ನಾನು ಹೀಗಿರೋದು ನನ್ ತಪ್ಪಾ!!!

“ಅವಳ ವಿಶಯ ಸ್ವಲ್ಪ ತಿಳ್ಕೋಬೇಕು ಲೋಕೀ, ಆಕೆ ಎಲ್ಲಿ ಸಿಗ್ತಾಳೆ” ಅಂದೆ.

“ಏ ನೀನಾ ಇಲ್ಲಿ ಯಾಕೇ ಬಂದೇ ಮತ್ತೆ?
ಇನ್ನೊಮ್ಮೆ ನೀನೇನಾದ್ರೂ ಸ್ಟೇಷನ್ ಪಕ್ಕ ಕಂಡ್ರೆ ಸೊಂಟಾ ಮುರಿದುಹಾಕ್ತೀನಿ. ನಡೀಯೇ ಓಡು ಓಡು, ಬಿಟ್ರೆ ನೋಡು, ಲಾಟಿ ಕೋಲು ಚೂರಾಗಬೇಕು.
ರಾಸ್ಕಲ್,ಕಿತ್ತೋದ್ ಲೌಡಿ ತಂದು.
ಮರ್ಯಾದೇಯಾಗಿ ಮನೇಲಿರೋದ್ ಬಿಟ್ಟು ಬಸ್ಸ್ ಹತ್ತಿ ಬಂದುಬಿಡ್ತಾಳೆ ಲೋಫರ್”.

“ಯಾಕ್ರೀ ನಿಮಗೇನಾಗುತ್ತೆ?
ದಾರೀಲಿ ನನ್ ಪಾಡಿಗೆ ನಾನು ನಡೆದುಕೊಂಡು ಹೋದ್ರೇ, ನಿಮ್ ಕೆಲಸ ನೀವು ಮಾಡ್ರೀ ಸುಮ್ಮೆ.
ಕೈಯಲ್ಲಿ ಏನೂ ಕಿಸಿಯೋಕಾಗದಿದ್ರೂ ಒಬ್ಬಂಟಿ ಹೆಣ್ಮಕ್ಕಳ್ ಮೇಲೇ ಜೋರುಮಾಡೋಕೇನು ಕಮ್ಮಿ ಇಲ್ಲಾ!
ನಮ್ಮ ತಾಲೋಕೇ ಕೆಟ್ಟೋಯ್ತು.
ಹೆಣ್ಮಕ್ಕಳಿಗೆ ರಕ್ಷಣೆ ಕೊಡಬೇಕಾದ ಪೋಲೀಸ್ಗಳು ಪೋಲಿಗಳ ಜೊತೆ ಸೇರಿ ದಾರೀಲೇ ದೌರ್ಜನ್ಯ ಮಾಡ್ತಿದ್ದರೂ ಕೇಳೋರಿಲ್ಲಾ!

“ಏ ಮಾದೇವ ಅದೇನೋ ಅವಳ್ದು ಗಲಾಟೆ.
ಮತ್ತೆ ಯಾಕೋ ಬಂದ್ಲು ಇತ್ತಲಾಗೆ.ಮೊದ್ಲು ಅವಳ್ನ ಎದೆಗೆ ಒದ್ದು ಓಡಿಸೋದು ಬಿಟ್ಟು ಇನ್ನೂ ಏನೋ ಬರೀ ಲಾಟೀಲೀ ಆಟಾ ಆಡುಸ್ತಾವ್ನೇ.
ತಲೇ ತಿನ್ನೋಕೇ ಹುಟ್ಟಿದಾಳೇ ಈ ಬೇವರ್ಸಿ, ತಲೇ ಮಾಸಿದೋಳು. ಮನೆಯವರಿಗೆಲ್ಲಾ ಅಯ್ಯೋ ಅನ್ನಿಸೋದಲ್ಲದೇ ಇಡೀ ತಾಲೋಕಿನ ಜನಕ್ಕೇಲ್ಲಾ ತಲೆನೋವು. ”
ಅಂತ ಆ ಕನಿಷ್ಟ ಪೇದೆಗೆ ಹೇಳಿದ ತಾಲೂಕಿನ ಹೆಸರಾಂತ ಪತ್ರಿಕೆಯ ಆ ಪತ್ರಕರ್ತನತ್ತ ತಿರಸ್ಕಾರದಿಂದ ನೋಡಿದ ಆ ಹೆಣ್ಮಗಳು ಒಮ್ಮೆ ಜೋರಾಗಿ ಕ್ಯಾಕರಿಸಿ ಉಗಿದಳು.

