಪುಳಕವೇ ಬೇರೆ.

ನನಗಂತೂ ಮೊದಲಮಳೆಯೇ ಆಗಲೀ, ಯಾವುದೇ ಮಳೆಯಾಗಲಿ ಅದರಲ್ಲಿ ನೆಂದು ಮಿಂದು ಒದ್ದೆ ಒದ್ದೆಯಾದರೇ ನನಗೆ ಸಮಾಧಾನ. ಇಂತಹ ಸರಿರಾತ್ರಿಯ ಮಳೆಯಾದರೂ ಸರಿ, ನಾನು ನಿದ್ದೆಯಿಂದೆಬ್ಬರಿಸಿದ ಹಿರಯರ ಅವಸರವಸರದ ಗಡಿಬಿಡಿಯ ಕೆಲಸಗಳ ನಡುವೆಯೂ ಅದ್ಹೇಗೋ ನುಸುಳಿ ಮನೆಯ ಅಂಗಳದಲ್ಲಿರುತ್ತಿದ್ದೆ. ಆ ಮೊದಲ ಮಳೆಯ ಘಮದ ಸುವಾಸನೆ ನನ್ನ ಮೂಗಿನ ತುಂಬಾ ಆಸ್ವಾದಿಸಿಕೊಂಡು ನನ್ನನ್ನೇ ಮರೆತು ಕತ್ತಲಲ್ಲಿ ನಿಂತಿರುತ್ತಿದ್ದೆ. ಆ ಮಧ್ಯರಾತ್ರಿಯ ಮಳೆಯಲ್ಲಿಯೂ ಒಂಚೂರು ನೆನೆದು ಒದ್ದೆಯಾದರೇ ನಾನು ನನ್ನ ಹೆಸರಿನ ಹಿರಿಮೆಗೆ ಹುಟ್ಟಿದವನು. ಯಾರಾದರೂ ಕತ್ತಲಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತ ನನ್ನ ಗಮನಿಸುವ ತನಕ, ಅಥವಾ ಮನೆಯ ಮುಂಬಾಗಿಲು ಮುಚ್ಚುವ ಮುನ್ನ ಒಮ್ಮೆ ನನ್ನ ಇಲ್ಲದಿರುವಿಕೆಯ ಗಮನಿಸುವ ತನಕ ನಾನು ಮಳೆಗೆ ಹುಟ್ಟಿದ ಮಣ್ಣಿನ ಮಗ.

ನನ್ನ ತಲೆಮೇಲೊಂದು ಬಾರಿಸಿ ಯಾರಾದರೂ ಒಳಗೆ ಎಳೆದುಕೊಂಡು ಬಂದು ಟವೆಲ್ಲಿನಿಂದ ಮೈ ಒರೆಸಿ ಬೆಚ್ಚಗೆ ಕಂಬಳಿ ಹೊದಿಸಿ ಮಲಗಿಸಿದರೂ ನನಗೆ ಹೊರಗಿನ ಮಳೆಯದ್ದೇ ಧ್ಯಾನ. ಮನೆಯ ಹಿರಿಯರಾಗಲೇ ನನ್ನ ಮಳೆಯ ಹುಚ್ಚಿಗೆ “ಇವನಿಗೆ ಬೆಳಗ್ಗೆ ಜ್ವರ ಬಂದರೆ? ನೆಗಡಿಯಾದರೆ? ಮನೆಯ ಡಾಕ್ಟರ್ ಪರಮೇಶ್ವರಪ್ಪನವರ ಬಳಿಗೆ ಕರೆದುಕೊಂಡು ಹೋಗುವ! ಎಂಬ ಕಾಳಜಿಯ ಮಾತುಕತೆಯಲ್ಲಿ ಮುಳುಗಿರುತ್ತಿದ್ದರು. ಅವರ ಚಿಂತೆ ಅವರಿಗೆ, ನನಗೆ ಮಣ್ಣಲ್ಲಿ ಸಮಾಧಿಯಾಗಿದ್ದ ಬೀಜಗಳು ಮಳೆಯಲ್ಲಿ ನೆನೆದು ಬೆಳಗ್ಗೆ ಮೊಳಕೆಯೊಡೆಯುವ ಬೆರಗ ನೋಡುವ ತವಕ.

ಬೆಳಗ್ಗೆ ಎದ್ದವನೇ ಮನೆಯ ಸುತ್ತ ಮುತ್ತ ಇದ್ದ ಮರಗಿಡಗಳಿಂದ ಬಿದ್ದ ಒಣ ಬೀಜಗಳ ವೀಕ್ಷಣೆಯ ಕೆಲಸ. ಆ ಬೀಜಗಳ ತೆಳು ಸಿಪ್ಪೆಯೆಲ್ಲಾ ನೆನೆದು, ಬಿರಿದು ಅದರೊಳಗಿಂದ ಎರಡು ಹರಿಶಿಣ ಹಸಿರು ಮಿಶ್ರಿತ ಎಲೆಗಳೂ ಕೆಳಗೊಂದು ಬಿಳೀ ಬೇರೂ ಇಳೆಬಿದ್ದು ನೆಲದೊಳಗೆ ಇಳಿಯುವ ತಯಾರಿ ಮಾಡುತ್ತಿರುವುದನ್ನೇ ಕೈಗೆತ್ತಿಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾ ನನ್ನನ್ನೆ ಮರೆತ ನೆನಪುಗಳು. ಆ ಬೀಜವನ್ನ ಮತ್ತೆ ಮತ್ತೆ ನೋಡುವುದು ತಣಿದ ಮೇಲೆ ಅಲ್ಲೇ ನೆನೆದ ನೆಲ ಬಗೆದು ಅದರೊಳಗೆ ಮುಚ್ಚಿ ಮೆದುವಾಗಿ ಮಣ್ಣು ಮುಚ್ಚಿ ಹಿತ್ತಲಿನಲ್ಲಿದ್ದ ಕನಕಾಂಬರ ಗಿಡದ ಬಳಿಗೆ ಓಡುತ್ತಿದ್ದೆ. ಅದರ ಒಣಗಿದ ಬೀಜಗಳು ರಾತ್ರಿಯ ಮಳೆಗೆ ನೆನೆದು ಬೆಳಗಿನ ಮೊದಲ ಕಿರಣಗಳಿಗೆ ಮತ್ತೆ ಒಣಗಲಾಗಿ ಪಟ್ ಪಟ್ ಅಂತಾ ಸಿಡಿದು ಅದರ ಬೀಜಗಳನ್ನೆಲ್ಲ ದೂರ ದೂರ ಹಾರಿ ಹಾರಿ ಬೀಳುತ್ತಿದ್ದ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದೆ. ಈ ಕನಕಾಂಬರ ಗಿಡದ ಸಿಡಿವ ಬೀಜದ ನೆನಪು ನನ್ನನ್ನು ಮತ್ತೆಲ್ಲೋ ಕರೆದೊಯ್ಯುತ್ತಿದೆ.

{ ನಮ್ಮ ಮನೆಗಳಲ್ಲಿ ಆ ದಿನಗಳಲ್ಲೇ ಶೌಚಾಲಯವಿದ್ದರೂ ಸಹ ನಮ್ಮಂತಹ ಮಕ್ಕಳಿಗೆ ಅದರ ಬಳಕೆಯಿಂದ ವಿನಾಯಿತಿ ಇತ್ತು. ಒಮ್ಮೆ ನನಗೆ ಬೆಳಗ್ಗೆ ಬೆಳಗ್ಗೆ ತುಂಬಾ ಅರ್ಜೆಂಟಾಗಿ ಬಿಟ್ಟಿತ್ತು. ಕಣ್ಣು ಸರಿಯಾಗಿ ಬಿಟ್ಟಿರದೇ ಇದ್ದರೂ ನಮ್ಮ ಮನೆಯ ಹಿತ್ತಲಿನಲ್ಲಿದ್ದ ಶೌಚಾಲಯದ ಬಳಿ ಓಡಿದೆ. ಆದರೆ ಒಳಗೆ ಸೇರಿ ಕೆಲಸ ಮುಗಿಸುವ ಪರಿಸ್ಥಿತಿಯಲ್ಲಿರದಿದ್ದರಿಂದ ಹೊರಗೇ ನಿಂತು ಜಲ ಪಿರಂಗಿ ಹಾಯಿಸಿದ್ದೆ. ಇದ್ದಕಿದ್ದಂತೆ ಫಟ್ ಫಟ್ ಫಟ್ ಎಂದು ಸದ್ದು, ಮತ್ತು ಮುಖಕ್ಕೂ ಕೆಲವು ಸಣ್ಣ ಸೂಜಿಯಂತದ್ದರಿಂದ ಹೊಡೆದ ಹಾಗೆ ಹೊಡೆತ ಬಿತ್ತು. ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಆ ಕನಕಾಂಬರ ಗಿಡದ ತುಂಬಾ ತುಂಬಿದ್ದ ಒಣಗಿದ ಬೀಜದ ಗೊಂಚಲುಗಳ ನಡುವೆ ಪೈಪೊಟಿಯಲ್ಲಿ ಸರಣಿ ಪಟಾಕಿ ಹೊಡೆವ ಸಂಭ್ರಮ!.}

ಇಂತೆಲ್ಲಾ ನೆನಪುಗಳ ಮಧ್ಯೆ ಮೈ ಮರೆತವನಿಗೆ, “ಎಲ್ಲಿದ್ದೀಯೋ ಬಾಬು? ಬರ್ತೀಯೇನೋ ಗುಡ್ಡದ ಕಡೆ ಹೋಗುತ್ತಿದ್ದೀನಿ” ಎಂದು ಕೂಗು ಹಾಕುತ್ತಿದ್ದ ಸೋದರ ಮಾವನ ಮಾತು ಕೇಳಿದ್ದೇ ಚಿಗರೆಯಂತೆ ನೆಗೆದು ಅವರೂಡಿದ್ದ ಎತ್ತಿನ ಗಾಡಿಯೇರಿರುತ್ತಿದ್ದೆ. ಅದರಲ್ಲಿ ಎಲ್ಲ ಆ ದಿನದ ಸಂಭ್ರಮಕ್ಕೆ ಸಿಧ್ದ ಮಾಡಿಕೊಂಡು ಕುಳಿತ ಅಕ್ಕ ಮತ್ತು ಅಜ್ಜಿಯಿರುತ್ತಿದ್ದರು.ಮೂರು ಮೈಲಿ ದೂರವಿದ್ದ ಗುಡ್ಡ ಸೇರಿದ ನಾವು ಅಂದು ರೈತರೆಲ್ಲಾ ಅವರ ಜಮೀನಿನಲ್ಲಿ ಮಾಡುವ ಹೊನ್ನಾರಿನ ಸಂಭ್ರಮದ ಆಚರಣೆಯಲ್ಲಿ ತೊಡಗುತ್ತಿದ್ದೆವು. ಸೋದರ ಮಾವ ಗಾಡಿ ಮರದ ನೆರಳಿಗೆ ನಿಲ್ಲಿಸಿ ಎತ್ತುಗಳನ್ನು ಹೊನ್ನಾರಿನ ಮೊದಲ ಉಳುಮೆಗೆ ಸಿದ್ಧ ಮಾಡುತ್ತಿದ್ದರು. ಮೈತೊಳೆದು ಮಡಿಯುಟ್ಟು ಬಂದಿದ್ದ ಅಕ್ಕ ಹೊನ್ನಾರಿನ ನೇಗಿಲಿಗೆ ಹೂಡಿದ ಎತ್ತುಗಳಿಗೆ ಪೂಜಿಸಿ ಪ್ರಸಾದದ ಬಾಳೆ ಹಣ್ಣು ತಿನ್ನಿಸಿ ನೆಲಕ್ಕೆ ನಮಸ್ಕರಿಸಿ ಬದಿಗೆ ಸರಿಯುತ್ತಿದ್ದರು. “ಹೇಯ್ ಹೇಯ್, ಅಚ್ಚಾ ಅಚ್ಚಾ, ಎಂದು ಮಧ್ಯೆ ಮಧ್ಯೆ ಚ್ಚ್ ಚ್ಚ್ ಚ್ಚ್, ಹಾ ಹಾ ಹಾ, ಎಂದು ಹುರಿದುಂಬಿಸುತ್ತಾ ಸೋದರ ಮಾವ ಇಡೀ ಜಮೀನಿನ ಹೊರ ವಿಸ್ತಾರಕ್ಕೆ ಒಂದು ಸುತ್ತು ಬರುತ್ತಿದ್ದರು.

ಇದೆಲ್ಲಾ ನಡೆಯುವ ಹೊತ್ತಿಗೆ ಅಕ್ಕ ನಮಗೆಲ್ಲಾ ಬಾಳೆಹಣ್ಣಿನ ರಸಾಯನ ಹಂಚಿರುತ್ತಿದ್ದರು. ಅದನ್ನೆಲ್ಲಾ ತಿಂದು ಮುಗಿಸುವುದರೊಳಗೆ ಅದೆಲ್ಲಿರುತ್ತಿದ್ದವೋ ಆ ಕಾಗೆ, ಮೈನಾ, ಬಿಳಿ ಕೊಕ್ಕರೆ, ಎಲ್ಲ ಹಾರಿ ಬಂದು ನಮ್ಮ ಮಾವ ಗೀಚಿದ ನೇಗಿಲ ಸಾಲುಗಳ ಸುತ್ತ ಮುತ್ತ ಮೇಲಕ್ಕೆದ್ದು ಬರುತ್ತಿದ್ದ ಹುಳು ಹುಪ್ಪಡಿಗಳೂ ಎರೆ ಹುಳುಗಳನ್ನೂ ಹಿಡಿದು ಹೊಟ್ಟೆತುಂಬಾ ತಿಂದು ಮುಗಿಸುತ್ತಿದ್ದವು. ಮದ್ಯಾಹ್ನದ ಬಿಸಿಲೇರುವ ಮುನ್ನ ಮಾವ ನೊಗ ಕಳಚಿ ಎತ್ತುಗಳನ್ನು ಮೇಯಲು ಬಿಡುತ್ತಿದ್ದರು.ಅಗ ನನಗೆ ಅಲ್ಲಲ್ಲೇ ಮೊದಲ ಮಳೆಗೆ ತುಂಬಿ ನಿಂತ ಗುಂಡಿಗಳಲ್ಲಿದ್ದ ಕೆಂಪು ಕೆಂಪು ನೀರಿನಲ್ಲಿ ಈಜುವ ಯೋಗ. ನನ್ನ ಹೊಟ್ಟೆ ಕೆಳಗೆ ಬಳಸಿ ಹಿಡಿದು ಮಾವ ಆ ನೀರಿನಲ್ಲಿ ನಾನು ಮುಳುಗದಂತೆ ಹಿಡಿದು ಕಾಲು ಕೈ ಬಡಿದು ಈಜಲು ಹುರಿದುಂಬಿಸುತ್ತಿದ್ದರು.

ನಾನಂತೂ ಮೈ ಹಣ್ಣಾಗುವವರೆಗೂ ಕೈ ಕಾಲು ಬಡಿದು ಸುಸ್ತಾಗುವವವರೆಗೂ ನೀರು ಬಿಟ್ಟು ಈಚೆ ಬರುತ್ತಿರಲಿಲ್ಲ.
ನಂತರ ಮದ್ಯಾಹ್ನ ಮರದ ನೆರಳಲ್ಲಿ ಕುಳಿತು ಅಕ್ಕ ಅಜ್ಜಿ ಮಾವ ಎಲ್ಲರೊಂದಿಗೆ ಊಟ ಮುಗಿಸುತ್ತಿದ್ದೆ. ಬಿಸಿಲಿಗೆ ಬಳಲಿದ ಎತ್ತುಗಳಿಗೂ ನೀರು ತುಂಬಿದ ಹೊಂಡಗಳಲ್ಲಿ ಸ್ನಾನ ಮಾಡಿಸುವ ಮಾವನ ಜೊತೆ ನಾನೂ ಮತ್ತೆ ಸ್ನಾನ ಮುಗಿಸುತ್ತಿದ್ದೆ. ನೀರಿನಲ್ಲಿ ದೇಹ ಪೂರ ಮುಳುಗದಂತೆ ಈಜಿ ಬರುತ್ತಿದ್ದ ಎತ್ತುಗಳ ಬೆನ್ನ ಮೇಲೇರಿ ಮಲಗಿ ಗಟ್ಟಿಯಾಗಿ ತಬ್ಬಿ ಹಿಡಿದು ನಾನೂ ಹಲವು ಬಾರಿ ನೀರಿನಲ್ಲಿ ಉಚಿತ ಎತ್ತಿನ ಬೋಟಿಂಗ್ ಮಜಾ ಅನುಭವಿಸುತ್ತಿದ್ದೆ. ಎಲ್ಲ ಮುಗಿದ ಮೇಲೆ ದಡದಲ್ಲಿ ಕುಳಿತು ನಾನೂ ಮಾವ ಇಬ್ಬರೂ ಕಲ್ಲಿನ ಬಿಲ್ಲೆಗಳ ಹಿಡಿದು ನೀರಿನ ಮೇಲ್ಮೈಗೆ ಬೀಸಿ ಅದೆಷ್ಟು ದೂರ ಹಾರಿ ಹಾರಿ ನೀರ ಮುಟ್ಟಿ ಮುಟ್ಟಿ ಮುಳುಗಿತು ಎಂದು ಪಂದ್ಯ ಕಟ್ಟಿ ಸೋತು ಗೆಲ್ಲುತ್ತಿದ್ದೆವು.

ಎಲ್ಲ ಮುಗಿಸಿ ಸಂಜೆ ಮನೆಗೆ ಮರಳುವ ದಾರಿಯ ಇಕ್ಕೆಲದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವೊಂದು ನಡೆದಿರುತ್ತಿತ್ತು. ಬೆಳಗ್ಗೆ ಹೋಗುವಾಗ ಬರೀ ಬಿಸಿಲಿಗೆ ಒಣಗೀ ಒಣಗೀ ಬಟಾ ಬಯಲಿನಂತೆ ಬೋಳು ಬೋಳಾಗಿದ್ದ ದಾರಿ ಇದ್ದಕ್ಕಿದ್ದಂತೆ ಪೂರಾ ಹರಿಶಿನ ಮಿಶ್ರಿತ ಹಸಿರಿನ ಬಣ್ಣ ಬಳಿದುಕೊಂಡಿರುತ್ತಿತ್ತು. ಬರೀ ಧೂಳಿನಿಂದ ಮುಚ್ಚಿ ಮಸುಕಾಗಿದ್ದ ಬಯಲಿನ ಮರಗಳೆಲ್ಲಾ ಯಾರೋ ಬಂದು ಹೊಸದಾಗಿ ಸುಣ್ಣ ಬಣ್ಣ ಬಳಿದಿರುವರೇನೋ ಎಂಬಂತೆ ಸಿಂಗರಿಸಿಕೊಂಡಿರುತ್ತಿದ್ದವು. ಇದ್ದ ಬದ್ದ ಹರಿಶಿಣದ ಎಲೆಗಳನ್ನೆಲ್ಲ ಕಳೆದುಕೊಂಡು ಉದುರಿಸಿ ಬೋಳು ಬೋಳಾಗಿದ್ದ ಮರಗಳಲ್ಲಿ ಅದೆಲ್ಲಿಂದಲೋ ಕೆಂಪು ಮಿಶ್ರಿತ ಎಳೆ ಚಿಗುರಿನ ಹಸಿರಿನ ಎಲೆಗಳು ಈಚೆ ಬರಲು ಹೊಂಚು ಹಾಕುತ್ತಿರುತ್ತಿದ್ದವು.

children-play-rain-india_18731_990x742

ಮಾನವ ತಾರತಮ್ಯದ ಮೊದಲ ಪಾಠ…

ಕರೆದು ಈ ರೀತಿಯ ಮಾನವವಿರೋಧೀ ಅಸಹಜತೆ ಮೆರೆದು ದೇವರ ಪೂಜೆಯ ಆಚರಣೆ ಮಾಡಿ ಅದರಿಂದ ಆಕೆ ಸಾಧಿಸಿದ್ದೇನೆಂದು ನಮಗಾರಿಗೂ ಇಂದಿಗೂ ಅರ್ಥವಾಗಿಲ್ಲ.

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಒಂದು ಸಂಜೆ ಅಮ್ಮ ಯಾರದ್ದೋ ಮನೆಗೆ ಸತ್ಯನಾರಾಯಣ ಪೂಜೆಗೆಂದು ಹೋಗಿದ್ದವರು ಕಣ್ಣೀರಾಕುತ್ತಾ ಬಂದರು. ತಮ್ಮ ಬದುಕಲ್ಲಿ ನೊಂದು ಬೆಂದು ತುಂಬಾ ಗಟ್ಟಿಗಿತ್ತಿಯಾಗಿದ್ದ ನನ್ನ ಅಮ್ಮನ ಕಣ್ಣಲ್ಲಿ ಕಣ್ಣಿರು ಸುಲಭಕ್ಕೆ ಬರುವಂತದ್ದಲ್ಲ. ತುಂಬಾ ಗಾಭರಿಯಾದ ನಾವೆಲ್ಲಾ ಸುತ್ತುವರಿದು ಏನಾಯ್ತೆಂದು ಕೇಳಿದೆವು.

ಅಮ್ಮ ಸರ್ಕಾರಿ ಉದ್ಯೋಗಿಯಾಗಿದ್ದರಿಂದ ಆ ಊರಿನಲ್ಲಿ ಕೆಲಸ ಮಾಡುವ ಎಲ್ಲಾ ಸರ್ಕಾರಿ ನೌಕರರು ಪರಿಚಯವಿದ್ದರು. ಹೀಗಿರಲು ಅವರನ್ನು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಅವರ ಮನೆಯ ಸತ್ಯನಾರಾಯಣ ಪೂಜೆಗೆ ಆಹ್ವಾನಿಸಿದ್ದರು. ಇವರೂ ತುಂಬಾ ಖುಷಿಯಿಂದಲೇ ಹೋಗಿದ್ದರು.

ಅಲ್ಲಿ ಆ ಮಹಿಳೆಯು ತುಂಬಾ ಅದ್ಧೂರಿಯಿಂದ ಪೂಜೆ ಏರ್ಪಡಿಸಿದ್ದರಂತೆ. ತನ್ನ ಬಂಧು ಬಳಗವನ್ನೆಲ್ಲಾ ಕರೆದಿದ್ದರಂತೆ. ಪೂಜೆ ಮುಗಿಯಿತಂತೆ. ಪ್ರಸಾದ ಕೊಡುವಾಗ ಅವರ ನೆಂಟರಿಷ್ಟರಿಗೆ ಸ್ಟೀಲ್ ತಟ್ಟೆಯಲ್ಲಿ ಕೊಟ್ಟ ಆ ಮಹಿಳೆ ಅಮ್ಮನಿಗೆ ಬಾಳೆ ಎಲೆ ಹುಡುಕಿ ತಂದು ಕೈಗಿಡದೇ ನೆಲದ ಮೇಲಿಟ್ಟರಂತೆ.

ಅಮ್ಮ ಭಕ್ತಿಪೂರ್ವಕವಾಗಿ ಆ ಪ್ರಸಾದ ಸೇವಿಸಿದ ತಕ್ಷಣವೇ ಕಾದಿದ್ದವರಂತೆ ಅಮ್ಮನಿಗೆ ಆ ಬಾಳೆಯೆಲೆ ಹೊರಗೆ ಬಿಸಾಡಲು ತಿಳಿಸಿದರಂತೆ. ಅಮ್ಮ ಬಿಸಾಡಿ ಕೈ ತೊಳೆಯಲು ನೀರು ಕೇಳಿದರೆ ಅವರುಗಳು ಶೌಚಕ್ಕೆ ಬಳಸುವ ಚೊಂಬು ಅಲ್ಲೇ ಇದೆ ಬಳಸಿ ಎಂದರಂತೆ.

ಅಮ್ಮ ಮನೆಯ ಹೊರಗೆ ಕೈ ತೊಳೆಯುತ್ತಿರಬೇಕಾದರೆ ಅಮ್ಮನ ಕಣ್ಣಿಗೆ ಕಂಡ ಮತ್ತೊಂದು ದೃಶ್ಯ ಅಲ್ಲಿಯವರೆಗೆ ತಡೆದಿದ್ದ ಕಣ್ಣಿರು ಸುರಿಸದೇ ಇರಲಾಗಲಿಲ್ಲವಂತೆ. ಅಮ್ಮ ಕುಳಿತಿದ್ದ ಜಾಗಕ್ಕೆ ಗೋಜಲ ಕೈಯಲ್ಲಿ ಪ್ರೋಕ್ಷಣೆ ಮಾಡಿದ ಆ ಮಹಿಳೆ ತನ್ನ ಕಾಲಲ್ಲಿ ನೆಲ ಸಾರಿಸುವ ಬಟ್ಟೆಯಿಂದ ಒರೆಸುತ್ತಿದ್ದರಂತೆ.

