491 ರಿಂದ 461 ರ ವರೆಗಿನ ಪಯಣ….

ನಿನ್ನ ಮಿಸ್ಸಡ್ ಕಾಲ್ ಮತ್ತೊಮ್ಮೆ ಈ ನಂಬರ್ರಿನ ಬಾಗಿಲಿಗೆ ಬಂದು ಕದ ಬಡಿದೀತೇನೋ! ಅಥವಾ “ಕಾಲ್ ಮಾಡೋ ಕೋತಿ” ಎಂಬ ಪುಟಾಣಿ ಎಸ್ಸೆಮ್ಮೆಸ್ ನನ್ನ ಇನ್ ಬಾಕ್ಸಿನೊಳಗೆ ಬಂದು ಇಣುಕಿನೋಡುವುದೇನೋ

ಓ ಮೈ ಗಾಡ್, ನಾನು, ನನ್ನ ಬದುಕು, ನನ್ನ ವಯಕ್ತಿಕ ತಿಕ್ಕಲುತನಗಳು, ನನ್ನ ಸುತ್ತಲಿನ ಪ್ರಪಂಚ ಮತ್ತೆ ಅದರಲ್ಲಾಗುತ್ತಿರುವ ಬದಲಾವಣೆಗಳಿಗೆ ನಾನು ಸ್ಪಂದಿಸೋ ರೀತಿ ನೋಡಿ ನೀನು ನಗುತ್ತಿರಬಹುದಲ್ಲವೇ ಮಾರಾಯ! ಅದೊಂದು ನನ್ನೊಳಗೆ ನಾನೇ ನಡೆದು ಸವೆಸಿದ ಸುಧೀರ್ಘ ಪಯಣವಲ್ಲದೇ ಮತ್ತೇನು? ಅದೊಂಥರಾ ಪ್ರವಾಸ ಮಾಡಿ ಮತ್ತೊಮ್ಮೆ ಹಿಂದಿರುಗಿ ನಿಂತು ನೋಡಿದ ಆತ್ಮೀಯ ಅನುಭವ ಅಲ್ವಾ!

ಆ ದಿನಗಳೂ ಇದ್ದವು ನನ್ನ ಬದುಕಿನಲ್ಲಿ. ಅಪ್ಪ ಅಮ್ಮ ನಮ್ಮನೆ ಹಬ್ಬಕ್ಕೆ ನೆಂಟರನ್ನು ಕರೆಯೋ ಕರ್ತವ್ಯ ನನಗೊಪ್ಪಿಸಿ ಬಿಡುತ್ತಿದ್ದರು. ನಾನು ಒಂದು ವಾರದ ಮುಂಚೆ “15 ಪೈಸೆ ಕಾಗದ”ದಲ್ಲಿ ನಮ್ಮ ಬಂಧು ಬಾಂಧವರಿಗೆಲ್ಲ ಪತ್ರ ಬರೆಯುತ್ತಿದ್ದೆ. ಅವರೂ ತಪ್ಪದೇ ಬರುತ್ತಿದ್ದರು. ಹಬ್ಬವೂ ಸಡಗರದಿಂದ ಮುಗಿದು ಮರೆಯಾಗುತ್ತಿತ್ತು ಕೆಲ ಸವಿ ನೆನಪುಗಳೊಂದಿಗೆ. ಇಷ್ಟೇ ನನ್ನ ಆ ಜೀವನದ ಹೊರ ಪ್ರಪಂಚದ ಸಂಪರ್ಕದ ಕೊಂಡಿಯ ಅವಶ್ಯಕತೆ ಇದ್ದಿದ್ದು.