“ಥೂ ನೀನೂ ಒಬ್ಬ ಪತ್ರಕರ್ತನೇನಯ್ಯಾ.
ನಿನ್ನ ಕಣ್ಣ ಮುಂದೇನೇ ಒಬ್ಬಂಟಿ ಹೆಣ್ಣು ಮಗಳಿಗೆ ಇಷ್ಟೋಂದು ಅವಮರ್ಯಾದೆ ಆಗ್ತಿದ್ದರೂ ಅವನಿಗೇ ಸಪೋರ್ಟ್ ಮಾಡ್ತೀಯಲ್ಲಾ.
ನಿನ್ ಯೋಗ್ಯತೇ ಏನೂಂತಾ ನನಗೆ ಗೊತ್ತಿಲ್ಲವಾ? ನಾನೇನಾದ್ರೂ ನೀನು ಅವತ್ತು ಮಾಡಿದ್ದು ಹೇಳಿದ್ರೆ ನಿನ್ ಹೆಂಡ್ತಿ ನಿನ್ನ ಯಾವುದ್ರಲ್ಲಿ ಹೊಡಿತಾಳೋ ಗೊತ್ತಿಲ್ಲಾ!
ನಾನು ತಾಲೂಕಿಗೇ ತಲೇನೋವಾ? ನೀನು ನನ್ನ ಮೈ ನೋವಾಗಿದೇ ನಾವಿಬ್ಬರೇ ಬಂಡೀಪುರಕ್ಕೋಗಿ ಒಂದು ರಾತ್ರಿ ಕಳೆದು ಬರೋಣಾ ಬರ್ತೀಯಾ ಪ್ಲೀಸ್ ಈ ಬಾನುವಾರ ಅಂದೆಯಲ್ಲಾ ನಾನು ನಿನ್ನ ಪತ್ರಿಕೆಯಲ್ಲಿ ಕೆಲಸ ವಾಡುವಾಗ ಥೂ ನಿನ್ ಮುಖಕ್ಕಿಷ್ಟು ಬೆಂಕೀಹಾಕ”.

“ಏ ಮಾದೇವ ನಿಮ್ ಸಾಹೇಬ್ರು ಇದಾರೇನೋ ಇವಳನ್ನ ಸ್ವಲ್ಪ ಒಳಕ್ಕಾಕಿಸಿದರೆ ನಾವಾದ್ರೂ ನೆಮ್ಮದಿಯಾಗಿರ್ತ್ತೀವಿ, ಹೊರಗಡೇಲೀ, ಎಲ್ಲೋದ್ರೋ ನಿಮ್ ಸರ್ಕಲ್ಲು?
ಮೊದಲು ಪೋನ್ ಮಾಡೋ! ಈ ತಿಕಲೀನ ಒಂದು ವಾರ ಒಳಗಿಟ್ಟರೆ ಎಲ್ಲಾ ಸೇರಿ ಸರೀಗೆ ಇವಳ ದೇಹ, ಬುದ್ದಿ,ಎಲ್ಲಾ ಶುದ್ದಿ ಮಾಡಿ ಸರೀ ಮಾಡಬಹುದು”