ಅಮ್ಮನೊಂದಿಗೆ ನಮಗೆಲ್ಲ ಇಂದಿಗೂ ತುಂಬಾ ಕಾಡಿರುವ ಪ್ರಶ್ನೆಯೊಂದೇ! ನಾವು ಹುಟ್ಟಿನಿಂದ ಬಂದ ಸಾಮಾಜಿಕ, ಸಾಂಸ್ಕೃತಿಕ, ಭದ್ದತೆಗೆ ಶಿವನ ಪೂಜಿಸುವ ಲಿಂಗಾಯತ ಧರ್ಮದವರು. ಆಕೆ ಭ್ರಾಹ್ಮಣರು ಅಷ್ಟೇ. ಅಮ್ಮ ಅವರನ್ನು ಆಹ್ವಾನಿಸಿರೆಂದು ಕೇಳಿಕೊಂಡಿರಲಿಲ್ಲ. ಆದರೂ ಕರೆದು ಈ ರೀತಿಯ ಮಾನವವಿರೋಧೀ ಅಸಹಜತೆ ಮೆರೆದು ದೇವರ ಪೂಜೆಯ ಆಚರಣೆ ಮಾಡಿ ಅದರಿಂದ ಆಕೆ ಸಾಧಿಸಿದ್ದೇನೆಂದು ನಮಗಾರಿಗೂ ಇಂದಿಗೂ ಅರ್ಥವಾಗಿಲ್ಲ.

ನನಗೂ ಇದು ನನ್ನ ಬಾಳಿನ ವಿಶ್ವ ವಿದ್ಯಾನಿಲಯದಲ್ಲಿ ಕಿವಿಯಾರೆ ಕೇಳಿದ ಮೊದಲ ಮಾನವ ತಾರತಮ್ಯದ ಪಾಠ. ಅದೂ ಅಮ್ಮನ ಕಣ್ಣಿರ ಹನಿಯ ಪ್ರಾಕ್ಟಿಕಲ್ ಮೂಲಕ. ಅಂದು ಕೇಳಿದ, ಕಣ್ಣಾರೆ ಕಂಡ ಈ ನೈಜ ಪ್ರಾಕ್ಟಿಕಲ್ ಪಾಠ ಮಾನವ ಸಹಜವಾದ ಭಾವನೆಗಳೊಂದಿಗೆ ಹುಟ್ಟಿದ ಮಗನೊಬ್ಬ ಮರೆಯೋದು ಹೇಗೆ ಸಾಧ್ಯ?

“ಚೆರಿಯ” ನಮ್ಮನೆ ಮೂರನೇ ಮಗ….

ನಮ್ಮ ಮನೆಯನ್ನು ಯಾವುದೇ ಹೈ ಅಲೆರ್ಟ್ ಜೋನ್ ಗಿಂತಾ ಕಡಿಮೆಯಿಲ್ಲದಂತೆ ಮಾಡಿ ಬಿಸಾಕಿದ್ದಾನೆ.

ಚೆರಿಯ ಬೆಳೆದುಬಿಟ್ಟಿದ್ದಾನೆ. ಅವನು ಇನ್ನೂ ಮೊನ್ನೆ ಮೊನ್ನೆ ನಮ್ಮ ಮನೆಗೆ ಬಂದಂತಿದ್ದ. ನಾನು ಅವನನ್ನು ಬೆಂಗಳೂರಿನಿಂದ ತಂದು ಇನ್ನೂ ಕೆಲವು ತಿಂಗಳುಗಳಾಗಿರಬಹುದಷ್ಟೇ. ಆ ದಿನವಿನ್ನೂ ನೆನಪಿದೆ, ಗೆಳೆಯ ಆದರ್ಶ್ ತನಗೆ ಕೆಲಸ ಸಿಕ್ಕಿದೆ ಹಾಗಾಗಿ ನನ್ನ ಮುದ್ದಿನ ನಾಯಿಮರಿಗೆ ಸೂಕ್ತ ಮನೆಯೊಂದು ಬೇಕಿದೆ ಎಂದಿದ್ದ. ನನ್ನ ನಾಯಿಮರಿ ಸಾಕುವ ಪ್ರೀತಿಗೆ ತೊಡರಿಕೊಂಡು ಬಂದ ಇಂತಹ ಆಹ್ವಾನವನ್ನ ನಾನು ಬಿಟ್ಟೇನೆಯೇ. ಸರಿ ನನಗೆ ಕೊಡುವುದಾದರೆ ಕೊಡಪ್ಪಾ ಎಂದಿದ್ದೆ. ಆತ ಮರು ಮಾತಾಡದೇ ಸಾರ್ ನಿಮ್ಮ ಮನೆಗೆ ನಮ್ಮ ನಾಯಿ ಕೊಡೋದಾದರೆ ಕಣ್ಣು ಮುಚ್ಚಿಕೊಂಡು ಕೊಡುತ್ತೇನೆ ಬಿಡಿ ಅಂದು ಯಾವಾಗ ಬರುತ್ತೀರಿ ಹೇಳಿ ಎಂದಿದ್ದ. ಯಾವ ಕರುಳು ಬಳ್ಳಿಯ ಸಂಭಂದವೋ ಯಾರಿಗೆ ಗೊತ್ತು.

ಮುಂದಿನ ವಾರಾಂತ್ಯದಲ್ಲಿ ನಾನು ಮತ್ತೊಬ್ಬ ಗೆಳೆಯ ಕಂಪ್ಲಿ ಮನೆಗೆ ಹೋದವನು ಇಬ್ಬರೂ ಜೊತೆಯಲ್ಲಿ ಆದರ್ಶನ ಮನೆಗೆ ಹೋಗಿ ಈ ಚೆರಿಯನ್ನ ನನ್ನ ಕೈಗೆ ಒಪ್ಪಿಸಿಕೊಂಡಿದ್ದೆ. ಅಲ್ಲಿಂದ ನಾನು ನನ್ನ ತೋಟದ ಮನೆಗೆ ಹೋಗುವ ಮುನ್ನ ಬಾಕಿಯಿದ್ದ ಬೆಂಗಳೂರಿನ ಮತ್ತೊಂದು ಮುಖ್ಯವಾದ ಕೆಲಸಕ್ಕೂ ಈತ ಸಾಕ್ಷಿಯಾಗಿದ್ದ. ನಾನು ನನ್ನ ಗೆಳತಿಯೊಬ್ಬರಿಗೆ ಯಾವುದಾದರೂ ಪತ್ರಿಕೆಗೆ ಕಾಲಮ್ ಬರೆಯುವ ನನ್ನ ಆಸೆಯೊಂದ ತಿಳಿಸಿದ್ದೆ. ಆಕೆಯೂ ಒಪ್ಪಿದ್ದರು. ಆದರೆ ಆಕೆಯ ನಿರ್ಧಾರವೋ, ಕಾಲದ ನಿಯಮವೋ, ನನ್ನ ಗ್ರಹಚಾರವೋ ಯಾವುದೋ ಸರಿಯಿಲ್ಲದ ಪ್ರಯುಕ್ತವೋ ಅದು ಈಡೇರಲಿಲ್ಲ.

ಹಾಗಾಗಿ ನಾನೇ ಟೈಮ್ಸ್ ಗ್ರೂಪಿನ ಸಮೂಹದ ಪತ್ರಿಕೆಯೊಂದರ ಸಂಪಾದಕರನ್ನ ಅವರ ಕಛೇರಿಯಲ್ಲೇ ಭೇಟಿ ಮಾಡಲು ಅವರ ಬಳಿ ಮಾತಾಡಿದ್ದೆ.ಅವರೂ ನೀವು ಬೆಂಗಳೂರಿಗೆ ಬಂದಾಗ ನನಗೆ ಪೋನ್ ಮಾಡಿ ಸ್ವಲ್ಪ ಸಮಯ ಮುಂಚೆ ತಿಳಿಸಿ ನನ್ನ ಭೇಟಿ ಮಾಡೆಂದಿದ್ದರು.ಹಾಗಾಗಿ ಅವರಿಗೆ ಫೋನಾಯಿಸಿ ನನ್ನ ಬರುವಿಕೆಯ ತಿಳಿಸಿದ್ದೆ. ಅವರ ಆಫೀಸ್ ಎದುರು ನಮ್ಮ ವಾಹನ ನಿಲ್ಲಿಸಿ, ಚಾಲಕನಿಗೆ ನನ್ನ ಚೆರಿಯನ್ನ ಹುಷಾರಾಗಿ ನೋಡಿಕೋ ಎಂದು ಒಳ ನಡೆದಿದ್ದೆ. ನನ್ನ ಅವರ ಭೇಟಿಯಾಯ್ತು. ಇಬ್ಬರೂ ಯಾವ ವಿಷಯದ ಮೇಲೆ ನಾನು ಬರೆಯಬಹುದು ಎಂದು ಮಾತನಾಡಿದೆವು ಮತ್ತು ಒಪ್ಪಿಕೊಂಡೆವು. ನಾನು ಹೊರನಡೆದೆ.

ಈ ಪ್ರಕ್ರಿಯೆ ನನ್ನ ಗೆಳತಿಯ ಉಪಸ್ಥಿತಿಯಲ್ಲಿ ನಡೆಯಬಹುದೆಂದು ನಾನು ಆಶಿಸಿದ್ದೆ. ಆದರೆ ಅವರದೇ ಕಛೇರಿಯಲ್ಲಿ ಅವರ ಅನುಪಸ್ಥಿತಿಯಲ್ಲಿ ಈ ಭೇಟಿ ನಡೆದದ್ದಕ್ಕೆ ಈ ಚೆರಿಯ ಸಾಕ್ಷಿಯಾಗಿದ್ದ. ಹೊರಬಂದು ನೋಡಿದರೆ ಚೆರಿಯ ವಾಹನ ಬಿಟ್ಟು ಕೆಳಗಿಳಿದು ಕಕ್ಕ ಮಾಡಿ ಮತ್ತೆ ನನ್ನ ಬ್ಯಾಗ್ ಸೇರಿಕೊಂಡಿದ್ದ. ಚಾಲಕನಿಗೆ ಇವನ ಕುಯ್ಯ್ಗುಟ್ಟುವಿಕೆ ಅರ್ಥವಾಗಿ ಅದಕ್ಕೇ ಇರಬೇಕೆಂದು ಕೆಳಗೆ ಬಿಟ್ಟಿದ್ದ. ಹೀಗೆ ನನ್ನ ಜೀವನದ ಮತ್ತೊಂದು ಮುಖ್ಯ ನೆನಪಿನ ಭಾಗವಾಗಿ ಚೆರಿಯನ ನೆನಪು ನನ್ನ ಬಾಳ ಪುಟದೊಳಗೆ ಸೇರಿಹೋಗಿತ್ತು.

ಮನೆಗೆ ಬಂದಾಗ ಇವನು ಗಂಡೋ ಹೆಣ್ಣೋ ಗೊತ್ತಿಲ್ಲದೇ ಹೆಣ್ಣೇ ಇರಬೇಕೆಂದು ಸ್ವಲ್ಪದಿನ “ಚೆರ್ರಿ” ಎಂದು ಕರೆದಿದ್ದೆವು. ಆದರೆ ಇವನ ನಿಜ ಇವನು ಮೂತ್ರಮಾಡಲು ನಿಲ್ಲುವ ಭಂಗಿಯಿಂದ ಗೊತ್ತಾದಾಗ ಮನೆಯಲ್ಲಿ ಕೊಲಾಹಲ. ಮಕ್ಕಳು ಇವಳು ಇವಳಲ್ಲಾ, ಇವಳು ಅವನಾದಳು ಎಂದರು. ಮತ್ತೆ ನಮಗೆ ಇವಳಿಗೆ ಅವನ ಹೆಸರಿಡುವ ಗೊಂದಲ. ಕೊನೆಗೆ ಯಾರೂ ಇಟ್ಟಿರಬಾರದು ಎಂಬಂತಹ ಹೆಸರೊಂದ ಹುಡುಕಿದೆವು. ಅದೇ “ಚೆರ್ರಿ”ಯೆಂಬ ಅವಳು ಅವನಾದ ಹೆಸರು “ಕಾಮ”.

ಮನೆಯಲ್ಲಿ ಈ ಹೆಸರಿನ ಮೋಜು ಮಸ್ತಿ ಸ್ವಲ್ಪದಿನ ನಡೆದಿತ್ತು. ಮಕ್ಕಳು ಅವನನ್ನು ಕೂಗುತ್ತಾ ಕಾಮಾ ಕಾಮಾ ಕಾಮಾ ಮಕಾ ಮಕಾ ಮಕಾ ಎಂದು ಕೂಗಲಾರಂಭಿಸಿದ್ದರು. ಈ ರಾಮಾ ರಾಮಾ ರಾಮಾ ಹೋಗಿ ಮರಾ ಮರಾ ಮರಾ ಆಗುತ್ತಲ್ಲಾ ಹಾಗೆ ಆಗಿತ್ತು. ಅಮ್ಮನಿಗೆ ಇದೇನೋ ಇಂಥಹ ಹೆಸರು ಮಕ ಪಕ ಅಂಥಾರೆ ಹುಡುಗರೂ, ನಮಗೂ ಕರೆಯೋಕೆ ಆಗೋಲಪ್ಪಾ ಹೆಸರು ಬೇರೆ ಇಡೋಣವೆಂದಿದ್ದರು. ಇದೆಲ್ಲಾ ನನಗೆ ಬರುವ ದೈನಂದಿನ ವಾರ್ತೆಯಲ್ಲಿ ವರದಿಯಾದ್ದರಿಂದ ನನ್ನ ಮುಖಕ್ಕೆ ನೇರ ಮಂಗಳಾರತಿಯಾಗುವುದು ತಪ್ಪಿತ್ತು.

ನನಗೂ ಅದೇ ಸರಿಯೆನ್ನಿಸಿ ಮತ್ತೆ ಇವನ ಮರು ನಾಮಕರಣಕ್ಕೆ ಒಳ್ಳೇ ದಿನ, ಗಳಿಗೆ, ಎಲ್ಲಾ ನೋಡಿಕೊಂಡು ಮತ್ತೆ ಇವನಿಗೆ “ಚೆರಿಯ”ನೆಂದು ಹೆಸರಿಟ್ಟಿದ್ದೆವು. ಅಂದಿನಿಂದ ಚೆರಿಯ ಅವನು ಅವನಾಗಿದ್ದ. ಮೋಸ್ಟಲೀ ಇವನ ಹೆಸರು ಮತ್ತೆ ಮರು ನಾಮಕರಣವಾಗುವುದು ಅಂತ್ಯವಾಗಿದೆ ಅನ್ನಿಸುತ್ತೆ. ಯಾಕಂದರೆ ನಾವೇನೋ ಇವನ ಹೆಸರು ಬದಲಿಸಬಹುದು ಆದರೆ ಈಗಾಗಲೇ ಎರಡು ಹೆಸರು ಬದಲಿಸಿ ನಾವು ಹಾಗೆಲ್ಲಾ ಅವನನ್ನು ಕರೆದಾಗ ಕೋಪಗೊಳ್ಳದೇ ಮನ್ನಿಸಿದ್ದಾನೆ. ನಾವು ಕರೆದಾಗ ಮೊದಮೊದಲು ನಮ್ಮನ್ನು ಗಮನಿಸದೆ ನಿಮ್ಮನ್ನು ನಿಮ್ಮ ಹೆಸರಿಕ್ಕುವ ಚಟಗಳನ್ನೂ ಇಗ್ನೋರ್ ಮಾಡಬಲ್ಲೆ ಎಂಬ ಪೂರ್ವ ಸೂಚನೆ ಈಗಲೇ ಕೊಟ್ಟಿದ್ದಾನೆ. ಹಾಗಾಗಿ ನಾವು ಮತ್ತೆ ಮತ್ತೆ ಅವನಿಗೆ ಹೆಸರು ಬದಲಿಸಿ ಬೇಸರಗೊಳಿಸಬಾರದೆಂದೂ ಒಪ್ಪಿಕೊಂಡಿದ್ದೇವೆ. ಈಗ “ಚೆರಿಯ” ಅಂದ್ರೆ ಸಾಕು, ಏನು ಕರೆದಿದ್ದು? ಯಾಕೆ? ಅಂತಾ ತಿರುಗಿ ನೋಡ್ತಿದ್ದಾನೆ.

ಮನೆಯಲ್ಲಿ ಇವನು ಮನೆಯ ಇರುವ ಇಬ್ಬರು ಗಂಡು ಮಕ್ಕಳಲ್ಲಿ ಮೂರನೆಯವನಾಗಿದ್ದಾನೆ. ಬೆಳಗ್ಗೆ ಮಕ್ಕಳಿಬ್ಬರನೆಬ್ಬಿಸಿದ ನಂತರದ ಮೊದಲ ಕೆಲಸವೇ ಇವನನ್ನು ಅವನ ಭದ್ರವಾದ ಮನೆಯಿಂದ ಹೊರಕ್ಕೆ ಬಿಡುವುದು. ಇವನೋ ಬಿಟ್ಟ ತಕ್ಷಣ ಅದಕ್ಕೇ ಕಾದಿದ್ದವನಂತೆ ಮನೆ ಮುಂದಿನ ಹುಲ್ಲಿನೊಳಕ್ಕೆ ಓಡಿ ಹೋಗಿ ಕಕ್ಕಮಾಡಿ ಬಂದು ನಮ್ಮ ತೋಟದೊಳಕ್ಕೆ ಓಡುತ್ತಾನೆ. ರಾತ್ರಿಯಲ್ಲಿ ನಾವೆಲ್ಲ ಮಲಗಿರಲು ಇವನೊಬ್ಬ ಎದ್ದು ನಮ್ಮ ಮನೆ ಕಾದಿರುತ್ತಾನೆ. ಆದರೆ ಮನೆಯ ಹಿಂದಿನ ತೋಟದಲ್ಲಿ ರಾತ್ರಿ ಓಡಾಟಕ್ಕೆ ಬರೋ ನರಿ, ತೋಳ, ಕರಡಿ,ಚಿರತೆ ಮತ್ತು ಒಮ್ಮೊಮ್ಮೆ ಬರುವ ಆನೆಗಳೇನಾದರೂ ಬಂದು ಹೋಗಿದ್ದರ ಸೂಚನೆ ಇವನಿಗೆ ಗೊತ್ತಿದ್ದರೆ ಅದನ್ನು ಖಾತ್ರಿ ಮಾಡಿಕೊಳ್ಳಲು ಬೆಳಗೆದ್ದು ಓಟ ಕಿತ್ತು ಅಲ್ಲೆಲ್ಲಾ ಮೂಸಿರಿದು ಬೊಗಳುತ್ತಾ ಸ್ವಲ್ಪ ದೂರದ ವರೆಗೆ ಹೋಗಿರುತ್ತಾನೆ.

ನಮ್ಮ ತೋಟದ ಮುಂದಿನ ಕಬ್ಬಿಣದ ಗೇಟನ್ನು ತೆರೆದು ಇವಳು ಕಾರನ್ನೋ ಅಥವಾ ಅವಳ ಹೊಂಡಾ ಆಕ್ಟೀವಾ ಗಾಡಿಯನ್ನೋ ಹೊರತೆಗೆಯಲು ಹೋದರೆ ಆ ಶಬ್ಧಕ್ಕೇ ತೋಟದಲ್ಲಿ ಎಲ್ಲೋ ಮೂಸಿರಿಯುತ್ತಿದ್ದವನು ಉಸಿರುಗಟ್ಟಿ ಓಡಿಬರುತ್ತಾನೆ. ಮನೆಯ ಬಳಿ ಯಾರೋ ಬಂದಿದ್ದಾರೆ ಅವರು ಯಾರು? ನನ್ನ ಅಪ್ಪಣೆಯಿಲ್ಲದೇ ನಮ್ಮ ತೋಟದೊಳಕ್ಕೆ ಪ್ರವೇಶಿಸುತ್ತಿರುವವರು? ಎಂದು ವಿಚಾರಿಸುವ ಸಲುವಾಗಿ. ಅಲ್ಲಿಂದಲೇ ಬೊಗಳುತ್ತಾ ಬರುವ ಇವನಿಗೆ ಅವಳು ಕೂಗಿ ಹೇಳುತ್ತಾಳೇ “ಯಾರೂ ಇಲ್ಲಾ ಬಿಡೋ, ನಾನೇ ಆಚೆ ಹೋಗ್ತಾ ಇದ್ದೀನಿ” ಅಂತಾ. ಹೊರಗಿಂದಾ ನೋಡಿದವರಿಗೆ ಇವಳೂ ಕೂಡಾ ಯಾರೋ ಮನೆಯೊಳಗಿರೋ ಗಂಡಸಿಗೋ ಮಕ್ಕಳಿಗೋ ಹೇಳುತ್ತಿದ್ದಾಳೆನಿಸುತ್ತದೆ ಅಷ್ಟೆ.

ಇವನಿಗೆ ಈಗ ನಮ್ಮ ಮನೆಯ ಜನರನ್ನ, ಮನೆಯನ್ನ, ತೋಟವನ್ನ ರಕ್ಷಿಸೋ ಸಂಪೂರ್ಣ ಜವಾಬ್ದಾರಿ ತಲೆಗೇರಿದೆ. ಅವನ ವಯಸ್ಸಾದರೂ ಎಷ್ಟು? ಇನ್ನೂ ವರ್ಷ ಕೂಡಾ ಆಗಿಲ್ಲಾ. ಕೆಲವೇ ತಿಂಗಳುಗಳಷ್ಟೇ. ಆದರೂ ಅವನು ಈಗಾಗಲೇ ಮಾಡುತ್ತಿರುವ ಮತ್ತು ತನಗೆ ತಾನೇ ಹೊತ್ತುಕೊಂಡಿರೋ ಜವಾಬ್ದಾರಿ ನೋಡಿದರೆ ಖುಷಿಯೆನಿಸುತ್ತೆ. ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವನಂತೆ ನಮ್ಮ ಮನೆ ಕಾಯ್ತಾನೆ. ನಮ್ಮ ಮನೆಮುಂದೆ ಯಾವುದೇ ವಸ್ತು ಚಲಿಸಿದರೂ ಅದರ ಚಲನೆಯನ್ನ ಗುರುತಿಸಿದ್ದೇನೆ ಎಂಬಂತೆ ಬೊಗಳಿ ತನ್ನಿರುವ ಸೂಚಿಸುತ್ತಾನೆ. ಮನೆಯ ಬಳಿ ಯಾವುದೇ ಕಾಡು ಪ್ರಾಣಿ ಬರದಂತೆ ಇವನ ಭೌತಿಕವೋ, ಜೈವಿಕವೋ ಆದಂತಹ ತಡೆಗೋಡೆಯಂತಹ ಬೇಲಿ ನಿರ್ಮಿಸಿರುತ್ತಾನೆ.

ಇವನಿಂದಾಗಿ ನಮ್ಮ ಕೊಟ್ಟಿಗೆಮನೆಯ ಸದಸ್ಯರಾದ ಚಿನ್ನು, ಮತ್ತವಳ ಎಳೇ ಮಗಳು ಗೌರಿ, ಶ್ವೇತಳ ಗರ್ಬಿಣಿ ತಂಗಿ, ಎಲ್ಲ ನೆಮ್ಮದಿಯ ನಿದ್ರೆಯಲ್ಲಿ ತೊಡಗಿರುತ್ತಾರೆ. ನಾನೂಕೂಡಾ ಯಾವುದೋ ಸಾವಿರಾರು ಮೈಲಿ ದೂರದೂರಿನ ಹೋಟೆಲಲ್ಲಿ ಮಲಗುವ ಮುನ್ನ ರಾತ್ರಿ ಹಗಲು ಬರೀ ಫೋನಿನಲ್ಲಿ ಕ್ಷೇಮ ಸಮಾಚಾರ ವಿಚಾರಿಸುವ ಮಗನಾಗಿ, ಗಂಡನಾಗಿ, ಅಪ್ಪನಾಗಿ ಮತ್ತು ಮನೆಯ ಎಲ್ಲಾ ಜವಾಬ್ದಾರಿಗೂ ಜವಾಬುದಾರನಾದವನೂ ಕೂಡ ಇವನ ಇರುವಿಕೆಯಿಂದ ನಿಮ್ಮದಿಯ ನಿದ್ರೆಗೆ ಜಾರುತ್ತೇನೆ.

