ಅದೇ ಮಲ್ಲಿಗೆ ಬಳ್ಳಿ, ಅದೇ ಹೂ ಹುಡುಗನ ನನಸು.

ಆ ದಿನವೇ ನೆನಪಾಗುತ್ತೆ, ಮತ್ತೆ ಮತ್ತೆ ಬೇಡವೆಂದರೂ, ಬೇಕೆಂದರೂ.ನನ್ನ ನಿನ್ನ ನಡುವೆ ಮಲ್ಲಿಗೆ ಬಳ್ಳಿಯೊಂದು ಹುಟ್ಟಿತ್ತು, ಹಬ್ಬಿತ್ತು, ಹೂ ಬಿಟ್ಟಿತ್ತು. ನಾನೂ ಅದೇ ಮಲ್ಲಿಗೆ ಹೂಗಳ ಬೊಗಸೆ ತುಂಬಾ ತಂದು ನಿನ್ನ ಮುಡಿತುಂಬಾ ಮುಡಿಸುವ ಕನಸು ಕಂಡಿದ್ದೆ. ಆ ಸುದಿನ ಅದೆಷ್ಟು ಬೇಗನೆ ಬಂದಿತ್ತು. ಇಬ್ಬರಲ್ಲೂ ಒಬ್ಬರನ್ನೊಬ್ಬರು ಕಣ್ತುಂಬಾ ನೋಡುವ ಕಾತುರ. ಇಬ್ಬರೂ ಒಪ್ಪಿ ಕೆಲವು ನಿಮಿಷಗಳ ಭೇಟಿಯಿದ್ದುದನ್ನು ಮತ್ತೆ ಘಂಟೆಗಳಾಗಿ ಬದಲಾಯಿಸಿಕೊಂಡಿದ್ದೆವು. ನಾನು ನಿನ್ನ ನೋಡುವ ದಾರಿ ಹಿಡಿಯುವ ಮುನ್ನ ನನ್ನ ಮೊದಲ ಹೆಜ್ಜೆಯಿಟ್ಟದ್ದನ್ನು ನಿನಗೆ ತಿಳಿಸಿದ್ದೆ. ನೀನೂ ನಿನ್ನೆಡೆಗಿನ ನನ್ನ ಪಯಣಕ್ಕೆ ಶುಭ ಕೋರಿದ್ದೆ.ಅವತ್ತೂ ನಮ್ಮ ಸುತ್ತ ಮುತ್ತ ಜನರ ಭಯ, ಭೀತಿ,ನಿರಾಸೆ,ಸಾವಿನ ನೆಪ,ಕಳೆದು ಹೋಗುವ ಚಿಂತೆ, ಹೀಗೆ ನೂರೆಂಟು ಮಾಮೂಲಿಯಲ್ಲದ ರಗಳೆಗಳೇ ಇದ್ದವು. ಆದರೂ ಇವೆಲ್ಲದರ ಮಧ್ಯೆ ನಾವಿಬ್ಬರು ಮಾತ್ರ ಸಿಗುವ, ಸೇರುವ, ಖುಷಿಪಡುವ,ಹಂಚಿಕೊಳ್ಳುವ,ಒಂದಾಗುವ,ನಿರೀಕ್ಷೆ, ತವಕದಲ್ಲಿದ್ದೆವು.

ಅದೇ ಹೋಟೆಲ್ಲು. ಅದೇ ಜಾಗ.ಮೊನ್ನೆ ಹೋಗಿದ್ದೆ. ನಮ್ಮ ನಡುವೆ ನಡೆದ ಮೊದಲ ಭೇಟಿಯ ದಿನ ನೆನಪಾಯ್ತು. ನಾನು ಅಲ್ಲಿ ತಲುಪುತ್ತಿರುವ ಸುದ್ದಿ ಪ್ರತಿಕ್ಷಣ ನಿನ್ನ ಫೋನಲ್ಲಿ. ನಾನು ಇಳಿದವನೇ ನನ್ನ ಮಾಮೂಲಿ ಹವ್ಯಾಸದಂತೆ ಮೊದಲು ಕೂರುವ ಜಾಗ ಹುಡುಕಿದೆ. ಅದೇ ಟೇಬಲ್ಲಿಗೆ ನನ್ನ ಸಿಬ್ಬಂದಿಗೆ ಕಣ್ಣ ಸನ್ನೆಯಲ್ಲೇ ಹೇಳಿ ರಿಸೆರ್ವ್ ಮಾಡಿಸಲು ತಿಳಿಸಿದೆ. ಆಚೆ ನಿಂತು ನಿನ್ನ ಬರುವಿಗೆ ಕಾದಿದ್ದೆ. ನೀನು ಆಟೋ ಇಳಿದೆ. ಕೈಯಲ್ಲಿ ಸತತವಾಗಿ ವರದಿ ಮಾಡುತ್ತಿದ್ದ ಅದೇ ಮೊಬೈಲು ಹುಡುಗಿಯ ನೋಡಿ ಹಿಂತಿರುಗಿ ಹೋಟೆಲ್ ದ್ವಾರದ ಬಳಿ ನೋಡಲು ತಿಳಿಸಿದೆ. ತಿರುಗಿ ನೋಡಿದ ನೀನು ನಕ್ಕು ಮೊಬೈಲ್ ಆಫ್ ಮಾಡಿದೆ.

ಇಬ್ಬರೂ ಒಳ ನಡೆದೆವು. ಮತ್ತವರೆಲ್ಲ ಅದೇ ಹೋಟೆಲ್ಲಿನ ಅಲ್ಲಲ್ಲಿ ಆಸೀನರಾದರು. ನಮ್ಮ ಟೇಬಲ್ಲಿಗೆ ಮಾತ್ರ, ಸುತ್ತ ಮುತ್ತ ಯಾರೂ ಕುಳಿತುಕೊಳ್ಳದ ವ್ಯವಸ್ಥೆಯಾಗಿದ್ದು ನಿನಗೆ ಗೋಚರಿಸಲೇ ಇಲ್ಲ. ಯಾಕೆಂದರೆ ನೀನು ನಿನ್ನ ಮೊಬೈಲಿನಲ್ಲಿ ಮುಳುಗಿಹೋಗಿದ್ದೆ. ಮುಂದೆ ನಡೆದಿದ್ದೆಲ್ಲವೂ ಇಬ್ಬರಿಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಕೊಡು ಕೊಳ್ಳುವ ಸಹಜ ಕ್ರಿಯೆಗಳು. ನನ್ನಲ್ಲಿದ್ದದ್ದನ್ನು ನಿನಗೆ ಕೊಟ್ಟೆ. ನೀನು ಪ್ರೀತಿಯಿಂದ ಬರೆದದ್ದೆನ್ನಲ್ಲಾ ಅದೇ ಚೆಂದದ ಮರು ಬಳಕೆಯ ಕಾಗದದ ಚೀಲದಲ್ಲಿ ಕೊಟ್ಟೆ. ನಿನ್ನ ಆ ಒಂದು ಪುಸ್ತಕ ಮಾತ್ರಾ ಇರಲಿಲ್ಲ ಅದರಲ್ಲಿ. ಅದಕ್ಕಾಗಿ ನೀನೆಷ್ಟು ಶ್ರಮಪಟ್ಟು ಅದರದೊಂದೂ ಪ್ರತಿ ನಿನ್ನ ಬಳಿ ಉಳಿಸಿಕೊಳ್ಳಲಾಗದ ಅಸಹಾಯಕತೆ ತೋಡಿಕೊಂಡೆ.

ಇಬ್ಬರ ಬಳಿಯೂ ಕುಳಿತುಕೊಳ್ಳಲೂ, ಸುಮ್ಮ ಸುಮ್ಮನೇ ಹರಟಲೂ ಸಮಯವೇ ಇರಲಿಲ್ಲ.ಪ್ರೀತಿಯೊಂದು ಕಳೆದುಹೋದದ್ದರ ಚಿಂತೆಯ ನಿನ್ನ ಕಣ್ಣಿರ ನಡುವೆ ನೀನಿದ್ದೆ, ಜೊತೆಯಲ್ಲಿ ನಾನೂ ಇದ್ದೆ. ನಿನ್ನ ನಿಜದ ರೂಪ ಅಂದು ಅರಿತ ನಾನು, ನನ್ನ ಜೀವಕಣಗಳ ಮತ್ತೊಂದು ಭಾಗದ ಪ್ರತಿರೂಪ ಅಲ್ಲೇ ಕಂಡು, ಜೋಡಿಸಿಕೊಂಡಿದ್ದೆ. ತದನಂತರ ನಾವಿಬ್ಬರೂ ಮತ್ತೆಂದೂ ಬೇರಾಗದ ಮಾತು ಇಬ್ಬರೂ ಶಪಥಗೈದಿದ್ದು ಎಲ್ಲ ಮನದೊಳಗೆ ಮತ್ತೆ ಮತ್ತೆ ಮರುಕಳಿಸಿದೆ. ನಂತರ ನಡೆದ ಭೇಟಿಗಳೆಷ್ಟೋ, ಮಾತುಕಥೆಗಳೂ ಲೆಕ್ಕಕ್ಕೆ ಸಿಗದಷ್ಟು, ಮತ್ತು ಮೌನದ ನಿಟ್ಟುಸಿರುಗಳೂ ಹಿಡಿದಿಡಲಾಗದ ಬೆಳಕಿನಷ್ಟು. ಇಬ್ಬರೂ ಜೊತೆ ಜೊತೆ ನಡೆದ ಹೆಜ್ಜೆಗಳೆಷ್ಟೋ, ಲೆಕ್ಕವಿಟ್ಟವರಾರು,ನೆನಪುಗಳ ಖಾಲಿ ಖಾಲಿ ಪುಟಗಳಿಗೆ ದಿನಾಂಕ ಬರೆದು ಮೊಳೆಯೊಡೆದು ತಗುಲಿಹಾಕಿದವರಾರು.
****
ಇಂದೂ ಅದೇ ರೀತಿಯ ಸಮಯ. ನಿನ್ನಲ್ಲಿ ನೀನು ಕಳೆದುಕೊಂಡಿದ್ದೆಷ್ಟೋ, ಹಾಗೇ ನಾನೂ ಕೂಡ. ಇಬ್ಬರೂ ಸಾಕಷ್ಟು ಗಳಿಸಿರಬಹುದು ಜನರ ಕಣ್ಣಿಗೆ ಕಾಣುವಂತೆ. ಆದರೆ ಒಳಗೆ ಕಳೆದುಕೊಂಡಿರುವುದು ನಮ್ಮಿಬ್ಬರ ಮನಸ್ಸಿಗೆ ಮಾತ್ರಾ ಗೊತ್ತು ಅಲ್ವಾ.ಆ ದಿನದಿಂದ ನಾವಿಬ್ಬರೂ ಜೀವಿಸಿದ ನಮ್ಮ ಪ್ರತೀ ಕ್ಷಣಗಳ ಕಿವಿಗಳಿಗೆ ನಮ್ಮ ತೊಳಲಾಟ, ನಿಟ್ಟುಸಿರುಗಳ ಬಿಸಿಯ ಬೇಗೆ ಕೇಳಿಸಿದೆಯಂತೆ. ಹೊರಗೆ ನೋಡಲು ಇಬ್ಬರೂ ಮಾಮೂಲಿಯಂತೆ ಕಂಡರೂ ಒಳಗೊಳಗೆ ಪ್ರತೀ ಕ್ಷಣ ಹಂಚಿಕೊಂಡ ಎಲ್ಲ ಭಾವನೆಗಳು ನಿಗಿ ನಿಗಿ ಕೆಂಡದ ಉಂಡೆಗಳಾಗಿ ಸುಡುತ್ತಿರುವುದರ ಶಾಖ ನಮಗೆ ಮಾತ್ತ ಅರಿವಾಗುತ್ತಿದೆಯಲ್ಲವೇ. ನಿನ್ನ ಪ್ರತೀ ಅಕ್ಷರ, ನಮ್ಮಿಬ್ಬರ ನಡುವೆ ನಡೆದ ಎಲ್ಲ ಮಧುರ, ಅಮಧುರ ಅನುಭವಗಳ ದಾಖಲಾತಿಯಲ್ಲದೆ ಮತ್ತೇನು ಗೆಳತಿ.