“ಅಣ್ಣಾ ಇವಳಿಗೆ ನಮ್ ಸ್ಟೇಷನ್ ಸರೀಯಾಗಲಿಕ್ಕಿಲ್ಲಾ!
ಮೋಸ್ಟ್ಲೀ ಆ ನಿಮ್ಹಾನ್ಸ್ನಲ್ಲೂ ಇವಳಿಗೆ ಉಷಾರು ಮಾಡೋ ಔಷದ ಇರಲಿಕ್ಕಿಲ್ಲಾ ಅನ್ನಿಸುತ್ತೆ ಹಹ್ಹಹ್ಹಹ್ಹಾ”
ಅಂದ ಮಾದೇವನೆಡೆಗೆ ಕೋಪದಿಂದಾ ನೋಡಿದ ಅವಳು,
“ಕರಿಯೋಲೋ ನಿಮ್ ಸಾಹೇಬುನ್ನಾ! ಅವನು ಎಂಥಾ ಕಚ್ಚೆಹರುಕಾ ಅಂಥಾ ಇವತ್ತು ಇಡೀ ತಾಲೂಕಿಗೇ ತಿಳಿಸ್ತೀನೀ.
ನಾನು ಮೊದಲನೇ ಸಲಾ ನಮ್ಮಪ್ಪನ್ನ ನಾನು ಅವನ ಗಂಡು ಮಕ್ಕಳಥರಾನೇ ಅವನ ಆಸ್ತೀಲಿ ಭಾಗ ಕೇಳಿದ್ದಕ್ಕೆ ಬೆನ್ನು ಬಿರಿಯೋಹಾಗೆ ಒಡೆದಿದ್ದನಲ್ಲಾ ಆಗ ಏನು ಮಾಡಿದ್ದ ಗೊತ್ತೇನೋ?

ನಾನು ಕಂಪ್ಲೇಂಟು ಕೊಡೋಕೋದರೆ ಅವನು ಅರ್ಜಿ ತೊಗೋಳೊದು ಬಿಟ್ಟು, ನೀನು ಇನ್ನೂ ತುಂಬಾ ಚಿಕ್ಕವಳು ಇದ್ದೀಯಾ,
ಯಾಕೆ ಹೀಗೆ ಒಬ್ಬಂಟಿಯಾಗಿರ್ತೀಯಾ, ನಾನು ನಿನ್ನನ್ನ ನನ್ನ ಹೆಂಡತಿಗಿನ್ನಾ ಚೆನ್ನಾಗಿ ನೋಡ್ಕೋತೀನೀ,
ನಿನಗೇ ಬೆಂಗಳೂರಲ್ಲಿ ನನ್ನ ಸ್ವಂತ ಮನೆ ನಿನ್ನ ಹೆಸರಿಗೇ ಬರೆದು ಮಹಾರಾಣಿ ಥರಾ ನೋಡ್ಕೋತೀನಿ,
ಮಕ್ಕಳು ಮರಿ ಮಾಡ್ಕೋಂಡು ಹಾಯಾಗಿರೋಣ, ಏನಂತೀಯಾ?
ಅಂದಿದ್ದಾ ಅಂಥಾ ಕಿತ್ತೋದೋನು ನಿಮ್ಮ ಸಾಹೇಬಾ, ಕಂಡಿದ್ದೀನಿ ಬಿಡೋ ಅವನ್ನ”

ಅಲ್ಲೇ ನಿಂತಿದ್ದ ಮೂರು ಪೋಲಿ ಹುಡುಗರು ಪೋಲೀಸನ ಮುಂದೆಯೇ ಅವಳ ಹತ್ತಿರ ಹೋಗಿ
“ಬಾರೇ ಪಿಚ್ಚರಿಗೋಗೋಣಾ, ಒಳ್ಳೇ ಎ ಸರ್ಟಿಫಿಕೇಟ್ ಬಂದೈತೆ, ಇವರ ಹತ್ರ ಯಾಕೆ ಕೂಗಾಡ್ತೀಯಾ” ಅಂತ ಕರೆದಾಗ
ಅವಳು “ಕಾಲಲ್ಲಿ ಏನಿದೆ ನೋಡಿದಿಯಾ ಕತ್ತೆಬಡವಾ ನಿಂಗೆ ಅಕ್ಕ ತಂಗಿ ಯಾರೂ ಇಲ್ಲವೇನೋ?”
ಅಂದರೂ ಅವರಲ್ಲಿ ಒಬ್ಬ ಅವಳ ಕೈ ಹಿಡಿದು ಪೋಲೀಸ್ ಠಾಣೆಯ ಪಕ್ಕದಲ್ಲೇ ಇರುವ ಟಾಕೀಸಿನ ಕಡೆ ದರಗುಟ್ಟಿ ಎಳೆದುಕೊಂಡು ಹೋಗುವುದನ್ನು ನೋಡಿದ ನಾನು
ಪೋಲೀಸನಿಗೆ ಸನ್ನೆ ಮಾಡಿ ಅವಳನ್ನು ಬಿಡಿಸಲು ಹೇಳಿದೆ.