ಬೆಳಗೆದ್ದು ಯಾರಾದರೂ ನಮ್ಮ ಮನೆಯ ಗೇಟ್ ತೆರೆಯುವಂತಿಲ್ಲ. ಎಲ್ಲಿದ್ದರೂ ಇವನು ಹಾಜರ್. ಇವನು ಗೇಟಿನ ಬಳಿಗೆ ಓಡಿಹೋಗಿ ಅವರೇನಾದರೂ ಅಪರಿಚಿತರಾದರೆ ಒಳಕ್ಕೆ ಕಾಲಿಡಲು ಬಿಡೋಲ್ಲ. ಇವನ ಆರ್ಭಟ ಕೇಳಿ ಮನೆಯೊಳಗಿದ್ದವರೊಬ್ಬರು ಯಾರಾದರೂ ಬಂದು ನೋಡಿ, ಅವರ ಗುರ್ತು ಪರಿಚಯ ಹೇಳಿದ ಮೇಲೆಯೇ ಇವನು ಸುಮ್ಮನಾಗೋದು. ನಮ್ಮ ತೋಟದೊಳಕ್ಕೆ ಮತ್ತೆ ಬೇರೆ ಯಾವುದೇ ನಾಯಿಯನ್ನೂ ಸೇರಿಸದವನು ನಮ್ಮ ಮನೆಯ ಪಕ್ಕದಲ್ಲಿರುವ ಕುಂಬಾರರ ಮನೆಯ ಇವನದೇ ವಯಸ್ಸಿನ “ಕೆಂಚ”ನನ್ನ ಮಾತ್ರ ಜೀವದ ಗೆಳೆಯನನ್ನಾಗಿಸಿಕೊಂಡಿದ್ದಾನೆ.

ಅದ್ಯಾವ ಮಾಯದಲ್ಲಿ ಇವರಿಬ್ಬರೂ ಗೆಳೆಯರಾದರೋ ಗೊತ್ತಿಲ್ಲ. ಅಂತೂ ಈ ಕೆಂಚನಿಗೆ ಮಾತ್ರ ವಿಶೇಷ ರಿಯಾಯಿತಿ ಇವನ ಬಳಿಯಲ್ಲಿ. ಅವನು ನಮ್ಮ ತೋಟದಲ್ಲಿ ವಿಹರಿಸ ಬಹುದು, ಇವನೊಂದಿಗೆ ಆಟವಾಡಬಹುದು ಏನೆಲ್ಲಾ ಅವನಿಗೆ ಕಟ್ಟು ಕಟ್ಟಳೆಗಳ ಸಡಿಲಿಕೆ. ನಾವೂ ಅದನ್ನು ಒಪ್ಪಿಕೊಂಡಿದ್ದೇವೆ. ಇಬ್ಬರೂ ನಮ್ಮ ತೋಟದಲ್ಲಿ ಸುತ್ತುತ್ತಾರೆ,ಜೂಟಾಟವಾಡುತ್ತಾರೆ, ಒಮ್ಮಿಂದೊಮ್ಮೆಗೇ ಫೈಟೋ ಫೈಟು, ನೋಡಿದವರು ಇಬ್ಬರಲ್ಲಿ ಒಬ್ಬರನ್ನು ಕಚ್ಚಿ, ಅಗಿದು ತಿಂದು ಬಿಡುತ್ತಾರೇನೋ ಎಂಬಂತೆ. ಫೈಟು ಮುಗಿದ ಮೇಲೆ ಮತ್ತೆ ಹೆಗಲ ಮೇಲೆ ಕೈಯಾಕಿಕೊಂಡು ಬರೋ ಗೆಳೆಯರಂತೆ ಒಟ್ಟಿಗೆ ಘನ ಘಂಬೀರ ನಡೆಯಲ್ಲಿ ಮನೆಕಡೆ ನಡೆದು ಬರುತ್ತಾರೆ ಜೊತೆ ಜೊತೆಯಲೀ.

ಅದೇ ಬೇರೆ ನಾಯಿಗಳೇನಾದರೂ ನಮ್ಮ ಮನೆಕಡೆ ತಿರುಗಿ ನೋಡಿದರೂ ಸಾಕು ಯಾಕೆ ? ಯಂಗೈತೆ ಮೈಗೆ? ಸುಮ್ಮನೆ ರೋಡಲ್ಲಿ ತಿರುಗಿ ನೋಡದಂಗೆ ಹೋಗೋಕಾಗಲ್ವಾ? ಎಂಬಂತೆ ಗುರಾಯಿಸುತ್ತಾ ಬೊಗಳತೊಡಗುತ್ತಾನೆ. ಸ್ವಲ್ಪ ಬೆಳೆದ ನಾಯಿಗಳಾದರೆ ಮಲಗಿದ್ದಲ್ಲಿಯೇ ಗುರುಗುಟ್ಟುತ್ತಾ ಇದ್ದವನು ಅವನ ಸಮಾನರು ಅಥವಾ ಚಿಕ್ಕವರು ಕಂಡರೆ ಚಂಗನೆ ಎಗರಿ ಗೇಟಿನ ಬಳಿಯಲ್ಲಿರುತ್ತಾನೆ. ಬಿಟ್ಟರೆ ಅವರನ್ನು ಬಗೆದು ತಿಂದು ಬಿಡುವವನಂತೆ ಅಬ್ಬರಿಸಿ ಬೊಬ್ಬಿರಿಯುತ್ತಾನೆ. ಹಾಗಾಗಿ ಇವನ ಸಹವಾಸ ಬೇಡವೇ ಬೇಡವೆಂಬಂತೆ ನಮ್ಮೂರಿನ ಬಹಳಷ್ಟು ನಾಯಿ ಭಾಂದವರು ನಮ್ಮ ಮನೆ ಕಡೆ ತಿರುಗಿಯೂ ನೋಡದಂತೆ ಓಡಾಡುತ್ತಾರೆ.

ಇವನಿಗೆ ನಮ್ಮ ಮನೆಯ ಎಲ್ಲ ಕೆಲಸಗಳ ಟೈಮ್ ಟೇಬಲ್ ಗೊತ್ತುಂಟು. ಮಕ್ಕಳು ಏಳುವುದು ಲೇಟಾದರೇ ಇವನೇ ಕೂಗತೊಡಗುತ್ತಾನೆ. ಬೇಗ ಬಂದು ನನ್ನ ಈಚೆ ಬಿಡ್ರೋ ನನಗೆ ತಡೆಯೋಕಾಗ್ತಿಲ್ಲಾ, ಮತ್ತೆ ಲೇಟಾದರೇ ನೀವೇ ಬಾಚಿ ಹೊರಗಾಕ ಬೇಕಾಗುತ್ತೆ ಎನ್ನೋ ವಾರ್ನಿಂಗನ್ನೂ ಆ ಕೂಗಾಟದಲ್ಲಿ ರವಾನಿಸಿ ಬಿಡುತ್ತಾನೆ. ಇವರು ಏಳಲು ನಿಧಾನಿಸಿದರೆ ನಮ್ಮಮ್ಮ ಇಲ್ಲವಾದರೆ ಇವಳು ಇಬ್ಬರಲ್ಲಿ ಒಬ್ಬರು ಅವನ ಮನೆಯ ಗೂಡಿನ ಮುಂದೆ ಓಡಿರುತ್ತಾರೆ. ಚಿನ್ನು ಎಂಬ ಹಸುವಿನ ಹಾಲು ಕರೆಯಲು ಇವಳು ಹೊರಟರೆ ಅವಳ ಆ ದೊಡ್ಡ ಬಕೀಟಿನ ಸಪ್ಪಳಕ್ಕೇ ಇವನು ಕುಯ್ ಗುಡತೊಡಗುತ್ತಾನೆ. ತನ್ನ ಪಾಲಿನ ಹಾಲು ಇನ್ನು ಕೆಲವೇ ನಿಮಿಷಗಳಲ್ಲಿ ಅವನ ಬೌಲಿಗೆ ಬೀಳಲಿದೆ ಎಂಬ ನಂಬಿಕೆಯಿಂದ. ಅದರಲ್ಲಿ ಸ್ವಲ್ಪ ಲೇಟಾದರೂ ಇವನ ಆರ್ಭಟ ನೋಡಬೇಕು. ಇವಳಿಗಂತೂ ಅವನನ್ನು ಮಾತಲ್ಲೇ ಸಮಾಧಾನಿಸಲು ಸುಸ್ತು ಹೊಡೆಯುತ್ತದೆ.

ಇದೇ ಚಿನ್ನುವನ್ನು ಕೊಟ್ಟಿಗೆಯಿಂದ ಬಿಚ್ಚಿಬಿಡುವ ಮುನ್ನ ಇವಳು ಕೊಟ್ಟಿಗೆಯ ಬೀಗ ತೆಗೆಯುತ್ತಿದ್ದಂತೆಯೇ ಅವಳ ಬಳಿ ಸಾರುವ ಇವನು ಅವಳನ್ನೂ ಬೇಗ ಮೇಲಕ್ಕೇಳೇ ಗೂಬೆ ಎಂದು ಅವಸರಿಸುತ್ತಾನೆ. ಅವನಿಗೆ ಅವಳ ಮೊಲೆಹಾಲು ಬೇಗ ಬೇಕಲ್ಲಾ ಅದಕ್ಕೆ. ಮದ್ಯಾಹ್ನ ಮಲಗಿದ್ದ ಅವಳ ಬಳಿಹೋಗುವ ಇವನು ಅವಳ ಮೈಮೇಲೆಲ್ಲಾ ಹತ್ತಿ ತುಳಿದು ಕಿವಿ ಜಗ್ಗಿ, ಅವಳ ತಂಪಾದ ತುಟಿಗಳಿಗೆಲ್ಲಾ ಮುತ್ತಿಕ್ಕಿ ಮೂಸಿರಿದು ಪೂಸೀ ಮಾಡೋದು ನೋಡೋಕೆ ಎರಡು ಕಣ್ಣು ಸಾಲದು.

ಮಕ್ಕಳಿಗೆ ಶಾಲೆಗೆ ಹೋಗಲು ತಿಂಡಿ ರೆಡಿಯಾದ ಸಮಯ, ಅವರಿಗೆ ಬಡಿಸಲು ಇವಳು ತಟ್ಟೆಗಳ ಶಭ್ದ ಮಾಡುವಂತಿಲ್ಲಾ. ಇವನಾಗಲೇ ಕೂಗಲು ಶುರುವಿಡುತ್ತಾನೆ, ನನ್ನನ್ನು ಮರೆತೆಯಾ ಮಮ್ಮೀ ಎಂಬಂತೆ. “ಚೆರಿಯಾ ತಡಿಯೋ ಬಂದೇ, ನಿನಗೂ ತಂದೇ ಬಿಟ್ಟೆ, ಸ್ವಲ್ಪ ಬಿಸಿಯಾರಲೀ ಅಂತಾ ಕಾಯ್ತಿದ್ದೀನಿ ಅಷ್ಟೇ” ಎಂದು ಸಮಜಾಯಿಷಿ ಕೊಡಬೇಕಿವಳು. ಅದಕ್ಕಾಗೇ ಅವಳು ಮೊದಲು ಮಾಡಿದ ರೊಟ್ಟಿಯನ್ನೋ ಮತ್ತೇನನ್ನೋ, ಮೊದಲೇ ಬಿಸಿಯಾರಲು ಇಡುತ್ತಾಳೆ, ಅವಳ ಈ ಮೂರನೇ ಮಗನ ಕಾಟ ಸಹಿಸಲಾರದೇ. ಮನೆಯ ಯಾರಾದರೂ ಒಬ್ಬರು ಅವನ ಪಾಲಿನ ತಿಂಡಿಯನ್ನು ಅವನನ್ನೂ ನಮ್ಮೊಟ್ಟಿಗೆ ಸೇರಿಸಿಕೊಂಡು ನಾವೆಲ್ಲರೂ ತಿನ್ನುವಾಗ ಅವನಿಗೆ ಬಡಿಸುವುದು ರೂಡಿಯಾಗಿದೆ.
ಬರೀ ಊಟತಿಂಡಿಯ ಬಡಿಸುವಿಕೆಗಷ್ಟೇ ಇವನ ತಕರಾರಿಲ್ಲಾ. ಇವಳು ಮನೆ ಬಿಟ್ಟು ಮನೆಯ ಹಿಂದೆ ಅಥವಾ ಮುಂದಿನ ತೋಟಕ್ಕೆ, ಮಕ್ಕಳನ್ನು ಶಾಲೆಗೆ ಬಿಡಲು ಹೊರಟರೆ, ಯಾವ ಕೆಲಸಕ್ಕಾದರೂ ಹೊರಗೆ ಹೊರಟರೆ ಸಾಕು ಇವನ ಗೋಳಾಟ ನೋಡೋಕಾಗೊಲ್ಲಾ. ನನ್ನನ್ನು ಯಾಕೆ ಬಿಟ್ಟು ಹೋಗ್ತೀಯಾ? ನನ್ನನ್ನೂ ಕರೆದುಕೊಂಡು ಹೋಗು ಎಂಬಂತೆ ಗದ್ದಲವೆಬ್ಬರಿಸುತ್ತಾನೆ. ಇವಳು ಮನೆಯ ಹಿಂದಿನ ತೋಟವೊಂದಕ್ಕೆ ಮಾತ್ರಾ ಇವನನ್ನು ಕರೆದುಕೊಂಡು ಹೋಗಲು ನಾವೆಲ್ಲ ಒಪ್ಪಿದ್ದೇವೆ. ಇವನು ನಮ್ಮ ಕೊಟ್ಟಿಗೆಮನೆಯ ಇತರೇ ಸದಸ್ಯರು ಮೇಯಲು ಹೋಗಿದ್ದವರು ಎಲ್ಲಾದರೂ ಮೇಯುತ್ತಾ ಮುಂದೆ ಬಂದು ಮನೆಯ ಮುಂಬಾಗಿಲಿನ ತೆರೆದ ಗೇಟನ್ನು ದಾಟಲು ಹೊರಟರೆ ಅವರ ಹಗ್ಗ ಹಿಡಿದು ಜಗ್ಗಿ ಜಗ್ಗಿ ಎಳೆದು ತರಲು ಪ್ರಯತ್ನಿಸುತ್ತಾನೆ. ಪಾಪ ಇವನು ಅವರ ಮುಂದೆ ಎಷ್ಟರವನು? ಇವನ ಕೈಲಾಗೊಲ್ಲಾ, ಹಾಗಾಗಿ ಕೂಗಿ ಕೂಗಿ ಇವಳಿಗೆ ಎಚ್ಚರಿಕೆ ಕೊಡುತ್ತಾನೆ. ಇಲ್ಲಾ ಅಂದ್ರೆ ಇವರನ್ನ ಎಲ್ಲೆಲ್ಲೋ ಹುಡುಕಬೇಕಾಗಬಹುದು, ಬೇಗ ಬಂದು ಹಿಡಿಯಿರಿ ಎಂಬಂತೆ.

ಇವನನ್ನು ನಾವೆಲ್ಲಾ ಬರೀ ನಮ್ಮ ಮನೆಯ ಹಿಂದಿನ ತೋಟಕ್ಕೆ ಮಾತ್ರವೇ ಸೀಮಿತಗೊಳಿಸಿರುವುದರಲ್ಲಿ ನಮ್ಮ ತೋಟದಲ್ಲಿ ನಾವು ಕಳೆದುಕೊಂಡ ಅನೇಕ ನಾಯಿ ಮಕ್ಕಳ ಕಥೆಗಳಿವೆ. ಮುಂದೆ ವಿವರವಾಗಿ ಬರೆಯಬೇಕಿದೆ. ಅವರೆಲ್ಲಾ ಮಾಡಿದ ಒಂದೇ ಒಂದು ಮಾರಣಾಂತಿಕ ತಪ್ಪೆಂದರೆ ನಮ್ಮ ಮನೆಯ ಮುಂದೆ ಮತ್ತು ನಮ್ಮ ತೋಟಗಳೆರಡರ ಮದ್ಯೆ ಹಾದು ಹೋಗುವ ರಾಜ್ಯ ಹೆದ್ದಾರಿಯನ್ನು ದಾಟಿ ಎದುರಿನ ತೋಟಕ್ಕೆ ಹೋಗಲು ಪ್ರಯತ್ನಿಸಿದ್ದು. ಈ ಸಣ್ಣ ತಪ್ಪಿಗೆ ಅವರುಗಳು ಅವರ ಪ್ರಾಣವನ್ನೇ ಕಳೆದುಕೊಳ್ಳಬೇಕಾಯ್ತು. ಅವರ ಮೇಲೆ ಹರಿದ ಬಸ್ಸು ಕಾರುಗಳ ಬಾರಕ್ಕೆ ನಮ್ಮ ತೋಟದ ಮರಗಳ ಬುಡದಲ್ಲಿ ತೆಗೆದ ಗುಂಡಿಗಳಲ್ಲಿ ಮಲಗ ಬೇಕಾಯ್ತು. ಹಾಗಾಗಿ ನಾವು ಇವನನ್ನು ನಮ್ಮ ಮನೆಯೆದುರಿನ ತೋಟಗಳ ಪರಿಚಯವನ್ನೇ ಮಾಡಿಸಿಲ್ಲಾ. ಇವನ ಪೂರ್ಣಾಯಸ್ಸುಇರುವವರೆಗೆ ಇವನನ್ನಾದರೂ ಉಳಿಸಿಕೊಳ್ಳೋಣವೆಂದು.

ಇವನಿಗೆ ನಮ್ಮ ಮನೆಗೆ ಬರುವ ಜನರ ಮೇಲ್ಮುಖದಲ್ಲಿ ತೋರಿಸುವ ಭಾವನೆಗಳಿಗಿಂತಾ, ಅವರೊಳಗಿನ ನಿಜದ ಭಾವನೆಗಳೂ ಗೋಚರವಾಗುತ್ತವೇನೋ! ಎಂಬಂತೆ ವರ್ತಿಸುವುದು ವಿಚಿತ್ರವಾದರೂ ಸತ್ಯವೆನಿಸುತ್ತೆ. ಅವರಲ್ಲಿ ಕೆಲವರು ನಗು ನಗುತ್ತಲೇ ಮನೆಯೊಳಗೆ ಬಂದರೂ ಮನಸ್ಸಿನೊಳಗೆ ಮುಚ್ಚಿಟ್ಟ ಅವರ ಸತ್ಯವನ್ನ ಅದ್ಹೇಗೋ ಗೊತ್ತುಮಾಡಿಕೊಳ್ಳುವ ಇವನು ಅವರು ಹೋಗುವವರೆಗೂ ಗುರುಗುಟ್ಟುತ್ತಲೇ ಇರುತ್ತಾನೆ. ಅದೇ ಕೆಲವರು ಅಪರಿಚಿತರು ಬಂದರೂ ಅವರ ಮನಸ್ಸನ್ನೋದಿ ಅವರು ಓಕೆ ಎನ್ನಿಸಿದ್ದರೆ ಅವರಿಗೆ ಗುರಾಯಿಸುವುದೇ ಇಲ್ಲಾ ಇವನು. ಅಷ್ಟು ಮನೋ ವೈಜ್ಙಾನಿಕ ಪರಿಣತನೆಂಬಂತೆ ಕೆಲವೊಮ್ಮೆ ತೋರಿಸಿಕೊಳ್ಳುವ ಇವನು ನಮಗೆ ಅಚ್ಚರಿಗಳ ಗೂಡು.

ಮಕ್ಕಳು ಇದ್ದಾಗ ಅವರ ತೋಳುಗಳಲ್ಲಿ, ಚಕ್ಕಳಮಕ್ಕಳ ಹಾಕಿ ಕುಳಿತಾಗ ಅವರ ತೊಡೆಗಳೇ ಇವನ ಸಿಂಹಾಸನವು. ಅವರೆಲ್ಲ ಆಟಗಳಲ್ಲಿ ಇವನು ಭಾಗೀದಾರನು. ಇವನಿಲ್ಲದ ಅವರಾಟ ಏನೂ ನಡೆಯದು. ಅವರು ಮಾಡಿ ಬಿಟ್ಟ ಮರಳ ಗುಡ್ಡೆಯ ದೇವಸ್ಥಾನಕ್ಕೆ ಹಿಂದಿನಿಂದಾ ಹೋಗಿ, ಕಾಲೆತ್ತಿ ಹುಚ್ಚೆ ಹುಯ್ದು ಅವರ ಕೈಗೆ ಸಿಗದಂತೆ ತೋಟದ ತುಂಬೆಲ್ಲಾ ರನ್ನಿಂಗ್ರೇಸ್ ಮಾಡೋದು ಮಾಮೂಲು. ಅವರು ಕಟ್ಟಿದ ಮರಳ ಸೇತುವೆ ಮತ್ತು ಅದರಡಿಯ ಸುರಂಗಗಳ ನೋಡಿ ಇವನು ಕಾಲಲ್ಲಿ ಕೆರೆದು ಸೇತುವೆ ಕೆಡವಿ ಅವರ ಕೋಪಕ್ಕೆ ಗುರಿಯಾಗುವುದು ಇವನಿಗೆ ತುಂಬಾ ಇಷ್ಟ. ಆಟವಾಡಲು ಇವರಿದ್ದಾಗೇನೋ ಜೊತೆ ಸಿಗುತ್ತೆ. ಅವರು ಶಾಲೆಗೆ ಹೋದರೆ ಅವರು ಮಾಡಿ ಬಿಟ್ಟಿರೋ ಮರಳಿನ, ಕಲ್ಲಿನ, ಇಟ್ಟಿಗೆಯ ಅನೇಕ ಕಟ್ಟಡಗಳು ಸಿಗುತ್ತಲ್ಲಾ ಅವನ್ನೆಲ್ಲಾ ಬೀಳಿಸಿ, ಕೆರೆದು ಕುಲಗೆಡಿಸಿಬಿಡೋದು ಇವನಿಗೆ ಅವರ ಇಲ್ಲದಿರುವಿಕೆಯ ಸಹಿಸಲಾರದ ಪ್ರತಿಕ್ರಿಯೆ. ಅವರು ಅಲ್ಲಲ್ಲೆ ಚೆಲ್ಲಾಡಿ ಬಿಟ್ಟೊಗಿರೋ ಬಾಲುಗಳನ್ನ ಇವನೇ ತೆಗೆದುಕೊಂಡು ಕಾಲಲ್ಲಿ ಒದೆಯೋದೂ, ಮತ್ತೆ ಇವನೇ ಓಡಿಹೋಗಿ ಬಾಯಲ್ಲಿ ತರೋದು ಮಾಡುತ್ತಿರುತ್ತಾನೆ. ಒಮ್ಮೊಮ್ಮೆ ಬಾಲು ಮೇಲೆ ಚಿಮ್ಮಿದರೆ ಇವನೂ ಅದರ ಹಿಂದೆಯೇ ಹನುಮಂತನಂತೆ ಹಾರಿ ಅದನ್ನು ಗಾಳಿಯಲ್ಲೇ ಹಿಡಿಯೋದು ನೋಡೋಕೆ ಚೆನ್ನ.