“ಲೈಫ್ ಬಾಯ್” ಎಲ್ಲಿದೆಯೋ ಅಲ್ಲಿದೇ ಆರೋಗ್ಯ, ಎಂಬ ಹಳೇ ಇಟ್ಟಿಗೆಯಂಥ ಎಷ್ಟು ಹಚ್ಚಿದರೂ ಸುಲಭಕ್ಕೆ ಸವೆಯದ ಚಿರ ನೆನಪಿನ ಸೋಪಿನ ಹಾಡು ನನ್ನ ಯೂ ಟೂಬಿನಲ್ಲಿ ನೋಡುತ್ತಿರುವೆ ಈಗ. ನನಗನ್ನಿಸುತ್ತೆ “ಪ್ರೀತಿ ಎಲ್ಲಿದೆಯೋ ಅಲ್ಲಿದೇ ತಾಪ” ಅಂತಾ. ಇಬ್ಬರಿಗೂ ಇದನ್ನು ವಿವರಿಸ ಬೇಕಿಲ್ಲ ಅಲ್ಲವೇ. ಇಬ್ಬರೂ ಅನುಭವಿಸಿರುವ ಸಮಾನ ಸುಖವಿದು. ನಿನಗೆ ನಿನ್ನದೇ ಒಲವಿನ ನೀರುಣಿಸುವ ಝರಿ ತೊರೆಗಳು, ನನಗೆ ಭಾವವೂ ಇಲ್ಲದ, ನಿರ್ಭಾವದ ಅರಿವೂ ಇಲ್ಲದ ನೀನಿಲ್ಲದ ಕೊರತೆಗಳು ಮಾತ್ರ ಸಾಗರದಷ್ಟಿವೆ. ಈ ಬದುಕೇ ಹಾಗಲ್ಲವೇ. ಒಮ್ಮೆ ಬಿಟ್ಟು ಇರಲಾರೆ ಎನ್ನಿಸುವುದು ಮತ್ತೊಮ್ಮೆ ಯಾಕೋ ಇದು ಅತೀ ಎನಸುವುದು ಸಹಜವೂ ಕೂಡ.

ಹಾಗೆ ಆದಾಗಲೇ ಎಲ್ಲವೂ ಒಂದು ಹಂತ ಮೀರಿ ಮೇಲಕ್ಕೋ ಕೆಳಕ್ಕೋ ಏರುವುದೋ ಇಳಿಯುವುದೋ ತೋರಿಸುವ ಬದುಕಿನ ಸಹಜ ಗ್ರಾಫಿನ ಪುಟದಂತಾಗುವುದು. ಯಾವುದೇ ಜೀವನ ಸರಳ ರೇಖೆಯಂತಿರುವುದು ನಿನ್ನ ಅಷ್ಟೂ ಓದಿನ ತಿಳುವಳಿಕೆಯಲ್ಲಿ ಕಂಡಿದ್ದರೆ ಈ ಬಾರಿ ಬಂದಾಗ ಮರೆಯದೆ ತಿಳಿಸು. ನಾನು ನಿನ್ನನ್ನೂ ನೀನು ನನ್ನನ್ನೂ ಎಲ್ಲಾದರೂ ಎಂದಾದರೂ ಯಾವ ಕ್ಷಣದಲ್ಲಾದರೂ ಒಮ್ಮೆಯಾದರೂ ಬಿಟ್ಟು ಬದುಕಿದ ಸಾಧ್ಯತೆ ಇದೆಯೇ ಗೆಳತಿ? ನನಗಂತೂ ನೂರಕ್ಕೆ ನೂರೂ ಖಾತರಿ, ಅದು ಸಾಧ್ಯವಾಗುವುದೂ ಇಲ್ಲ ಯಾರು ಬೇಕೆಂದರೂ ಬೇಡವೆಂದರೂ.
****
ನಮ್ಮಿಬ್ಬರ ಜೀವಿಸಿದ ಪ್ರತೀ ಕ್ಷಣಗಳ ದಾಖಲಾತಿ ನಮ್ಮ ಮನದಲ್ಲಿ ಅಚ್ಚಳಿಯದೇ ನಡೆದಿರುವಂತೆ ಸಮಾನಾಂತರವಾಗಿ ನಮ್ಮಿಬ್ಬರ ನಡುವೆ ನಡೆಯುತ್ತಿರುವ ಎಲ್ಲ ಪ್ರಾಪಂಚಿಕ ಅನುಭವವೂ ನಮಗೇ ತಿಳಿಯದಂತೆ ಯಾಂತ್ರಿಕವಾಗಿಯೂ ದಾಖಲಾತಿ ನಡೆದಿದೆ. ನಾವಿಬ್ಬರೂ ಬಾಯಿ ಬಡಿದುಕೊಳ್ಳುವುದರಲ್ಲಿ ನಿಸ್ಸೀಮರು ಎಂದೇ ಹೇಳಬೇಕಾಗಿದೆ ಈಗ. ಈ ವಿಷಯದಲ್ಲಿ ನೀನೇ ಮೊದಲು ಮತ್ತು ನನಗಿಂತ ತುಂಬಾ ಮುಂದು ಕೂಡಾ. ಅದೆಷ್ಟು ತವಕ ನಿನಗೆ, ನಡೆದದ್ದನೆಲ್ಲ ಬರೆದೋ, ಕಿವಿ ಕಚ್ಚಿಯೋ ಜಗಜಾಹೀರು ಮಾಡುವ ಮಗುವಿನ ಮನಸ್ಸು ನಿನ್ನದು.

ನಮ್ಮಿಬ್ಬರಲ್ಲಿ ಯಾರು ಭೌತಿಕವಾಗಿ ಇಲ್ಲವಾದರೂ ನಮ್ಮ ನಡುವೆ ನಡೆದ, ನಮ್ಮಿಬ್ಬರ ಸುತ್ತಮುತ್ತ ಇರುವ ಜನರೊಂದಿಗೆ ನಡೆದ ಪ್ರತಿಯೊಂದೂ ಕ್ಷಣದ ಮಾಹಿತಿ ಜಗ ಜಾಹೀರಾಗುವುದಂತೂ ತಪ್ಪುವುದಿಲ್ಲ. ನಮ್ಮ ಕೈ ಕೈಹಿಡಿದು ನಾವಿಬ್ಬರೂ ನಡೆದಾಡಿದ, ಸವೆಸಿದ ಪ್ರತೀ ಹೆಜ್ಜೆಯೂ, ಚೌಕಿಯಲ್ಲಿರುವ ದಾರಿ ದೀಪದ ಮೇಲಿರುವ ಯಾಂತ್ರಿಕ ಕಣ್ಣುಗಳಲ್ಲಿ ಧಾಖಲಿದೆ. ನಮ್ಮ ಖಾಸಗೀತನದ ಖಾಸ್ ಬಾತ್ ಗಳೂ ಯಾವಾಗ ಬೇಕೆಂದಾಗ ಕೇಳಬಹುದು. ನಮ್ಮೆಲ್ಲರ ಖಾಸಗಿ ಬದುಕೂ ಇಂದು ಬೆಳಕಿನಷ್ಟು ಬೆತ್ತಲೆ, ಬೆತ್ತಲೆ. ಅದೆಷ್ಟು ಕಷ್ಟ ಪಟ್ಟು ಸೊಳ್ಳೆಪರದೆಯಲ್ಲಿ ನೀರು ತುಂಬಿಡಲು ಪ್ರಯತ್ನಿಸುತ್ತಾರೆ ಬುಧ್ದನಷ್ಟೇ ಬುದ್ದಿಯುಳ್ಳ ಜನ. ಇಂದು ನಮ್ಮ ಕತ್ತಲೆಯ ಬದುಕು ಮುಚ್ಚಲಾರದ ಲಕ್ಷಾಂತರ ತೂತುಗಳ ತೂತು ಬಿದ್ದ ಸೊಳ್ಳೆಪರದೆಯಿದ್ದಂತೆ.

****
ಪ್ರೀತಿ ಹುಟ್ಟಬೇಕು ಎರಡು ಮನಗಳ ನಡುವೆ. ಅದಕ್ಕೆ ಯಾರಪ್ಪನ ಅಪ್ಪಣೆಯೂ, ಅನುಮತಿಯೂ, ಅಂಗೀಕಾರವೂ,ರಾಜನ ಒಪ್ಪಿಗೆಯ ಗೊಡವೆಯೂ ಇರಬೇಕಿಲ್ಲ, ಅವನ ಆಸ್ಥಾನದ ರಾಜ ಮುದ್ರೆಯೂ ಬೇಕಿಲ್ಲ. ಪ್ರೀತಿಸುವ ಮನಸ್ಸುಗಳ ನಡುವೆ ಯಾವ ಕಾಲದ, ವಯದ, ನಿರೀಕ್ಷೆಯ, ಅಡೆ ತಡೆಯ ಗೋಡೆಗಳೂ, ಕೋಟೆಗಳೂ, ಮುಚ್ಚಿದ ಬಾಗಿಲುಗಳೂ, ಬೀಗ ಜಡಿವ ಜನರೂ ಯಾವ ಕಾಲದಲ್ಲೂ ಇರಬಾರದು.

ಹಾಗೇ ಮತ್ತೆ ನಾವು ಸಂಧಿಸುವ ಕಾಲ ಬಂದಿದೆ. ನಡುವೆ ಸಾಕಷ್ಟು ದಾರಿ ಸವೆದಿದೆ. ನಾನೂ ನೀನೂ ಅದೇ ದಾರಿಯ ಮಗ್ಗುಲಿನಲ್ಲಿ ನಡೆದದ್ದೂ ಮುಗಿದಿದೆ. ಇಬ್ಬರಿಗೂ ನಡುವೆ ವಿಷಹಿಣಿದ ಜನರ ವರ್ತನೆಗಳೂ ಅರ್ಥವಾಗಿದೆ. ಅದೆಲ್ಲ ಸಹಜವೆಂಬ ಅರಿವೂ ನಮ್ಮಿಬ್ಬರಿಗೂ ಯಾವತ್ತೂ ಇದೆ. ಮಾತೆತ್ತಿದರೆ ಅಲ್ಲಮ, ಅಕ್ಕ, ಬುಧ್ದನ ಹೆಸರಿಡಿದೇ ಮಾತನಾಡುವ ಜನರ ನಡುವೆ ಬದುಕಿ ಉಸಿರಾಡುವ ನಾವುಗಳು ಮತ್ತೆ ನಾವಿಬ್ಬರು ನಡೆದ ಅದೇ ಮುಖ್ಯದಾರಿಗೆ ಬರಲಿಕ್ಕಿದೆ. ಅಂದಿನಿಂದ ಇಲ್ಲಿಯವರೆಗೆ ಮಲ್ಲಿಗೆ ಬಳ್ಳಿಯೂ ಹೆಚ್ಚು ಹೆಚ್ಚು ಹಬ್ಬಿದೆ. ಕೈತುಂಬಾ ಮಲ್ಲಿಗೆಯಿಡಿದು,ಮೊಳಗಟ್ಟಳೆ ಮನಸಾರೆ ಪೋಣಿಸಿ, ನಿನ್ನ ಮುಡಿಯೇರಿಸುವ ಸಮಧುರ ಕ್ಷಣಗಳು ಆದಷ್ಟೂ ಬೇಗ ಬರಲಿ ಎಂಬ ನಮ್ಮಿಬ್ಬರ ಕನಸು ನನಸಾಗಲೀ. ಎಂದೆಂದೂ ಅದೇ ಹಾರೈಕೆಗಳೊಂದಿಗೆ ನಿನ್ನ ಅದೇ ಎಂದೂ ಬದಲಾಗದ ಹೂ ಹುಡುಗ.

ಇಂತಿ ನಿನ್ನ
ಅನ್ ಲಿಮಿಟೆಡ್ ಪ್ಲಾನ್ ನ ಫೋನ್ ಗೆಳೆಯ,
@ 9-30-60-90-420.

hacked-thieves-bypass-lock-screen-your-samsung-galaxy-note-2-galaxy-s3-more-android-phones.1280x600

Advertisements

ಈ ಬ್ಲಾಗೆಂಬ ತೆರೆದ ಬಾಗಿಲು,,,,

ಕೆಲವರಿಗೆ……
ಇದೊಂದೇ ಬಾಗಿಲು

ಸುರತಿಗೆ, ಆತ್ಮರತಿಗೆ.
ವಿರಸಕೆ, ಸರಸಕೆ.