ಮನೆಗೆ ಇದ್ದಕ್ಕಿದ್ದ ಹಾಗೆ “ಸ್ಥಿರ ದೂರವಾಣಿ”ಯೊಂದು ಬಂತು. ಸುತ್ತಲಿನ ಜನಕ್ಕೆ ಅದಿಲ್ಲದೆ ಬದುಕೇ ಇಲ್ಲವೇನೋ ಅನ್ನಿಸಿದಾಗ ನಮಗೂ ಅದು ಬೇಕೆನಿಸಿತೇನೋ! ಅಥವಾ ಸಂಭಂದಿಗಳು ದೂರ ದೇಶಕ್ಕೆ ಹಾರಿದ ಪ್ರಯುಕ್ತ ಅವರ ಯೋಗ ಕ್ಷೇಮ ವಿಚಾರಿಸಲು ಇರಬೇಕು ಅನ್ನಿಸುತ್ತೆ. ಅಲ್ಲದೇ ಪತ್ರಮುಖೇನ ವ್ಯವಹರಿಸಿ ತಿಂಗಳುಗಟ್ಟಲೆ ಕಾಯುವ ವ್ಯವಧಾನವಿಲ್ಲದೆ ಹಾಗೆ ಮಾಡಿದೆವೋ ಗೊತ್ತಿಲ್ಲ. ದೂರದ ದೇಶದಲ್ಲಿದ್ದ ಅಣ್ಣ ಮತ್ತು ಅಕ್ಕಂದಿರಿಗೆ ಇವತ್ತು ಟ್ರಂಕಾಲ್ ಬುಕ್ ಮಾಡಿ ಅದರ ಪಕ್ಕವೇ ಕುಳಿತು, ಮಲಗಿ, ಮಧ್ಯರಾತ್ರಿ ರಿಂಗಣಿಸಿದಾಗ ಮಲಗಿದ್ದವರೆಲ್ಲಾ ಎದ್ದು ಮಾತನಾಡಿದ ನೆನಪು ಇನ್ನೂ ಹಚ್ಚಹಸಿರು.

ಆಮೇಲೆ ನಾನೂ ವಿಶ್ವವಿದ್ಯಾಲಯಕ್ಕೆ ಸೇರಿದೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಸಂಘದ ಕಾರ್ಯದರ್ಶಿಯಾದೆ. ಸಹಪಾಠಿಗಳ ಕಷ್ಟ ಸುಖ, ತೊಂದರೆ ನಿವಾರಣೆಗೆ ಕುಲಪತಿಗಳಿಂದ, ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೂ ಓಡಾಟ ಶುರುವಿಟ್ಟುಕೊಂಡೆ. ವಿದ್ಯಾರ್ಥಿ ನಾಯಕತ್ವದ ಒಡನಾಟದ ಬಿರುಸಿಗೆ ನನ್ನ ಹಾಸ್ಟೆಲಿನ ಸ್ಥಿರ ದೂರವಾಣಿ ಬರೀ ರಾತ್ರಿ ಮಾತ್ರ ಉಪಯೋಗಕ್ಕೆ ಬರೋದ್ರಿಂದ “ಪೇಜರ್” ಎಂಬ ವಸ್ತು ನನ್ನ ಸೊಂಟದ ಪಟ್ಟಿಗೆ ನೇತುಹಾಕಿಕೊಂಡಿತು. ಅದರಲ್ಲೇ ಹೆಗ್ಗಡೆ,ಪಟೇಲರ,ಗೌಡರ ಪಕ್ಕ ಕುಳಿತಾಗಲೂ ಪೇಜರ್ನ ಬೀಪ್ ಶಬ್ಧಕ್ಕೆ ಮರು ಮೆಸ್ಸೇಜ್ ಕಳಿಸುವಷ್ಟು ಬ್ಯುಸಿಯಾದೆ. ಅದು ಕೆಲವೇ ತಿಂಗಳುಗಳಲ್ಲಿ ನನ್ನ ಬದುಕಿರಲಿ, ಭಾರತದಿಂದಲೇ ಇರಲೇ ಇಲ್ಲವೇನೋ ಎಂಬಂತೆ ಅಸ್ತಂಗತವಾಯ್ತು.