ಇವನೊಬ್ಬ ಸೆಕ್ಯೂರಿಟೀ ಗಾರ್ಡ್ ಇದ್ದಂತೆ ಇವಳಿಗೆ. ಅವಳ ಚಲನ ವಲನದ ಮೇಲೆ ಸಂಪೂರ್ಣ ನಿಗಾವಹಿಸೋ ಇವನು ಅವಳನ್ನು ಒಬ್ಬಂಟಿಯಾಗಿರೋಕೆ ಬಿಡೋದೇ ಇಲ್ಲಾ. ಅವಳು ಮನೆಯ ಹಿಂದೆ ಹೋದರೆ ಅವಳಿಗಿನ್ನ ಮುಂಚೆಯೇ ಎಸ್ಕಾರ್ಟ್ ಸರ್ವಿಸ್ ಥರಾ ಓಡಿಹೋಗಿ ಅಲ್ಲೇನೂ ಯಾವ ಪ್ರಾಣಿ ಪಕ್ಷಿಗಳೂ, ಹಾವುಗಳೂ ಇಲ್ಲವೆಂಬುದ ಖಚಿತಪಡಿಸಿಕೊಂಡಿರುತ್ತಾನೆ. ಹಾಗೇನಾದರೂ ಇದ್ದರೆ ಮೊದಲೇ ಬೊಗಳುತ್ತಾ ಎಚ್ಚರಿಸುತ್ತಾನೆ. ಇವಳಿಗೆ ಅದೆಲ್ಲಾ ಅತೀ ಮುಖ್ಯ. ನಮ್ಮೂರಿನ ಸುತ್ತಮುತ್ತ ಎಷ್ಟೋ ಜನ ಬೆಳಗೆದ್ದು ತೋಟಕ್ಕೆ ಹೋದವರು ಮನೆಗೆ ಮರಳಿಯೇ ಇಲ್ಲ. ಆನೆ ತುಳಿತಕ್ಕೋ, ಹಾವಿನ ಕಡಿತಕ್ಕೋ, ಕರಡಿಗಳ,ಚಿರತೆಗಳ,ದಾಳಿಗೋ ಒಳಪಟ್ಟು ಮೃತಪಟ್ಟ ನೆನಪುಗಳು, ಇವನು ಅವಳಿಗೆ ಅದೆಷ್ಟು ಮುಖ್ಯವೆಂಬುದ ಸಾರಿ ಹೇಳುತ್ತಾನೆ.

ಇವಳು ಮನೆಯ ಒಳಗೆ ಮಾಡಿದ ಹಪ್ಪಳ, ಸಂಡಿಗೆ ಮುಂತಾದವನ್ನ ಮನೆಯ ಮುಂದೆ ಬಿಸಿಲಿಗೆ ಒಣಗಲು ಇಟ್ಟರೆ ಇವನೇ ಅವುಗಳಿಗೆ ಕಾವಲುಗಾರ. ಅದೇನು ನೋಡೋಣವೆಂದು ಮೇಲಿಂದ ಹಾರಿಬಂದ ಕಾಗೆ, ಗುಬ್ಬಿ, ಕಾಜಾಣಗಳನ್ನು, ನೆರಳಲ್ಲಿ ಕಾಯುತ್ತಾ ಮಲಗಿದ್ದ ಇವನು ಅವುಗಳನ್ನು ಮುಟ್ಟುವುದಿರಲೀ ಹತ್ತಿರ ಬರಲೂ ಬಿಡಲೊಲ್ಲ. ಜೋರಾಗಿ ಅಬ್ಬರಿಸುತ್ತಾ ಗಾಳಿಯಲ್ಲೇ ಡೈವ್ ಹೊಡೆಯುತ್ತಾ ಅವರನ್ನು ರೆಕ್ಕೆಯಿದ್ದಿದ್ದರೆ ಹಿಡಿದೇ ಬಿಡುತ್ತಿದ್ದನೇನೋ ಎಂಬಂತೆ ಹಾರಿ ಹಾರಿ ನೆಲಕ್ಕೆ ಬೀಳೋದು ನೋಡೋದು ಅವಳಿಗೆ ತುಂಬಾ ಇಷ್ಟ. ನಮ್ಮ ತೋಟದ ಮನೆಯ ಪರಿಧಿಯನ್ನು ಒಟ್ಟು ಒಂದು ಅಘೋಷಿತ ನಿರ್ಭಂದಿತ ಪ್ರದೇಶವನ್ನಾಗಿ ಮಾರ್ಡಡಿಸಿ ಯಾವ ಮಾನವಜನ್ಮ, ಪ್ರಾಣಿ ಜನ್ಮವೂ, ಪಕ್ಷಿ ಜನ್ಮವೂ ಸುಳಿಯದಂತೆ ಮಾಡಿರುವ ಇವನು ನಮ್ಮ ಮನೆಯನ್ನು ಯಾವುದೇ ಹೈ ಅಲೆರ್ಟ್ ಜೋನ್ ಗಿಂತಾ ಕಡಿಮೆಯಿಲ್ಲದಂತೆ ಮಾಡಿ ಬಿಸಾಕಿದ್ದಾನೆ.

???????????????????????????????

ಮನೆಗೆ ಬಂದಿಳಿದ ಮನದಾಳದ “ಗೌರಿ”


ಆಂತೂ ಇಂತೂ ಗೌರಿ ಮನೆಗೆ ಬಂದಳು….

ಮಡದಿ ದಿನದ ವಾರ್ತೆ ಒಪ್ಪಿಸುತ್ತಿದ್ದಳು. ಮಕ್ಕಳದ್ದು ಮುಗಿದಿತ್ತು. ತೋಟದ್ದೂ ಮುಗಿದಿತ್ತು. ಅಮ್ಮನ ಆರೋಗ್ಯ, ಅವರು ಮೊನ್ನೆ ಹಿರಿಯ ನಾಗರೀಕರ ಆಟೋಟಗಳಲ್ಲಿ, ಮೂರ್ನಾಲ್ಕು ಪ್ರಶಸ್ತಿ ಪಡೆದಿದ್ದು, ಅವರ ಸಂದರ್ಶನ ಪ್ರಜಾವಾಣಿಯಲ್ಲಿ ಬಂದಿದ್ದು, ಎಲ್ಲಾ ಕೇಳಿಯಾಗಿತ್ತು. ನಮ್ಮ ಮೇಕೆ ಮರಿ ಸಿರಿ ಬೆಳೆದು ನಿಂತು ಅವಳಿಗೊಬ್ಬ ಜೊತೆಗಾರನ ಹುಡುಕಾಟ ಮುಂದುವರಿದದ್ದು ಎಲ್ಲ ವರದಿಯಾಗಿತ್ತು. ಕೊನೆಯಲ್ಲಿ ಅವಳು ಹೇಳಲು ಬಾಕಿಯಿದ್ದಿದ್ದು ಒಂದು ಮಾತ್ರ ಬಾಕಿಯಿತ್ತು. ನಾನೇ ತಡೆಯಲಾರದೆ ಕೇಳಿದೆ. “ಚಿನ್ನು ಹೇಗಿದ್ದಾಳೆ? ಮತ್ತೆ ಡಾಕ್ಟರ್ ಯಾವ ದಿನ ಹೇಳಿದ್ದಾರೆ” ಅಂದೆ.

ಒಂದು ಗಳಿಗೆ ಮೌನ. “ಬಾಬು ನಿನಗೆ ಹೇಗೆ ಹೇಳೋದು ಅಂತಾನೇ ಗೊತ್ತಾಗ್ತಾ ಇಲ್ಲಾ” ಅಂದ ಅವಳ ಮಾತು ಕೇಳಿ ನನ್ನ ಕಾಲು ಕುಸಿಯಲಾರಂಭಿಸಿತು. ನನಗೂ ಅವಳು ಏನು ಹೇಳಲಿರುವಳೋ ಅದನ್ನು ಕೇಳಲು ಇಷ್ಟವಿಲ್ಲದವನಂತೆ ಮೌನಿಯಾದೆ. ಇದನ್ನೂ ಊಹಿಸಿದ್ದ ಅವಳು “ಹಾಗೇನಿಲ್ಲಾ, She is alright now” ಅಂದದ್ದು ಕೇಳಿದ ಮೆಲೆ ನನಗೆ ನಿಂತಿದ್ದ ಉಸಿರಾಟ ಸರಾಗವಾಗಿತು. ನನ್ನ ಧಾವಂತ ತಡೆಯಲಾರದೇ ಒಮ್ಮೆಗೇ ಹೇಳಿದೆ. ಅದೇನಾಯಿತು ನೇರವಾಗಿ ಹೇಳೆಂದೆ. ಸುಧಾರಿಸಿಕೊಂಡ ಅವಳು “ಚಿನ್ನು ಬದುಕಿದ್ದೇ ಹೆಚ್ಚು” ಅಂದದ್ದು ಕೇಳಿ ಮತ್ತೆ ತಲೆ ಸುತ್ತಲಾರಂಭಿಸಿತು.

******

ಈಗ ಚಿನ್ನು ತುಂಬು ಗರ್ಭಿಣಿ ಮತ್ತು ದ್ಯೈತ್ಯೆ. ಅವಳು ಈ ದಿನಗಳಲ್ಲಿ ನಮ್ಮ ತೋಟದಲ್ಲಿ ತುಂಬ ದೂರ ನಡೆಯೋದು ಕಷ್ಟವಾಗುತ್ತೆ ಅಂತ ಅವಳನ್ನು ಮನೆಯ ಹಿಂದಿನ ತೋಟದಲ್ಲೇ ಮೇಯಲು ಬಿಡುತ್ತಿದ್ದಳು ಮಡದಿ. ಅಂದು ತಿಪಟೂರಿನಲ್ಲಿ ನಮ್ಮ ಮನೆಯ ಎಲ್ಲ ಸದಸ್ಯರ ಎಲ್.ಐ.ಸಿ ಪಾಲಿಸಿ ತುಂಬಿಸಿ ಬರಲು ಮಧ್ಯಾಹ್ನ ಚಿನ್ನುಳನ್ನು ಮೇಯಲು ನೆರಳಲ್ಲಿ ಮರಕ್ಕೆ ಹಗ್ಗದಿಂದ ಕಟ್ಟಿ ಹೊರಟು ಹೋಗಿದ್ದಾಳೆ. ಅಲ್ಲಿಯ ಎಲ್ಲಾ ಕೆಲಸಗಳನ್ನು ಆದಷ್ಟೂ ಬೇಗ ಮುಗಿಸಿ ಬಂದ ಅವಳು ತಕ್ಷಣ ಮನೆಯ ಹಿಂದಿನ ತೋಟಕ್ಕೆ ಓಡಿದ್ದಾಳೆ. ಅಷ್ಟರಲ್ಲಾಗಲೇ ನಮ್ಮ ಪಕ್ಕದ ತೋಟದ ಹುಡುಗರು, ಸುತ್ತಮುತ್ತಲಿನ ಮನೆಯ ಹೆಂಗಸರೆಲ್ಲಾ ನಮ್ಮ ತೋಟದೊಳಗೆ ಗುಂಪು ಸೇರಿದ್ದನ್ನು ನೋಡಿ ಬೆಚ್ಚಿದ್ದಾಳೆ.
ಚಿನ್ನುಗಾಗಿ ಅವಳ ಕಣ್ಣುಗಳು ಹುಡುಕಿವೆ. ದೂರದಲ್ಲಿ ನೆರಳಲ್ಲಿ ನಿಂತು ಸುಧಾರಿಸಿಕೊಳ್ಳುತ್ತಿದ್ದ ಅವಳನ್ನು ನೋಡಿ ಸಮಾಧಾನಗೊಂಡ ಅವಳು ಜನರ ಬಳಿಸಾರಿದಾಗ ಅವರು ಹೇಳಿದ ಮಾತು ಕೇಳಿ ನೆಲಕ್ಕೆ ಕುಸಿದಿದ್ದಾಳೆ. ಅವರು ಅವಳನ್ನು ಸಮಾಧಾನ ಮಾಡಿ ಏನೂ ಆಗುವುದಿಲ್ಲ ಸುಮ್ಮನಿರು ದೇವರಿದ್ದಾನೆ ಅಂಥ ಹೇಳಿ ಸಂತೈಸಿದ್ದಾರೆ.

*****
ಈ ಚಿನ್ನು ಸಣ್ಣ ಹುಡುಗಿಯಿಂದಲೂ ತುಂಬು ಪ್ರಿತಿಯಿಂದ ಬೆಳೆದವಳು. ಅವಳಿಗೆ ಹಗ್ಗ ಕಟ್ಟಿ ಮೇಯಿಸಿದ್ದೇ ಇಲ್ಲ ಅವಳ ತವರು ಮನೆಯಲ್ಲಿ. ಅವರ ಮನೆಯಿಂದ ಬಂದ ಮೇಲೆ ನಮ್ಮ ಮನೆಯಲ್ಲೂ ಅವಳನ್ನು ಕಟ್ಟಿ ಮೇಯಿಸಿದ್ದೇ ಇಲ್ಲಾ. ವಿಶಾಲ ತೋಟದಲ್ಲಿ ಸುತ್ತಾಡುತ್ತಾ ಅವಳಿಗೆ ಇಷ್ಟ ಬಂದ ಮೇವು ಮೇಯಲು ಬಿಟ್ಟಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ಅವಳು ಅಷ್ಟು ಸುತ್ತಾಡಿ ಸುಸ್ತು ಮಾಡಿಕೊಳ್ಳದಿರಲೀ ಎಂಬ ಒಂದೇ ಉದ್ದೇಷಕ್ಕೆ ಮಡದಿ ಅವಳನ್ನು ಉದ್ದದ ಹಗ್ಗಕ್ಕೆ ಕಟ್ಟಿ ಹೋಗಿದ್ದಾಳೆ. ಹಗ್ಗದೊಂದಿಗೆ ಮೇಯ್ದು ಅಭ್ಯಾಸವಿಲ್ಲದ ಚಿನ್ನು ಮೇಯುತ್ತಾ ಮೇಯುತ್ತಾ ಅದೇ ಹಗ್ಗವನ್ನು ಕೊಂಬು ಮತ್ತು ಕಾಲುಗಳ ನಡುವೆ ಸಿಗಿಸಿಕೊಂಡು ಬಿಟ್ಟಿದ್ದಾಳೆ.

ಬಿಡಿಸಿಕೊಳ್ಳೋ ಆತುರದಲ್ಲಿ ಹಗ್ಗ್ ಮತ್ತಷ್ಟೂ ಅವಳ ಕಾಲುಗಳಿಗೆ ಸುತ್ತಿಕೊಂಡು ಬಿಟ್ಟಿದೆ. ಅವಳ ಮೈ ಬಾರ ತಡೆಯಲಾರದೇ ಅವಳು ನೆಲಕ್ಕೆ ಬಿದ್ದು ಕಾಲು ಜಾಡಿಸುತ್ತಾ ಜೋರು ಶಬ್ಧ ಮಾಡಲತ್ತಿದ್ದಾಳೆ. ಅವಳ ಹೊರಳಾಟ ಹೂಂಕಾರ ಕೇಳಿದ ಪಕ್ಕದ ತೋಟದ ಹುಡುಗರು ನಮ್ಮ ಮುಳ್ಳು ಬೇಲಿ ಹಾರಿ ಒಳಬಂದು ನೋಡುವುದರೊಳಗೆ ಅವಳ ಕುತ್ತಿಗೆಗೂ ಹಗ್ಗ ಸುತ್ತಿ ಚಿನ್ನು ಕೊನೆಯ ಉಸಿರಿನ ಹಂತಕ್ಕೆ ಬಂದಿದ್ದಾಳೆ. ಚಿನ್ನುವಿನ ಅದೃಷ್ಟಕ್ಕೆ ತಕ್ಷಣ ಆ ಹುಡುಗರು ಕೈಲಿದ್ದ ಕುಡುಗೋಲಿಂದ ಅವಳ ಸಾವಾಗಿ ಬಂದಿದ್ದ ಹಗ್ಗಗಳನ್ನು ಕತ್ತರಿಸಿ ಬಿಸಾಡಿದ್ದಾರೆ. ಅಷ್ಟರಲ್ಲಾಗಲೇ ಅವಳ ಹೊಟ್ಟೆ ನೆಲದಲ್ಲಿದ್ದ ದಪ್ಪ ಕಲ್ಲುಗಳಿಗೆ ತಗಲಿ ತೂತೂ ಬಿದ್ದಿದೆ, ತೊಡೆ ಹರಿದಿದೆ. ಹುಡುಗರು ಪಕ್ಕದ ಮನೆಗಳ ಹೆಂಗಸರನ್ನ ಸೇರಿಸಿ ಚಿನ್ನುಳಿಗೆ ನೀರು ಕುಡಿಸಿ, ಅವಳ ಗಾಯಕ್ಕೆ ಹರಿಶಿನದ ಪುಡಿ ಕಟ್ಟಿ, ಸುದಾರಿಸಿದ್ದಾರೆ. ಅಷ್ಟರಲ್ಲಿ ಉಸಿರುಗಟ್ಟಿ ಇವಳೂ ಹೋಗಿದ್ದಾಳೆ.

*******

ಅಂದಿನಿಂದ ಮಡದಿ ಬೆಳಗ್ಗೆ ಎದ್ದರೆ ಸಾಯಂಕಾಲವಾದರೆ ತಪ್ಪದೇ ಮಾಡುವ ಫೋನ್ ಕರೆಗಳಲ್ಲಿ ಚಿನ್ನುವಿನ ಗಾಯದ ಬಗ್ಗೆ, ಅದು ವಾಸಿಯಾಗುತ್ತಿರೋ ಸೂಚನೆಗಳ ಬಗ್ಗೆ ನನಗೆ ಸವಿವರ ವರದಿ ನೀಡತೊಡಗಿದ್ದಳು. ಮದ್ಯೆ ಮದ್ಯೆ ನನ್ನ ಗೆಳೆಯರಾದ ಇಬ್ಬರು ಪಶು ವೈದ್ಯರುಗಳ ಭೆಟಿಯನ್ನೂ ಪೋನಾಯಿಸಿ ಏರ್ಪಡಿಸಿದ್ದೆ. ಊರಲ್ಲಿ ಕೆಲವೇ ಕ್ಷಣಗಳಿಗೆ ಹಬ್ಬಿಬಿಡುವ ಈ ರೀತಿಯ ಸುದ್ದಿಗಳ ಸುಳಿವಿನಿಂದ ನಮ್ಮ ಮನೆಗೆ ಹುಡುಕಿಬಂದ ನಮ್ಮೂರ ಜನರು ನನ್ನ ಮಡದಿಗೆ ತಿಳಿಸಿ ಹೋದ ನಾಟೀ ವೈದ್ಯಗಳನ್ನೂ ಅವಳು ಮಾಡುವುದು ಬಿಟ್ಟಿರಲಿಲ್ಲ. ಅಂತೂ ಇಂತೂ ಎರಡು ವಾರಗಳಲ್ಲಿ ಚಿನ್ನು ಹೊಟ್ಟೆ ಮೇಲೆ ರಕ್ತ ಬರುವಂತ ಗಾಯವಾಗಿದ್ದು, ತೊಡೆಮೇಲೆ ಮಾಂಸ ಕಾಣುವಂತೆ ಕಿತ್ತುಕೊಂಡಿದ್ದ ಗಾಯಗಳೆಲ್ಲಾ ಮಾಯುತ್ತಿರುವ ಸಮಾಧಾನದ ಸುದ್ದಿ ಕೊಟ್ಟಿದ್ದಳು.

ಮಲೆನಾಡಿನಲ್ಲಿ ಬಿಡದೆ ಸುರಿಯುವ ಮಳೆಯಂತೆ ಬರುತ್ತಿದ್ದ ಈ ವರ್ಷದ ಮಳೆಗೆ ಹೆದರಿ ಚಿನ್ನುಳನ್ನು ಅವಳ ಗಾಯ ಮಾಯುವ ಸಲುವಾಗಿ ಕೊಟ್ಟಿಗೆಯಲ್ಲೇ ಕಟ್ಟಿ ನನ್ನ ಮಡದಿ ಆರೈಕೆ ಮಾಡಿ ಅಂತೂ ಕೊನೆಗೆ ಅವಳ ಗುರಿ ಸಾಧಿಸಿದ್ದಳು.ಚಿನ್ನುಳ ಗಾಯ ಮಾದಿದ್ದಕ್ಕೇನೋ ಎಲ್ಲರೂ ತುಂಬಾ ಖುಷಿಗೊಂಡಿದ್ದೆವು. ಆದರೆ ನನ್ನ ಮತ್ತು ಅವಳ ಮನದ ಮೂಲೆಯಲ್ಲೆಲ್ಲೋ ಯಾರಿಗೂ ಹೇಳಿಕೊಂಡಿರದ ಒಂದು ಸಂಕಟ ಗುಂಗೆ ಹುಳುವಿನಂತೆ ಕೊರೆಯುತಲಿತ್ತು.

ಅಂದು ಚಿನ್ನು ಬಿದ್ದು ಹೊರಳಾಡಿದಾಗ ಎಲ್ಲಾದರೂ ಅವಳ ಹೊಟ್ಟೆಯಲ್ಲಿ ಕಣ್ಮುಚ್ಚಿ ಕುಳಿತಿದ್ದ ಅವಳ ಕರುವಿನ ಜೀವವೇನಾದರೂ ಈ ಅಘಾತಕ್ಕೆ ಶಾಶ್ವತವಾಗಿ ಕಣ್ಣು ಮುಚ್ಚಿ ಬಿಟ್ಟಿದ್ದಿದ್ದರೆ? ಎಂಬ ನಮ್ಮಿಬ್ಬರೊಳಗಿನ ಸಂಕಟ ನಮಗೆ ಮಾತ್ರಾ ಗೊತ್ತಿತ್ತು. ಮನೆಯವರಿಗೆ ಹೆಚ್ಚು ತಿಳಿಸದೇ ನನ್ನ ಇಬ್ಬರೂ ಪಶುವೈದ್ಯ ಗೆಳೆಯರಲ್ಲಿ ವಿನಂತಿಸಿಕೊಂಡಿದ್ದೇನೆಂದರೆ ನನಗೆ ಇಬ್ಬರ ಜೀವವೂ ಮುಖ್ಯ. ಇಬ್ಬರನ್ನೂ ಉಳಿಸಿಕೊಡಿ ಅಂತಾ ಬೇಡಿಕೊಂಡಿದ್ದೆ. ಇಬ್ಬರೂ “ಪರವಾಗಿಲ್ಲ, ಆ ರೀತಿಯ ಸೂಚನೆ ಗಳೇನೂ ಕಾಣೂತ್ತಿಲ್ಲಾ, ಇಂಟೆರ್ನಲ್ ಬ್ಲೀಡಿಂಗ್ ಕೂಡಾ ಇಲ್ಲಾ ನಥಿಂಗ್ ಟು ವರೀ” ಎಂದಿದ್ದರು.

*******
ಮಡದಿ ಅವಳ ಆರೈಕೆಯನ್ನು ಚಾಚೂ ತಪ್ಪದೇ ಪಾಲಿಸುತ್ತಾ, ಚಿನ್ನುವಿಗೆ ಯಾವ ಆಹಾರ ಎಷ್ಟು ಕೊಡಬೇಕು, ಯಾವರೀತಿಯ ಹುಲ್ಲು ಕೊಡಬೇಕು ಎಂಬೆಲ್ಲಾ ಕಾಳಜಿ, ಜಾಗರೂಕತೆಗಳೊಂದಿಗೆ ಸಾಕುತ್ತಿರಲು. ಚಿನ್ನುವಿನ ದಿನ ತುಂಬಿ ಬಂದಿತ್ತು. ಅವಳ ನಡೆಯಲ್ಲಿ, ಊಟ ನೀರಡಿಕೆಗಳ ಬಯಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಹತ್ತಿತ್ತು. ನನಗೆ ಮಡದಿ ಇವತ್ತು ಇಲ್ಲಾ ತಪ್ಪಿದರೆ ನಾಳೆ ಚಿನ್ನು ಈಯ್ದುಕೊಳ್ಳಬಹುದು ಎಂದಿದ್ದಳು.

ಅದೇ ಸಮಯಕ್ಕೆ ನಮ್ಮ ಮಕ್ಕಳಿಗೆ ದಸರಾ ರಜ ಘೋಷಣೆಯಾಗಿತ್ತು. ಅವರ ಬಹು ದಿನದ ಕನಸಾದ ಉತ್ತರ ಕರ್ನಾಟಕದ / ಕನ್ನಡದ ಕೆಲವು ದರ್ಶನೀಯ ಸ್ಥಳಗಳನ್ನು ಕುಟುಂಬ ಮತ್ತು ದೂರದ ದುಬೈನ ಗೆಳೆಯನ ಕುಟುಂಬದ ಸಮೇತರಾಗಿ ನೋಡುವ ಕನಸಿನ ಗಾಡಿಯೇರಿ ಕುಳಿತಿದ್ದರು. ದಿನ ಬೆಳಗಾದರೆ ಮಕ್ಕಳು ಅವರ ಪಯಣದ ವಿವರ ಯಾವ ಯಾವ ಊರಿಗೆ ಯಾವಯಾವತ್ತು ಹೋಗುವುದೆಂಬ ವಿವರ ನನ್ನೊಡನೆ ಚರ್ಚಿಸಿ ಅವರ ಆಸೆ ಪೂರೈಸಿಕೊಳ್ಳುತ್ತಿದ್ದರು. ನನಗೂ ಮತ್ತು ನನ್ನ ಮಡದಿಗೂ ಚಿನ್ನು ಯಾವಾಗ ಕರು ಹಾಕುವಳೋ ಎಂಬ ಧ್ಯಾನ. ಇವರ ಟೂರಿನ ಖುಷಿಯ ಮದ್ಯೆ ನಮಗೆ ಕುತೂಹಲವಿದ್ದಿದ್ದು ಚಿನ್ನು ಈಯುವ ಕರು ಗಂಡೋ ಅಥವಾ ಹೆಣ್ಣೋ ಎಂಬುದಲ್ಲಾ! ಅದು ಈ ಜನ್ಮಕ್ಕೆ ಬದುಕಿ ಬರುತ್ತಾ ಎಂಬುದಷ್ಟೇ ಆಗಿತ್ತು!