ಅಳಿವಿಗೆ, ಉಳಿವಿಗೆ.
ಮೌಢ್ಯಕೆ, ಅರಿವಿಗೆ,

ಗೌಪ್ಯಕೆ, ಬಯಲಿಗೆ.
ತೋರಿಕೆಗೆ, ಮುಚ್ಚಿಕೆಗೆ.

ತೆಗಳಿಕೆಗೆ, ಹೊಗಳಿಕೆಗೆ.
ಶಾಪಕೆ,ಕ್ಷಮೆಗೆ.

ಬಿಕ್ಷೆಗೆ,ದಾನಕೆ.
ದ್ವೇಶಕೆ,ಪ್ರೀತಿಗೆ.

ಬಾವಕೆ,ಭಕ್ತಿಗೆ.
ಸಾವಿಗೆ,ಬದುಕಿಗೆ.

ಏರಲು,ಇಳಿಯಲಿಕ್ಕೆ.
ಹಾರಲು,ಮುಳುಗಲಿಕ್ಕೆ.

ನಿರ್ಜೀವಕೆ,ಜೀವಕೆ.
ಭ್ರಮೆಗೆ, ವಾಸ್ತವಕೆ.

ದೇಹಕೂ, ಉಸಿರಿಗೂ,
ಬೆಸೆವ ಕಿಟಕಿ ಇದೊಂದೇ,

ಈ ಬ್ಲಾಗೆಂಬ ತೆರೆದ ಬಾಗಿಲು….

girl-in-open-door-stefan-kuhn

ಇನ್ನು ಮುಂದೆಂದೂ+++++++++++

ನಮ್ಮಿಬ್ಬರ ನಿಜದ ಪ್ರೀತಿಗೆ
ಕಾನೂನು ವಿಧಿಸಿದ ಶಿಕ್ಷೆ,
ಮರಣದಂಡನೆ…….!!!

ಇದೇ ನನ್ನ ಕೊನೆಯ ಮಾತು;
ನಿನ್ನನ್ನು ಅಂದೂ ಪ್ರೀತಿಸಿದ್ದೆ,
ಇನ್ನು ಮುಂದೆಂದೂ……………

ನಿನ್ನ ಕಾನೂನಿನ ಪ್ರಯತ್ನಕ್ಕೆ
ಜಯವಾಗಲಿ………………
ನನ್ನ ಸಾವಲ್ಲೂ ನಮ್ಮ ಪ್ರೀತಿಗೇ
ಜಯಸಿಗಲಿ………………….

lead_large

ಖಾಲಿಯಾಗಿದೆ

ಮೈಲುದ್ದ ಜನರ ಸರತಿ,
ಮನೆ ಮಕ್ಕಳು ಬೆಳಗಿಗೆ,
ಗಂಡ ಹೆಂಡತಿ ರಾತ್ರೀ ಪಾಳಿಗೆ,
ಹರಿದ ಒಂಟಿ ಚಪ್ಪಲಿಯೊಂದು,
ತೆವಳೀ ತೆವಳೀ ಅಂಗಡಿಯ,
ಮುಂಬಾಗಿಲಿಗೆ ತಲುಪಿವೆ.

ಹಗಲೆರಡು ಮೂರು ರಾತ್ರಿ,
ಮುಗಿದರೂ ಈ ಮನೆಯ,
ಮಂದಿಗಿಲ್ಲ ರೇಷನ್ನು ಸಿಗುವ ಖಾತ್ರಿ.

ಅಂತೂ ಇಂತೂ ಕೊನೆಗೂ,
ತೆರೆದಿದೆ ಮುಚ್ಚಿದ್ದ ಮುಂಬಾಗಿಲು,
ಆಗೊಮ್ಮೆ ಮುಂದೆ ಚಲಿಸಲು ಬಿಡದವರು,
ಈಗ ಹಿಂದಿನಿಂದ ತಳ್ಳುತ್ತಿದ್ದಾರೆ,
ಆದಷ್ಟೂ ಬೇಗ ಮುಗಿಸು,
ನಿನ್ನ ಕೊಡು ಕೊಳ್ಳುವ ವ್ಯಾಪಾರವ ಎಂದು.

ಅಂಗಡಿಯ ಮಾಲೀಕನೋ ಲೋಕ ನಿಂದಿತ,
ಅವನ ಮುಖದ ಮೇಲೆ ನಗುವು,
ಎಂದೂ ನಕ್ಕಿದ್ದ ಯಾರೂ ಕಂಡಿಲ್ಲ,
ಗಂಟು ಬಿದ್ದ ಮುಖದ ಸುಕ್ಕುಗಳು,
ಸಡಿಲಿಸಿದ್ದನ್ನೂ ಕೂಡಾ.

ಗಂಭೀರವೆಂಬುದು ಅವನ,
ಘನ ಗಟ್ಟಿದ ಮುಖದ ಸೌಂದರ್ಯ.
ಕಿರುನಗೆಯೆಂಬುದೂ ಬತ್ತಿ ಹೋದ ನದಿಯ,
ಮರಳು ಬಗೆದ ಕಾಲಿಯೊಡಲು.

ಕೈಗಳು ಮಾತ್ರಾ ನಾಮುಂದು,
ತಾಮುಂದೆಂದು ಬಗೆದು ಮೊಗೆದು,
ಅಳೆದು ಸುರಿದು ತುಂಬುತ್ತಿವೆ,
ಬಾಗಿಲ ಹೊರಗೆ ಕೈಚಾಚಿ ಮುಂದಿಡಿದ,
ಖಾಲಿ ಚೀಲಗಳೊಳಗಿರುವ ಹಸಿದ ಹೊಟ್ಟೆಗಳ.

ಆದರೂ ಸಾಲಿನ ಸರತಿಯಲಿ,
ನಿಂತವರ ಗೋಳಾಟ ಗೊಣಗಾಟ,
ಎಂದೂ ಮುಗಿಯದ ವ್ಯಥೆಯ ಕಥೆ.
ಮಾಲೀಕನೋ ಅವನ ಬೋರ್ಡಿಗೆ,
ಅದರ ಮಾಮೂಲಿ ಅಕ್ಷರಗಳಿಗೆ,
ಎಂದೂ ನಿಯಮ ಮೀರದ ನಿಯತ್ತು.
ಇಂದೂ ಮರುಕಳಿಸಿದ್ದು ಅದೇ ಕಥೆ,
ಸಕ್ಕರೆ, ಸೀಮೆ ಎಣ್ಣೆ, “ಖಾಲಿಯಾಗಿದೆ”.

ಸರ್ಕಾರ ಸಕ್ಕರೆ ಕೊಟ್ಟಿದ್ದೇ ಕಡಿಮೆ,
ಜನರಿಗೂ ಸಕ್ಕರೆ ಬಳಸಲು,
ಸಿಹಿಮೂತ್ರದ ಕಾಯಿಲೆಯ ಭಯ.

ಸೀಮೆಎಣ್ಣೆ ಸಾಕಷ್ಟು ಸರಬರಾಜಿತ್ತು,
ಅತ್ತೆ ಸೊಸೆಗೆ, ಗಂಡ ಹೆಂಡತಿಗೆ ಸುಡಲು,
ಕೊಳೆಗೇರಿಯ ಜನರ ಭಸ್ಮ ಮಾಡಲು,
ಕಾಳಸಂತೆಕೋರರ ಮುಂಗಡ,
ಕಾಯ್ದಿರಿಸುವಿಕೆಗೆ “ನ್ಯಾಯ ಬೆಲೆ”
ಅಂಗಡಿಯ ಬೋರ್ಡ್ “ಖಾಲಿಯಾಗಿದೆ”
ಸುಂದರ ಅಕ್ಷರಗಳಿಗೆ ಸಾಕ್ಷಿಯಾಯಿತು.

ಅಂಗಡಿಯೂ ಅವರದೇ, ಬೋರ್ಡೂ ಅವರದೇ,
ಅಕ್ಷರವೂ ಅವರದೇ, ಕಾಳಸಂತೆಯೂ ಅವರದೇ,
ಅವರದೇ ನ್ಯಾಯಬೆಲೆ ಅಂಗಡಿಯಲ್ಲಿ!
ಹೊಸತೇನಿದೆ? ಖಾಲಿ ಮಾಡಿಸದೇ ಇರಲು!
ಖಾಲಿಯಾಗದೇ ಉಳಿದ ಮುಗ್ಗುಲಿಕ್ಕಿದ ಅಕ್ಕಿ ಮೂಟೆ,
ಹುಳಬಿದ್ದು ತೂತಾದ ಗೋದಿ ಕಾಳಿನ ಮೂಟೆ,
ಹೊರಗಿನ ಜನರ ಸರತಿ ನೋಡಿ ಅಣಕಿಸಿ ನಕ್ಕವು.

“ಖಾಲಿಯಾಗಿದೆ” ಬೋರ್ಡ್ ಬಡಿದ,
ನ್ಯಾಯಬೆಲೆ ಅಂಗಡಿ ಮುಂಬಾಗಿಲ ಮುಚ್ಚಿ,
ಹಿಂಬಾಗಿಲ ವ್ಯಾಪಾರದಲ್ಲಿ ಮುಳುಗಿತ್ತು.

ಬೇಸರಗೊಂಡ ಜನ ಜಂಗುಳಿ,
ಹೀರೋ ಒಬ್ಬನ ಚಲನಚಿತ್ರ ನೂರು ದಿನ ಪೂರೈಸಿದ,
ಸಂಭ್ರಮದ ಬೋರ್ಡಾಕಿಸಲು,ಉಚಿತ ಟಿಕೇಟ್ ಪಡೆದು,
ಚಿತ್ರ ಮಂದಿರದೊಳಗೆ ನುಗ್ಗಿ, “ಚಿತ್ರ ಮಂದಿರ ತುಂಬಿದೆ”
ಎಂಬ ಬೋರ್ಡ್ ಕಿಲ ಕಿಲ ನಕ್ಕಿತ್ತು.

b935f3563a793c2e18c5e0814c384eaf

ಮರು ಜೀವವಾದಳು

ಅವಳದರ ಕಾವಾದಳು
ಮರು ಜೀವವಾದಳು…

ಹಾರುವ ಹಕ್ಕಿಗೆ
ಪ್ರೀತಿ,
ರೆಕ್ಕೆ ಮೇಲೆ.
ಹಾರುವ ಮುನ್ನ
ಚಿಮ್ಮಲು ಬಳಸಿದ
ಕಾಲು?

ಹಕ್ಕಿ ಹಾರುವುದಾದರೂ
ಏಕೆ?
ನೆಲದಿ ತೆವಳುವ
ಜೀವಗಳ ನೋಡಲೇ?
ಇಲ್ಲ, ಕಬಳಿಸಿ
ಹೊಟ್ಟೆ ತುಂಬಲೇ?
ರೆಕ್ಕೆಗೆ ಕಸುವ
ತುಂಬಲೇ!
ರೆಕ್ಕೆ ಬಲಿಯಲು ಬೇಕು
ಕಾಳು ಮೊಳಕೆ,
ರಕ್ತ ಮಾಂಸ.
ಹಕ್ಕಿ ಆಗಸದಿ ತೇಲಲು,
ಇರಬೇಕು ಅದಕೂ ಶಕ್ತಿ.

ರೆಕ್ಕೆ ಹಾರಿದರೂ
ಹಿಡಿಯಲಾರದು
ಬೇಟೆ,ಮಾಂಸ,

ಇವೆಲ್ಲಕೂ ಬೇಕು
ಕಾಲಿನ ನೆರವಿನ,
ನೆನಪು.

ರೆಕ್ಕೆ ಬಿರುಸು
ಮರೆ ಮಾಡಿದರೂ
ಕಾಲಿನ ನೆನಪು,
ಕಹಿ ಸತ್ಯ,
ಪ್ರತಿಕ್ಷಣದ
ಹಕ್ಕಿಯ ಬದುಕಿಗೆ.

ಮೇಲೆ ಮೇಲೆ ಹಾರುವ
ಆಕಾಶದೆತ್ತರಕೇರುವ,
ಆನಂದದಿ,
ತನಗಿರುವ ಕಾಲ
ನೆನಪು ಸತ್ತು
ಘೋರಿಸೇರಿದ
ಪಾಪಕೆ
ಪ್ರಾಯಶ್ಚಿತ್ತ,
ಕಾಲಿಲ್ಲದ ಹಕ್ಕಿ.