ನಾನೂ ವಿಶ್ವವಿದ್ಯಾಲಯದಿಂದ ಹೊರ ಬಂದ ಮಾರನೇ ದಿನವೇ ಮೊದಲೇ ಸಿಧ್ದವಿದ್ದ ಕೆಲಸಕ್ಕೆ ಸೇರಿಕೊಂಡಿದ್ದೆ. ಹುಡುಗು ವಯಸ್ಸಿಗೇ ಕೈತುಂಬಾ ಸಂಬಳ. ನನಗೂ ಮದ್ವೆ ಆಗೋಯ್ತು. ಆಮೇಲೆ ಬಂದಿದ್ದೇ ನನ್ನ ಮೊದಲ “ಜಂಗಮ ದೂರವಾಣಿ”. ಅದಕ್ಕೊಂದು ಸಂಖ್ಯೆ** ** ***491. ಈ ನಂಬರ್ ಪಡೆಯೋಕೆ ತಿಪಟೂರಿನ ಬಿ ಎಸ್ ಎನ್ ಎಲ್ ಆಫೀಸಿನ ಮುಂದೆ 2 ಮೈಲಿ ಕ್ಯೂ ನಿಂತಿದ್ದು ನೆನೆದರೆ ಈಗ ಮೈ ಜುಮ್ ಜುಮ್ ಎನ್ನುತ್ತೆ. ಅದರಲ್ಲೂ ನಾನು ನನ್ನ ಪರಿಚಯದವರ ಮೂಲಕ ಇದೇ ನಂಬರ್ ಬೇಕು ಎಂದು ಕೇಳಿ ಪಡೆದಿದ್ದೆ. ಕಾರಣ ಮಾತ್ರ ಸಕತ್ತು ಸೀಕ್ರೆಟ್. ನಮ್ಮಿಬ್ಬರಿಗೇ ಗೊತ್ತಿರಲೀ ಅಲ್ವಾ ಇವಳೇ!

ಆಮೇಲೆ ಇದು ನಮಗೆ ನಮ್ಮ ನಡುವೆ ಇರೋ ಒಂದು ಯಂತ್ರ ಅಥವಾ ಅದೊಂದು ಸಂಖ್ಯೆ ಅಂತಾ ಅನ್ನಿಸಲೇ ಇಲ್ಲ ಅಲ್ವಾ ಕೋತಿಮರೀ. ನಾನು ಎಲ್ಲೋ ಯಾವುದೋ ಊರಿನ ಹೋಟೆಲಿನಲ್ಲಿ ಮಲಗಿ ಬೆಳಗ್ಗೆ ಏಳೋಕು ಮುಂಚೆ ನಿನ್ನ ಮಿಸ್ಸಡ್ ಕಾಲು. ನಾನು ಮತ್ತೆ ತಕ್ಷಣ ರಿಂಗಣಿಸದಿದ್ದರೆ ನಿನ್ನಿಂದ ನನ್ನ ಎಲ್ಲಾ ಮರು ಕರೆಗಳ ಕಟ್. ಏನೆಲ್ಲಾ ಆಟ ಅಲ್ವಾ ನಮ್ದು! ಮಧ್ಯಾಹ್ನ ಮರೆಯದೆ ಊಟ ಆಯ್ತಾ? ಅಂತ ನಿನ್ನಿಂದ 1.30 ಕ್ಕೆ ಕರಕ್ಟಾಗಿ ಎಚ್ಚರಿಕೆಯಂತೆ ಬರುತ್ತಿದ್ದ ಕರೆಗೆ ನಾನು ಆಯ್ತು ಎನ್ನಲೇ ಬೇಕಿತ್ತಲ್ಲಾ. ಆಯ್ತು ಅನ್ನದಿದ್ದರೆ ಮತ್ತೊಂದು ಮಹಾಭಾರತ ಕಥೆಗೇ ನಾನು ಉತ್ತರಿಸಬೇಕಾಗುತ್ತಿತ್ತಲ್ಲಾ! ಅಕಸ್ಮಾತ್ ಎಂದಾದರೂ ನನಗೆ ಹಿಡಿಸುವ ಊಟ ಸಿಗಲಿಲ್ಲ ಕಣೇ ಅಂದ್ರೆ, ಅಲ್ಲೇ ಎಲ್ಲಾದರೂ ಗೆಡ್ಡೆ ಗೆಣಸು ನೋಡ್ಕೊಳ್ಳೋ ಗೂಬೆಮರೀ ಅಂತಿದ್ದ ನಿನ್ನ ತಮಾಷೆನೇ ಹೊಟ್ಟೆ ತುಂಬಿಸಿ ಬಿಡುತ್ತಿತ್ತಲ್ಲಾ!