******
ಆ ದಿನವೂ ಬಂತು. ಬೆಳ್ಳಂಬೆಳಗ್ಗೆ ನಾನಿನ್ನೂ ಮಲಗಿದ್ದೆ. ಪಕ್ಕದಲ್ಲೇ ಇದ್ದ ಆ ಪೋನ್ ರಿಂಗಣಿಸಿತು. ಕಣ್ಣು ಬಿಡದೇ ಹಾಗೇ ಕಿವಿಗೆ ಹಿಡಿದರೆ ಕಿರಿಯ ಮಗನ “ಅಪ್ಪಾ ಅಪ್ಪಾ ಅಪ್ಪಾ” ಎಂಬ ಆವೇಗದ ಮಾತು ಕೇಳಿಸಿತು. ಅವನು ಟೂರಿನ ಬಗ್ಗೆ ಎಷ್ಟು ಹಚ್ಚಿಕೊಂಡಿದ್ದಾನೆ, ಇನ್ನೂ ಬೆಳಗ್ಗೆ ಬೆಳಗ್ಗೆಯೇ ಕರೆಮಾಡಿದ್ದಾನಲ್ಲಾ, ಎಂಬ ಅಸಹನೆಯಿಂದಲೇ “ಹೇಳಪ್ಪಾ ನಿನ್ನ ಟೂರಿನ ಕತೆ” ಎಂದೆ. “ಅಯ್ಯೋ ಅಪ್ಪಾ ಅದಲ್ಲಾ ಕಣಪ್ಪಾ ಚಿನ್ನು ಕರು ಈಯುತ್ತಿದ್ದಾಳೆ ಕಣಪ್ಪಾ! ಅಂದ ಅವನ ಮಾತಿಗೆ ಒಮ್ಮಲೇ ದಡಕ್ಕನೇ ಎದ್ದು ಕುಳಿತೆ. ಅವನ ಲೈವ್ ಕಾಮೆಂಟರಿ ಶುರುವಾಗಿತ್ತು. ಕೇಳುತ್ತಾ ಹೋದೆ.

“ಅಪ್ಪಾ ಅಪ್ಪಾ ಸಣ್ಣ ಸಣ್ಣ ಕಾಲು ಆಚೆ ಬಂತೂ ಕಣಪ್ಪಾ. ವಾಹ್ ಅದರ ಕಾಲ ತುದಿ ಹರಿಶಿನದ ಬಣ್ಣ ಕಣಪ್ಪಾ! ಅದರ ಮೂತಿನೋ ಬಾಲನೋ ಗೊತ್ತಾಗ್ತಾ ಇಲ್ಲಾ ಕಣಪ್ಪಾ ಒಟ್ಟು ಕಪ್ಪು ಬಣ್ಣದ್ದು ಈಚೆ ಬರ್ತಿದೆ. ಓ ಅದು ಅದರ ಮೂತಿ ಕಣಪ್ಪಾ. ಕಣ್ಣು ಬಾಯಿ ಕಿವಿ ಎಲ್ಲಾ ಕಾಣಿಸ್ತು” ಅಂತಿದ್ದವನನ್ನು ನಿಲ್ಲಿಸಿ “ಅಲ್ಲಿ ಯಾರಿದ್ದಾರೆ ಮತ್ತೆ ಅಮ್ಮನ ಕೈಲಿ ಪೋನ್ ಕೊಡು” ಅಂದೆ. “ಅದೆಲ್ಲಾ ಆಗಲ್ಲಾ ಕಣಪ್ಪಾ ಯಾರೋ ಡೈರಿಯ ಡಾಕ್ಟರ್ ಅಂಕಲ್ ಬಂದಿದ್ದಾರೆ ಅವರೇ ಚಿನ್ನುಗೆ ಹೆರಿಗೆ ಮಾಡಿಸ್ತಿರೋದು. ಅಮ್ಮ ದೂರದಲ್ಲಿ ಇದೆ. ನಾನು ಮತ್ತೆ ನಕ್ಷತ್ರ ಇಬ್ಬರೂ ಮರ ಹತ್ತಿ ಕುಳಿತಿದ್ದೀನಿ ಕಣಪ್ಪಾ ಇಳಿದರೆ ಅಮ್ಮ ಬೈಯುತ್ತೆ” ಅಂದ.

“ಸರೀ ನೀನೇ ಕಾಮೆಂಟ್ರಿ ಮುಂದುವರಿಸು” ಎಂದೆ. “ಓ ಅದರ ಮೈ ಈಚೆ ಬಂತೂ, ಅದರ ಹಿಂಗಾಲು ಸಮೇತ ಆ ಹಾಲಿನ ಡೈರಿಯ ಅಂಕಲ್ ಕರೂನ ಹಿಡಿದುಕೊಂಡಿದ್ದಾರಪ್ಪಾ, ಚಿನ್ನು ಅದರ ಮೈಯೆಲ್ಲಾ ಮೂಸಿ ಮೂಸಿ ನೋಡ್ತಿದ್ದಾಳೆ. ಈಗ ಕರೂನ ಗೋಣೀ ಚೀಲದ ಮೇಲೆ ಮಲಗಿಸಿಬಿಟ್ಟರಪ್ಪಾ, ಅದು ಕಾಲ ಮೇಲೆ ನಿಲ್ಲೋಕೆ ಆಗ್ತಿಲ್ಲಾ ಕಣಪ್ಪಾ ಪಾಪದ್ದು” ಅಂದ. “ಸರೀ ಮೊದಲು ಹುಶಾರಾಗಿ ಮರ ಇಳಿದು ಅಮ್ಮನಿಗೆ ಪೋನ್ ಕೊಡು” ಎಂದೆ. “ಆಯ್ತು ಕಣಪ್ಪಾ ಬಟ್ ವ್ಯೈಟ್ ಮಾಡಪ್ಪಾ ತುಂಬಾ ತುದಿಗೆ ಹತ್ತಿದ್ದೀನಿ ಸರೀಗೆ ಕಾಣಲ್ಲಾಂತ” ಅಂದವನನ್ನು ಮನಸ್ಸಿನಲ್ಲೇ ಬೈಕೊಳ್ಳುತ್ತಾ ಅವಳು ಮಾತನಾಡುವುದನ್ನೇ ಕಾಯುತ್ತಿದ್ದೆ. “ತಗೋಳಮ್ಮಾ ಅಪ್ಪಾ ಲೈನಲ್ಲಿದ್ದಾರೆ” ಎಂದ ಅವನ ಮಾತಿಗೆ ಬೆರಗಾದ ಅವಳು “ಓ ಮೈ ಗಾಡ್ ನೀನು ಮೊಬೈಲ್ ತೊಗೊಂಡು ಎಲ್ಲಿಗೆ ಹೋಗಿದ್ದೆ ಕೋತಿ, ನಾನು ಆವಾಗ್ಲಿಂದಾ ಹುಡುಕ್ತಿದ್ದೀನಿ ಅಪ್ಪನಿಗೆ ಫೋನ್ ಮಾಡೋಣಾ ಅಂತಾ” ಅಂದಿದ್ದು ಕೇಳಿತ್ತು.

ಫೋನ್ ಕೈಗೆ ಸಿಗುತ್ತಲೇ ಅವಳ ಖುಷಿಗೆ ಪಾರವೇ ಇಲ್ಲದೇ “ಬಾಬೂ ಕರು ಜೀವಂತ ಹುಟ್ಟಿದೆ, ನನ್ನ ಹರಕೆ ಫಲಿಸಿದೆ. ದಬ್ಬೇಘಟ್ಟದ ಕೆಂಪಮ್ಮನಿಗೆ ಹರಕೆ ಹೊರು, ಎಲ್ಲಾ ಸಲೀಸಾಗುತ್ತೆ ಅಂತಾ ಅವತ್ತು ಮಡಿವಾಳರ ಕೆಂಪಕ್ಕ, ಕುಂಬಾರ್ರ ದೊಡ್ಡಮ್ಮಜ್ಜಿ, ಜಯಣ್ಣಾರ ಬಸಮ್ಮ ಎಲ್ಲಾ ಸಜೆಸ್ಟ್ ಮಾಡಿದ್ರು. ನಾನೂ ಅವತ್ತು ಸದ್ಯ ಚಿನ್ನು ಉಳಿದರೆ ಸಾಕು ಅಂತಾ ಅವರು ಹೇಳಿದಂತೆಯೇ ಮನಸ್ಸಿನಲ್ಲೇ ಅಂದು ಕೊಂಡು, ಚಿನ್ನು ಮತ್ತು ಕರು ಜೀವ ಉಳಿಸಿಕೊಟ್ಟರೆ ಆ ಕರು ಅವಳಿಗೇ ಬಸವಿ ಬಿಡುತ್ತೇನೆ ಅಂತಾ ಹರಕೆ ಹೊತ್ತಿದ್ದೆ. ಕೊನೆಗೂ ದೇವರು ನಮ್ಮ ಕಡೆ ಇದ್ದಳು ಅಂತಾ ಸಾಕ್ಷಿ ಸಿಕ್ತಲ್ಲಾ. ಇಬ್ಬರೂ ಸೇಫಾಗಿದ್ದರೆ ಬಾಬೂ” ಅಂದು ಮಾತು ಮುಗಿಸಿದವಳಿಗೆ ನಾನು ಈಗ ತಾನೇ ಚಿಗುರೊಡೆದ ಕೊನೆಯ ಪ್ರಶ್ನೆ ಕೇಳುವವನಿದ್ದೆ.

ನಮ್ಮ ಮನೆಯ ಮೊಬೈಲು ಲೌಡ್ ಸ್ಪೀಕರ್ ಆನ್ ಇರೋದ್ರಿಂದಾ ನನ್ನಿಬ್ಬರೂ ಮಕ್ಕಳೂ ಜಗಳಾಡಿಕೊಂಡು ಅಮ್ಮನ ಬಳಿಗೆ ಬರುತ್ತಿದ್ದು ಕೆಳಿಸಿತ್ತು. ಮೊದಲನೆಯವನು “ನಾನು ಹೇಳಿದ್ದು, ಹೆಣ್ಣು ಕರು ಈಯ್ತಾಳೆ ಅಂತಾ! ನೀನು ತಾನೆ ಹೇಳೀದ್ದು ಗಂಡು ಕರು ಈಯುತ್ತಾಳೆ ಅಂತಾ. ನೋಡೀಗ ನನ್ನ ಗೆಸ್ಸೆ ಕರೆಕ್ಟು”. ಅಂದದ್ದು ಕೇಳಿಸಿಕೊಂಡಿದ್ದ ಅವಳು ನೀನೇ ಕೇಳಪ್ಪಾ ನಿನ್ನ ಮುಂದಿನ ಪ್ರಶ್ನೆ ನಿನ್ನ ಮಕ್ಕಳೇ ಎಲ್ಲಾ ರೀಸರ್ಚ್ ಮಾಡಿಬಂದಿರೋರಥರಾ ಆಡ್ತಿದ್ದಾರೆ ಅಂದು ಮಕ್ಕಳ ಕೈಗೆ ಕೊಟ್ಟಳು. ಕೊನೆಯವನು ಹೇಳಿದ ಮಾತು ಕೇಳಿ ಹಾಲು ಸಕ್ಕರೆ ಕುಡಿದಂತಾಯ್ತು. ಅವಳು ಕೊನೆಗೂ ದೆಬ್ಬೇಘಟ್ಟದ ಕೆಂಪಮ್ಮನ ನೆಚ್ಚಿನ ಬಸವಿಯೇ ಆಗಿದ್ದಳು.

******
ಮುಂದಿನ ಮಾತು ಕಥೆಯೆಲ್ಲಾ ನಮ್ಮ ಮನೆಗೆ ಬಂದ ಹೊಸ ಹುಡುಗಿಗೆ ಯಾವ ಸೂಕ್ತ ಹೆಸರಿಡಬೇಕೆಂಬುದೇ ಆಗಿತ್ತು. ನಾನು ಇಬ್ಬರೂ ಮಕ್ಕಳನ್ನು ಕೇಳಿದೆ ಯಾವ ಹೆಸರು ಇಟ್ಟರೆ ಚೆಂದ ಅಂತಾ. ಮೊದಲನೆಯವನು ಹೇಳಿದ “ಅಪ್ಪಾ ಈ ಕರು ಬ್ರೌನ್ ಕಲರ್ ಇದೆ ಹಗಾಗಿ ಇವಳಿಗೆ “ಬ್ರೌನೀ” ಅಂದ್ರೆ ಹೇಗೆ” ಅಂದ. ಎರಡನೆಯವನು “ಅಪ್ಪಾ ಇದು ಎಚ್ ಎಫ್ ತಳಿ ಅಲ್ಲವಂತೆ, ಜೆರ್ಸೀ ತಳಿಯಂತೆ ಹಾಗಾಗಿ ಇವಳಿಗೆ “ಜೆರ್ಸೀ” ಅಂತಾನೇ ಇಟ್ಟರೆ ಹೇಗೆ” ಅಂದ. ನನಗೇಕೋ ಇಬ್ಬರು ಸೂಚಿಸಿದ ಹಸರುಗಳೂ ಸರೀ ಅನ್ನಿಸಲಿಲ್ಲಾ.

ಅವರಿಗೆ ಹೇಳಿದೆ “ಈಗ ಯಾವ ಹಬ್ಬ ಹತ್ತಿರ ಇದೆಯೋ ಅದರ ಹೆಸರು ಇಟ್ಟರೆ ಹೇಗೆ? ಎಂದೆ. “ವಾವ್ ಸೂಪರ್ ಅಂಡ್ ಸಿಂಪಲ್ ಐಡಿಯಾ ಕಣಪ್ಪಾ ನಿಂದೂ” ಅಂದರು ಮಕ್ಕಳಿಬ್ಬರೂ. ಎಣಿಸಿದರೆ ಕೆಲವೇ ಘಂಟೆಗಳಷ್ಟೇ ಬಾಕಿಯಿದ್ದ ಗೌರಿ ಗಣೇಶನ ಹಬ್ಬಕ್ಕೆ ಮುನ್ನ ನಮ್ಮ ಮನೆಗೆ, ಮನಸ್ಸಿಗೆ ಮತ್ತು ಚಿನ್ನುವಿಗೂ ಹೊಸ ಜನ್ಮವಿತ್ತು ಬಂದಿಳಿದ ಈ ಚೈತನ್ಯದಾಯಿನಿಗೆ, ಜೀವದಾಯಿನಿಗೆ “ಗೌರಿ”ಎಂಬ ಹೆಸರಲ್ಲದೇ ಇನ್ನಾವ ಹೆಸರೂ ಸೂಕ್ತವೆನ್ನಿಸಲಿಲ್ಲಾ.ನಮ್ಮ ಮನೆಯ ವರಾಂಡದಲ್ಲಿರುವ ಪೋಟೋವೊಂದರಲ್ಲಿ ಕಣ್ಣುಮುಚ್ಚಿ ಹಿಮಾಲಯದ ಬಳಿ ಧ್ಯಾನಸ್ಥನಾದ ಜಗದೀಶನ ತೊಡೆಯೇರಿ ಕುಳಿತಿರುವ ಗೌರಿ, ಅವನ ತಲೆಯೇರಿ ಕುಳಿತಿರುವ ಗಂಗೆಯ ಚಿತ್ರಣ ಹಾಯ್ದು ಹೋಯ್ತು.ಮನದ ಮೂಲೆಯಲ್ಲೀ, ಯಾಕೋ, ಗೌರಿ, ಗಂಗೆ ಮತ್ತು ಜಗದೀಶ ಎಂಬ ಆ ಮುಕ್ಕಣ್ಣನ ಸಂಸಾರ ನೆನಪಾಗಿದ್ದು ಸುಳ್ಳಲ್ಲಾ. ಯಾಕಂತಾ ಗೊತ್ತಿಲ್ಲಾ!

ಮಕ್ಕಳು ಜೋರಾಗಿ “ವಾವ್ she is our cute ಗೌರೀ ಗೌರೀ” ಎಂದು ಕೂಗುತ್ತಾ ಅವಳನ್ನು ಕ್ಲೀನ್ ಮಾಡುತ್ತಿದ್ದ ಡಾಕ್ಟರ್ ಗೆಳೆಯನ ಬಳಿಗೆ ಓಡಿದ್ದು ಮೊಬೈಲಲ್ಲೇ ಗೊತ್ತಾಯ್ತು.

IMG_4203

“ಚೆರ್ರಿ” ಆಗಿದ್ದೋಳು “ಕಾಮ”ನಾದದ್ದು…

206874_10201291096103409_1381120278_n

 ಈಗ ನಾವೆಲ್ಲರೂ ಅವನನ್ನು “ಕಾಮಾ” “ಕಾಮಾ” ಬಾ… ಬಾ… ಅಂತಾ ಕರೀತೀದ್ದೀವಿ…

ನನಗೆ ನಾಯಿ ಸಾಕೋದು ಅಂದ್ರೆ ತುಂಬಾ ಇಷ್ಟ. ಅವತ್ತೊಂದು ದಿನ ಹಾಗೇ ಫೇಸ್ ಬುಕ್ಕಿನಲ್ಲಿ ಗೆಳೆಯ ಆದರ್ಶ ಹಾಕಿದ್ದ ಶ್ವೇತ ವರ್ಣದ ಪುಟಾಣಿ ನಾಯಿ ಮರಿಯೊಂದರ ಚಿತ್ರ ಕಣ್ಸೆಳೆಯುವ ಮೂಲಕ ಕಾಮೆಂಟಿಸಲು ಆಹ್ವಾನಿಸಿತು.

ಆದರ್ಶ ಆ ನಾಯಿ ಮರಿಗೊಂದು ಹೆಸರು ಸೂಚಿಸಲು ಕೋರಿಕೊಂಡಿದ್ದ. ನಾನು ನೋಡುವ ಹೊತ್ತಿಗೆ ಆಗಲೇ ೧೫೦ ಹೆಸರುಗಳ ಸುರಿಮಳೆಯಾಗಿತ್ತು. ನಾನು ನನ್ನ ಪ್ರೀತಿಯ ಹೆಸರು “ಚೆರ್ರಿ” ಎಂದೆ. ಆಶ್ಚರ್ಯವೆಂಬಂತೆ ಆತನೂ ಅದೇ ಹೆಸರನ್ನೇ ಅಂತಿಮಗೊಳಿಸಿದ್ದ. ಹೀಗೇ ಮುಂದುವರಿದ ಮಾತುಕಥೆಯಲ್ಲಿ ಅವ ನಿಮಗೆ ಬೇಕಿದ್ದರೆ ಆ ಚೆರ್ರಿಯನ್ನು ಕೊಡುತ್ತೇನೆಂದ. ನನ್ನ ಖುಷಿಗೆ ಮಿತಿಯಿರಲಿಲ್ಲಾ. ಒಂದು ದಿನ ಅವಳನ್ನು ನಮ್ಮ ಮನೆತುಂಬಿಸಿಕೊಳ್ಳುವುದೆಂದಾಯ್ತು. ಅವರ ಮನೆಗೆ ನಮ್ಮ ಮನೆಯ ಹುಡುಗಿಯನ್ನು ಕರೆತರಲು ಹೋದಾಗ ಮತ್ತೊಂದು ವಿಷಯ ಗೊತ್ತಾಯ್ತು. ಆದರ್ಶನ ತಂಗಿಗೆ ಈ ನಾಯಿ ಮರಿ ಬಂದ ಮೇಲೆ ಅವಳ ಮನೆಯವರು ಅವಳಿಗೆ ತೋರುತ್ತಿದ್ದ ಪ್ರೀತಿಯಲ್ಲಿ ಸ್ವಲ್ಪ ಕೊರತೆಯುಂಟಾಗಿದ್ದಕ್ಕೆ ಮುನಿಸಿಕೊಂಡಿದ್ದಳಂತೆ. ಆದರ್ಶನಿಗೆ ಕೆಲಸ ಸಿಕ್ಕ ಕಾರಣವೂ ಇತ್ತು ಅದರೊಂದಿಗೆ.

ಈ ಚೆರ್ರಿ ನಮ್ಮ ಮನೆಗೆ ಬರುವ ದಾರಿಯಲ್ಲಿ ನಡೆದ ಘಟನೆಗಳು ನಿಜಕ್ಕೂ ತಮಾಷೆಯಾಗಿತ್ತು. ಅಂದು ನಾನು ನನ್ನ ಮಾಮೂಲಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದೆ. ಆದರ್ಶ ಕೊಟ್ಟಿದ್ದ ಬ್ಯಾಗಿನಲ್ಲಿ ಬರೀ ಮೂತಿ ಮಾತ್ರ ಕಾಣುವಂತಿದ್ದರೂ ಹೆರಗೆ ಜಿಗಿದು ನೆಗೆದಾಡಲು ಕುಣಿದಾಡುತ್ತಿದ್ದ ಈ ಮುದ್ದು ಮರಿಯು ನನ್ನ ಬಸ್ಸಿನಲ್ಲಿದ್ದ ಅನೇಕರ ಮನ ಸೆಳೆಯಿತು.ಅದರಲ್ಲೂ ಇಬ್ಬರು ತುಮಕೂರಿನ ಯುವಕರು ಅದನ್ನು ಬ್ಯಾಗಿನ ಬಂಧನದಿಂದ ಬಿಡುಗಡೆಗೊಳಿಸಿ ಅವರ ತೊಡೆಗಳ ಮೇಲೆ ಅವಳನ್ನು ಪ್ರತಿಷ್ಠಾಪಿಸಿಕೊಂಡರು. ತುಮಕೂರು ಬರುವವರೆಗೂ ಅವಳು ಆ ಇಬ್ಬರ ನಡುವೆಯೇ ಕೈಗಳ ಸಂದಿಯೊಳಗೆ ನುಸುಳುತ್ತಾ ಕಣ್ಣು ಮುಚ್ಚಿ ಗಾಢನಿದ್ದೆ ಬಂದವಳಂತೆ ಸುಖಿಸಿದ್ದನ್ನು ಸುತ್ತಲಿದ್ದವರು ಅವರವರ ಮಾತುಕಥೆಗಳಲ್ಲಿ ಮುಂದುವರಿಸಿದ್ದರು. ತುಮಕೂರು ಬಂತು ಅವರಿಬ್ಬರು ಇವಳನ್ನು ಬಿಡಲಾರದೇ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ವಶಕೊಪ್ಪಿಸಿ ಕೆಳಗೆ ಇಳಿದರು. ಅವರ ಜೊತೆಗಿದ್ದ ಮತ್ತಿಬ್ಬರು ಗೆಳೆಯರು “ನೀವೇನಾದರೂ ಮಲಗಿದ್ದರೆ ಗ್ಯಾರಂಟಿ ಇವರು ಅದನ್ನು ಕದ್ದು ಹೊತ್ತೊಯ್ಯುತ್ತಿದ್ದರು ಸಾರ್ ಹುಶಾರ್” ಎಂದು ನನಗೆ ತಮಾಷೆ ಮಾಡುತ್ತಾ ಇಳಿದರು.