ಈಗ ಹಕ್ಕಿಗೆ,
ಹಾರಲಿಕ್ಕೆ ಬಲವುಂಟು,
ಮುಟ್ಟಲಾಗದು ನೆಲ
ಹಿಡಿಯಲಾಗದು
ಬೇಟೆಯ ಪಟ್ಟು
ತುಂಬಲಾರದು ಹೊಟ್ಟೆ.
ಸೋಲುತಿವೆ
ಮೇಲೇರಿಸಿದ ರೆಕ್ಕೆ.

ಇಳಿಯಲಾರದು ಭುವಿಗೆ,
ಹಾರಲೂ ಆಗದು,
ಬದುಕುವ ಕೊನೆ ಆಸೆಯ
ಕನಸು ಗಾಳಿಯೊಂದಿಗೆ ಲೀನ
ಹಕ್ಕಿಯ ಶವವೊಂದು
ಧ್ಯಾನಸ್ಥ ಸ್ಥಿತಿಯಲ್ಲಿ
ತೇಲುತ್ತಾ ತಲ್ಲೀನ
ನೀಲಾ ಕಾಶದಲ್ಲಿ ವಿಲೀನ.

ಕೆಳಗೆ ಕಾದು
ನಿಂತವರೆಷ್ಟೋ ಜನ.
ಹಾರುವುದೊಂದೇ ಕಲಿತ
ಹಕ್ಕಿಯ ಸಮಾಧಿ ಮಾಡಲು.
ಉದುರಲಿಲ್ಲ ಅದರ ಭೂದಿಯೂ,
ಸೇರಲಿಲ್ಲ ಮಣ್ಣಿನ ದಾರಿಯೂ,

ಹಕ್ಕಿಯ ದೇಹ ಸುಟ್ಟ
ಭೂದಿಯೇ,
ಮರು ಹುಟ್ಟಿನ ಮೊಳಕೆಯೊಡೆದ
ಬೀಜದ ಮೊಟ್ಟೆಯಾಗಿ
ಅವಳ ಪ್ರೀತಿಯ ಬೊಗಸೆಯೊಳಗೆ
ತಾನೇ ತಾನಾಗಿ ಬಂದು
ಕುಳಿತಿತ್ತು….
ಅವಳದರ ಕಾವಾದಳು
ಮರು ಜೀವವಾದಳು…

ನಮ್ಮಿಬ್ಬರ ನಿಷ್ಕಲ್ಮಶ ಪ್ರೀತಿಗೆ ಅರ್ಪಣೆ.
(ನಮ್ಮ ನಡುವೆ ಯಾರೇನೇ ಅಂದರೂ)

article-2531133-1A581D3500000578-598_634x401

article-2531133-1A581E1900000578-476_306x423

Phoenix-Mieshka-Files

7575218_f520

22. Phoenix tattoo art

newborn-bird-in-color-POSTER-ARTcrop4

ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…

ಆದರೆ ಈ ಬಾರಿ ನಾನು ಸಾಕಷ್ಟು ಹ್ಯೂಮನ್ ಬಯೋ ಸೆನ್ಸರ್ಗಳ ಬಳಕೆ ಮಾಡಿದ್ದು ಗೊತ್ತಿಲ್ಲದ ಆ ಇಬ್ಬರೂ ಬೇಸ್ತು ಬಿದ್ದಿದ್ದರು.

ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೊಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ ನಂತರ ಒಮ್ಮೆ ನನ್ನನ್ನು ವಿಶೇಷವಾಗಿ ದಿಟ್ಟಿಸಿ ನೋಡಿ ಜಾಗ ಖಾಲಿ ಮಾಡಿದ.

ನಿನ್ನ ಕಣ್ಣುಗಳಲ್ಲೂ ಅದೇ ರೀತಿಯ ತೀರದ ಕುತೂಹಲ ನಮ್ಮಿಬ್ಬರ ಎರಡನೇ ಭೇಟಿಯಲ್ಲಿ ನಾನು ಕಂಡಿದ್ದು ನೆನಪಿಗೆ ಬರಲಾರಂಭಿಸಿತ್ತು. ಹಾಗೆಯೇ ಆ ದಿನಗಳ ಹಸಿರು ಕಾಡುಗಳೂ, ಜಿಟಿ ಜಿಟಿ ಹನಿಯುವ ಮಳೆಯೂ ರಕ್ತ ಹೀರುವ ಜಿಗಣೆಗಳೂ ಮತ್ತು ನಿನ್ನ ನನ್ನ ನಿಘೂಡ ಜಗತ್ತೂ. ಅಂದು ಇಬ್ಬರೂ ಆರಾಮವಾಗಿ ದಿನವಿಡೀ ಒಟ್ಟಿಗೆ ಇರುವುದೆಂದು ಒಪ್ಪಿಕೊಂಡಿದ್ದೆವು. ನಮ್ಮಿಬ್ಬರ ಜೀವನದ ಅಕೌಂಟಿನಲ್ಲಿ ಎಂದೂ ಬ್ಯಾಲೆನ್ಸ್ ನಿಲ್ ಇರುವ ಸಮಯದ ಕೊರತೆ ಬಜೆಟ್ಟಿನಲ್ಲೂ ಸರಿದೂಗಿಸಿಕೊಂಡು. ನಿನ್ನ ಹಾರುವ ಹಕ್ಕಿಯ ಸ್ವಚ್ಛಂದ ಹಾಡುವ ಜೀವನ ನಿನ್ನದಾದರೆ ನನ್ನ ನೆಲದ ರಕ್ಷಣೆಯ ಹೊಟ್ಟೆ ಪಾಡು ನನ್ನದಾಗಿತ್ತು. ಇಬ್ಬರದ್ದೂ ಒಂದೊಂದು ದಿಕ್ಕು ದೆಸೆ. ಆದರೂ ಅನೇಕ ವಿರೋಧಗಳ, ಅಭಾಸಗಳ, ಅನಿರೀಕ್ಷಿತಗಳ ಮೀರಿ ಒಟ್ಟಾಗಿದ್ದೆವು.

ಇಬ್ಬರೂ ವಿರಾಮ ಗಾಗಿ ಮಂಚದ ಮೇಲೆ ಮಲಗಿದಂತೆ ಕುಳಿತು ಲ್ಯಾಪ್ಟಾಪಿನಲ್ಲಿ ಪ್ರಶಸ್ತಿ ಪಡೆದ ಚಿತ್ರಗಳ ನೋಡಿ ಮುಗಿಸಿದ್ದೆವು. ನಮ್ಮಿಬ್ಬರ ನಡುವೆ ಉಳಿದ ಸಮಯಕ್ಕೆ ಸಾಕಾಗುವಷ್ಟಿದ್ದ ಚಾಕೋಲೇಟ್, ಜೇನು ಬೆರೆಸಿದ ಹಸಿರು ಚಹಾ, ನನ್ನ ಬ್ಯಾಗಿನಲ್ಲಿ ತುಂಬಿ ತಂದಿದ್ದ ರೆಡ್ ವೈನ್ ಬಾಟಲ್ಲುಗಳು ಎಲ್ಲವೂ ಮುಗಿಯುತ್ತಾ ಬಂದಿದ್ದವು. ನೀನು ಮಲಗಿದ್ದ ನನ್ನ ಮೊಳಕಾಲ ಮೇಲಿದ್ದ ಅದೇ ಕಲೆಯನ್ನೇ ದಿಟ್ಟಿಸಿ ನೋಡಲಾರಂಭಿಸಿದ್ದೆ. ಸುಮ್ಮನಿರಲಾರದ ನಿನ್ನ ಮಗುವಿನ ಮನಸ್ಸಿನ ಕುತೂಹಲವೂ ಅವನಂತೆಯೇ ನನ್ನ ಅದೇ ನಾಲ್ಕಾಣೆಯಗಲದ ಬಿಳಿ ಮಚ್ಚೆಯನ್ನೊಮ್ಮೆ ಮುಟ್ಟಿ ನೋಡುವಂತೆ ಮಾಡಿತ್ತು. ನೀನು ಮುಟ್ಟಿ ನೋಡಿ ಅದರ ಅಗಲ ಅಳೆಯುವಷ್ಟರಲ್ಲೆ ನಾನು ನಿನ್ನ ಗಮನ ಬೇಕಂತಲೇ ಬೇರೆಡೆ ಸೆಳೆದಿದ್ದೆ. ನೀನು ಅಲ್ಲೇ ಸ್ವಲ್ಪ ಪ್ರೆಸ್ ಮಾಡಿ ನೋಡಿದ್ದರೆ ನಿನಗೂ ಅದು ಗೊತ್ತಾಗಿರುತಿತ್ತು. ಅದೊಂದು ಬಂದೂಕಿನ ಗುಂಡು ಒಳಹೊಕ್ಕು ಮಾಡಿದ ಗುಂಡಿಯ ಮುಚ್ಚಿದ ಮೇಲ್ಮೈ ಮಚ್ಚೆಯೆಂಬುದು.
****

ನಕ್ಸಲರ ಹಾವಳಿ ನಮ್ಮಿಂದ ದೂರದಲ್ಲಿದೆ ಎಂದು ನಿರಾಳವಾಗಿದ್ದ ನಮ್ಮ ರಾಜ್ಯ ಸರ್ಕಾರಕ್ಕೂ ಅವರ ನುಸುಳುವಿಕೆಯ ಬಿಸಿ ತಟ್ಟಿತ್ತು. ಮಲೆನಾಡಿನ ಒಳಗಿನ ದಟ್ಟ ಕಾಡುಗಳಲ್ಲಿ ಅವರ ಓಡಾಟ, ತಾತ್ಕಾಲಿಕ ತರಬೇತಿ ಕ್ಯಾಂಪ್, ಶೇಕರಣಾ ಬಂಕರ್ಸ್ಗಳ ನಿರ್ಮಾಣ ಎಲ್ಲದರ ಗುಪ್ತಚರ ಮಾಹಿತಿ ರವಾನೆಯಾಗಿತ್ತು. ಅವರ ಸುಲಿಗೆಯ ನೇರ ಗುರಿಯಾಗಿದ್ದವರಿಗೂ ಅವರಿಗೂ ತಿಕ್ಕಾಟಗಳೂ, ಸಂಘರ್ಷಗಳೂ ಸಂಭವಿಸಿದ್ದರ ವರದಿ ನಮ್ಮ ಮುಂದಿತ್ತು. ಮುಂದಿನ ದಿನಗಳ ಅವರ ಕಾರ್ಯತಂತ್ರಗಳಿಗೆ ಪ್ರತಿತಂತ್ರ ಹೆಣೆಯುವ ಹೊಣೆಗಾರಿಕೆ ನನ್ನದಾಗಿತ್ತು.