ಆಮೆಲೆ ರಾತ್ರಿ ಆಯ್ತೂಂದ್ರೆ ಅದೊಂಥರಾ ಕಥೆ ಬಿಡು. ಅದನ್ನೆಲ್ಲಾ ಇಲ್ಲಿ ಹೇಳ್ಕೋಬೇಕಾ? ಛೀ,ಥೂ, ಬೇಡಪ್ಪಾ ಅದೆಲ್ಲಾ ಆ ಪರಮಾತ್ಮ ಪಿಚ್ಚರ್ ಮಾಡಿದ ಭಟ್ಟರಿಗೇ ಇರಲೀ ಅಲ್ವಾ. ಏನೆಲ್ಲಾ ಡೈಲಾಗ್ಸ್, ಚಿತ್ರಕಥೆ,ಲೊಕೇಶನ್ಸ್,ವಾವ್ ಅದೊಂಥರಾ ರಿಯಲೀ ಈಸ್ಟ್ ಮನ್ ಕಲರ್ ಕಲರ್ ಪಿಚ್ಚರ್ ಥರಾನೆ ಅಲ್ವಾ. ಯಾರಾದ್ರೂ ಕೇಳಿಸ್ಕೊಂಡಿದ್ರೆ ನಿಜಕ್ಕೂ ಎಲ್ಲ ವಿಭಾಗಗಳಿಗೂ ಸಿನಿ ಅವಾರ್ಡ್ ಡಿಕ್ಲೇರ್ ಮಾಡಿಬಿಟ್ಟಿರೋರು! ಅದಕ್ಕೇ ನೀನು ನನ್ನ ಸಿನಿವಲಯದ ಸ್ನೇಹಿತರ ಬಳಿ ಹೆಚ್ಚು ಮಾತಾಡೊಲ್ಲ ನನಗೂ ಗೊತ್ತು.

ಓ ಇವಳೇ, ಅತೀ ಮುಖ್ಯವಾದದ್ದನ್ನೇ ಮರೆತಿದ್ದೆ ನೋಡೇ! ನಮಗೆ ಒಬ್ಬರ ಹಿಂದೆ ಮತ್ತೊಬ್ಬನಂತೆ ಇಬ್ಬರು ಮಕ್ಕಳೂ ಅದ್ರೂ ಅಲ್ವೇನೇ! ಅವರು ಹುಟ್ಟಿದ್ದು ಕಣ್ಣು ಬಿಟ್ಟಿದ್ದು ನಕ್ಕಿದ್ದು ಅತ್ತಿದ್ದು ಎಲ್ಲವನ್ನೂ ನನಗೆ ದಾಟಿಸಿದ್ದು ಈ ಮೊಬೈಲೇ ಅಲ್ವಾ! ದೂರದ ಊರುಗಳಲ್ಲೇ ಹೆಚ್ಚು ಸಮಯ ಕೆಲಸದ ನಿಮಿತ್ತ ಬೀಡು ಬಿಟ್ಟಿರುತ್ತಿದ್ದ ನನಗೆ ಇದೊಂದು ನನ್ನ ವಯಕ್ತಿಕ ಬದುಕಿನ ನೋಟಕ್ಕೆ ಇರುವ ಏಕೈಕ ಹೆಬ್ಬಾಗಿಲಾಗಿತ್ತಲ್ವಾ. ನಿನ್ನ ಮೇಲೆ ಮಕ್ಕಳೂ, ಅವರ ತುಂಟಾಟ, ತರಲೆ, ಮಾಡಿಕೊಂಡ ಪೆಟ್ಟುಗಳ ಬಗ್ಗೆ ವರದಿ ಒಪ್ಪಿಸುವ ಕನ್ಫೆಷನ್ ಕಿಂಡಿಯಾಗಿಯೂ ಇದು ಕೆಲವೊಮ್ಮೆ ಕಾರ್ಯ ನಿರ್ವಹಿಸಿದೆ ಅಲ್ವೇನೆ. ಮಕ್ಕಳು ಮನೆಗೆ ಬರಲು ತಡವಾದರೆ ನಮ್ಮ ಸಹಾಯ ಬೇಕಾದರೆ ಅವರ ನಾಲಿಗೆ ಮೇಲೆ ನಲಿಯುತ್ತಿರುವ ನಂಬರ್ ಇದೇ ಅಲ್ವಾ.