ಮಾದೇವ ಆ ಪೋಲಿಗಳಿಗೆ
“ಹಾಳಾಗಿಹೋಗ್ಲೀ ಬಿಟ್ಟುಬಿಡ್ರೋ ಅವಳನ್ನ” ಅಂದು ಬಿಡಿಸಿದ.

ಅಲ್ಲೇ ನಿಂತಿದ್ದ ಪತ್ರಕರ್ತ
“ಸಾರ್ ಅವಳ ರಗಳೆ ನಿಮಗೆ ಗೊತ್ತಿಲ್ಲಾ, ಅವಳು ಸರೀ ಇಲ್ಲಾ ಸರ್, ಒಂಥರಾ ಗಂಡುಬೀರಿ, ಮನೇಲಿ ಅವರ ಅಪ್ಪ, ಅಣ್ಣ, ಮತ್ತೆ ಅವಳ ಊರಲ್ಲೂ ಯಾರನ್ನೂ ನೆಮ್ಮದಿಯಾಗಿರಲು ಬಿಟ್ಟಿಲ್ಲಾ. ಅವಳ ಸಹವಾಸ ಸರಿಯಿಲ್ಲಾ ಬಿಟ್ಟುಬಿಡಿ ಸಾರ್”. ಅಂದ.

ನಾನು ಆಕೆಯು ಆ ದುಷ್ಟರಿಂದ ದೂರಾಗಿದ್ದು ನೋಡಿ ಸಮಾಧಾನದಿಂದಾ
ನನ್ನ ಹೆಂಡತಿಯ ಹೊಸಾ ಗಾಡಿಗೆ ನಂಬರ್ ಬರೆಸಲು ಸ್ಟಿಕರ್ ಕಲಾವಿದನಾದ ಗೆಳೆಯನ ಅಂಗಡಿಗೆ ಹೋದೆ.

ಈ ಇಡೀ ಪ್ರಹಸನ ನೋಡುತ್ತಾ ಇದ್ದ ಗೆಳೆಯ
“ಸಾರ್ ನಾವು ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕಾ ಸಾರ್? ನಾವೇನೂ ಮಾಡೋಕಾಗೋಲ್ವಾ ಸಾರ್?” ಅಂದಾಗ

“ಅವಳ ವಿಶಯ ಸ್ವಲ್ಪ ತಿಳ್ಕೋಬೇಕು ಲೋಕೀ, ಆಕೆ ಎಲ್ಲಿ ಸಿಗ್ತಾಳೆ” ಅಂದೆ.

“ತಡೀರೀ ಸಾರ್ ಅವಳು ಮೋಸ್ಟಲೀ ಮಹಿಳಾ ಮತ್ತು ಮಕ್ಕಳ ಇಲಾಖೆ ಹತ್ರ ಹೋಗಿರ್ತಾಳೆ, ನಮ್ ಹುಡುಗುನ್ನ ಕಳಿಸಿ ಕರೆಸೋಣಾ” ಅಂದು
“ಏ ಪರಮೀ ಆ ತಿಮ್ಮನಹಳ್ಳಿ ಹುಡುಗಿ ಗೊತ್ತಾ? ಅವಳು ಮೋಸ್ಟಲೀ ಮಹಿಳಾ ಮತ್ತು ಮಕ್ಕಳ ಇಲಾಖೆ ಹತ್ರ ಇರ್ತಾಳೆ ಹೋಗಿ ಲೋಕಣ್ಣ ಕರೀತಾಯ್ತೆ ಬರ್ಬೇಕಂತೆ ಅನ್ನು ಹಂಗೇ ಬರುವಾಗ ಮೂರು ಲೋಟ ಕರ್ಬೂಜಾ ಜ್ಯೂಸ್ ತೊಗಂಡು ಬಾ” ಎಂದ.