ಸಮಯ ಸಿಕ್ಕಾಗಲೆಲ್ಲಾ ನಮ್ಮವರ ದೈಹಿಕ ಬಲ ಬಳಸಿ ಅವರನ್ನು ಅಲ್ಲಲ್ಲೇ ಮಟ್ಟಹಾಕುತ್ತಾ ಇದ್ದರೂ ಅವರ ಬಲ ಕುಂದಿರಲಿಲ್ಲ. ಅವರ ಮಾಂತ್ರಿಕ ಮಾತಿನ ಮೋಡಿಗೆ ಮರುಳಾಗಿ ಸುಲಭವಾಗಿ ಅವರ ಸುಳಿಗೆ ಸಿಗುತ್ತಿದ್ದ ಸ್ಥಳಿಯ ಯುವಕ ಯುವತಿಯರು ಅವರ ಬತ್ತದ ಶಕ್ತಿಯಾಗಿದ್ದರು. ಕಾಲ ಕ್ರಮೇಣ ನಮ್ಮವರ ನಿರಂತರ ಗುಂಡಿನ ದಾಳಿಗಳಲ್ಲಿ ಏಟುತಿಂದವರು, ಸ್ಪೋಟಕಗಳ ಬಳಕೆಯ ತರಬೇತಿಯ ಸಮಯದಲ್ಲಿ ಕೈ ಕಾಲು ಕಳೆದುಕೊಂಡವರು ಅವರ ಕಡೆ ಹೆಚ್ಚಾದರು. ಸೋಲುವುದು ಖಚಿತವಾದಾಗ ಸಂಧಾನಕ್ಕೆ ಅವರು ನಂಬುವ ಆತ್ಮೀಯ ಮಿತ್ರರಾದ ಮಾಧ್ಯಮದವರ ಮೂಲಕ ಕರೆಬಂತು. ನಾನೂ ಮಾಧ್ಯಮ ಪ್ರತಿನಿಧಿಯಾಗಿ ಅವರ ಅರಿವಿಗೆ ಬರದಂತೆ ತಂಡದೊಳಗೆ ಕಣ್ಣಿಗೆ ಬಟ್ಟೆಕಟ್ಟಿಸಿಕೊಂಡು ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ನಡೆದ ಸಂಧಾನ ಸ್ಥಳಕ್ಕೆ ಹೋಗಿಬಂದಿದ್ದೆ.
****

ಅವರ ನಾಯಕ ಕೇಳಿದಂತೆಯೇ ಎಲ್ಲ ಹದಿಹರೆಯದ ಯುವಕರೂ ಅಷ್ಟೇ ಸಂಖ್ಯೆಯ ಯವತಿಯರನ್ನೂ ಅವರ ಬಳಿ ಕಳಿಸಿಕೊಡುವ ಗುರುತರ ಜವಾಬ್ದಾರಿ ನನ್ನ ಹೆಗಲಿಗೇರಿತ್ತು.ನಾನೂ ನನ್ನ ಮಾಮೂಲಿ ಕಾರ್ಯಾಚರಣೆ ಶುರುವಿಟ್ಟುಕೊಂಡೆ. ನಾನು ಯಾವತ್ತೂ ಚಕ್ರವ್ಯೂಹದೊಳಕ್ಕೆ ನುಗ್ಗುವ ಮುನ್ನ ಸಾವಿರ ಬಾರಿ, ಅನ್ನ ನೀರು ಕಡೆಗಣಿಸಿ, ಅಲ್ಲಿಂದ ಹೊರ ಬರುವ ದಾರಿ ಹುಡುಕುತ್ತಿರುತ್ತೇನೆ. ನಮ್ಮ ಸೆಟಲೈಟ್ ಮ್ಯಾಪಿನ ಪ್ರತೀ ಮಿಲ್ಲೀ ಮೀಟರಿನ ಕೂಲಂಕುಶ ಅಧ್ಯಯನ ಮಾಡಿ ಮುಗಿಸಿದ್ದೆ. 30 ಸಮಬಲ ಯುವಕ ಯುವತಿಯರ ತಂಡದೊಂದಿಗೆ, ನೋಡಿದವರಿಗೆ ಚಾರಣಿಗರೆಂಬಂತೆ ಕಾಣುವಂತೆ ಟ್ರಿಪ್ ಹೊರಟಿರೋ ಟ್ರೆಕ್ಕರ್ಸ್ ಥರಾ ಅಲ್ಲಿಗೆ ತಲುಪಿದ್ದಾಯ್ತು.

ನನ್ನ ಮೂಲ ಯೋಜನೆಯಂತೆಯೇ ಅಮಾವಾಸ್ಯೆಯ ಕರಾಳ ರಾತ್ರಿಗಳಲ್ಲೇ ನಮ್ಮ ಬಿಡಾರ ಬೇಸ್ ಕ್ಯಾಂಪಿನಲ್ಲಿ ಬೀಡು ಬಿಟ್ಟಿತ್ತು. ಅಲ್ಲಿದ್ದ ಎಲ್ಲರೂ ಆ ಮೋಡಗಳ ಮೀರಿ ನಿಗುರಿ ನಿಂತ ಅತೀ ದೊಡ್ಡ ಘಟ್ಟದ ತುದಿ ತಲುಪುವುದೇ ನಮ್ಮ ಜೀವನದ ಗುರಿಯೆಂಬಂತೆ ಕಾಣಿಸಿಕೊಳ್ಳುತ್ತಿದ್ದರು ಹಾಗೇ ಮಾತನಾಡುತ್ತಿದ್ದರೂ ಕೂಡಾ. ನಮ್ಮೊಳಗೆ ತೀರ್ಮಾನವಾದಂತೆ ಬೆಳಗೆಲ್ಲಾ ಯಾರಿಗೂ ಕಾಣದಂತ ಜಾಗದಲ್ಲಿ ಮಲಗುವುದು ಹಾಗೂ ರಾತ್ರಿಯ ಸಂಪೂರ್ಣ ಕಪ್ಪು ಕತ್ತಲಿನಲ್ಲಿ ಮೃಗಗಳಂತೆ ಚಲಿಸುವುದು ಮಾಡುತ್ತಾ 3 ರಾತ್ರಿ ಕಾಡಿನಲ್ಲಿ ನಡೆದಿದ್ದೆವು. ಅವರ ಮೂಲ ಕ್ಯಾಂಪಿನ ಸನಿಹಕ್ಕೆ ಬಂದ ಕುರುಹು ನನಗೆ ಸಿಕ್ಕಿತ್ತು.
****

ಮೂರು ಟೆಂಟುಗಳಲ್ಲಿ 10 ಜನರ ತಂಡಗಳಾಗಿ ಮಲಗಿದ್ದೆವು. ರಾತ್ರೀ ಪೂರಾ ನಡೆದು ಸುಸ್ತಾಗಿದ್ದ ಎಲ್ಲರೂ ಬೆಳಗಿನಜಾವದ ಸಕ್ಕರೆ ನಿದ್ದೆಗೆ ಜಾರಿದ್ದರು. ಇದ್ದಕ್ಕಿದ್ದಂತೆ ನಮ್ಮ ಪಕ್ಕದ ಡೇರೆಯಲ್ಲಿ ಗುಂಡು ಹಾರಿದ ಸದ್ದು ಬೆಚ್ಚಿ ಬೀಳಿಸಿತ್ತು. ನಮ್ಮ ಕ್ಯಾಂಪ್ ಮೇಲೆ ಅವರು ಮುಗಿ ಬಿದ್ದಿರುವುದು ಖಚಿತವಾಯ್ತು. ತಕ್ಷಣ ನನ್ನ ನೈಟ್ ವಿಷನ್ ಲೆನ್ಸ್ ಹಾಕಿಕೊಂಡು ಹೊರಗೆ ನೋಡಿದೆ. ಆ ಡೇರೆಯಲ್ಲಿ ಅವರು ನನ್ನನ್ನು ಹುಡುಕುತ್ತಿರುವುದು ಗೋಚರಿಸಿತ್ತು. ನಮ್ಮೊಡನೆ ಬೆಟ್ಟ ಗುಡ್ಡ ಹತ್ತುವ ಮಾಸ್ಟರ್ ಟ್ರೈನರ್ ಆಗಿ ಬಂದಿದ್ದ ಕೀರ್ತಿಯ ಮೆದುಳು ಚಿದ್ರವಾಗಿ ಅವನ ಅರಿವಿಗೂ ಬಾರದೇ ಚಿರನಿದ್ರೆಗೆ ಜಾರಿದ್ದ. ಮರು ಕ್ಷಣವೇ ನನ್ನ ವಾರ್ ಟೈಮ್ ಅಲೆರ್ಟ್ ಸಿಗ್ನಲ್ ಸೈರನ್ ಹೊಡೆದಿತ್ತು. ಮುಂದೆ ಬರೀ ಗುಂಡಿನ ಸುರಿಮಳೆಯ ಸದ್ದು, ಎಲ್ಲೆಂದರಲ್ಲಿಂದ ಬಂದು ನಮ್ಮನ್ನು ಸೀಳುತ್ತಿದ್ದ ಬುಲ್ಲೆಟ್ಗಳ ಹಾರಾಟ. ಅಲ್ಲಲ್ಲೇ ಬುಲ್ಲೆಟ್ಟ್ ಹೊಕ್ಕವರ ಚೀರಾಟ, ಕೆಲವೇ ನಿಮಿಷಗಳಲ್ಲಿ ಹಲವರ ನಿಂತುಹೋದ ಉಸಿರುಗಳ ನಿಶಬ್ಧ ನೆಲೆಸಿತ್ತು.

ನನ್ನ ಪಕ್ಕವೇ ಮಲಗಿದ್ದ ಆ ಅಭಿರಾಮಿಯೆಂಬ ಎಲ್ ಟಿ ಟಿ ಇ ನಿಗ್ರಹಕ್ಕಾಗಿ ತರಬೇತಿ ಪಡೆದ ಹೆಣ್ಣುಮಗಳು ನನ್ನ ದೇಹವನ್ನೇ ಅವಳ ರಕ್ಷಣೆಗಾಗಿ ತಡೆಗೋಡೆಯಂತೆ ಒಡ್ಡಿದ್ದಳು. ಪಾಪ ಅವಳ ಮದುವೆಯ ಕನಸು ಚಿದ್ರಗೊಳ್ಳುವುದು ಅವಳಿಗೆ ಇಷ್ಟವಿರಲಿಲ್ಲವೆಂಬುದು ನನಗೆ ಗೊತ್ತಿದ್ದರೂ ಅವಳನ್ನು ಅವಳ ಅನುಭವದ ಹಿನ್ನೆಲೆ ಪರಿಗಣಿಸಿ ಕರೆತಂದ ತಪ್ಪಿಗೆ ನನಗೆ ಶಿಕ್ಷೆವಿಧಿಸಲೆಂಬಂತೆ. ಆದರೆ ಅವಳ ಲೆಕ್ಕಾಚಾರ ತಪ್ಪಾಗಿ ಅವಳ ದೇಹದುದ್ದಕ್ಕೂ ಪಯಣಿಸಿದ ಆ ಗುಂಡು ನನ್ನ ಮೊಳಕಾಳಿನ ಮಾಂಸದೊಳಗೆ ಸೇರುವಷ್ಟರಲ್ಲಿ ಅದರ ಗತಿ ಕಳೆದುಕೊಂಡು ಅಲ್ಲೇ ಉಳಿದು ಬಿಟ್ಟಿತು.
****

ನನ್ನ ಈ ಅನಿರೀಕ್ಷಿತ ದಾಳಿಯನ್ನು ಊಹಿಸಿರದಿದ್ದ ಆ ಸೂರ್ಯನೆಂಬ ನಾಯಕ ಅಲ್ಲೇ ಬಂಡೆಯ ಹಿಂದೆ ಅಡಗಿ ಕುಳಿತಿರುವುದರ ಮಾಹಿತಿ ನನ್ನ ಮೈಕ್ರೋ ಫ್ಲೈಯಿಂಗ್ ಕ್ಮಾಮೆರಾಗಳು ಒದಗಿಸುತ್ತಿದ್ದವು. ನಾನು ಬದುಕಿ ಉಳಿದು ಎದುರೇಟು ಕೊಡುವ ಶಕ್ತಿಯಿರುವುದು ಗೊತ್ತಿಲ್ಲದ ಆತ ಅಲ್ಲೇ ಅವನ ಸತ್ತ ಸಹಚರರ ಲೆಖ್ಖಹಾಕುತ್ತಿದ್ದ. ಅಳಿದುಳಿದ ಬಾಂಬುಗಳಲ್ಲಿ ಒಂದನ್ನು ಕೈಗೆ ತೆಗೆದು ಕೊಳ್ಳುವುದರಲ್ಲಿದ್ದ. ಅವನ ಮುಂದಿನ ನಡೆಯೇನೆಂದು ಗೊತ್ತಿದ್ದ ನಾನು ಕ್ಷಣಾರ್ಧದಲ್ಲಿ ಅವನ ಮುಂದಿದ್ದೆ. ನನ್ನ ರಿವಾಲ್ವರ್ರಿನ ನಳಿಗೆ ಅವನ ನೆತ್ತಿಗೆ ಒತ್ತಿ ಮುತ್ತಿಕ್ಕುತ್ತಿತ್ತು. ನನ್ನ ಬೆರಳುಗಳೂ ತಡಮಾಡದೇ ಮಿಂಚಿನಂತೆ ಟ್ರಿಗ್ಗರ್ರ್ ಒತ್ತಿಬಿಟ್ಟಿದ್ದವು. ಅವನ ಕಣ್ಣುಗಳಲ್ಲಿದ್ದ ನಂಬಲಾಗದ ಆಶ್ಚರ್ಯವೂ ಹಾಗೇ ಸ್ಟಿಲ್ ಆಗಿ ನಿಂತಿರುವಂತೆಯೇ ಅವನ ಮೆದುಳು ಕದರಿ ಬಂಡೆಯ ಮೇಲೆ ನೆತ್ತರಾಗಿ ಹರಿದಿತ್ತು. ಅಲ್ಲಿಗೆ ನಮ್ಮ ರಾಜ್ಯದಲ್ಲೂ ಕೆಂಪು ರಕ್ತದೋಕುಳಿಯಾಡುವ ಅವನ ಅರಾಜಕತೆಯ ಬೀಜ ಬಿತ್ತುವ ಆಸೆ ನೆಲಸಮವಾಗಿತ್ತು.