ತೀರ ಇತ್ತೀಚೆಗೆ ಈ ನಂಬರ್ ** ** ***461 ಅದ್ಯಾವ ಕಾರಣಕ್ಕೋ ಅಥವಾ ಸಕಾರಣವಿಲ್ಲದೆಯೋ ಅಂತೂ ಇಂತೂ ಬಂದು ಬಿಡ್ತು. ಇದೇ ನಂಬರ್ ನಮಗೆ ನಿಜಕ್ಕೂ ಬೇಕಿತ್ತಾ? ಗೊತ್ತಿಲ್ಲ. ನನ್ನ ವೃತ್ತಿಪರ ಕೆಲಸಗಳಿಗೆ ನನ್ನ ಮಾಮೂಲಿ ಕರಾರಿನಂತೆ ಅವರದ್ದೇ ಕರೆಸ್ಸಿಯಲ್ಲಿ ಆ ಯೋಜನೆ ಮುಗಿಯುವ ತನಕ ಬಳಸುವ ನಂಬರ್ನಂತೆ ಮಾಮೂಲಿಯಾಗಿ ಬಂದ ಇದನ್ನೂ ಪಡೆದೆ. ಮೊದಲಿನಂತಾಗಿದ್ದಿದ್ದರೆ ಇದನ್ನೂ ಅವರ ಯೋಜನೆಯ ಕೊನೆಯ ವರದಿಯೊಂದಿಗೇ ವಿಸರ್ಜಿಸಿ ಬಿಡುತ್ತಿದ್ದೆ. ಆದ್ರೆ ಇದಕ್ಕೆ ಮಾತ್ರ, ಅದೇನು ಮಾಯ ಮಂತ್ರ ಆಯ್ತೋ ಗೊತ್ತಿಲ್ಲ!

ಇದರ ಮಾಮೂಲಿ ಕನಿಷ್ಟ ಕರೆಮಿತಿಯ ಪ್ಲಾನನ್ನು ಅದ್ಯಾವ ಕಾರಣಕ್ಕೋ ಕಾಣೆ ಅನ್-ಲಿಮಿಟೆಡ್ ಪ್ಲಾನ್ಗೆ ಬದಲಾಯಿಸಿಕೊಂಡಿದ್ದೆ. ಈ ನಂಬರ್ರಿಗೆ ಮಾತ್ರ ವಿಷೇಶವಾಗಿದ್ದಂತೆ ನಿನ್ನ ಕರೆಗಳನ್ನು ಕತ್ತರಿಸಿ ನಾನೇ ಮರು ಕರೆ ಮಾಡುವುದೊಂದು ಕರಾರು ಮಾಡಿಕೊಂಡಿದ್ದೆ. ಅದರಂತೆ ನಡೆದಿದ್ದೆ. ಈ ನಂಬರ್ರಿನಿಂದ ಹೊರ ಹೋದ ನಿನ್ನ ನಂಬರ್ರಿನ ಕರೆಗಳ ಸಮಯವೇ ನನ್ನ ಜೀವಮಾನದ ಅತಿ ಹೆಚ್ಚು ಮಾತನಾಡಿದ ದಾಖಲೆಯಾಗಿ ಉಳಿದಿದೆ ಪುಟ್ಟಮ್ಮ.