“ಅಲ್ಲಾ ಲೋಕಿ ಅವಳ ಸಮಸ್ಯೆ ಏನು?
ಈ ಜನಾ ಯಾಕೆ ಅವಳನ್ನ ಇಷ್ಟು ಸದರ ಸಲೀಸು ಮಾಡಿಕೊಂಡಿದಾರೆ?
ಹಾದಿ ಬೀದೀಲಿ ಪೋಲಿಗಳು ಅವಳ ಮೈ ಮುಟ್ಟುವಷ್ಟು ಅವಳನ್ನ ಕೀಳಾಗಿ ನೋಡಿದರೂ ಪೋಲೀಸರು ಪತ್ರಕರ್ತರೂ ಮೂಕವಾಗಿದಾರಲ್ಲ ಅದೇ ನನಗಾಷ್ಚರ್ಯ” ಅಂದೆ.

“ಸಾರ್ ಆ ಯಮ್ಮ ನಮ್ಮ ಸರ್ವೋದಯಾ ಡಿಗ್ರೀ ಕಾಲೇಜಲ್ಲಿ ಯಾವಾಗ್ಲೂ ಫಸ್ಟ್ ಬರ್ತಿದ್ಲು.
ಒಳ್ಲೇ ಕವಯಿತ್ರಿ, ಕಥೆಗಾರ್ತಿ, ವಿಮರ್ಶಕಿ, ಪತ್ರಕರ್ತೆ ಕೂಡಾ ಆಗಿ ಅದೇ ಅವನು ಇದಾನಲ್ಲಾ ಮುಠ್ಠಾಳ ಅವನ ಪತ್ರಿಕೆಯಲ್ಲೇ ಕೆಲಸ ಮಾಡ್ತಿದ್ಲು.
ಇವತ್ತು ಗೊತ್ತಾಯ್ತು ಅವಳು ಅಲ್ಲಿ ಯಾಕೆ ಕೆಲಸ ಬಿಟ್ಲು ಅಂಥಾ.
ಥೂ ಈ ತುಂಬಾ ಓದಿರೋರಲ್ಲೂ ಹಲ್ಕಾ ಜನಾ ಇರ್ತಾರಾ ಸಾರ್, ಅವರು ಸ್ಟೇಜ್ ಮೇಲೆ ಭಾಷಣ ಮಾಡೋದು ನೋಡಿದರೆ ಏನು ಮಹಾ ಸಾಚಾ ಸತ್ಯ ಹರಿಶ್ಚಂದ್ರರ ಥರಾ ಪೋಸ್ ಕೊಡ್ತಾರೆ ಅಲ್ಲವಾ ಸಾರ್” ಅಂದ.

“ನಿಜಾ ಆದರೆ ಅವಳ ಮನೆಯವರದ್ದು ಏನಪ್ಪಾ ಸಮಸ್ಯೆ?
ಅವಳನ್ನ ಯಾಕೆ ಹೀಗೆ ಆಚೆ ಬಿಟ್ಟಿದ್ದಾರೆ? ಎಂದೆ.

ಅವನು “ಸಾರ್ ಅದೊಂದು ದುರಂತ ಕಥೆ ಸಾರ್” ಅಂದು ಮುಗಿಸೋದರೊಳಗೆ ಅವಳು ನಮ್ಮ ಅಂಗಡಿಗೆ ಬಂದು ತಲುಪಿದವಳು,

“ಸಾರ್ ನಾನು ನಿಮ್ಮ ಹತ್ರ ಮಾತನಾಡಬಹುದಾ ಸಾರ್?
ನನ್ನ ಕಷ್ಟ ಕೇಳೋರೇ ಇಲ್ಲಾ ಸಾರ್? ನಾನು ಯಾರ ಹತ್ರ ಹೇಳಿದರೂ ನನ್ನನ್ನ ಹುಚ್ಚಿ, ಲೂಸ್, ನೀನೇ ಸರಿಯಿಲ್ಲಾ ಅಂಥಾರೆ,
ನಾನೇನು ತಪ್ಪು ಮಾಡಿದ್ದೀನಿ ಸಾರ್ ಅಂಥಾದ್ದು” ಅಂದು ಕಣ್ಣಲ್ಲಿ ನೀರಾದಳು.