ಮೈಯಲ್ಲಿದ್ದ ನೆತ್ತರೆಲ್ಲಾ ಕುದಿಯುತ್ತಿದ್ದ ನಾನು ಮಾಡಿದ ಮೊದಲ ಕರೆ ಅದೇ ಆ ಸಹೋದ್ಯೋಗಿ ದೇಶದ್ರೋಹಿಗಾಗಿತ್ತು. ನನ್ನ ನಂಬರ್ ನಿಂದ ಬಂದ ಕರೆ ನೋಡಿದ ಅವನು ಅಲ್ಲೇ ಲಘು ಹೃದಯಾಘಾತವಾಗಿ ಕುಸಿದು ಬಿದ್ದು ಸತ್ತಿದ್ದ. ನನ್ನಇಡೀ ಕಾರ್ಯತಂತ್ರವನ್ನು ಮಣ್ಣುಗೂಡಿಸಿ ನನ್ನ ಉಸಿರನ್ನೂ ಇದೇ ಮಲೆನಾಡಿನ ಕಾಡಿನೊಳಗೆ ಲೀನ ಮಾಡುವ ಮಹದಾಸೆಹೊಂದಿದ್ದ ಅವನ ಕನಸು ಚೂರುಚೂರಾಗಿತ್ತು. ಈ ಮೂಗುನತ್ತಿನ ಶೋಕಿಯ ಅರಿವಿದ್ದು ಅವನ ಬೆನ್ನು ಬಿದ್ದು ನಮ್ಮ ಇಲಾಖೆಯ ಅತಿ ಸೆನ್ಸಿಟೀವ್ ವಿಷಯಗಳ ಕಲೆಹಾಕುತ್ತಿದ್ದ ಪತ್ರಿಕೆಯ ವರದಿಗಾರ್ತಿಯೊಬ್ಬಳ ಹುಚ್ಚು ಸೆನ್ಸೇಷನಲ್ ಸಾಹಸದ ಕಥೆ ನನ್ನ ಎಚ್ಚರದ ಮೂಲಕ ನಾಡಿನ ನಂಬರ್ ಒನ್ ಪತ್ತಿಕೆಯಲ್ಲಿ ಪ್ರಕಟವಾಗದೇ ಹೋಯಿತು.
****

ಪಾಪ ಈ ಘಟನೆ ನಡೆದು ಅದೆಷ್ಟು ವರ್ಷಗಳಾದವು. ಮತ್ತೆ ಮತ್ತೆ ಮರುಕಳಿಸುವ ನೆನಪುಗಳು ಮುಂದಿನ ತಿಂಗಳ ಅದೇ 6 ರಂದು ಮತ್ತೆ ಮತ್ತೆ ನೆನಪಾಗುತ್ತವೆ. ನಾನು ಅವರು ಹೆಣೆದ ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೇ ಇದ್ದಿದ್ದರೆ ಅದೇ 6 ರಂದು ನಮ್ಮ ಮನೆಯಲ್ಲಿ ನನ್ನ ಪುಣ್ಯತಿಥಿಯ ವಾರ್ಷಿಕ ಸೂತಕವಿರುತಿತ್ತು. ಅದಕ್ಕಿನ್ನ ಘೋರವೆಂದರೆ ನಮ್ಮ ಕಾರ್ಯಾಚರಣೆಯಲ್ಲಿ ಒಂದೇ ಒಂದು ಜೀವವೂ ಸಾಯದೆ ಅವನನ್ನು ಅತೀ ಸಮೀಪದಿಂದ ನಾನು ಗುಂಡಿಕ್ಕುವ ಅವಕಾಶ ಕಸಿದಿದ್ದ ಆ ದ್ರೋಹಿಗಳ ದೆಸೆಯಿಂದ ಇಂದು 29 ಮನೆಗಳಲ್ಲಿ ಅದೇ ದಿನ ಶ್ರಾಧ್ದದ ಸೂತಕ. ನನ್ನ ಜೊತೆ ಬಂದಿದ್ದ ಯಾರೊಬ್ಬರೂ ಉಳಿಯದೆ ಅಸು ನೀಗಿದ್ದು ಅಂದಿನ ದುರಂತ. ಅದರಲ್ಲೂ ಆ ಕೀರ್ತಿ ಮತ್ತು ಅಭಿರಾಮಿ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡು ಇನ್ನು ಕೆಲವೇ ದಿನಗಳಲ್ಲಿ ಮಧುಮಗ/ಳಾಗುವವರಿದ್ದರು. ಅವರೆಲ್ಲರ ನೆನಪಿಗಾಗಿ ಅಂದು ನಾನು ಉಪವಾಸ, ಮೌನವ್ರತ ಆಚರಿಸಿ ಇನ್ನಷ್ಟು ವಿದ್ರೋಹಿಗಳ ಕುತಂತ್ರಗಳನ್ನು ಛೇದಿಸುವ ಪಣ ತೊಡುತ್ತೇನೆ ಪ್ರತೀ ವರ್ಷ.

ಈ ಇಡೀ ಕಾರ್ಯಾಚರಣೆಯನ್ನು ನಾನು ನನ್ನ ಜವಾಬ್ದಾರಿಯಲ್ಲಿ ತೆಗೆದುಕೊಂಡಿದ್ದು ನಮ್ಮ ಗುಪ್ತದಳದ ಆ ವಿದ್ರೋಹಿಗೆ ಮಾತ್ರಾ ಗೊತ್ತಿತ್ತು. ಅವನು ಅವನ ಮಾಧ್ಯಮ ಗೆಳತಿಯ ತೊಡೆಮೇಲೆ ಮಲಗಿ ಮೈಮರೆತು ಉಸಿರಿದ್ದ ತಪ್ಪಿಗೆ ನಮ್ಮ 29 ಜನರ ತಂಡ ಬಲಿಯಾಗಬೇಕಾಯಿತು. ಈ ವಿಷಯ ಅವನ ಖಾಸಾ ಬದುಕಿನ ಗೆಳತಿಯಾದ ಅವಳಿಂದ ತಿಳಿದ ಸೂರ್ಯ ನನ್ನ ಕಾರ್ಯಾಚರಣೆಯ ಶೈಲಿ ಅರಿತಿದ್ದರಿಂದ ಅವನ ಅಡಗು ತಾಣ ನಾವು ತಲುಪುವ ಮುನ್ನವೇ ನಮ್ಮ ಮೇಲೆ ಧಾಳಿಮಾಡಿದ್ದ. ಆದರೆ ಈ ಬಾರಿ ನಾನು ಸಾಕಷ್ಟು ಹ್ಯೂಮನ್ ಬಯೋ ಸೆನ್ಸರ್ಗಳ ಬಳಕೆ ಮಾಡಿದ್ದು ಗೊತ್ತಿಲ್ಲದ ಆ ಇಬ್ಬರೂ ಬೇಸ್ತು ಬಿದ್ದಿದ್ದರು. ಅವರ ಇಡೀ ದೇಹದ ಪ್ರತೀ ಚಲನೆಯ ಕಾರ್ಯಕ್ರಮಗಳು ನನ್ನ ಕಪ್ಪು ಕನ್ನಡಕದ ಮಾನಿಟರ್ನಲ್ಲಿ ದಾಖಲಾಗುತ್ತ ನನಗೆ ಅವರ ಪ್ರತೀ ಕ್ಷಣಗಳ ವರದಿಯೊಪ್ಪಿಸಿದ್ದರಿಂದ ನಾನು ಇಂದು ನಿಮಗೆ ಈ ಕಥೆ ಬರೆಯಲು ಉಳಿದುಕೊಂಡಿದ್ದೀನಿ.

ಓ ಮೈ ಗಾಡ್ ಅನೀಶನೂ ಮೊದಲೇ ನನ್ನಂತೆಯೇ ಅನ್ವೇಷಣೆಯೆಂದರೆ ಎತ್ತಿದ ಕೈ. ಅವನಾಗಲೇ ನನ್ನ ರಿವಾಲ್ವರ್ರಿನಲ್ಲಿ ಹುದುಗಿರುವ / ಕಡಿಮೆಯಾಗಿರುವ ಟೋಟಲ್ಲು ಬುಲ್ಲೆಟ್ಟುಗಳನ್ನು ನನ್ನ ಬೆಡ್ ರೂಮಿನಲ್ಲಿ ಕುಳಿತು ಎಣಿಸುತ್ತಿರಬಹುದು. ಆಮೇಲೆ ಮತ್ತೆ ಕಥೆ ಮುಂದುವರಿಸೋಣಾ, ಬಂದೆ ಇರೀ, ಮೊದಲು ಅವನ ಕೈಲಿರುವ ಆಯುಧ ಸೇಫ್ ಮಾಡಿ ಬರಬೇಕಿದೆ.

20lead

ಇಲ್ಲದ “ಇರುವಿಕೆ”ಗಳ ನಡುವೆ ಎಂದೂ ಸಲ್ಲದ “ನಾನು” ಎಂಬ ಮಿತ್ಯೆ.

ನನ್ನ ಈ ಮೇಲಿನ ಎಲ್ಲಾ ಇರುವಿಕೆಗಳ ನಡುವೆ ಎಂದೂ ಆ ನಾನೆಂಬ ನಾನು ಜೀವಿಸಿರದೇ ಇದ್ದರೂ ಕೂಡಾ… 
ಮಾಯೆಯೆಂದರೆ ಇದೇನಾ? ಗೊತ್ತಿಲ್ಲಾ! ಮರೆಯದೇ ಕ್ಷಮಿಸು ಗೆಳತೀ…

 

ನೀನಂದು ನನಗೆ “ಸರ್” ಎಂದೆ. “ವೆನ್ ಶಲ್ ಐ ಕಾಲ್ ಯು ಸರ್? ಇದು ನನಗೆ ಕಳಿಸಿದ ನಿನ್ನ ಮೊದಲ ಮೆಸ್ಸೆಜ್. ಅಂದು ನಾನು ಸರ್ ಎಂಬ ನಿನ್ನ ಗುರುತಿಸುವಿಕೆಯೊಳಗಿದ್ದೆ ಅಲ್ಲವೇ? ಅದೇ ಸಮಯದಲ್ಲಿ ನಾನು ಅಮ್ಮನಿಗೆ ಅವರ ತೊಡೆಮೇಲೆ ಮಲಗಿ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಅಚ್ಚರಿಯಿಂದ ಅವರನ್ನೇ  ದಿಟ್ಟಿಸಿ ನೋಡುತ್ತಿದ್ದ ಅದೇ ತಾನೆ ಜನಿಸಿದ ಅವರ ಮಗುವೇ ಆಗಿದ್ದೆ ಗೊತ್ತಾ! ನನ್ನ ಮೈ ಮೇಲೆ ಬಿದ್ದು ಪ್ರೀತಿಯಿಂದಾ ಒದ್ದಾಡುತ್ತಾ, ಈಗ ನನ್ನ ದೇಹದ ಉದ್ದದ ಅರ್ಧಕೂಮೀರಿ ಚಾಚಿಕೊಳ್ಳುವ ಇಬ್ಬರು ಮಕ್ಕಳು ನನಗಿದ್ದಾರೆ. ಆದರೂ ನಾನಿನ್ನೂ ಅಮ್ಮನ ಕಣ್ಣಲ್ಲಿ ಅದೇ ಎಳೇ ಕೂಸು.ಅವರ ದೃಷ್ಟಿಯಲ್ಲಿ ನಾನೆಂದೂ ಬೆಳೆಯಲೇ ಇಲ್ಲಾ ಹಾಗೂ ದೊಡ್ಡವನಾಗಲೂ ಇಲ್ಲಾ, ಅವರ ಕಣ್ಣ ಅಳತೆಯ ಮೀರಿ, ಕೈಜಾರಿ ನಡೆದಾಡುತ್ತಾ ಬಿದ್ದೇಳುತ್ತಾ, ತುಂಟ ಪೋರನಾಗುತ್ತಾ  ಬೆಳೆದು ಎದ್ದು ನಿಲ್ಲಲೇ ಇಲ್ಲಾ.