ಇವತ್ತಿಗೂ ಈ ನಂಬರ್ರು ನಿನ್ನ ನೆನಪಿನ ಶಾಶ್ವತ ಪಳೆಯುಳಿಕೆಯಾಗಿ ನನ್ನ ಬಳಿಯೇ ಉಳಿದಿದೆ. ನಿನಗಾಗಿ ಮಾಡಿಸಿದ್ದ ಆ ಅನ್ ಲಿಮಿಟೆಡ್ ಕರೆಯ ಪ್ಲಾನ್ ಈಗ ಮಂತ್ಲೀ ಆಕ್ಟಿವೇಶನ್ಗೆ ಬೇಕಿರುವ ಮಿನಿಮಮ್ ಚಾರ್ಜ್ ಪ್ಲಾನ್ಗೆ ಬದಲಾಗಿದೆ. ಪ್ರತೀ ತಿಂಗಳು ವಾರಕ್ಕೆ ಮುನ್ನ ಅದೇ ಕೊನೆದಿನದ ರಿಮೈಂಡರ್ ಬರುವಂತೆ ಸೆಟ್ಟಿಂಗ್ ಮಾಡಿದ್ದು ಈ ನಂಬರ್ ಕೊನೆಯುಸಿರೆಳೆಯದಂತೆ ರೀಚಾರ್ಜ್ ಮಾಡಿಸಿ ಜೀವ ಉಳಿಸಿಕೊಳ್ಳುತ್ತಿದ್ದೇನೆ. ನನ್ನನ್ನೂ ಮತ್ತು ನಮ್ಮಿಬ್ಬರ ನಡುವೆ ನಿನ್ನೊಂದಿಗೆ ಹುಟ್ಟಿ ಬೆಳೆದ ಎಲ್ಲಾ ಸಂಭಂದಗಳನ್ನೂ ಮಧುರ ನೆನಪುಗಳನ್ನೂ ನನಗೊಬ್ಬನಿಗೇ ಬಿಟ್ಟು ಅದೆಷ್ಟು ಸುಲಭವಾಗಿ ಹೊರನಡೆದು ಬಿಟ್ಟೆಯಲ್ಲಾ ಹುಡುಗಿ.

ನನ್ನನ್ನು ಮತ್ತೆ ಒಬ್ಬಂಟಿಯಾಗಿಸಿ ನನ್ನ ಬದುಕಿನಿಂದಲೂ ಮತ್ತು ಈ ಪ್ರಪಂಚದಿಂದಲೂ ಬಹುದೂರ ಹೊರಟು ಮರೆಯಾದ ನಿನ್ನ ಚಿರ ನೆನೆಪುಗಳ ಕನವರಿಕೆಗಳ ನೆನಪಾಗಿ ಈ ನಂಬರ್ ಇಂದಿಗೂ ಉಸಿರಾಡುತ್ತಿದೆ.ಎಂದಾದರೂ ನಿನ್ನ ಮಿಸ್ಸಡ್ ಕಾಲ್ ಮತ್ತೊಮ್ಮೆ ಈ ನಂಬರ್ರಿನ ಬಾಗಿಲಿಗೆ ಬಂದು ಕದ ಬಡಿದೀತೇನೋ! ಅಥವಾ “ಕಾಲ್ ಮಾಡೋ ಕೋತಿ” ಎಂಬ ಪುಟಾಣಿ ಎಸ್ಸೆಮ್ಮೆಸ್ ನನ್ನ ಇನ್ ಬಾಕ್ಸಿನೊಳಗೆ ಬಂದು ಇಣುಕಿನೋಡುವುದೇನೋ ಎಂಬ ನಿರೀಕ್ಷೆಯೊಂದಿಗೆ.

ಇಂತಿ
ಎಂದೆಂದೂ ನಿನ್ನವನೇ….

???????????????????????????????

Advertisements