ನನ್ನ ಬಳಿಗೆ ಬಂದ ಮರಿಯನ್ನು ಕೇಳಿ ಪಡೆದ ಹೆಂಗಸೊಬ್ಬರು ಅದನ್ನು ಅವರದೇ ಮಗುವೆಂಬಂತೆ ತನ್ನ ತೊಡೆಮೇಲಿರಿಸಿಕೊಂಡು ಅದರ ಮೈಯನ್ನು ನವುರಾಗಿ ಸವರುತ್ತಾ ತನ್ಮಯರಾಗಿದ್ದರು. ಇದ್ದಕ್ಕಿದ್ದಂತೆ ಬಸ್ ಏರಿದ ಯುವಕನೊಬ್ಬ ಈ ಚೆರ್ರಿಯ ಮುಖ ಮುಟ್ಟಿ ಲೊಚಕ್ ಲೊಚಕ್ ಅಂತಾ ಮುತ್ತು ಕೊಟ್ಟುಬಿಟ್ಟ. ಅದೆಲ್ಲಿತ್ತೋ ಈ ಹೆಂಗಸಿಗೆ ಕೋಪ. ಕಾಳಿಯಂತಾದ ಅವರು “ನಿನ್ನ ಕೈತೊಳೆದಿದ್ದೆಯೇನೋ ಕತ್ತೆ ಬಡವಾ!!! ಎಲ್ಲೆಲ್ಲಿಂದಲೋ ಬಂದಿರ್ತೀರಾ? ಏನೇನೋ ಮುಟ್ಟಿ ಬಂದಿರುತ್ತವೆ!!! ಮರಿಗೆ ಇನ್ ಫೆಕ್ಷನ್ ಆಗಲ್ವೇನೋ ಅಷ್ಟೂ ಕಾಮನ್ ಸೆನ್ಸ್ ಇರಲ್ಲಾ ಥತ್… ” ಎಂದು ಅವನನ್ನು ಹಿಗ್ಗಾಮುಗ್ಗಾ ಜಾಡಿಸಿಬಿಟ್ಟರು. ಅವರ ಮುಂದುವರಿದ ಮಾತುಕಥೆಯನ್ನು ನಿಮಗೇ ಬಿಟ್ಟಿದ್ದೇನೆ… 🙂

ಅಂತೂ ಅವಳನ್ನು ನಮ್ಮ ಮನೆ ಮುಂದೆ ನಿಂತ ಬೆಂಗಳೂರಿನ ಬಸ್ಸಿನಿಂದಾ ಇಳಿಸಿಕೊಳ್ಳಲು ನಮ್ಮ ಇಡೀ ಮನೆತನವೇ ಕಾದು ನಿಂತಿತ್ತು!!! ಆಶಿ ಬಂದವನೇ ಅವಳನ್ನು ಬರಸೆಳೆದು ಮನೆಯ ಒಳಗೆ ನಡುಕೋಣೆಗೆ ತೆಗೆದುಕೊಂಡು ಬಿಟ್ಟ. ನಮ್ಮ ಮನೆಯ ಎಲ್ಲಾ ಸದಸ್ಯರೂ ಅಲ್ಲಲ್ಲೇ ಆಸೀನರಾಗಿ ಅದರ ಬಣ್ಣ, ಗುಣ, ತರಲೆ, ತಳಿಯ, ಅದರ ಅಪ್ಪ ಅಮ್ಮನ ರೂಪದ ವಿವರ, ಹೀಗೆ ಏನೇನೆಲ್ಲಾ ಚರ್ಚಿಸಬಹುದೋ ಅದನ್ನೆಲ್ಲಾ ಮಾಡಿ ಮುಗಿಸಿದರು. ಅಯ್ಯೋ ಪಾಪ ಅದಕ್ಕೆ ಹೊಟ್ಟೆ ಹಸಿವಾಗಿರತ್ತೆ ಹಾಲು ಹಾಕೋಣವೆಂದು ಅದಕ್ಕೆ ದಿನಕ್ಕೆ ಎಷ್ಟು ಬಾರಿ ಹಾಕಬೇಕು ಎಷ್ಟೆಷ್ಟು ಹಾಕಬೇಕೆಂಬ ವಿವರಗಳನ್ನೆಲ್ಲಾ ಪಡೆದುಕೊಂಡರು. ಹಾಲು ಕುಡಿದ ತಕ್ಷಣ ಚೆರ್ರಿ ಮೂತ್ರ ಮಾಡಿದ್ದು ನೋಡಿ ನನ್ನಮ್ಮ “ನಕ್ಷತ್ರ ಇದು ನಿನ್ನ ಜವಾಬ್ದಾರಿ.ಮೊದಲು ಬಟ್ಟೆ ತಂದು ಕ್ಲೀನ್ ಮಾಡು” ಎಂದು ಆದೇಶಿಸಿದರು.ಅನಿಶನಿಗೆ ನೀನು ಅದಕ್ಕೆ ಊಟಮಾಡಿಸುವುದು ಮಾತ್ರಾ ಎಂದರು.

ಈ ಚೆರ್ರಿ ಮೂತ್ರ ಮಾಡಿದ್ದು ನೋಡಿದ್ದ ನನಗೆ ಆಗಲೇ ಒಂದು ಅನುಮಾನ ಕಾಡಿತ್ತು. ಅಮ್ಮ ಹೇಳಿದರು ಅದು ಒಂಟಿ ಅನ್ನಿಸಬಾರದು.( ನಮ್ಮ ಮನೆಯಲ್ಲಿ ಕನಿಷ್ಟ ಎರಡು ನಾಯಿ ಸಾಕಿ ರೂಢಿ!! ಒಮ್ಮೆ ಒಟ್ಟಿಗೆ ನಾಲ್ಕು ನಾಯಿಗಳಿದ್ದವು!!!) ಅಲ್ಲಿರೋ ನಾಯಿ ಗೊಂಬೆಗಳನ್ನ ಕೊಡೋ ಎಂದರು. ನಾವು ಎರಡು ಮೂರು ರೀತಿಯ ಗಾತ್ರದ ನಾಯಿ ಗೊಂಬೆಗಳನ್ನು ನೆಲಕ್ಕೆ ಹಾಕಿದ್ದೇ ತಡ, ಈ ಚೆರ್ರಿ ಅದರಲ್ಲಿ ಒಂದನ್ನು ತನ್ನ ಎರಡೂ ಮುಂಗಾಲುಗಳಲ್ಲಿ ಗಟ್ಟಿಯಾಗಿ ಹಿಡಿದು ಅದರ ನೈಸರ್ಗಿಕ ವಾಂಛೆಯಿಂದ ಧಾಳಿಮಾಡಲಾರಂಭಿಸಿತು!!!. ನಮ್ಮ ಅನುಮಾನ ಇನ್ನೂ ಗಟ್ಟಿಯಾಗತೊಡಗಿತು. ಆದರ್ಶನಿಗೆ ಪೋನಾಯಿಸಿದರೆ ” ಅಯ್ಯೋ ಸಾರ್ ಅವ ಹುಡುಗ!!!  ಹುಡುಗಿ ಅಲ್ಲಾ !!! ??? ಅಂದ.

ಸರಿ ನಮಗೆಲ್ಲಾ ಈಗ ಇದರ ಹೆಸರು ಸರಿಹೊಂದೋದರ ಬಗ್ಗೆ ಗೊಂದಲ ಶುರುವಾಯ್ತು. ನಾವೆಲ್ಲಾ ಮಾತಾಡಿಕೊಂಡು ಬೇರೆ ಹೆಸರು ಇಡಬೇಕೆಂದು ತೀರ್ಮಾನವಾಯಿತು. ನಕ್ಷತ್ರ ಅದಕ್ಕೆ “ಲೈಕಾ” ಎಂದಿಡೋಣವೆಂದಾ. ಅನಿಶ್ “ದೊರೆ” ಎಂದಿಡೋಣವೆಂದಾ. ಅನಿತ “ಶ್ವೇತಕೇತು” ಎಂದಿಡೋಣವೆಂದಳು. ಯಾಕೋ ಯಾವ ಹೆಸರೂ ಸರಿ ಅನ್ನಿಸಲಿಲ್ಲಾ ಎಲ್ಲಾರಿಗೂ.

ನಾನು ಹಾಸನದ ನನ್ನ ಹಳೆಯ ಗೆಳೆಯ ಮಧುಸೂಧನ್ ಗೆ ಪೋನ್ ಮಾಡಿ, ನಡೆದ ಸಂಧರ್ಭ ವಿವರಿಸಿ ಸೂಕ್ತ ಹೆಸರುಗಳ ಪಟ್ಟಿಯನ್ನು ಮೆಸ್ಸೇಜ್ ಮಾಡೆಂದೆ. ಅವ ಕಳಿಸಿದ ಪಟ್ಟಿಯಲ್ಲಿ ನಮ್ಮೆಲ್ಲರಿಗೆ ಹಿಡಿಸಿದ್ದು “ಕಾಮಣ್ಣ”…

ಈಗ ನಾವೆಲ್ಲರೂ ಅವನನ್ನು “ಕಾಮಾ” “ಕಾಮಾ” ಬಾ… ಬಾ… ಅಂತಾ ಕರೀತೀದ್ದೀವಿ…

ಅಮ್ಮನ ದಿನದ ಆಚರಣೆ ಮತ್ತು ನನ್ನ ಅಮ್ಮನ ದಿನದ ಆಚರಣೆಯಿಂದ ಕೆಲ ನೆನಪುಗಳು:

ಲಾಭ, ನಷ್ಟಗಳ ಸರಿದೂಗಿಸುತ್ತಾ,ನನ್ನ ಮಕ್ಕಳಿಗೆ ನಮ್ಮ ತೋಟದ ಅವಶ್ಯಕತೆಗಳನ್ನು ತಿಳಿಸುತ್ತಾ, ಕಲಿಸುತ್ತಾ ಇನ್ನೂ ಹರೆಯದ ಹುಡುಗಿಯಂತೆ ಅವರೊಂದಿಗೆ ಮಗುವಾಗಿ ಈ 85ರ ಹರೆಯದಲ್ಲೂ ಅದೇ ಬಿಸಿ ರಕ್ತದ ಹುಡುಗರೂ ನಾಚುವಂತೆ ಜಿಗಿ ಜಿಗಿಯುತ್ತಾ ಪುಟಿ ಪುಟಿಯುತ್ತಾ ಇರುವ

ಅಮ್ಮನ ಮನದ ಮೂಸೆಯೊಳು ಹೊಸೆದು ಬಂದ ಕಸೂತಿ ಕಲಾಕೃತಿ

ಅಮ್ಮನ ಮನದ ಮೂಸೆಯೊಳು ಹೊಸೆದು ಬಂದ ಕಸೂತಿ ಕಲಾಕೃತಿ

ಅಮ್ಮನ ದಿನ ಮತ್ತು ನನ್ನ ಅಮ್ಮನ ದಿನಚರಿಯಿಂದ ಕೆಲ ನೆನಪುಗಳು:
ಕಾರ್ಮಿಕರ ದಿನ, ದುಡಿತ, ತುಡಿತ,ಭದ್ದತೆ,ವೃತ್ತಿ ಗೌರವ, ಶ್ರಧ್ದೆ ಎಂಬ ಪದಗಳು ಬಂದಾಗಲೆಲ್ಲಾ ನನಗೆ ಮರೆಯದೆ ನೆನಪಾಗುವುದು ನನ್ನಮ್ಮ. ಅವರ ದೈನಂದಿನ ಚಟುವಟಿಕೆಗಳನ್ನು ನನ್ನ ಬಾಲ್ಯದಿಂದಲೂ ಇಂದಿನವರೆಗೂ ಪ್ರತಿಕ್ಷಣ ನೋಡುತ್ತಲೇ ಬಂದಿರುವುದು ಅವರ ಬಗ್ಗೆ ನಾನು ಈ ರೀತಿ ಬರೆಯಲು ಪ್ರೇರೇಪಿಸಿದೆ ಎಂದರೆ ತಪ್ಪಾಗಲಾರದು.

ಅವರ ನೆನಪಿನಾಳದಿಂದ ಹೇಳಿದ ಮತ್ತು ನಾನು ನೋಡಿದ ಕೆಲವು ಘಟನೆಗಳು ನನಗೆ ಅವರ ಬಗ್ಗೆ ಹೆಚ್ಚು ಹೆಚ್ಚು ಬರೆಯಲು ಅನುಕೂಲಕರವಾಗಿದೆ.ಅವರು ಸರ್ಕಾರಿ ಕೆಲಸದಲ್ಲಿದ್ದ ದಿನಗಳೆಂದರೆ ನನಗೆ ಇನ್ನೂ ಅಚ್ಚ ಹಸಿರು. ಅವರ ದಿನಚರಿ ಬೆಳಗ್ಗೆ 6 ಮಕ್ಕಳನ್ನು ಶಾಲೆಗೆ ಸಿದ್ದಮಾಡಿ, ತಿಂಡಿ ಕೊಟ್ಟು, ಅವರ ಅಂದಿನ ಕೆಲಸಗಳ ಪಟ್ಟಿಯನ್ನು ಪುಟಗೊಳಿಸಿಕೊಳ್ಳುವುದರೊಂದಿಗೆ ಪ್ರಾರಂಭವಾಗುತಿತ್ತು.
ಆರು ಮಕ್ಕಳ ದೈಹಿಕ, ಶೈಕ್ಷಣಿಕ,ಭಾವನಾತ್ಮಕ, ಆರ್ಥಿಕ, ಪೋಷಕತೆಯ ಅವಶ್ಯಕತೆಗಳು ಒಂದೊಂದೂ ಒಂದೊಂದು ಥರ. ಅವೆಲ್ಲವನ್ನೂ ಬೆಳಗ್ಗೆ ಮತ್ತು ರಾತ್ರಿ ಮಾತ್ರ ಸಿಗುವ ಅತ್ಯಲ್ಪ ಸಮಯದಲ್ಲೇ ಸರಿದೂಗಿಸುವ ಸೀಮಿತತೆಯೊಳಗೆ ನಮಗೆಲ್ಲೂ ಕೊರತೆಯಾಗದ ಹಾಗೆ ನೋಡಿಕೊಳ್ಳುತ್ತಿದ್ದುದು ನನಗೆ ಅವರ ಬಗ್ಗೆ ಹೆಮ್ಮೆಮೂಡಿಸುತ್ತಿತ್ತು.
ನಮ್ಮನ್ನೆಲ್ಲ ಮೀರಿಸಿದ ನನ್ನಮ್ಮನ ಅವಶ್ಯಕತೆ ನನ್ನ ಅಪ್ಪನದ್ದಾಗಿತ್ತು. ಅವರ ಕೌಟುಂಬಿಕ, ರಾಜಕೀಯ ಜೀವನ ವಿಧಾನದ ಅನೇಕ ಅವಸರದ,ಖುಷಿಕೊಡದಂತಹ,ಸಂಧರ್ಭಗಳನ್ನೂ ಅವರು ನಿಭಾಯಿಸಬೇಕಾಗುತ್ತಿತ್ತು ನಮ್ಮೆಲ್ಲರ ಅಷ್ಟೂ ಕಷ್ಟ ಕೀಟಲೆಗಳೊಂದಿಗೆ.ಅಪ್ಪನ ಊಟದಲ್ಲಿ ಸ್ವಲ್ಪ ಉಪ್ಪು ಹೆಚ್ಚು ಕಮ್ಮಿಯಾಗಿದ್ದರೂ ಅಂದು ಅಪ್ಪನ ಮುಖ ಉರಿ ಉರಿ. ಆದರೂ ಅಮ್ಮ ಮಾತ್ರ ನಮ್ಮೊಂದಿಗೆ ಅದೇ ನಿರಂತರ ಹಸನ್ಮುಖಿ.
ಇಷ್ಟೆಲ್ಲಾ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಅದೇ ನಗು ಮುಖ ಹೊತ್ತು ಸರ್ಕಾರಿ ಕೆಲಸದ ಮುಂದುವರಿದ ಜವಾಬ್ದಾರಿಗಳನ್ನು ಎದುರಿಸಲು 8ಘಂಟೆಗೆಲ್ಲಾ ಮನೆ ಬಿಟ್ಟು ಹೊರಟುಬಿಡುತ್ತಿದ್ದರು.ಅವರು ಅನೇಕ ಹಳ್ಳಿಗಳನ್ನು ಬರಿಗಾಲಲ್ಲಿ ನಡೆಯುತ್ತಾ,ಸುತ್ತುತ್ತಾ ಇರಬೇಕಾಗುತ್ತಿತ್ತು.ಯಾಕಂದರೆ,ಆಗೆಲ್ಲಾ,ಈಗಿರುವಂತೆ ಹಳ್ಳಿ ಹಳ್ಳಿಗಳಿಗೆ, ರಸ್ತೆಗಳ,ಬಸ್ಸಿನ ಸೌಕರ್ಯವಿರಲಿಲ್ಲವಾದ್ದರಿಂದ. ಅವರು ಒಮ್ಮೊಮ್ಮೆ ದಿನವೊಂದಕ್ಕೆ 10 ರಿಂದ 20 ಕಿಲೋಮೀಟರುಗಳನ್ನು ನಡೆದು ಜನರ ಭೇಟಿ ಮಾಡಿ, ಅವರ ಮಾಹಿತಿ ಸಂಗ್ರಹಿಸಿ ತಂದು ಮನೆಯಲ್ಲಿ ವರದಿ ತಯಾರಿಸ ಬೇಕಾಗುತ್ತಿತ್ತು.
ರಾತ್ರಿ ನಮ್ಮೆಲ್ಲರ ಆದ್ಯ ಕರ್ತವ್ಯಗಳನ್ನೂ ಮುಗಿಸಿದ ಮೇಲೆ, ಅವರ ದೈನಂದಿನ,ವಾರದ, ತಿಂಗಳ ವರದಿಗಳನ್ನೂ ಸಿದ್ಧಪಡಿಸ ಬೇಕಾಗುತ್ತಿತ್ತು. ನಾನು ಮತ್ತು ನನ್ನ ಅಕ್ಕಂದಿರು ಅವರಿಗೆ ವರದಿಯ ಲೆಖ್ಖಗಳನ್ನು ಕೂಡಲು, ಕಳೆಯಲು, ಗುಣಿಸಲು, ಒಟ್ಟುಮಾಡಲು ಸಹಕರಿಸುತ್ತಿದ್ದೆವು. ಅವರೂ ನಮ್ಮೊಂದಿಗೆ ಬೇಗ ಮಲಗಲಿ ಎಂಬ ಕಾಳಜಿಯೊಂದಿಗೆ.
ಬಾನುವಾರದ ರಜಾ ದಿನ ನಮಗಾಗಿ ಸಾದ್ಯವಾದಷ್ಟು, ಸಮಯ ಹೊಂದಿಸಿಕೊಂಡು ನಮ್ಮನ್ನು ಬೇರೆಲ್ಲಿಗಾದರೂ( ದೇವಸ್ಥಾನಕ್ಕೋ, ಜಾತ್ರೆಗೋ, ನೆಂಟರ / ಸ್ನೇಹಿತರ ಮನೆಗೋ) ಕರೆದೊಯ್ದು ನಮ್ಮನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಿದ್ದರು.
ಎಲ್ಲೂ ಆಗಲಿಲ್ಲವೆಂದರೆ ಬಟ್ಟೆಒಗೆಯಲು ನಮ್ಮನ್ನೂ ಸಂಗಡ ಕರೆದೊಯ್ದು ಅವರ ಬಟ್ಟೆಯೊಗೆಯುವ ಕಾಯಕದಲ್ಲಿ ನಮ್ಮನ್ನೂ ತೊಡಗಿಸಿಕೊಂಡು ನಮಗೂ ಬಟ್ಟೆಒಗೆಯುವುದನ್ನೂ ಕಲಿಸಿಕೊಡುತ್ತಿದ್ದರು.ಅವರ ಕೆಲಸದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿರುತ್ತಿತ್ತು. ಆಯಾಸ ಅವರ ಬಳಿ ಸುಳಿದಿದ್ದನ್ನೂ ನಾನು ಕಂಡಿಲ್ಲಾ ಇಲ್ಲಿಯವರೆಗೂ.
ನಾವು ಕಾಹಿಲೆ ಬಿದ್ದರೆ ಮತ್ತೆ ಅಮ್ಮನೇ ನಮ್ಮೆಲ್ಲರ ಡಾಕ್ಟರ್ ಆಗಿಬಿಡುತ್ತಿದ್ದರು ಅವರ ಇನ್ನಿತರ ಎಲ್ಲಾ ಜವಾಬ್ದಾರಿಗಳೊಂದಿಗೆ. ನಮಗೆ ಸಾದ್ಯವಾದಷ್ಟೂ ಮನೆಯ ವೈದ್ಯದಲ್ಲೇ ಉಪಚರಿಸಿ ಸುದಾರಿಸಿ ಬಿಡುತ್ತಿದ್ದರು. ನನಗೆ ಅವರ ಬಗ್ಗೆ ಇನ್ನೂ ಹೆಚ್ಚಿನ ಹೆಮ್ಮೆಯೆನಿಸಲು ಕಾರಣಗಳು ಬಹಳಷ್ಟಿವೆ.
ಮನೆಗೆಲ್ಲಾ ನಾನೇ ಒಬ್ಬನೇ ಮಗನಾದರೂ, ಮುದ್ದಿನ ಮಗನಾದರೂ, ಮನೆತುಂಬಾ 4 ಜನ ಅಕ್ಕಂದಿರಿದ್ದರೂ! ಮೊದಲಿನಿಂದಲೂ ನನ್ನ ಮನೆಯ ಕಸ ಗುಡಿಸುವುದು, ಪಾತ್ರೆ ತೊಳೆಯುವುದೂ, ಬಟ್ಟೆ ಒಗೆಯುವುದೂ,ಕೊನೆಗೆ ಅಮ್ಮನಿಗೆ ತರಕಾರಿ ಹೆಚ್ಚಿ ಕೊಡುವುದನ್ನೂ ಕೂಡಾ ನನ್ನಿಂದಲೇ ಮಾಡಿಸುತ್ತಿದ್ದರು. ಅವರು ನನಗೆ ಅಡಿಗೆ ಮಾಡುವುದನ್ನೂ ಹೈಸ್ಕೂಲಿನಲ್ಲಿರುವಾಗಲೇ ಕಲಿಸಿಬಿಟ್ಟಿದ್ದರು.
ಒಮ್ಮೆ ಯಾರೋ ನಾನು ಇದನ್ನೆಲ್ಲಾ ಮಾಡುವುದನ್ನು ನೋಡಿದವರು ನನ್ನಮ್ಮನನ್ನು ಕೇಳಿದ್ದಕ್ಕೆ ಅವರು ಹೇಳಿದ್ದು ನನಗೆ ಇಂದು ಸಹಾಯವಾಗಿದೆ. “ನನ್ನ ಮಗ ನಾಳೆ ಹೊರಗೆ ದುಡಿಯಲೋ, ಕೆಲಸದ ನಿಮಿತ್ತವೋ, ಹೊರಗೆ ಉಳಿಯುವ ಸಂಧರ್ಭ ಬಂದರೆ ಅವನಿಗೆ ಅವನೇ ಸಹಾಯ ಮಾಡಿಕೊಳ್ಳಬೇಕಾಗಬಹುದು ಅದಕ್ಕೇ ಈಗಿನಿಂದಲೇ ತಯಾರಿ” ಎಂದಿದ್ದರು.
ಅವರ ಆ ದೂರದೃಷ್ಟಿತನವೇ ನನಗೆ ಇಂದು ಮತ್ತು ಮದುವೆಯಾಗುವುದಕ್ಕಿನ್ನ ಮುಂಚಿನ ದಿನಗಳಲ್ಲಿ ಬಹಳ ಸಹಾಯಕವಾಗಿದೆ.ಅವರು ಕಲಿಸಿದ ಆ ನನ್ನ ಕರ್ತವ್ಯದ ಪಾಠ ನನಗೆ ಇದು ನಾನು ಮಾಡಬೇಕು, ಇದು ನಾನು ಮಾಡಬಾರದು, ಮೇಲು ಕೀಳು, ಹಿಂಜರಿಕೆಯೆಂಬ ಅನೇಕ ನಂಬಿಕೆಗಳನ್ನು ನನ್ನ ಮನದ ಮೂಲೆಯಿಂದ ಮೂಲೋಚ್ಚಾಟನೆ ಮಾಡಲು ಸಹಾಯ ಮಾಡಿದೆ.
ಅವರು ಕೆಲಸದ ನಿಮಿತ್ತವೆಷ್ಟೋ ಬಾರಿ ಮನೆ ಬಿಟ್ಟು ದೂರದ ತರಬೇತಿಗಳಿಗೆ ಹೋಗುವಾಗಲೂ ಕೂಡ ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿ,ವ್ಯವಸ್ಥೆಗೊಳಿಸಿ ಹೊರನಡೆಯುತ್ತಿದ್ದುದು ನೆನಪಿದೆ.ಅವರು ವೃತ್ತಿ ಮತ್ತು ಕುಟುಂಬ ಜೀವನವೆರಡನ್ನೂ ಸರಿಪ್ರಮಾಣದಲ್ಲಿ ತೂಗಿಸಿಕೊಂಡು ಹೋಗುತ್ತಿದ್ದುದು ನನಗೆ ಒಂದು ಅಚ್ಚರಿಯೇ ಇಂದಿಗೂ.
ಅವರ ಸೇವೆಯ ಅವಧಿಯಲ್ಲಿ, ಕೆಲಸದ ಶ್ರದ್ಧೆ ಮತ್ತು ಭದ್ಧತೆಗೆ ಮೆಚ್ಚಿ ಅವರ ಮೇಲಧಿಕಾರಿಗಳೂ ಸಹೋದ್ಯೋಗಿಗಳೂ ಮೆಚ್ಚಿ ಪ್ರಶಂಷಿಸಿದ ಸಂದರ್ಭಗಳು ನನಗಿನ್ನೂ ಹಚ್ಚ ಹಸುರಾಗಿವೆ.ಅವರು ಕೆಲಸದಿಂದ ನಿವೃತ್ತರಾದಾಗ ಅವರ ಹಿರಿಯ ಕಿರಿಯ ಸಹೋದ್ಯೋಗಿಗಳು ತುಂಬು ಹೃದಯದಿದಂದ ಸನ್ಮಾನ ಮಾಡಿದ್ದು ನನಗಿನ್ನೂ ಮರೆಯಲಾಗಿಲ್ಲ. ನಮ್ಮ ಮನೆಯ ಯಾವುದೇ ಶುಭ ಸಮಾರಂಭವೇ ಇರಲಿ ಅಥವಾ ಇನ್ನಿತರೇ ಸಂಧರ್ಭವೇ ಇರಲಿ ಇವತ್ತಿಗೂ ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳನ್ನು ಕರೆಯದೇ ನಾವು ಆಚರಿಸುವುದೇ ಇಲ್ಲಾ. ಅವರೂ ಅಷ್ಟೇ ಇವರನ್ನು ಕರೆಯದೇ ಬಿಟ್ಟು ಬಿಡುವುದಿಲ್ಲ. ನನ್ನಮ್ಮ ಈಗಲೂ ಅವರ ದೈನಂದಿನ ಕಾರ್ಯಕ್ರಮದ ಪಟ್ಟಿಯೊಂದಿಗೆ ಅವರ ಆಪ್ತೇಷ್ಟರ ಸಮಾರಂಭಗಳ, ಭೇಟಿಗಳ ದಿನಗಳ ಹೊಂದಾಣಿಕೆ ಮಾಡುತ್ತಿರುತ್ತಾರೆ.
ಈಗ ಅವರು ಸರ್ಕಾರಿ ಸೇವೆಯಿಂದ ನಿವೃತ್ತರು. ಆದರೂ ಅವರ ದುಡಿಮೆ ಅವಿರತವಾಗಿ ಸಾಗಿಯೇ ಇದೆ. ಮನೆಯಲ್ಲಿ ಈಗಲೂ ನಮ್ಮ ಮಕ್ಕಳನ್ನೂ ಮೀರಿ ಅತ್ಯಂತ ಚಟುವಟಿಕೆಯಿಂದ ಕೂಡಿದ ಜೀವವೆಂದರೆ ಅವರೇ.ಅವರು ಮಕ್ಕಳಿಗೆ ಕಥೆ ಕವನ ಓದಿ ಹೇಳುವುದು, ಹೇಳಿಸುವುದೂ, ಚಿತ್ರ ಬಿಡಿಸುವುದೂ, ಕಸೂತಿ ಹಾಕುತ್ತಾ ಮಾತನಾಡುವುದು ಎಲ್ಲವೂ ಒಂದು ಕ್ಷಣವನ್ನೂ ಸುಮ್ಮನೆ ಕಳೆಯದ ಬದ್ಧತೆಯಿಂದಲೇ ಅನ್ನಿಸದಿರದು.
ಅವರ ಪುಸ್ತಕ ಪ್ರೀತಿಗೆ ಅವರ ಸಹೋದ್ಯೋಗಿಗಳು ಅವರಿಗೆ ಸಿಕ್ಕ ಪುಸ್ತಕಗಳನ್ನು ತಂದು ಇವರಿಗೆ ಕೊಟ್ಟುಹೋಗುತ್ತಾರೆ. ಅವರಿಗೆ ಕಾಣಿಕೆಯಾಗಿ ನನ್ನಮ್ಮ ಅವರೇ ಪ್ರೀತಿಯಿಂದ ಕೈ ಕಸೂತಿಯಿಂದ ಮಾಡಿದ ಅನೇಕ ಆಟಿಕೆಯ ಸಾಮಾನುಗಳನ್ನು ಮಾಡಿ ತಲುಪಿಸಿ ಬರುತ್ತಾರೆ. ಅದರಲ್ಲೂ ಅವರು ಬಳಸುವುದು ಪ್ರಕೃತಿಗೆ ಪ್ರೀತಿಯಿಂದ ಮರುಬಳಕೆಯಾಗುವ ತೆಂಗಿನಗರಿಯ ಅಥವಾ ನೊದೆ ಹುಲ್ಲಿನಿಂದ ಮಾಡಿದ ಕಲಾಕೃತಿಗಳು.
ಇಂದಿಗೂ ನಮ್ಮ ತೋಟದ ಅತಿ ಹೆಚ್ಚಿನ ಜವಾಬ್ಧಾರಿ ಹೊತ್ತಿರುವುದು ನನ್ನಮ್ಮನೇ. ಅದರ ಎಲ್ಲ ಬೇಕು ಬೇಡಗಳ ಪೂರೈಕೆ ಮಾಡುತ್ತಾ, ಅದರ ಲಾಭ, ನಷ್ಟಗಳ ಸರಿದೂಗಿಸುತ್ತಾ,ನನ್ನ ಮಕ್ಕಳಿಗೆ ನಮ್ಮ ತೋಟದ ಅವಶ್ಯಕತೆಗಳನ್ನು ತಿಳಿಸುತ್ತಾ, ಕಲಿಸುತ್ತಾ ಇನ್ನೂ ಹರೆಯದ ಹುಡುಗಿಯಂತೆ ಅವರೊಂದಿಗೆ ಮಗುವಾಗಿ ಈ 85ರ ಹರೆಯದಲ್ಲೂ ಅದೇ ಬಿಸಿ ರಕ್ತದ ಹುಡುಗರೂ ನಾಚುವಂತೆ ಜಿಗಿ ಜಿಗಿಯುತ್ತಾ ಪುಟಿ ಪುಟಿಯುತ್ತಾ ಇರುವ ನನ್ನಮ್ಮ ನನ್ನೊಳಗಿನ ಕಾರ್ಮಿಕತನದ ಸಾಕ್ಷಿಪ್ರಜ್ನೆಯ ಪ್ರತ್ಯಕ್ಷ ಪ್ರತಿರೂಪ.

