ಅದು ನನ್ನ ಹುಟ್ಟಿದ ಹಬ್ಬವೋ ಅಥವಾ ಮರುಹುಟ್ಟೋ !!!

ಅದೇನು ಹಣೇಬರವೋ ಏನೋ? ನಾನು ನಿನ್ನನ್ನು ಹೀಗೇ ಭೇಟಿಮಾಡಬೇಕೆಂದು ಪೂರ್ವ ನಿಶ್ಚಯವಾದಂತೆ ಕಾಣುತ್ತದೆ. ನನ್ನೆಲ್ಲ ಕಾರ್ಯಕ್ರಮಗಳೂ ಕನಿಷ್ಠ ವರ್ಷವೊಂದರಷ್ಟು ಮುಂಚಿತವಾಗಿ ಯೋಜಿತವಾಗಿರುತ್ತವೆ. ಅದನ್ನು ತಿಂಗಳಿಗೊಮ್ಮೆ ಮರು ಪರಿಶೀಲಿಸಿ ಪ್ರತೀ ವಾರಕ್ಕಾಗುವಷ್ಟು ಸಿದ್ಧತೆ ಮಾಡಿಕೊಂಡಿರುತ್ತೇನೆ. ಕನಿಷ್ಟ ನಾನು ಮಾಡುವ ರಾತ್ರಿ ನಿದ್ದೆಯಾದರೂ ಆ ದಿನ ಯಾವ ಹೋಟೆಲಿನಲ್ಲಿ ಅಥವಾ ಕಾಡಿನಲ್ಲಿ ಎಂಬುದೂ ನನಗೆ ಮೊದಲೇ ಗೊತ್ತಿರುತ್ತದೆ. ಅಂಥದ್ದರಲ್ಲಿ ಅದೆಲ್ಲೋ ಕಾಡಿನಲ್ಲಿ ತುರ್ತು ಕರೆಯೊಂದರ ಕಾರಣ ಕಣ್ಮರೆಯಾಗಿದ್ದವನಿಗೆ ನಿನ್ನಿಂದ ಬಂದ ತುರ್ತು ಕರೆಯೊಂದು ಏನೆಲ್ಲ ಮಾಡಿಬಿಟ್ಟಿತು.

ನಾನು ಮೊದಲೇ ನನ್ನ ಅತೀ ಸನಿಹದಲ್ಲಿರುವ ಬಂಧುಗಳಿಗೆ ಕನಿಷ್ಠ ನನ್ನ ಮುಂದಿನ ಒಂದು ವಾರದ ದಿನಚರಿಯ ವಿವರ ತಿಳಿಸಿರುತ್ತೇನೆ. ಅವರಲ್ಲಿ ನೀನೂ ಸೇರಿಕೊಂಡು ಬಹಳ ದಿನಗಳಾದವಲ್ಲವೇ! ಇತ್ತೀಚೆಗೆ ನೀನು ಯಾವಾಗಲೂ ನಾನು ನಿನಗೆ ಎಷ್ಟು ಹತ್ತಿರವಿರುವೆ? ಎಂಬ ಪ್ರಶ್ನೆ ಪದೇ ಪದೇ ಕೇಳಿ ಖಾತರಿ ಬೇರೆ ಮಾಡಿಕೊಂಡಿರುತ್ತೀ. ನನಗೂ ಅದೇ ಈರುಳ್ಳಿ ಸಿಪ್ಪೆ ಸುಲಿದು ಸುಲಿದು ಕೊನೆಗೆ ಮಧ್ಯದಲ್ಲಿ ಉಳಿಯುವ ಏಕೈಕ ಹಸಿರಿನ ಕೊಳವೆ ಒಳಗೆ ಇದ್ದೀಯ ಕಣೇ ಎಂದು ಹೇಳೀ ಹೇಳೀ ಸಾಕಾಗಿದೆ. ಅಷ್ಟು ಮನದಟ್ಟು ಮಾಡಿದರೂ ಹಠಕ್ಕೆ ಬಿದ್ದವಳಂತೆ ಆ ಕೊಳವೆಯಲ್ಲಿ ಎಗ್ಜಾಕ್ಟ್ಲೀ ಎಲ್ಲಿದ್ದೀನಿ ಹೇಳು ಮಾಮನ ಮಗನೇ ಅಂತ ಪೀಡಿಸುತ್ತೀ ಎಳೇ ಮಗುವಿನಂತೆ.