ಅವರ ಮನಸ್ಸಿನ ತೊಳಲಾಟ ತಡೆಯದೇ ನನ್ನ ಮಕ್ಕಳಿಬ್ಬರನ್ನೂ ಬಾಯ್ಬಿಟ್ಟು ಇಂದಿಗೂ ಗದರಿಸುತ್ತಾರೆ, ಅವನು ನೆಮ್ಮದಿಯಾಗಿ ನಿದ್ರಿಸಲೂ ಬಿಡುವುದಿಲ್ಲಾ ನೀವುಗಳು, ನಿಮ್ಮ ಕಾಟ ಸಾಕು ಮಾಡಿ ಆಚೆ ಬನ್ನಿ ಎಂದು.  ತಮ್ಮ ಅದೇ ಎಳೇ ಮಗುವಿಗೆ ತೊಂದರೆಯಾದದ್ದನ್ನು ಅನುಭವಿಸಲಾರದೇ ಮರೆಯದೇ  ಅವರ ಸುತ್ತಲಿನ ಪ್ರಪಂಚಕ್ಕೆ ಪ್ರಕಟಿಸುತ್ತಾರೆ. ನಾನಿನ್ನೂ ಅವನ ಅಮ್ಮ ಬದುಕಿದ್ದೀನಿ, ಅವನು ನನ್ನದೇ ರಕ್ಷಣೆಯ ಎಳೇ ಕೂಸೆಂದು. ಪಾಪ ಮಕ್ಕಳಿಬ್ಬರೂ ಅರ್ಥವಾಗದೇ ಇಬ್ಬರೂ ಅವರವರ ಮುಖ ನೋಡಿಕೊಳ್ಳತೊಡಗುತ್ತಾರೆ.  ಅವರ ಅಜ್ಜಿ ಅವರಿಗೆ ಅರ್ಥವೇ ಆಗದ ಆಶ್ಚರ್ಯ ಇಂದಿಗೂ.

****

ಆಮೇಲೆ ಹೀಗೇ ಇರುತ್ತಾ, ಅದೇನಾಯ್ತೋ ಗೊತ್ತಿಲ್ಲಾ! ಒಂದು ದಿನ ನಿನಗೆ ನಾನು “ಕಣೋ” ಎನ್ನಿಸಿಕೊಳ್ಳುವ ಅರ್ಹತೆಯುಳ್ಳವನಾದೆ.  ನನಗಂತೂ ಯಾರಿಂದಲೂ ಹೀಗೆ ಕರೆಸಿಕೊಂಡೂ ಗುರುತಿಸಿಕೊಂಡು ಗೊತ್ತಿರಲಿಲ್ಲಾ. ಆದರೂ ಇದೊಂದು ರೀತಿಯ ಗುರುತಿಸುವಿಕೆ ನನ್ನ ಬಾಳಿಗೆ ಬಂತು. ಆಗಲೂ ನಾನು ನನ್ನವಳಿಗೆ ಮಾತ್ರವೇ ಕೊಡಬಹುದಾಗಿದ್ದ ಅತ್ಯಂತ ಖಾಸಗಿ ಸ್ವಾತಂತ್ರದ ಸ್ಪೆಸ್ ಸಂಪೂರ್ಣ ನಿನ್ನೊಂದಿಗೆ ಹಂಚಿಕೊಂಡಿದ್ದೆ. ಬಹುಷಃ ಅವಳೆಂದೂ ಹೀಗೆ ಕರೆಯಬಹುದೆಂದೂ ನನ್ನನ್ನು ಹೀಗೂ ಗುರುತಿಸಬಹುದೆಂದೂ ಇಬ್ಬರೂ ಕನಸು ಕಂಡಿರಲಿಕ್ಕಿಲ್ಲಾ.

ಆ ಕ್ಷಣದಲ್ಲೂ ನಾನು ಅವಳಿಗೆ ಯಾವುದೇ ನಕಾರದ ಗೆರೆಹಾಕದ ಸರ್ವತಂತ್ರ ಸ್ವತಂತ್ರದೊಳಿಟ್ಟಿದ್ದರೂ ಅವಳೆಂದೂ ನನ್ನ ಕಣೋ ಅನ್ನಲಿಲ್ಲ. ಅವಳ ಬಾಯ್ತುಂಬಾ ಬರುವುದೇ ನನ್ನ ಕುಟುಂಬದೆಲ್ಲರೂ ಪ್ರೀತಿಯಿಂದಾ ಕರೆಯುವ ಅದೇ ಹೆಸರು. ಅವಳ ನನ್ನ ಗುರುತಿಸುವಿಕೆ ಅದೇ ಪದದ ಒಳಗಿನ ನನ್ನ ಮನೆಯ ಎಲ್ಲರ ಪ್ರೀತಿಯ ಪದದೊಳಿತ್ತು. ನಿನಗಾದರೂ ಇದರ ಅರಿವಿತ್ತಾ? ಗೊತ್ತಿಲ್ಲಾ.  ಆ ದಿನಗಳ ಅದೇ ಕ್ಷಣಗಳಲ್ಲಿ ನಿನಗನಿಸಿದಂತೆ ನಾನೂ ನಿನ್ನ ಆ ಪದದ ಗುರುತಿಸುವಿಕೆಯ ಕಾಲದೊಳಿದ್ದೆ ಅಂದು ಕೊಂಡಿದ್ದೆಯೇನೋ ಅಲ್ವಾ! ಆದರೆ ನೋಡಿಲ್ಲಿ! ಇಲ್ಲಿ ಹೇಳಿರುವ ಎರಡೂ ಕಡೆಯಿರುವ ಅದೇ ನಾನು ಎರಡೂ ಕಡೆ ಇದ್ದೆನಾ? ಇರಲಿಲ್ಲವಾ! ಅದು ನಿಮಗೇ ಗೊತ್ತುಂಟು ಅಷ್ಟೇ.

****

ನನ್ನನ್ನು ಹಲವರು ಹಲವು ರೀತಿ ಗುರುತಿಸುತ್ತಾರೆ. ಕೆಲವರಿಗೆ ನಾನು ಶಕ್ತಿ, ಮತ್ತೆ ಕೆಲವರಿಗೆ ಸಡಕ್. ತುಂಬಾ ದೂರದಲ್ಲಿರುವ ಹಿಮಾಲಯದ ಒಬ್ಬರಿಗೆ ಮಾತ್ರಾ ನಾನು ಸಾಧಕ. ಬಹಳ ಜನರಿಗೆ ಶಕ್ತಿ ಎಂಬ ಸಾಮಾಜಿಕ ತಾಣದ ಗುರುತಿಸುವಿಕೆ ಗೊತ್ತಷ್ಟೇ ಹೊರತು ಆ ಹೆಸರೇ ಯಾಕೆ ಎಂಬ ನಿಗೂಢ ನನಗೊಬ್ಬನಿಗೆ ಮಾತ್ರಾ ಗೊತ್ತಷ್ಟೇ. ಈ ಗುರುತಿಸುವಿಕೆ ಧಾರೆಯೆರೆದು ದೂರ ದೇಶದಲ್ಲಿರುವ ಅವನೊಬ್ಬನ ಬಿಟ್ಟರೆ. ನನ್ನ ಹೆಸರು ಪೂರ್ಣವಾಗಿ ಉಚ್ಛರಿಸಲು ಬರದೇ ಅವರವರಿಗೆ ತೋಚಿದಂತೆ ನನ್ನ ಗುರುತಿಸುವಿಕೆಯನ್ನು ಇನ್ನೂ ಕೆಲವರು ಅವರ ಅನುಭವಕ್ಕೆ ದಕ್ಕಿಸಿಕೊಂಡಂತೆ ಗುರುತು  ಮಾಡಿಕೊಂಡಿದ್ದಾರೆ.

ಅದರಲ್ಲಿ ಕೆಲವರು ಚಾರಿ,ಎಸ್ಸೆಸ್ಸ್,ಶಡಕ್,ಶರಿ,ಶಾಡ್,ಶಾಡ್ಸ್,ಚೆರ್ರಿ, ಇರ್ರಿಟೇಟಿಂಗ್, ಡಿಸ್ಗಸ್ಟಿಂಗ್,ಟೆರ್ರಿಬಲ್,ಸೆಕ್ಸೀ, ಮ್ಯಾನ್ಲೀ,ಲವ್ಲೀ,ಓನ್ಲೀ, ಸ್ವೀಟ್ ಸೌಲ್,ಎಗ್ಸೈಟಿಂಗ್, ಹೀಗೆ ಅವರು ಅವರ ನನ್ನ ಮೇಲಿನ ಪ್ರೀತಿಗೋ ಅಪಾರ ಪ್ರೀತಿಗೋ ಮೊಬೈಲಿನಲ್ಲಿ ಶಾರ್ಟಾಗಿ ನನ್ನ ಗುರುತಿಸುವಿಕೆಗೆ ಮಾಡಿಕೊಂಡ ಪಟ್ಟಿ ದೊಡ್ಡದಿದೆ. ಆದರೆ ನನ್ನ ಖಾಸಗಿ ಕೆಲಸದ ಟೇಬಲ್ ಮೇಲಿರುವ ಮೊಬೈಲ್ ಸರ್ವಿಸ್ ಪ್ರೊವೈಡರ್ಸ್ ನೀಡಿರುವ ಅವರೆಲ್ಲರ ಮೊಬೈಲ್ ಜಾತಕಗಳ ಬಿಳೀ ಹಾಳೆಗಳಲ್ಲಿರುವ  ಪ್ರಿಂಟಾದ ಬಣ್ಣ ಬಣ್ಣದ, ಕಪ್ಪು, ಕಡುಕಪ್ಪು ಪಾಪಿಷ್ಠ ಅಕ್ಷರಗಳ ಹೊಟ್ಟೆಯಲ್ಲಿರುವ ವಿವರಗಳ ವಿಷಯ ಹನುಮಂತನ ಬಾಲದಂತೆ ಬೆಳೆಸೋಲ್ಲ ಬಿಡು ಮಾರಾಯ್ತಿ.

ಕೆಲ ದಿನಗಳಲ್ಲಿ ನಾನು “ರಿ” ಆಗಿದ್ದೆ. ಅದ್ಯಾವ ಕಾರಣವೋ ಅಕಾರಣವೋ ಗೋಚರವೋ ಅಗೋಚರವೋ ಆ ಕಾಲದ ನಿಯಮ ನನ್ನಿಂದ ಆ ಗುರುತಿಸುವಿಕೆಗಾಗಿ ಬರೆಸಿತ್ತು. ಅದೇ ಗುರುತಿಸುವಿಕೆಯ ಕಾಲದ ಇಕ್ಕಟ್ಟಿನ ಪಟ್ಟಿನಲ್ಲಿ ಈ “ರಿ” ಸಿಲುಕಿಬಿಟ್ಟಿತ್ತು. ಎಲ್ಲರೂ ಅವರವರಿಗೆ ತೋಚಿದಂತೆ ನನ್ನನ್ನು ಗುರುತಿಸಿದರೆ ನನ್ನ ಮೂಲ ಗುರುತಿಸುವಿಕೆ ಎಷ್ಟು ಗೊಂದಲಕೊಳಗಾಗುವುದಿಲ್ಲ ಅಲ್ಲವೇ? ಹಾಗೇನೂ ಆಗಿರಲಿಲ್ಲ ಸಧ್ಯಕ್ಕೆ. ಈ ಗುರುತಿಸುವಿಕೆಗಳು ಅವರವರ ಭಾವಕ್ಕೆ ಭಕುತಿಗೆ ಮತ್ತು ಕೆಲ ಕಾಲದ ಗಣನೆಗೆ ಮತ್ತು ಅವಗಣನೆಗೆ ಮಾತ್ರಾ ಸೀಮಿತ ಎಂಬ ಅರಿವು ಮೂಲ ಗುರುತಿಸುವಿಕೆಗೆ ಇದ್ದ ಪರಿಣಾಮ ಅದು ಅಂತಹ ಭಂದನಗಳಿಗೊಳಗಾಗಲಿಲ್ಲ ಎನ್ನುವುದಷ್ಟೇ ಅಂದಿನ ಸತ್ಯವಾಗಿತ್ತು.