ಯುಗಾದಿಯ ವರುಷದೊಡಕಿನ ನೆನಪು !

ಯುಗಾದಿಯ ವರುಷದೊಡಕಿನ ನೆನಪು !

ತುಂಬು ಗರ್ಭಿಣಿ ಶ್ವೇತ ಮತ್ತು ಅವಳಿಬ್ಬರು ಎಳೆಯ ಹೆಣ್ಣು ಮಕ್ಕಳು ಬಚಾವಾಗಿದ್ದರು.ಆದರೆ ತುಂಬಾ ಚೆನ್ನಾಗಿ ಕೊಬ್ಬಿ ಮೈ ಕೈ ತುಂಬಿಕೊಂಡಿದ್ದ ಪೋತರಾಜ ಮಾತ್ರಾ…

ಮಗ ನಕ್ಷತ್ರ ಮತ್ತು ಪೋತರಾಜ

ಮಗ ನಕ್ಷತ್ರ ಮತ್ತು ಪೋತರಾಜ

ಇವತ್ತು ಯುಗಾದಿ. ನಮ್ಮ ಊರೆಲ್ಲಾ ಒಬ್ಬಟ್ಟಿನೂಟದ ಸುವಾಸನೆ. ನಾನು ಎಣ್ಣೆ ಸ್ನಾನ ಮಾಡಿದವನು,ಹೊಸ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಸಂಸಾರದೊಂದಿಗೆ ಹೋಗಿ ಬಂದು ಊಟಮಾಡಿ ಹಬ್ಬ ಮುಗಿಸಿದೆ. ನನ್ನ ನೆಚ್ಚಿನ ಹೊಂಗೆಮರದ ತಂಪು ನೆರಳು ಸುಡು ಬೇಸಿಗೆಯಲ್ಲಿ ಕೈಬೀಸಿ ಕರೆಯಿತು. ಅಲ್ಲಿದ್ದ ತಣ್ಣನೆಯ ಕಡಪದ ಕಲ್ಲಿನ ಬೆಂಚಿನ ಮೇಲೆ ಮಲಗಿ ಒಂದು ಸಣ್ಣ ನಿದ್ದೆಮಾಡುವ ಅಂತ ಅನ್ನಿಸಿ ಅತ್ತ ಮುಖಮಾಡಿದೆ.

ಅಲ್ಲಿ ಮಾಮೂಲಿಯಂತೆ ಮಲಗಿರುತ್ತಿದ್ದ ಪೋತರಾಜನಿಂದು ಕಾಣಿಸಲಿಲ್ಲಾ. ಈ ಜಾಗ ನನಗೆ ತುಂಬಾ ಇಷ್ಟವಾದಂತೆಯೇ ಆ ಪೋತರಾಜನಿಗೂ ಕೂಡಾ ತುಂಬಾ ಇಷ್ಟವಾದ ಜಾಗ. ಅಲ್ಲೇ ಮಲಗಿ ಅವನಿಗೆ ಕಟ್ಟಿದ್ದ ಅನೇಕ ಥರದ ಸೊಪ್ಪುಗಳನ್ನು ಗಬಗಬನೆ ತಿನ್ನುತ್ತಾ ಇರುತ್ತಿದ್ದ. ಆಮೇಲೆ ನಿಧಾನವಾಗಿ ಮೆಲುಕುಹಾಕುತ್ತಾ ದಿನ ದಿನಕ್ಕೆ ದಿಢೀರ್ ಅಂತಾ ಬೆಳೆದುಬಿಡುತ್ತಿದ್ದ.
ಓ ಅವನು ಹೋಗಿ ಆಗ್ಲೇ ಒಂದು ವರ್ಷವಾಯ್ತಲ್ಲಾ! ಕಾಲ ಸರಿದದ್ದು ತಿಳಿಯಲೇ ಇಲ್ಲಾ. ಅವನು ಇದೇ ದಿನ ನಮ್ಮ ಮನೆಯಿಂದ ಹೊರನಡೆದಿದ್ದ ನನಗರಿವಿಲ್ಲದೇ.

ಅವನು ನಮ್ಮಮನೆಗೆ ಬಂದಾಗ ಅವನಿನ್ನೂ ಅವನಮ್ಮ ಶ್ವೇತಳ ಹೊಟ್ಟೆಯೊಳಗಿದ್ದ. ಆಕಸ್ಮಿಕವಾಗಿಯೋ, ವಿಧಿ ಲಿಖಿತವೋ ಒಂದು ಬಾನುವಾರ ನಾನೇ ಅವನಮ್ಮನ ಹೆರಿಗೆ ಮಾಡಿಸಿ, ಅವನ ಮುಖ ಮೂತಿ ಎಲ್ಲ ತೊಳೆದು, ಈ ಭೂಮಿ ಮೇಲೆ ಓಡಾಡಲು ಬಿಟ್ಟಿದ್ದೆ. ಆಮೇಲೆ ಅವನು ನಮ್ಮ ಮಕ್ಕಳಿಬ್ಬರ ಜೊತೆ, ಆಡುತ್ತಾ, ಕಿತಾಪತಿ ಮಾಡುತ್ತಾ, ಮುನಿಸಿಕೊಳ್ಳುತ್ತಾ,ಸವಾರಿ ಮಾಡಿಸಿಕೊಳ್ಳುತ್ತಾ, ಅವರೊಡನೆ ರನ್ನಿಂಗ್ ರೇಸ್ ಓಡುತ್ತಾ, ಅನೀಶನಿಗೆ ಗುದ್ದಿ ಗುದ್ದಿ ಕೆಡವಿ ಗಾಯ ಮಾಡುತ್ತಾ, ಬೆಳೆದು ನಿಂತದ್ದು ಕಣ್ಣಿಗೆ ಕಾಣಲೇ ಇಲ್ಲಾ.

ಅವನು ಬೆಳೆದದ್ದರ ಜೊತೆಗೆ ಶ್ವೇತಳ ಎರಡನೇ ಹೆರಿಗೆಯ ಫಲವಾಗಿ ಅವನೊಟ್ಟಿಗೆ ಇರಲು ಡಾಲಿ ಮತ್ತು ಡಬ್ಲಿ ಎಂಬ ಇಬ್ಬರು ತಂಗಿಯರೂ ಬಂದರು. ಶ್ವೇತಳ ಸಂಸಾರ ಈಗ ಮೂರು ಮುದ್ದು ಮಕ್ಕಳದ್ದಾಯಿತು. ಅವನ ತಂಗಿಯರೂ ಬೆಳೆದು ಅವನೊಡನೆ ಆಟವಾಡಲಾರಂಭಿಸಿದರು. ಈಗ ಶ್ವೇತ ಮತ್ತೆ ತುಂಬು ಗರ್ಭಿಣಿಯಾಗಿದ್ದಳು. ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಗಿತ್ತು.

ಪೋತನೋ ಯೌವನಕ್ಕೆ ಬಂದು ಬಲಶಾಲಿಯಾಗಿದ್ದ. ನಮ್ಮ ಮನೆಯವರಿಗೆ ಅವನನ್ನು ಕಟ್ಟಿಹಾಕುವುದು ಒಂದು ಸಾಹಸವೇ ಆಗತೊಡಗಿತು. ಅನೀಶನಿಗೆ ಅವನು ಮಾಮೂಲಿನಂತೆಯೇ ಡಿಕ್ಕಿ ಹೊಡೆಯಲು ಹೋಗಿ ಒಮ್ಮೆ ಬಲವಾಗಿ ಗುದ್ದಿ ಬೀಳಿಸಿದ್ದು ನನ್ನ ಅಮ್ಮನಿಗೆ ದಿಗಿಲು ಬರಿಸಿತ್ತು. ಅವರು ಈ ವಿಷಯದಲ್ಲಿ ಪೋತರಾಜನ್ನ ಮನೆ ಬಿಡಿಸಬೇಕು ಎಂದೇಳಿ ನನ್ನೊಡನೆ ತುಂಬಾ ಗಂಭೀರವಾಗಿ ವಾದಿಸಿದ್ದರು. ನಾನು ಅನಿಶನಿಗೆ ಅವನಿಂದ ದೂರವಿರು ಎಂದೇಳಿ ಸಮಾಧಾನಿಸಿದ್ದೆ.

ನಾಳೆ ವರುಷದೊಡಕು. ನಮ್ಮ ಪಕ್ಕದೂರಿನ ಕೇರಿಗಳಲ್ಲಿ ಮಾಡುವ ಬಾಡೂಟದ ಸುವಾಸನೆ ನಮ್ಮೂರಿಗೂ ಅಡರಿಕೊಳ್ಳುತ್ತೆ. ಅವರು ಸುಲಿದು ಬಿಟ್ಟ ಆಡು, ಕುರಿ ಗಳ ಚರ್ಮ ಹೊತ್ತ ಸಾಬರ ಮೊಪೆಡ್ಗಳು ಅತ್ತಿಂದಿತ್ತ ಬರ್ ಬರ್ ಎಂದು ಧೂಳೆಬ್ಬಿಸುತ್ತಾ ಹರಿದಾಡುತ್ತಿರುತ್ತವೆ. ಯಾಕೋ ಅದನ್ನೆಲ್ಲಾ ನೆನಪಿಸಿಕೊಳ್ಳಲು ನಮ್ಮ ಪೋತರಾಜನ ಮಾಮೂಲಿ ಜಾಗ ನೋಡಿದ್ದೇ ನೆವವಾಯಿತು.
ಹೋದ ವರ್ಷ ಇದೇ ದಿನ ಅವನನ್ನು ನನಗೆ ಕೊಡಿ, ನಮಗೆ ಕೊಡಿ ಎಂದು ಕೇಳಿಕೊಂಡು ಎಷ್ಟೋಂದು ಜನ ಬಂದಿದ್ದರು. ನಾನು ಕೊಡೋಲ್ಲ ಹೋಗ್ರೀ ಅಂದು ಸಾಗಹಾಕಿದ್ದೆ. ಸಾಯಂಕಾಲ ನಾನು ನನ್ನ ಪಾಡಿಗೆ ಬೆಂಗಳೂರಿಗೆ ಹೋಗಿದ್ದೆ. ನನ್ನಮ್ಮನಿಗೆ ಅವರ ಮೊಮ್ಮಗನ ಕಾಳಜಿಯೇ ಜಾಸ್ತಿಯಾಗಿತ್ತು ಅನ್ನಿಸುತ್ತೆ. ಮತ್ತೆ ಕೇಳಿಕೊಂಡು ಬಂದ ಸಾಬರಿಗೆ ಪೋತನ ಇಡೀ ಸಂಸಾರವನ್ನು 16000 ರೂಪಾಯಿಗೆ ವ್ಯಾಪಾರ ಕುದುರಿಸಿ ಅವರನ್ನೆಲ್ಲಾ ಮನೆಯಿಂದ ಹೊರಗೆ ಕಳಿಸಲು ತುಂಬಾ ಭಾರವಾದ ಮನಸ್ಸಿನಿಂದಾ ಒಪ್ಪಿ ಬಿಟ್ಟಿದ್ದರು.

ಬೆಳಗ್ಗೆ ಎದ್ದವನೇ ನನ್ನ ಎರಡನೇ ಮಗ ಅನೀಶ್ ಹಿಂದಿನ ದಿನದ ವಾರ್ತೆ ಒಪ್ಪಿಸುತ್ತಾ ಈ ಸುದ್ದಿಯನ್ನು ನನಗೆ ಬಿತ್ತರಿಸಿಯೇ ಬಿಟ್ಟಿದ್ದ. ನನಗೆ ಬಂದ ಕೋಪ ತಡೆಯಲಾಗದೆ ಮೊದಲು ಆ ಸಾಬರನ್ನು ಹುಡುಕಿ ನನ್ನ ಪೋತರಾಜನನ್ನು ಮನೆಗೆ ಕರೆತನ್ನಿ ಎಂದು ಕೂಗಾಡಿ ಬಿಟ್ಟಿದ್ದೆ. ರಾತ್ರಿಯೆಲ್ಲಾ ನಿದ್ದೆ ಮಾಡದ ಅಮ್ಮ ಮತ್ತು ಮಕ್ಕಳೂ ಕೂಡಾ ನನ್ನ ಇದೇ ಮಾತಿಗೆ ಕಾಯುತ್ತಿದ್ದವರಂತೆ ತಕ್ಷಣ ಕಾರ್ಯಾಚರಣೆಗೆ ನನ್ನಕ್ಕನ ಮಗನನ್ನು ಇಳಿಸಿದ್ದರು.

ಅವನು ಸುತ್ತಮುತ್ತಲ ಸಾಬರ ಕೇರಿಗಳನ್ನೆಲ್ಲಾ ಹುಡುಕಾಡಿದ್ದರ ಪರಿಣಾಮ ನಮಗೆ ಬಂದ ಮಾಹಿತಿ ಕೇಳಿ ಖುಷಿಪಡಬೇಕೋ ದುಃಖ ಪಡಬೇಕೋ ಗೊತ್ತಾಗಲಿಲ್ಲ. ನಮ್ಮ ಪೋತರಾಜನ್ನ ಕೊಂಡುಕೊಂಡಿದ್ದ ಸಾಬರು ಸಿಕ್ಕಿದ್ದರು. ನಮ್ಮವರನ್ನು ಮತ್ತೆ ವಾಪಸ್ಸು ಪಡೆಯಲು ಅವನು ಕೊಟ್ಟ 16000 ರೂ ಮೇಲೆ ಇನ್ನೂ ಅವನ ಖರ್ಚು, ಲಾಭ ಎಲ್ಲ ಸೇರಿಸಿ ಕೊಡಲು ಹೋದರೆ ಆಗಲೇ ಕಾಲ ಮಿಂಚಿ ಹೋಗಿತ್ತು.

ತುಂಬು ಗರ್ಭಿಣಿ ಶ್ವೇತ ಮತ್ತು ಅವಳಿಬ್ಬರು ಎಳೆಯ ಹೆಣ್ಣು ಮಕ್ಕಳು ಬಚಾವಾಗಿದ್ದರು. ನನ್ನಕ್ಕನ ಗೆಳೆಯನೊಬ್ಬ ಮೇಕೆ ಸಾಕಾಣಿಕೆ ಮಾಡುವ ಪ್ರಯತ್ನದಲ್ಲಿದ್ದವನು ಇದೇ ಸಾಬರಿಂದ ಅವನ್ನೆಲ್ಲಾ ಪಡೆದಿದ್ದ.

ಆದರೆ ತುಂಬಾ ಚೆನ್ನಾಗಿ ಕೊಬ್ಬಿ ಮೈ ಕೈ ತುಂಬಿಕೊಂಡಿದ್ದ ಪೋತರಾಜ ಮಾತ್ರಾ…

ನಮ್‌ ತಿಮ್ನಳ್ಳಿ ಪ್ರಕಾಶ

    “ಬೆಳಗೆದ್ದು ನಾನು ಯಾರ್ಯಾರಾ ನೆನೆಯಾಲೇ” ಅಂತಾ ಬರೋ  ನಾ ಓದಿದ ಪದ್ಯಕ್ಕೆ ಇಲ್ಲಿ ಈ ಪ್ರಕಾಶನ್ನ ಮೊದಲೇ ಸೇರಿಸಿಕೊಳ್ಳ ಬೇಕಾಗುತ್ತಿತ್ತೇನೋ! ಹಾಗಿತ್ತು ಇವನ ಪ್ರಬಾವ. ಯಾರ‍್ದು ಅಂದ್ರಾ? ಅದೇ… ನಮ್‌ ತಿಮ್ನಳ್ಳಿ ಪ್ರಕಾಶಂದು!!