ಇಂತಿಪ್ಪ ನಿನಗೆ ನಾನು ಬೇರೆಲ್ಲರಿಗೆ ಹೇಳಿದಂತೆ ಈ ವಾರ ನಾನು ಕಾಡು ಹೊಕ್ಕು ವಾರದ ನಂತರ ಮರಳಿ ಬರುತ್ತೇನೆ ಅಷ್ಠೇ ಎಂದರೆ ಬಿಡುತ್ತೀಯಾ? ಯಾವ ಕಾಡು? ಅಲ್ಲಿ ಎಲ್ಲಿ? ಎಲ್ಲಿ ಊಟಮಾಡುತ್ತಿಯಾ? ಎಲ್ಲಿ ಮಲಗುತ್ತೀಯಾ? ಯಾಕೆ ಹೀಗೆ ಕಣ್ಮೆರೆಯಾಗುತ್ತೀಯಾ? ನಿನ್ನ ಮೊಬೈಲ್ ಯಾಕೆ ಬಳಸೊಲ್ಲ? ಎಂಬ ನಿನ್ನ ಪ್ರಶ್ನೆಗಳ ಎನ್ಕೌಂಟರ್ ಎದುರಿಸಿದ ಮೇಲೆಯೇ ತಾನೆ ನನ್ನ ಪಯಣದ ದಿನಗಳಿಗೆ ನಿನ್ನ ಒಪ್ಪಿಗೆಯ ಗ್ರೀನ್ ಸಿಗ್ನಲ್ ಸಿಗೋದು. ಹೀಗೆಲ್ಲ ನಿನಗೆ ವಿವರವಾಗಿ ತಿಳಿಸಿ ಒಪ್ಪಿಸಿ ಕಾಡಿನಲ್ಲಿ ಕಳೆದು ಹೋಗಿದ್ದವನಿಗೆ ಈ ಬಾರಿ ಯಾಕೋ ನನಗೇ ಅರಿಯದ ತಳಮಳ ಒಳಗೊಳಗೆ.

ನಾನು ಕಾಡಲ್ಲಿದ್ದರೂ ಅಲ್ಲಿ ಕಳೆಯುವ ಪ್ರತಿಯೊಂದೂ ಕ್ಷಣವೂ ಮ್ರುತ್ಯುವಿನ ಎದುರಿಗೆ ಎದೆಯೊಡ್ಡಿ ನಿಂತು ಸಾವಿನ ವೀರಮಾಲೆಯ ಧರಿಸಲು ತಲೆಯೊಡ್ಡಿ ಕಾಲವೇ ಚಲಿಸದೆ ನಿಂತಂತ ಅನುಭವದೊಳಗೆ ಸಿಕ್ಕಿಕೊಂಡಿದ್ದವನಿಗೆ ನಿನ್ನ ನೆನಪು ಮತ್ತೂ ಕಂಗೆಡಿಸಿತ್ತು. ನಾನು ಎಣಿಸಿದಂತೆ ಗಂಭೀರವಾದದ್ದು ಅಂಥದ್ದೇನು ಆಗದಿದ್ದರೂ ಯಾಕೋ ಮನಸ್ಸು ವಾರ ಪೂರಾ ಸರಿಯಿರಲೇ ಇಲ್ಲ. ನನ್ನೆಲ್ಲ ವೃತ್ತಿ ಸಂಭಂದಿಸಿತ ಪೂರ್ವಯೋಜಿತ ಭೇಟಿ,ಸಂಗ್ರಹ,ವಿನಿಮಯದ ಕೆಲಸ ಮುಗಿಸಿ ಅಂದು ರಾತ್ರಿ ಮುಂದಿನ ಊರಿಗೆ ಪಯಣ ಬೆಳೆಸುವವವಿದ್ದೆ. ಕಾಡು ಬಿಟ್ಟು ಹತ್ತಿರದ ಪಟ್ಟಣಕ್ಕೆ ನನ್ನ ಮುಂದಿನ ಪಯಣದ ಸಲುವಾಗಿ ಬಂದಿದ್ದೆ.