ಪರಮಿ ತಂದ ಜ್ಯೂಸನ್ನು ಅವಳಿಗೆ ಕುಡಿಯಲು ಕೊಟ್ಟು ಅವಳು ಹೇಳುವ ಅವಳದೇ ಕಥೆಗೆ ಕಿವಿಯಾದೆವು.

“ಸಾರ್ ಮೊನ್ನೆ ನಮ್ಮೂರಲ್ಲಿ ಆ ಮಾಜಿ ಮೆಂಬರ್ರ್ ಶಿವಲಿಂಗ ಇದಾನಲ್ಲಾ ನಾನು ಒಬ್ಬಳೇ ಮನೆಲಿದ್ದಾಗ ಮದ್ಯಾಹ್ನ ಮನೆಗೇ ನುಗ್ಗಿ ನನ್ನನ್ನ ರೇಪ್ ಮಾಡೋಕೆ ಪ್ರಯತ್ನ ಪಟ್ಟ ಸಾರ್. ನಾನು ಆ ತೋಟದ ಮನೆ ಸುತ್ತಾ ಓಡಾಡಿ ತಪ್ಪಿಸಿಕೊಳ್ಳಲು ಕೂಗಾಡುತ್ತಿದ್ದರೂ ಆ ಕಾಲೋನಿ ಜನ ಕಣ್ಣು ಬಿಟ್ಟು ನೋಡುತ್ತಿದ್ದರೇ ವಿನಹ ಯಾರೂ ನನ್ನನ್ನು ರಕ್ಷಿಸಲು ಬರಲಿಲ್ಲಾ ಸಾರ್, ಎಲ್ಲ ಷಂಡರ ವಂಶಕ್ಕುಟ್ಟಿದವರಂತೆ ಚಿತ್ರದ ಗೊಂಬೆಗಳ ಥರಾ ನಿಂತಿದ್ರು.

ಅವನು ಯಾರೂ ಬರಲ್ಲಾ ಬಾರೆ, ನಾನು ನಿನ್ನನ್ನ ಅವರ ಮುಂದೇನೇ ರೇಪ್ ಮಾಡಿದ್ರೂ ನೀನು ಹುಚ್ಚಿ ಅಂಥಾ ಎಲ್ಲರಿಗೂ ಗೊತ್ತಿರೋದ್ರಿಂದಾ ನಿನ್ನ ಸ್ಟೇಟ್ಮೆಂಟ್ ಯಾವ ಪೋಲೀಸೂ ತಗಳಲ್ಲಾ ಬಿಡೇ ಅಂದು ನನ್ನನ್ನ ಅವರ ಮುಂದೆಯೇ ತಬ್ಬಿ ಹಿಡಿದು ಮುತ್ತಿಟ್ಟ.

ಮೂರು ದಿನದಿಂದಾ ಪೋಲೀಸ್, ಮಹಿಳಾ ಇಲಾಖೆ, ಪತ್ರಕರ್ತರ ಸಂಘ,ಮಹಿಳಾ ಆಯೋಗ ಅಂಥಾ ಅಲೆದಿದ್ದೇ ಬಂತು ಯಾರೂ ಕೇಳ್ತಿಲ್ಲಾ ನೀವೇ ನೋಡಿದ್ರಲ್ಲಾ! ಅಂದು ನಿಟ್ಟುಸಿರು ಬಿಟ್ಟಳು.

“ಅಲ್ಲಮ್ಮಾ ನೀನು ಆ ಶಾಸಕನ ಹತ್ರ ಹೋಗಿ ದೂರು ಕೊಡಬಹುದಿತ್ತಲ್ಲಾ ಯಾರೂ ನನ್ನ ಅಹವಾಲು ಕೇಳುತ್ತಿಲ್ಲಾ ಅಂಥಾ” ಅಂದೆ.