****

ಇದ್ದಕ್ಕಿದ್ದಂತೆ ಯಾಕೋ ನಿನಗೆ ನಾನು ಪ್ರಿತಿಯಿಂದ ನೀನು ಕರೆದ “ಪುಟ್ಟಣ್ಣಾ ಗುಂಡಣ್ಣ” ನಾದೆ. ಅದೇ ಸಮಯಕ್ಕೆ ನನ್ನ ಅಕ್ಕಂದಿರು ಪ್ರೀತಿಯಿಂದ ಕರೆಯುವ ಬಾಬು ಎಂಬ ಇರುವಿಕೆಯವನೂ ಆಗಿದ್ದೆ. ಇಂದಿಗೂ ಅವರ ಮಕ್ಕಳು ಡಿಗ್ರೀ ಓದುತ್ತಿದ್ದರೂ, ಮಕ್ಕಳು ಹೋಗಿ ಮೊಮ್ಮಕ್ಕಳು ಬಂದಿದ್ದರೂ ಹಬ್ಬ ಹುಣ್ಣಿಮೆ ಬಂದರೆ ನನ್ನ ನೆನೆಪೇ ಅವರಿಗೆ. ಅವರ ಮಕ್ಕಳಿಗೆ ಸಿಹಿ ಬಡಿಸುವ ಮುನ್ನ ನನಗೊಂದು ಫೋನಿನ ಕರೆ ಬರುತ್ತೆ. “ನೀನು ಬಂದಿದ್ದರೆ ಇನ್ನೂ ಸಿಹಿಯಾಗಿರುತ್ತಿತ್ತು. ನಿನ್ನನ್ನು ಬಿಟ್ಟು ತಿನ್ನಬೇಕಲ್ಲಾ ಎಂಬುದೇ ಸಂಕಟ. ಮತ್ತೆ ಯಾವಾಗ ಊರಿಗೆ ಬರುತ್ತೀ ಹೇಳು ಮರೆಯದೇ ನಿನ್ನಿಷ್ಟದ ಇದೇ ಸಿಹಿ ಮಾಡಿಕೊಂಡು ಬಂದು ನಿನ್ನ ನೋಡುವೆ” ಎಂದು ಅಲವತ್ತುಗೊಳ್ಳುವುದ ನೋಡಿದ ನನ್ನ ಸೋದರ ಸಂಭಂದಿಗಳಿಗೆ ಇದೊಂದು ಸೋಜಿಗ. ನಾವಿಷ್ಟು ಬೆಳೆದರೂ ನಮ್ಮ ಅಮ್ಮಂದಿರ ಒಬ್ಬನೇ ತಮ್ಮ ಇನ್ನೂ ಅವರ ಗೋಳುಯ್ದುಕೊಳ್ಳುವನಲ್ಲಾ! ಸಿಹಿಯೆಂದರೆ ಬಾಯಿ ಚಪ್ಪರಿಸುವ ಅವ ನಮ್ಮ ಅಮ್ಮಂದಿರ ಪ್ರೀತಿಯಲ್ಲೂ ಪಾಲು ಪಡೆದ ಈ ಸೋದರ ಸಂಭಂದಿ ಪ್ರೀತಿಯ ಚೋರನೇ ಅಲ್ಲವೇ?

ಇಬ್ಬರಿಗೂ  ನಮ್ಮೆಲ್ಲ ಬೇಕು ಬೇಡಗಳ ಪಟ್ಟಿ ಗೊತ್ತಿತ್ತು. ಇಬ್ಬರಿಗೂ ಬೇಕೆಂದಾಗ ಇಬ್ಬರೂ ಮರೆಯದೇ ಸಮಯ ಕೊಟ್ಟಿದ್ದು, ಬಯಸಿದ್ದು ಒದಗಿಸಿದ್ದು ಎಲ್ಲವೂ ಆ ಕಾಲದ ನಮ್ಮಿಬ್ಬರ ಒಬ್ಬರನ್ನೊಬ್ಬರ ಗುರಿತಿಸುವಿಕೆಯ ಸಾಕ್ಷಿಯೇ ಆಗಿತ್ತು. ಆ ಸಮಯದ ಸುವರ್ಣ ಸಮಯ ಸುಧೀರ್ಘವಾಗುವುದೂ ಮೊಟಕುಗೊಳ್ಳುವುದೂ ನಮ್ಮಿಬ್ಬರ ನಡುವಿನ ಆತ್ಮಸ್ಥ ಸಂಭಂದದ ಆರ್ಥೈಸುವಿಕೆಯ ಮಿತಿಗೆ ಬಿಟ್ಟಿದ್ದು. ಅದಕ್ಕೆ ಪೂರಕವಾಗಿ ಮೇಲಿನ ಕೆಲ ಸಮಜಾಯಿಷಿಗಳಲ್ಲಾ. ನಿನಗೂ ಗೊತ್ತಲ್ವಾ, ಅದು ಇರುವುದೇ ಹಾಗೆ. ಇದು ನಾನು ನಿನಗೆ ತಿಳಿಸುವ ಹೊಸ ಪಾಠವಂತೂ ಅಲ್ಲಾ. ನೀನು ಇಂಥ ಪಾಠಗಳ ಮೇಲೆ ಅದೆಷ್ಟು ಪುಟಗಳ ಬೃಹತ್ತು ಪುಸ್ತಕ ಬರೆಯಬಲ್ಲೆ ಎಂಬ ಅರಿವು ನನಗಿದೆ. ಹಾಗಾಗಿ ಹೆಚ್ಚೇನೂ ಹೇಳ ಬಯಸುವುದಿಲ್ಲ. ಇಂಥಹ ವಿಷಯಗಳ ಬಗ್ಗೆ ಚರ್ಚಿಸಲು ನೀನೇ ನನಗೆ ಒಮ್ಮೆ ತೊಡೆ ತಟ್ಟಿ ಪಂಥಕ್ಕೆ ಕರೆದಿದ್ದು ನೆನಪಿದೆ.

****

ಅದೇ ಕಾಲದ ಇರುವಿಕೆ ಮುಂದುವರೆದಿತ್ತೋ, ನಿಂತಂತ್ತಿತ್ತೋ, ಅಥವಾ ಚಲಿಸಿದಂತಿತ್ತೋ ಗೊತ್ತಿಲ್ಲಾ. ಯಾಕೆ ಗೊತ್ತಾ? ನಾನು ಅವರಿವರಂತೆ ಎಲ್ಲವನ್ನೂ ಅರಿತ ಬುದ್ಧಿವಂತ ಬುದ್ಧನಲ್ಲಾ. ನಾನೊಬ್ಬ ಹಳ್ಳಿ ಗಮಾರ. ನನಗೆ ಸೂರ್ಯ ಚಂದ್ರರ ಕೇವಲ ಉದಿಸಿದ, ಕ್ಷೀಣಿಸಿದ ಕಳೆದೊಂದು ದಿನ ರಾತ್ರಿಯ ಪಯಣ ನೋಡಿದ ಅನುಭವ ಗೊತ್ತಷ್ಟೇ. ಆಕಾಶ, ನಕ್ಷತ್ರ, ಸೌರಕಾಯಗಳ ವ್ಯೂಹ, ಫರಿದಿ, ಗ್ಯಾಲಾಕ್ಸಿಗಳ ಗೊಡವೆಗಳೆಲ್ಲ ಮೀರಿದ್ದನ್ನೆಲ್ಲಾ ದಕ್ಕಿಸಿಕೊಂಡ ಅಹಂನ ಸಹವಾಸ ಮಾಡದ ಮರುಳಯ್ಯ ನಾನು. ಸಹಜ ಮಾನವನ ದೃಷ್ಟಿಯ ದೌರ್ಬಲ್ಯವೆಂದೆಣಿಸಿದ ನನ್ನ ಕಣ್ಣಳತೆಗೂ ದಕ್ಕದ ಆ ತಳವಿಲ್ಲದ ಆಳದ ಅಗಲದ ಉದ್ದದ ತಳಿವಿಗೆ ಸಿಕ್ಕಹಾಕಿಕೊಳ್ಳದಂತೆ ಪ್ರಕೃತಿ ಸೃಷ್ಠಿಸಿದ ಅತ್ಯಂತ ಅಧಮರಲ್ಲಿ ಅಧಮ ನಾನು.

ಆದರೂ ಅದಷ್ಟನ್ನೂ ಪಕ್ಕಕ್ಕಿಟ್ಟು ನೋಡಿದರೆ, ನಾವಿಬ್ಬರು ಮಾತ್ರಾ ಸ್ವಲ್ಪ ಸಮಯ ಕಳೆದು ಕೊಂಡಿದ್ದೆವಷ್ಟೇ ಅನ್ನಿಸಿದೆ.  ಆದರೆ ನಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಎಲ್ಲೂ ಯಾವುದೂ ಬದಲಾಗಿರಲಿಲ್ಲ. ಅದೇ ಅಮ್ಮನಿಗೆ ನಾನಿನ್ನೂ ಎಳೇ “ಕೂಸೇ” ಆಗಿದ್ದೆ, ಅಕ್ಕಂದಿರಿಗೆ ಅದೇ ತರಲೇ “ತಮ್ಮಣ್ಣ” ನಾಗಿದ್ದೆ. ಅದೇ ಅವಳಿಗೆ ಅದೇ “ಅವರೇ” ಆಗಿದ್ದೆ. ಅದೇ ಮಕ್ಕಳಿಗೆ ಪ್ರೀತಿಯ “ಅಪ್ಪನೋ ಡ್ಯಾಡಿಯೋ” ಆಗಿದ್ದೆ. ಸಹಜೀವಿಗಳಿಗೆ ಅದೇ ಹುಚ್ಚು ಗೆಳೆತನದ “ಗೆಳೆಯ”ನೇ ಆಗಿದ್ದೆ. ಅದ್ಯಾಕೋ ಗೊತ್ತಿಲ್ಲಾ ಇದ್ದಕ್ಕಿದ್ದಂತೆ  ನನ್ನ ಗುರುತಿಸುವಿಕೆಗೆ ಮತ್ತೊಂದು ಹೊಸಾ ಬ್ರಾಂಡ್ ನೇಮ್ಗೆ ನನ್ನ ಗುರುತೊಂದು ಹೊಸ ಸೇರ್ಪಡೆಯಾಗುವ ಕಾಲ ಕೂಡಾ ಕೂಡಿ ಬಂದಿತ್ತೇನೋ ಯಾರಿಗೆ ಗೊತ್ತು? ಆ ಶಿವನೋ, ಅಲ್ಲಮನೋ, ಬುದ್ಧನೋ, ರಾಮ-ಕೃಷ್ಣರೋ, ಬಲ್ಲರಲ್ಲದೇ ನಾನೇನು ಅರಿಯಲಯ್ಯಾ. ಈ ಪಾಪಿಷ್ಠನ ಪಾಪಗಳೆಲ್ಲವ ಎಲ್ಲರೂ ಮರೆಯದೇ ಕ್ಷಮಿಸಿರಯ್ಯಾ. ಇವನೊಬ್ಬ ಬಡ ಪಾಮರನಯ್ಯಾ.ಇಂದು ನಾನೊಬ್ಬ “ಬಾಸ್ಟರ್ಡ್” ಕೂಡಆದೆ.

ನನ್ನ ಈ ಮೇಲಿನ ಎಲ್ಲಾ ಇರುವಿಕೆಗಳ ನಡುವೆ ಎಂದೂ ಆ ನಾನೆಂಬ ನಾನು ಜೀವಿಸಿರದೇ ಇದ್ದರೂ ಕೂಡಾ…
ಮಾಯೆಯೆಂದರೆ ಇದೇನಾ? ಗೊತ್ತಿಲ್ಲಾ! ಮರೆಯದೇ ಕ್ಷಮಿಸು ಗೆಳತೀ…

ಇಂತಿ ನಿನ್ನ ಪ್ರೀತಿಯ ನೆರಳಿನ ನರಕದಲ್ಲೇ ಸ್ವರ್ಗಸ್ಥನಾದ ಗೆಳೆಯ.

ಷಡಕ್ಷರಿ ತರಬೇನಹಳ್ಳಿ

94496 84491

 

<a image-7770