ಕಣ್ಮುಚ್ಚಿ ಮಲಗಿದ್ದ ನನ್ನ ಮೊಬೈಲ್ ಎಬ್ಬಿಸಿದ ತಕ್ಷಣವೇ ಒಳ ಬಂದದ್ದು ನಿನ್ನದೇ ನೂರೆಂಟ್ ಮೆಸೇಜ್ಗಳು. ನಾನು ಕಾಡಿನಲ್ಲಿದ್ದ ಪ್ರತೀ ದಿನದ ಬೆಳಗು ಮಧ್ಯಾಹ್ನ ರಾತ್ರಿಯ ಎಲ್ಲಾ ಸಮಯಗಳಲ್ಲಿ ನನ್ನ ಅತೀ ಅವಶ್ಯಕ ಜವಾಬ್ಧಾರಿಗಳನ್ನು ತಪ್ಪದೇ ನೆನಪಿಸಿದ್ದೆ. ಮರೆಯದೇ ನನ್ನ ಆರೋಗ್ಯದ ಬಗ್ಗೆ ಪ್ರತೀ ದಿನ ವಿಚಾರಿಸಿಕೊಂಡಿದ್ದೆ. ಎಲ್ಲವನ್ನೂ ಇನ್ನೂ ಓದಿ ಮುಗಿಸಿರಲೇ ಇಲ್ಲಾ. ಸರಿಯಾಗಿ ನೀನೇ ಕರೆಮಾಡಿದ್ದೆ. ನಿನ್ನ ಮಾತಿನಲ್ಲಿ ನನ್ನ ಆರೋಗ್ಯದ ಬಗ್ಗೆ ಇದ್ದ ಕಾಳಜಿ ಕಣ್ಣಿಗೆ ಕಟ್ಟಿದಂತೆ ವ್ಯಕ್ತವಾಗುತ್ತಿತ್ತು. ಅದೂ ಇದೂ ಒಂದು ವಾರದಿಂದ ಬಾಕಿ ಇದ್ದ ಎಲ್ಲಾ ವಿಷಯಗಳ ವರದಿ ಒಪ್ಪಿಸಿಬಿಟ್ಟಿದ್ದೆ.

ನಾನು ಏನೇ ಹೂ ಗುಟ್ಟಿದರೂ ನನ್ನ ಒಳ ಮನಸ್ಸಿನಲ್ಲಿದ್ದ ಕಳವಳ ಅರ್ಥವಾದವಳಂತೆ ಯಾಕೆ ಒಂಥರಾ ಇದ್ದೀರಾ, ಏನಾಯ್ತು? ಯಾಕೆ ಬಾಯ್ಬಿಟ್ಟು ಕೇಳ್ತಿಲ್ಲಾ? ಕೇಳೀ ಪ್ಲೀಸ್. ಮನಸ್ಸಿನಲ್ಲಿ ಏನನ್ನೂ ಇಟ್ಟುಕೋ ಬೇಡಿ ನೀವು ಕೊರಗೋದು ನೋಡೋಕಾಗುತ್ತಿಲ್ಲ, ನನಗೆ ಗೊತ್ತಾಗುತ್ತಿದೆ. ಬೇಗ ಹೇಳು ಬಾಬು ಎಂದಾಗ ನನಗೆ ಇನ್ನು ತಡೆಯದಾಗದೇ ಕೇಳಿಯೇ ಬಿಟ್ಟೆ. ಏನಾಯ್ತು ಹೇಳು? ಯಾಕೆ ನನ್ನಿಂದಾ ಏನನ್ನೋ ಮುಚ್ಚಿಡುತ್ತಿದ್ದೀಯಾ ಕೋತಿ? ಎಂದ ತಕ್ಷಣ ನಿನ್ನ ಧ್ವನಿ ಉಡುಗಿತ್ತು, ನೀನು ಅತ್ತಲಿಂದ ಅಳುತ್ತಿರುವ ಶಬ್ಧ ಕೇಳಿಸಿಕೊಳ್ಳದಾದೆ.

ಮುಂದೆ ನೀನು ನಡೆದದ್ದೆಲ್ಲಾ ವಿವರಿಸಿದ್ದೆ.ನಿನ್ನ ಪ್ರತಿಯೊಂದೂ ಖಾಸಗೀ ವಿಷಯಕ್ಕೆ ಧಕ್ಕೆ ಮಾಡಿದವನ ವಿವರಗಳನ್ನು ನೀನು ನೀಡುತ್ತಿದ್ದರೇ ನಾನಾಗಲೇ ನನ್ನ ಮುಂದಿನೂರಿನ ಪಯಣವನ್ನು ರದ್ದುಪಡಿಸಿದ ವಿವರವಾದ ಈಮೈಲ್ ನಿನಗೇ ಗೊತ್ತಿಲ್ಲದಂತೆ ರವಾನಿಸಿದ್ದೆ. ನನ್ನ ಅಂದಿನ ರಾತ್ರಿಯ ಪಯಣದ ಸುಖಕರ ಪಯಣದ ವ್ಯವಸ್ಥೆ ನನ್ನ ಮೊಬೈಲಿನ ಎಸ್ ಎಮ್ ಎಸ್ ನಲ್ಲೇ ಮಾಡಿ ಮುಗಿಸಿದ್ದೆ. ನಿನ್ನ ಕಥೆ ಮುಗಿಸಿದವಳಿಗೆ ನಾನು ಹೇಳಿದ್ದೆ ನಾಳೆ ಬೆಳಗ್ಗೆ ನಿನ್ನೊಂದಿಗಿರುತ್ತೇನೆ ಮತ್ತು ಆ ಎಲ್ಲಾ ಸುರಕ್ಷತಾ ವಿಧಿವಿದಾನಗಳನ್ನು ಮರು ಪರಿಶೀಲಿಸಿ ನಿನ್ನೆಲ್ಲ ಭಯಗಳನ್ನೂ ನಿವಾರಿಸಿರುತ್ತೇನೆ ಎಂದಿದ್ದೆ.