“ಸಾರ್ ಆ ವಯ್ಯ ಶುಧ್ಧ ಇದಾನೆ ಅಂದುಕೊಂಡಿದ್ದೆ.
ನನ್ನ ಕಷ್ಟ ಎಲ್ಲಾ ಕೇಳೋನ ಥರಾ ಆ ಪ್ರವಾಸಿ ಮಂದಿರದಲ್ಲಿ ಕೂತಿದ್ದ ಅವನ ಪಟಾಲಮ್ಮನ್ನು ಹೊರಗೆ ಕಳಿಸಿ,
ಆಮೇಲೆ ಏನು ಹೇಳಿದ ಗೊತ್ತಾ?
ನಾನು ಎಲ್ಹೆಚ್ಚಲ್ಲಿ ಕ್ಲರ್ಕ್ ಕೆಲಸ ಕೊಡಿಸ್ತೀನೀ ನಾನು ಅಲ್ಲಿದ್ದಾಗ ನನಗೆ ಸಹಕರಿಸ್ತೀಯಾ ನೋಡು,
ನಿನಗೂ ಒಂದು ರಕ್ಷಣೆ ಇರುತ್ತೆ ನನಗೂ ಬೇಜಾರು ಕಳೆಯುತ್ತೇ ಅಂಥಾನಲ್ಲಾ ಸಾರ್ ನಾನು ಇನ್ನು ಯಾರನ್ನ ನಂಬಲೀ?

“ಸರೀ ಮನೆಯವರು ಯಾಕೆ ನಿನ್ನನ್ನ ದೂರ ಮಾಡ್ತಿದ್ದಾರೆ?”

“ನಾನು ನನ್ನಪ್ಪನಿಗೆ ಅವನ ಗಂಡು ಮಕ್ಕಳ ಥರಾನೇ ಅವನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದೇ ಪ್ರಾರಂಭವಾಯ್ತು ನೋಡಿ ನನ್ನ ಈ ಹೋರಾಟ.
ನನ್ನ ಅಪ್ಪನೇ ನನಗೆ ಹೊಡೆದ, ಬಡಿದ, ಮನೆಯಿಂದ ಹೊರಹಾಕಿದ. ನನ್ನನ್ನು ರಕ್ಷಿಸಬೇಕಿದ್ದಾ ನನ್ನ 3 ಜನ ಅಣ್ಣಂದಿರು ನನಗೆ ಹುಚ್ಚು ಹಿಡಿದಿದೆ ಅಂಥಾ ಸುಳ್ಳು ಸುದ್ದಿ ಹಬ್ಬಿಸಿದರು. ಅವರ ಹೆಂಡತಿಯರೇ ನಾನು ಕೆಟ್ಟೋಗಿದ್ದೀನೀ, ಯಾವನ್ನೋ ಕದ್ದು ಮದುವೆಯಾಗಿದ್ದಾಳೆ, ಕಳ್ಳ ಬಸಿರು ಮೂರು ಬಾರಿ ತೆಗೆಸಿದ್ದಾಳೆ, ಎಲ್ಲಕ್ಕೂ ಸಾಕ್ಷಿ ಇದೆ ಅಂಥಾ ನನ್ನ ಮರ್ಯಾದೆ ಮೂರು ಕಾಸಿಗಿಲ್ಲದಂತೆ ಹರಾಜು ಹಾಕಿಬಿಟ್ಟರು.