ತಿಮ್ಮನಹಳ್ಳಿ ನಮ್ಮ ಸುತ್ತಮುತ್ತಲಿನ  ಅನೇಕ ತಾಲೂಕುಗಳಲ್ಲಿ ಮನೆಮಾತಾಗಿತ್ತು. ಕಾರಣ ಆ ಊರು ಇದ್ದ ಪರಿಸರದಿಂದ ಸುತ್ತಮುತ್ತ ಫಲವತ್ತಾದ ನೆಲ ಹಾಗೂ ಹರಿಯುವ ನೀರಿನಿಂದ ತೆಂಗು, ಭತ್ತ ಮತ್ತು ಅಡಕೆ ಬೆಳೆ ಬೆಳೆದು ಅಲ್ಲಿಯ ಜನ ಸಿರಿವಂತರೂ ಉದ್ಯಮಶೀಲರೂ ಆಗಿದ್ದರು.
ಈ ಊರಿನ ಜನರು ಆ ಸುತ್ತಮುತ್ತ ಇರುವ ನಾಲ್ಕಾರು ತಾಲ್ಲೂಕು ಕೇಂದ್ರಗಳಲ್ಲಿ ಅನೇಕ ವ್ಯಾಪಾರ, ವಹಿವಾಟು, ಅಂಗಡಿ  ಮುಂಗಟ್ಟು,ಟಾಕೀಸು, ಸಾರಿಗೆ, ಹೋಟೆಲ್, ಇನ್ನೂ ಮುಂತಾದ ಹೆಚ್ಚೆಚ್ಚು ಬಂಡವಾಳ ಹೂಡುವ ಸಾಧ್ಯತೆ ಇದ್ದ ಎಲ್ಲ ಉಧ್ಯಮಗಳಲ್ಲಿ ತೊಡಗಿದ್ದರು.ನಮ್ಮ ಕಥಾನಾಯಕನಾದ ಪ್ರಕಾಶನೂ ಕೂಡ ಇದೇ ಊರಿನಲ್ಲಿ ಹುಟ್ಟಿ ಬೆಳೆದವನು.
ನಮ್ಮ ಸುತ್ತಮುತ್ತಾ ತುಂಬಾ ಫೇಮಸ್ಸು. ಇವನ ಹೆಸರು ಕೇಳದೇ ಇರುವವರೇ ಇಲ್ಲಾ, ಇವನ ಹೆಸರು ಇಲ್ಲಿಯ ಎಲ್ಲ ಜನರ  ಬಾಯಲ್ಲಿ ದಿನ ಹುಟ್ಟಿ ಮುಳುಗುವುದರೊಳಗೆ ಕನಿಷ್ಟ ಹತ್ತಾರು ಬಾರಿಯಾದರೂ ಬರದಿದ್ದರೆ ಅವನು ಪ್ರಕಾಶನೇ ಅಲ್ಲ. ಅವ ಜನರ ಬದುಕಲ್ಲಿ, ಮನಸಲ್ಲಿ, ರಕ್ತಸಂಭಂದಿಯಂತೆ ಬೆಸೆದುಕೊಂಡಿದ್ದ.
ಇವನ ಹೆಸರು, ಬಣ್ಣ, ಗಾತ್ರ  ಎಲ್ಲಾ ಒಂದೇ. ಇವನೆಂದರೆ ಇವನದೇ ಒಂದು ಬ್ರಾಂಡು ನೇಮು ಹಾಗೂ ಫೇಮು. ಇವನೆಂದರೆ ನಮ್ಮ ಸುತ್ತಮುತ್ತಲಿನ  ಅನೇಕ ತಾಲೂಕುಗಳ ಬೆಸೆಯುವ ಜೀವನಾಡಿಯಂತಿದ್ದ. ತಿಪಟೂರಿನಿಂದ ಪ್ರಾರಂಭವಾಗಿ,ಹುಳಿಯಾರು, ಶಿರಾ, ಹೊಸದುರ್ಗ,ಕೇಬಿ ಕ್ರಾಸುಗಳನ್ನೆಲ್ಲ ಸುತ್ತುವರಿದು ಬಂದು ನಮ್ಮ ತಾಲೂಕಾದ ಚಿಕ್ಕನಾಯಕನಹಳ್ಳಿಗೆ ಕೊನೆಗೊಳ್ಳುವ ಎಲ್ಲ ರಸ್ತೆ ಮತ್ತು ಆ ರಸ್ತೆಗಳ ಪಕ್ಕದ ಎಲ್ಲ ಹಳ್ಳಿಗಳ ಜನರ ಬದುಕು, ಕಷ್ಟ,ಸುಖ, ಪರದಾಟ,ಹಬ್ಬ ಹರಿದಿನ, ಜಾತ್ರೆಗಳ,ಸಂಭ್ರಮ, ಜನ, ಜಾನುವಾರುಗಳ ಹರಿದಾಟ,ಎಲ್ಲವನ್ನೂ ನಿಯಂತ್ರಿಸಬಲ್ಲವನಾಗಿದ್ದ.

ಇಂಟರ್ನೆಟ್ ಚಿತ್ರ

ಇಂಟರ್ನೆಟ್ ಚಿತ್ರ

“ಬೆಳಗೆದ್ದು ನಾನು ಯಾರ್ಯಾರಾ ನೆನೆಯಾಲೇ” ಅಂತಾ ಬರೋ  ನಾ ಓದಿದ ಪದ್ಯಕ್ಕೆ ಇಲ್ಲಿ ಈ ಪ್ರಕಾಶನ್ನ ಮೊದಲೇ ಸೇರಿಸಿಕೊಳ್ಳ ಬೇಕಾಗುತ್ತಿತ್ತೇನೋ! ಹಾಗಿತ್ತು ಇವನ ಪ್ರಬಾವ.  “ಇನ್ನೂ ಸ್ನಾನಾನೇ ಮಾಡಿಲ್ಲಾ, ತಿಂಡಿ ತಿನ್ನೋದ್ಯಾವಾಗಾ? ಸ್ಕೂಲಿಗೆ ಹೊರಡೋದ್ಯಾವಾಗ!ಪ್ರಕಾಶ ಕೆ.ಬಿ ಕ್ರಾಸ್ ಕಡೀಕೆ ಹೋಗಿ ಆಗ್ಲೇ ಎಷ್ಟು ಹೊತ್ತಾಯ್ತೂ. 7ಘಂಟೆಗೇ ಹೋಗಿದಾನೆ ಇವತ್ತು ಬೇರೇ.ಇನ್ನೇನು ಬಿ.ಪಾಳ್ಯದ ಹತ್ತಿರಕ್ಕೆ ಬಂದೇ ಬಿಟ್ಟಿರ್ತಾನೇನೋ! ಬೇಗ ತಿಂಡಿ ತಿಂದು ಹೊರಡು, ಇವತ್ತು ಸ್ನಾನ ಬೇಡಾ ಬಿಡು” ಎಂದು ಅವಸರಿಸುವ ಅಮ್ಮಂದಿರ ಮಾತಿಗೆ ಮರುಮಾತಾಡದೇ ತಿಂಡಿ ತಿಂದು ಬ್ಯಾಗು ಹಿಡಿದು ಓಡುವ ಚಿಕ್ಕವರಿಂದಾ ಹಿಡಿದು ಪ್ರೈಮರಿ,ಹೈಸ್ಕೂಲ್, ಡಿಗ್ರೀ ಕಾಲೇಜು ಓದುವ  ನಮ್ಮ ಭಾಗದ ಎಲ್ಲ ಮಕ್ಕಳ ಓದಿನ ಭವಿಷ್ಯದ ರೂವಾರಿಯಾಗಿದ್ದ ಈತ.
ಯಾಕಂದ್ರೆ ಈ ಪ್ರಕಾಶ ಅವರನ್ನೇನಾದ್ರೂ ಬಿಟ್ಟೋದ್ರೇ, ಅವತ್ತು ಅವರೆಲ್ಲರಿಗೂ ಬೆಳಗಿನ ಕ್ಲಾಸ್ ಗೋವಿಂದಾ ಗೋವಿಂದಾ. ಆಮೇಲೆ ಎಂಟತ್ತು ಕಿಲೋಮೀಟರ್ ಸೈಕಲ್ಲು ಹತ್ತಿ ಆ ಮೂರ್ನಾಲ್ಕು ಕಡಿದಾದ ದಿಬ್ಬತುಳಿದು ಚಿನಾಹಳ್ಳಿಗೆ ತಲುಪುವ ಹೊತ್ತಿಗೆ ಸಾಕಪ್ಪಾ ಸಾಕು ಈ ಓದುವ ಸಹವಾಸವೆನ್ನಿಸಿಬಿಡುತ್ತಿತ್ತು ಅವರಿಗೆ.
ಹಾಗಾಗಿ ಈ ಪ್ರಕಾಶ ನಮ್ಮ ಸುತ್ತಮುತ್ತಲಿನ ಅನೇಕರ ಓದಿನ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದ್ದ. ಅವನಿಲ್ಲದ, ಅವನ ನೆನಪಿಲ್ಲದ, ನಮ್ಮ ಶಾಲಾ ದಿನಗಳ ದಿನಚರಿಯೇ ನಮ್ಮ ನೆನಪಿನಲ್ಲಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವ ನಮ್ಮ ನೆನಪುಗಳನ್ನು ಅತಿಕ್ರಮಿಸಿದ್ದ.ಈ ಸುತ್ತಮುತ್ತಲಿನ ಅನೇಕರ ಅಂದಿನ ಓದಿನ ಕನಸು ನನಸಾಗಿಸಿಕೊಳ್ಳಲು ಈತನೇ ಮೂಲ ಕಾರಣ ಪುರುಷನೂ ಆಗಿದ್ದ.

@@@@@@@@@@@

“ಸಿವರುದ್ರಣ್ಣಾ, ಪ್ರಕಾಶ ಕೆ.ಬಿ ಕ್ರಾಸ್ ಕಡೀಕೆ ಹೋದ್ನಾ? ಅವ್ನು ಹೋಗಿ ಆಗ್ಲೇ ಎಷ್ಟು ಹೊತ್ತಾತೂ?
“ಏ ಇನ್ನೂ ಈಗ ಹೋದ ಕಣಣ್ಣಾ  ಅವನು ಹೋದಾ ಅಂದ್ರೆ 1 ಘಂಟೆ ಗ್ಯಾರಂಟೀ ಕಣಣ್ಣಾ. ಇವತ್ತು ನಿಂಗೆ ಪಿಚ್ಚರ್ರು ಮಿಸ್ಸಾಗಲ್ಲಾ ಬಿಡು.ಗ್ಯಾರಂಟೀ ಮಾಡ್ಕೋ. ನಿನ್ನ ಮನೇಯವರನ್ನೂ ಕರ್ಕಂಬಂದಿದ್ದೀಯಾ, ಸರೀ ಬಿಡು ಇಬ್ಬರೂ  ಸೋಮವಾರದ ಸಂತೆ ಮುಗಿಸ್ಕೋಂಡು ಹಂಗೇ ಹಾಲು ಜೇನು ಪಿಚ್ಚರ್ರಿಗೋಗ್ರೀ. ಎಸ್. ಎಲ್. ಎನ್ ಟಾಕೀಸಲ್ಲೈತಂತೇ ಕಣಣ್ಣೋ” ಅಂದ ಸಿವರುದ್ರಣ್ಣ ಏನ್ಕೋಡ್ಲಣ್ಣೋ? ಅಂತಾ ಅವನು ಆ ಕೈಮರದಂತಾ ಗೇಟಿನಲ್ಲಿ ಅಂಗಡಿಗೆ ಹಾಕಿದ್ದ ಬಂಡವಾಳ ಗಟ್ಟಿ ಮಾಡಿಕೊಳ್ಳತೊಡಗಿದಾ.
ಆಮೇಲೆ  ವಾರದ ಸಂತೆಗೆಂದು ಬಂದಾ ಸುತ್ತ ಮುತ್ತಲ ನಾಲ್ಕಾರು ಹಳ್ಳಿಯ ಇಪ್ಪತ್ತು ಮೂವತ್ತು ಜನಕ್ಕೆ ಆ ಬ್ಯಾಡ್ರಳ್ಳೀ ಸಿದ್ದಲಿಂಗಣ್ಣನೇ ಪ್ರಕಾಶನ ಬರುವಿನ ಮಾಹಿತಿದಾರನಾಗಿ  ಅವರೆಲ್ಲರ ಅಣ್ಣ ಡಾ//ರಾಜಣ್ಣನ ಹೊಸಾ ಪಿಚ್ಚರ್ರಿನ ಆಸೆ ಜೀವಂತವಾಗಿರಿಸಿದ. ಸಿವರುದ್ರಣ್ಣ ಅವರೆಲ್ಲರಿಗೂ ಕೇಳೀ ಕೇಳೀ ಮೇಲೆ ಬಿದ್ದು ಕಾಪೀ, ಟೀ ಕಾಯಿಸಿ ಕೊಟ್ಟು, ಬೀಡಿ, ಸಿಗರೇಟು, ಬೆಂಕಿ ಪೊಟ್ಟಣ, ವೀಳ್ಯದೆಲೆ, ಅಡಿಕೆ ಪೊಟ್ಣ, ಹೊಗೆಸೊಪ್ಪೂ ಕೊಟ್ಟು ಸುಣ್ಣದ ಡಬ್ಬದಿಂದಾ ಅವನ ಹೆಂಡತಿಗೇಳಿ ಅವಳ ಕೈಯಿಂದಲೇ ಎಲೆ ತೊಗೋಂಡೋರಿಗೆ ಪುಗಸಟ್ಟೆ ಕೊಡಿಸಿ ಅವರು ಮುಂದಿನ ಬಾರಿ ಅವನ ಅಂಗಡಿಗೇ ಬರುವುದನ್ನ ಖಾತ್ರಿ ಮಾಡಿ ಕೊಳ್ಳತೊಡಗಿದ.
“ಇವತ್ತು ಸೋಮಾರ ಬೇರೆ, ಸಂತೆ ಕಣಣ್ಣೋ, ಸಕತ್ತು ಜನ ಬ್ಯಾರೆ ಇದ್ದಾರೇ, ಪ್ರಕಾಶ ನಮ್ಮ ಕುರಿ ಹಾಕಿಸ್ಕೋಂತಾನೋ ಇಲ್ಲವೋ ಗೊತ್ತಿಲ್ಲ ಕಣಣ್ಣೋ”ಅಂದ ಗೊಲ್ಲರಟ್ಟಿಯ ಕ್ಯಾತಯ್ಯನಿಗೆ ಅವನ ಬಡಗಿಯ ಕೆಲಸದ ಹತಾರಗಳೊಂದಿಗೆ ಮತ್ತು 2 ಪೆಟ್ಟಿಗೆಗಳೊಂದಿಗೆ ಕೂತಿದ್ದ ಶಂಕ್ರಾಚಾರ್ರು “ಏ ನಾನು ನೋಡಿಲ್ಲದವನೇನಯ್ಯಾ ಅವನು ನಾನು ಅದೆಷ್ಟು ಸೋಮವಾರದ ಸಂತೆ ದಿನ ಹೋಗಿಲ್ಲಾ, ಒಂದೇ ಒಂದು ದಿನವೂ ನನ್ನ ಬಿಟ್ಟು ಹೋಗಿಲ್ಲಾ ಕಣಯ್ಯಾ, ಏನಾದ್ರೂ ಮಾಡ್ತಾನೆ ಬಿಡಯ್ಯಾ, ಅದ್ಯಾಕೆ ಅಷ್ಟೋಂದು ತಲೆ ಕೆಡಿಸಿಕೊಳ್ತೀಯಾ,” ಎಂದು ಆಚಾರ್ರು ಸಮಾಧಾನ ಹೇಳುತ್ತಿರುವಂತೆಯೇ ಪ್ರಕಾಶ ದೂರದಲ್ಲಿ ಕಂಡೇ ಬಿಟ್ಟಿದ್ದ!
ಸಿವರುದ್ರಣ್ಣಾ ಇನ್ನೇನು ಎಲ್ಲರಿಗೂ ಕಡ್ಲೇಪುರಿಯ ಪೊಟ್ಟಣಗಳನ್ನು ಕೈಗಿಟ್ಟು  “ಏ ಬರೀ 5 ರೂಪಾಯಿ ಕಣಣ್ಣಾ” ಎಂದು ವಸೂಲು ಮಾಡುತ್ತಿರುವಂತೆಯೇ ಪ್ರಕಾಶ ಬ್ಯಾಡ್ರಳ್ಳೀ ಗೇಟಿನಲ್ಲಿ ಬಂದಿದ್ದು ದೂರದಲ್ಲಿ ಕಾಣುತ್ತಿದ್ದಂತೆಯೇ, ಅಲ್ಲಿದ್ದ ಜನರೆಲ್ಲಾ, ಬೇಗ ಬೇಗ ಅವರವರ ಸಾಮಾನು, ಸರಂಜಾಮುಗಳನ್ನು ಹಾಗೂ ಅವರೊಂದಿಗೆ ಕರೆದುಕೊಂಡು ಬಂದಿದ್ದ ಅವರವರ ಹೆಂಡತಿಯರನ್ನೂ ಮಕ್ಕಳನ್ನೂ ಜೊತೆಗೆ ಹೊಂದಿಸಿಕೊಂಡು ಅವರ ಅಂದಿನ ಏಕೈಕ ಅಜೆಂಡವಾದ  ವಾರದ ಸಂತೆ, ಡಾ// ರಾಜಕುಮಾರ್ ರವರ ಹೊಸಾ ಪಿಚ್ಚರನ್ನೂ ನನಸಾಗಿಸಿ ಕೊಳ್ಳಲು ಪ್ರಕಾಶನ್ನ ಎದುರು ನೋಡತೊಡಗಿದರು.ಕೆಲವೇ ಕ್ಷಣಗಳಲ್ಲೇ ಬಂದ ಪ್ರಕಾಶ ಅಂದಿನ ಅವರೆಲ್ಲರ ಬಯಕೆಯಾದ ಸಂತೆ ಮತ್ತು ಮ್ಯಾಟ್ಣೀ ಪಿಚ್ಚರ್ರಿನ ಕನನು ನನಸು ಮಾಡಲು ಚಿನಾಹಳ್ಳೀ ಕಡೆಗೆ ಉಸಿರುಕಟ್ಟಿ ಧಾವಿಸಿದ.
ಆ ಗೋಡೇಕೆರೆ ಗೇಟಿನಲ್ಲಿದ್ದ ಎಲ್ಲಾ ಜನ, ಕುರಿ, ಆಡುಗಳಿಗೆ, ಅವುಗಳೊಂದಿಗೆ ವೀಳ್ಯದೆಲೆಯ, ಹೂವಿನ, ಅಡಿಕೆಯ, ತರಕಾರಿಯ ಚೀಲಗಳೊಂದಿಗೆ ಬಂದಿದ್ದ ಸುತ್ತಮುತ್ತಲ ಅನೇಕ ಹಳ್ಳಿಯ ಸಂತೆಯ ನಿಮಿತ್ತ ವ್ಯಾಪಾರದ ಲಾಭದ ಕನಸುಗಳೊಂದಿಗೆ ಬಂದಿದ್ದ ಎಲ್ಲ ಗಂಡಸರೂ, ಹೆಂಗಸರೂ ಅವತ್ತು ಈ ಪ್ರಕಾಶನಿಂದ ಅವರ ಅಂದಿನ ಸಂತೆಯ ಲಾಭದ ಖಾತರಿ ಮಾಡಿಕೊಂಡರು.

@@@@@@@@@

“ಲೇ ಕುಮಾರಾ ಎಲ್ಲೀದ್ದೀಯೋ? ಅಲ್ಲಾ ಕಣ್ಲಾ 12 ಘಂಟೆಗೆ ಆ ಪ್ರಕಾಶ ಹೋಗಿ ಎಷ್ಟೋತ್ತಾಯ್ತೂ? ಏನ್ಕಥೇ? ದನಾ ಬಿಡಾಕಿಲ್ವೇನ್ಲಾ? ಮಠ ಮಠ ಮಧ್ಯಾಹ್ನ ಆಗ್ಯತೆ, ಬಾರಾಲೋ ಮೊದ್ಲೂ. ಬಂದು ಮೊದಲೂ ನೀರು ಕುಡಿಸೀ ದನ ಮೇಯೋಕೆ ಬಿಡುಬಾರೋ ದರಿದ್ರದೋನೇ. ಮೂಕ ದನಾ ಶಾಪ ಹಾಕ್ತಾವೆ ಕಣಲಾ. ನಮ್ಮನೆಗೆ ಅದು ಒಳ್ಳೇದಲ್ಲಾ ಕಣೋ ಅದೂ” ಎಂದ ಬಸವಣ್ಣನ ಮಾತಿಗೆ ಅದೆಲ್ಲಿದ್ದನೋ ಕುಮಾರ, ಬಂದವನೇ ದನಗಳನ್ನು ಹಗ್ಗ ಬಿಚ್ಚಿ ನೀರು ಕುಡಿಸಲು ಕೆರೆಕಡೆಗೆ ಹೊಡೆದುಕೊಂಡು ಹೊರಟ. ಹಾಗೆಯೇ ಬಸವಣ್ಣನ ಬೈಗುಳಕ್ಕೇ ಅಲ್ಲಲ್ಲೇ ಸುತ್ತಮುತ್ತಾ ಕಟ್ಟಿಹಾಕಿ ಇನ್ನೂ ಮೇಯಲು ಬಿಡದಿದ್ದ ಕುಮಾರನಂಥವರೇ ಅನೇಕರು ಅವರವರ ದನಗಳನ್ನೂ ಹಗ್ಗ ಬಿಚ್ಚಿ ಮೇಯಲು ಬಿಟ್ಟರು.
ಬಾಯಾರಿದ್ದ ಆ ದನಗಳು ನಮ್ಮ ಈ ಪ್ರಕಾಶನ ಹೆಸರೇಳಿ ಅವನ ಸಮಯ ಪಾಲನೆಯ ನಿಯತ್ತಿಗೆ ಮೆಚ್ಚಿ, ಅವನಿಂದಾ ಇವತ್ತು ಸಮಯಕ್ಕೆ ಸರಿಯಾಗಿ ಹುಲ್ಲು ನೀರು ಸಿಗುವಂತಾದದ್ದಕ್ಕೆ,  ನಿಟ್ಟುಸಿರು ಬಿಟ್ಟಿದ್ದು ಕುಮಾರನಿಗೂ, ಬಸವಣ್ಣನಿಗೂ ಅಲ್ಲಿದ್ದ ಯಾರಿಗೂ ಕಾಣಲಿಲ್ಲ.

@@@@@@@@@@

“ಏನ್ರೀ ಚೇರ್ಮ್ನನ್ರೇ, ಊಟ ಮಾಡಿದ್ರಾ? ಬರ್ರೀ ಎಲೆಅಡಿಕೆ ಹಾಕ್ಕಳ್ಳಣಾ.”
“ಇಲ್ಲಾ ಕಣ್ ಆನಂದಯ್ಯಾ, ಇನ್ನೂ ರಾತ್ರಿ 10 ಘಂಟೆಯಾಗಕೆ ನಮ್ಮ ಈ ಪ್ರಕಾಶನೇ ಇನ್ನೂ ಬಂದಿಲ್ಲಾ,ಇಷ್ಟೋತ್ತಿಗೇ ಊಟಾನಾ? ಇನ್ನೂ ನಮ್ಮನೇಲೀ ಹುಡುಗರು ಓದಿಕೊಳ್ಳುತ್ತಿದ್ದಾವೆ. ಅವರೆಲ್ಲಾ ಆ ಪ್ರಕಾಶ ಬಂದಮೇಲೇನೇ ಎಲ್ಲ ಒಟ್ಟಿಗೆ ಊಟಕ್ಕೆ ಕೂತ್ಕತ್ತೀವಿ ಕಣಪ್ಪಾ” ಅಂದ್ರು ಚೇರ್ಮ್ನನ್ರು.
ಅವರು ಮಾತು ಮುಗಿಸೋದರೊಳಗೆ ಬಂದು ನಿಂತ ಪ್ರಕಾಶ ಅವತ್ತು ಸಂಜೆಯ ಮೊದಲನೇ ಶೋ ಪಿಚ್ಚರ್ರು ನೋಡಿಕೊಂಡವರೂ, ವ್ಯಾಪಾರ ಮುಗಿಸಿ ಅವರವರ ಅಂಗಡಿ ಮುಂಗಟ್ಟುಗಳನ್ನು ಬಾಗಿಲಿಕ್ಕಿಬಂದವರೂ, ಹುಶಾರಿಲ್ಲದೇ ದಾಸು ಡಾಕ್ಟರ್ ಶಾಪಿಗೆ ಹೋದ ರೋಗಿಗಳೂ, ಹೈಸ್ಕೂಲಿನ ಹಿಂದೆ ಕುಳಿತು ಬೆಳಗ್ಗೆಲ್ಲಾ ಇಸ್ಪೀಟಾಡಿ ಹಣ ಕಳೆದು ಯಾರತ್ರಲೋ ಸಾಲ ಮಾಡಿ ಹೊಟ್ಟೆತುಂಬಾ ಮದ್ಯ ಕುಡಿದು ಬಂದವರನ್ನೂ ಜೋಪಾನವಾಗಿಳಿಸಿದ.
ಅಂದಿನ ಅವನ  ಕಾಯಕ ಮುಗಿಸಿ ನೆಮ್ಮದಿಯಾಗಿ ರಾತ್ರಿಯೆಲ್ಲಾ ಮಲಗಿ ಬೆಳಗ್ಗೆ ಮತ್ತೆ ನಮ್ಮ ಸುತ್ತ ಮುತ್ತಲಿನ ಜನರ ದೈನಂದಿನ ಭಾಗ ವಾಗಲೂ ಭಾಗ್ಯ ತರುವವನಂತಾಗಲೂ ತೀರ್ಮಾನಿಸಿ ಕೇಬೀ ಕ್ರಾಸಿನ ಕಡೆಗೆ ಹೊರಟ. ಅವನು  ಪ್ರತೀದಿನ ಚಲಿಸುವ  ದಾರಿಯುದ್ದದಲ್ಲಿ ಅವರವರ ಹೆಂಡರೂ ಮಕ್ಕಳೊಂದಿಗೆ ಮಲಗಲು ಸಿದ್ದವಾಗುತ್ತಿದ್ದ ಎಲ್ಲ ಜನರಿಗೆ  ಪ್ರೀತಿಯಿಂದಾ ಖುಷಿಯಿಂದಾ ಶಿಳ್ಳೇ ಹಾಕುತ್ತಾ, ಶುಭರಾತ್ರಿ ಹೇಳುತ್ತಾ ಕತ್ತಲೆಯಲ್ಲಿ ಕಣ್ಮರೆಯಾದ.