ನಿನಗಂತೂ ನಂಬಲೂ ಆಗದ ಬಿಡಲೂ ಆಗದ ಪರಿಸ್ಥಿತಿ. ನನ್ನಲ್ಲಿ ನೀ ಅದೆಷ್ಟು ಬೇಡಿಕೊಂಡಿದ್ದೆ ಇದನ್ನೆಲ್ಲಾ ನಾನೇ ನಿಭಾಯಿಸುತ್ತೇನೆ ನೀವೇನು ಬರುವುದು ಬೇಡವೆಂದಿದ್ದೆ. ಆದರೂ ನಾನು ನಿನಗೇ ತಿಳಿಸದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಾಗಿತ್ತು. ಆ ರಾತ್ರಿ ಪೂರಾ ನನ್ನ ಪ್ರತೀ ಕ್ಷಣಗಳಲ್ಲಿ ನೀನಿದ್ದೆ. ನನ್ನ ಮೊಬೈಲ್ ತನ್ನ ಕೊನೆಯುಸಿರು ಬಿಡುವತನಕವೂ ನಮ್ಮಿಬ್ಬರ ಮಾತುಕಥೆ ಸಾಗಿತ್ತು. ಬೆಳಗ್ಗೆ ಬೆಳಗ್ಗೆ ನಮ್ಮ ಮನೆಯ ಮುಂದಿದ್ದೆ. ಎಂದೆಂದೂ ತೆರೆದಿಟ್ಟಿರದ ಮೊದಲ ಗೇಟ್ ಓಪನ್ ಇತ್ತು. ಅದಕ್ಕೂ ಮುಂದೆ ನಾನು ಕಾಲಿಡಲು ಆಗದಂತೆ ನೀನು ಬಿಟ್ಟಿದ್ದ ಬಣ್ಣ ಬಣ್ಣ ತುಂಬಿದ ಹಸೀ ಹಸೀ ರಂಗೋಲಿ ನೆಲದ ಮೇಲೆ ನಗುತ್ತಾ ಸುಸ್ವಾಗತ ಹೇಳಿತ್ತು.

ನನ್ನ ಶೂ ಕಳಚಿದವನಿಗೆ ಆಗಿನ್ನ ನೀರಿನಲ್ಲಿ ತೊಳೆದು ಶುಧ್ಧವಾಗಿದ್ದ ನೆಲದ ಮೇಲೆ ನಡೆದು ನನ್ನ ಪಾದ ನೆನೆಯಬಾರದೆಂಬಂತೆ ಮೊದಲೇ ಯೋಚಿಸಿ ನೀನು ಒಣ ಬಟ್ಟೆಯೊಂದ ನೆಲಕ್ಕೆ ಹಾಸಿದ್ದೆ. ಮನೆಯ ಹೊಸಿಲು ದಾಟಿ ಒಳಗೆ ಹೆಜ್ಜೆ ಇಟ್ಟು ಅಲ್ಲೆ ಕದದ ಹಿಂದೆ ಕಾದು ನಿಂತಿದ್ದ ನಿನ್ನನ್ನು ನೋಡಿದವನಿಗೆ ಸೋಜಿಗವೊಂದು ಕಾದಿತ್ತು. ನಾನು ತುಂಬಾ ಇಷ್ಟ ಪಡುವ ಅದೇ ನವಿಲು ನವಿಲು ಬಣ್ಣಗಳ ಸೀರೆಯಲ್ಲಿ ಕೆತ್ತಿದ ಶಿಲ್ಪದಂತೆ ನಿಂತಿದ್ದೆ. ನಿನಗೆ ಅಲುಗಾಡಲೂ ಆಗದಂತೆ ಸ್ತಭ್ಧಳಾಗಿದ್ದೆ. ಯಾಕೋ ನನಗೆ ಮನಸ್ಸಿನೊಳಗೆ ಉಕ್ಕಿ ಬಂದ ಎಲ್ಲಾ ಭಾವನೆಗಳ ಅಲೆಗಳನ್ನೂ ಅದುಮಿಟ್ಟು ಅಲ್ಲೇ ಪಕ್ಕದ ಸೋಫಾದಲ್ಲಿ ಕುಳಿತುಕೊಂಡೆ.

ಮುಂದುವರಿಯಲಿದೆ….

???????????????????????????????

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s