ಅವತ್ತಿಂದಾ ನಮ್ಮೂರಿನ ಪುಂಡರು ನಾನು ಮನೆ ಬಿಟ್ಟು ಟೌನಿಗೆ ಬರಲು ಬಸ್ಸಿಗೆ ಆಚೆ ಬರೋದನ್ನೇ ಕಾಯ್ತಿದ್ದು ನಮ್ಮೂರಿನ ಗೇಟಿಗೆ ಹೋಗುವ ದಾರಿಯಲ್ಲಿ ಎಷ್ಟು ಸಲಾ ಎಳೆದಾಡಿದ್ದಾರೆ ಅಂದ್ರೆ ಲೆಖ್ಖಕ್ಕಿಲ್ಲಾ ಸಾರ್, ಯಾಕ್ರಪ್ಪಾ ಹೀಗೆ ಮಾಡ್ತೀರಾ ಅಂದ್ರೆ ಅಲ್ಲಾ ಕಣೇ ಅವನು ಯಾವನೋ ಬೇರೆಜಾತಿಯವನು ನಿನ್ನ ಮುಟ್ಟಿದ್ರೆ ಏನೂ ಅಗಾಕಿಲ್ವಾ ನಾವು ಮುಟ್ಟಿದ್ರೆ ನೀನು ಕೆಟ್ಟೋಗ್ತೀಯಾ ಬಾರೇ ಕಂಡಿದ್ದೀವೆ ಅಂಥಾರೆ ಸಾರ್, ನಾನು ಯಾರ್ಯಾರ್ ಮೇಲೆ ಅಂಥಾ ಕಂಪ್ಲೇಂಟ್ ಕೊಡ್ಲೀ ಸಾರ್?”

“ಅಲ್ಲಮ್ಮಾ ಮಹಿಳಾ ಆಯೋಗಕ್ಕೇ ಹೋಗಿ ಕಂಪ್ಲೇಂಟ್ ಕೊಡೋಕಿಲ್ಲವಾ ಅಂದೆ.”ನಾನು.

“ಆ ಮಹಿಳಾ ಆಯೋಗಕ್ಕೆ ಹೋದ್ರೆ ಅವಳು ನನ್ ಕಂಪ್ಲೇಂಟ್ ತೊಗೋಳೋಕೆ ಅದೇ ಆ ಕಿತ್ತೋದ ಎಮ್ಮೆಲ್ಲೆಗೆ ಪೋನ್ ಮಾಡಿ ತಗಳನಾ ಸಾರ್ ಅಂದ್ಲು.
ಅವನು ಬೇಡಾ ಅಂದಿರಬೇಕು ಅದಕ್ಕೇ ಅವಳು ನನಗೇ ಬುದ್ದಿವಾದ ಹೇಳಿ ಸ್ವಲ್ಪ ಇವತ್ತಿನ ಪ್ರಪಂಚದಲ್ಲೀ ಬದುಕೋದು ಕಲೀ, ಅವರು ಕೆಲಸ ಕೊಡುಸ್ತೀನೀ ಅಂದ್ರೂ ಬೇಡಾ ಅಂದ್ಯಂತೆ ಏನು ದುರಹಂಕಾರ ನಿನಗೆ, ನಿನ್ನನ್ನ ಯಾರಾದ್ರೂ ಜಾಣೆ ಅಂಥಾರಾ ದಡ್ಡೀ ಅಂದು ಮತ್ತೆ ಈ ಕಡೆ ಬರಬೇಡಾ ಅಂದ್ಲು ಸಾರ್”.

“ಹೋಗ್ಲೀ ನಿನ್ನ ಆಸ್ತಿಯಲ್ಲಿ ಪಾಲು ಕೊಟ್ಟನಾ ನಿಮ್ಮಪ್ಪಾ” ಅಂದೆ.

“ಕೊಟ್ಟ ಅಲ್ಲಾ, ಪಡೆದುಕೊಂಡೇ ಸಾರ್, ಆ ಹಾಳು ತೋಟ, ಹಾಳು ಮನೆ ಕೊಟ್ಟಿದ್ದಾರೆ”.

ನಾನು ಲೋಕಿಗೆ ಕೇಳಿದೆ “ನಿನಗೆ ಏನಾದ್ರೂ ಮಾಡಬೇಕು ಅಂತಿದ್ದೆಯಲ್ಲಾ?ಇವಳನ್ನ ಮದುವೆಯಾಗಿ ರಕ್ಷಣೆ ಕೊಡ್ತೀಯಾ ಅಂದೆ!.

ಇಬ್ಬರ ಕಣ್ಣಲ್ಲೂ ಹೊಸ ಬೆಳಕು ಮಿಂಚಿತು.

1mQV3J

Advertisements