ನನ್ನೊಳಗಿನ ಯುದ್ಧ – ಬಾಲ್ಯದ ನೆನಪಿಗೆ ದಕ್ಕಿದಂತೆ…

ನನಗೆ ನೆನಪಿರುವುದು ಅಮ್ಮ ಮತ್ತು ಅಕ್ಕಂದಿರು ತಂದು ಕೊಡುತ್ತಿದ್ದ ಬಾಲಮಿತ್ರ, ಚಂದಮಾಮ ಎಂಬ ಚಿತ್ರಿತ ಕಥೆಗಳ ರಾಜರು, ಯೋಧರು ಮಾತ್ರ. ಮೊದಮೊದಲು ಒಂದು ಕಥೆಯನ್ನು ಪೂರ್ತಿ ಓದಲು ಬಾರದಿರುತ್ತಿದ್ದರೂ, ಅದರಲ್ಲಿನ ಎಲ್ಲ ಚಿತ್ರಗಳನ್ನೂ ಸರ ಸರ ಎಂದು ತಿರುವಿ ಹಾಕಿ ಇಡೀ ಕಥೆಯನ್ನು ಚಿತ್ರಗಳ ಮೂಲಕವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರಲ್ಲೂ ಕುದುರೆ, ಆನೆ ಮೇಲೆ ಕುಳಿತ ಯೋಧರ ರಾಜರ ಚಿತ್ರಕಥೆಗಳಿದ್ದರಂತೂ ಮೊದಲ ತಿರುವಿಗೆ ಆ ಕಥೆಗಳೇ ಗುರಿಯಾಗುತ್ತಿದ್ದವು.

ಓದಲು ಬಂದ ನಂತರ ನನ್ನ ಮನಸ್ಸಿನಲ್ಲೂ ಅದೇ ರಾಜರ ಯುದ್ಧದ ಕಥೆಗಳೂ ಸ್ವಾತಂತ್ರ ಸಂಗ್ರಾಮದ ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪೂ ಸುಲ್ತಾನ ಮುಂತಾದವರ ಚಿತ್ರಕತೆಗಳು ಬಹಳ ದಿನಗಳ ತನಕ ಕಾಡುತ್ತಿದ್ದವು. ಕೆಲವೊಮ್ಮೆ ಕನಸಿನಲ್ಲೂ ಬಂದು ಬೆಳಗ್ಗೆ ಅದರ ಬಗ್ಗೆ ಅಮ್ಮನಲ್ಲೋ ಅಕ್ಕಂದಿರಲ್ಲೋ ಕುತೂಹಲಗೊಂಡು ವಿಚಾರಿಸಿಕೊಳ್ಳುತ್ತಿದ್ದೆ. ಅದರ ಮುಂದುವರಿದ ಭಾಗವಾಗಿ ಗೆಳೆಯರೊಂದಿಗೆ ಆಟವಾಡಲು, ಬಿಲ್ಲು, ಬಾಣ, ಗುರಾಣಿ, ಫಿರಂಗಿ, ತೋಪು ಮುಂತಾದವುಗಳ ಮಾದರಿ ಮಾಡಿ ಸಿದ್ಧ ಮಾಡಿಕೊಂಡಿರುತ್ತಿದ್ದೆ.

ಜೇಡಿ ಮಣ್ಣು ಸಿಕ್ಕರೂ, ಚಕ್ಕೋತ ಹಣ್ಣಿನ ಹೊರ ಸಿಪ್ಪೆ ಸಿಕ್ಕರೂ ಕೂಡ ಅದರಲ್ಲಿ ಫಿರಂಗಿ ತೋಪಿನ ಗಾಡಿ ಮಾಡಿ ಆಟಕ್ಕೆ ಸಿದ್ಧಮಾಡಿಕೊಳ್ಳುತ್ತಿದ್ದೆ. ಒಮ್ಮೊಮ್ಮೆ ನನ್ನ ಈ ಆಸಕ್ತಿಗೆ ಪೂರಕವಾಗಿ ನಾನಿಲ್ಲದಾಗ ಮನೆಯಲ್ಲಿ ಅಮ್ಮನೋ ಮಾವನೋ ಚಕ್ಕೋತ ಹಣ್ಣು ಸುಲಿದರೆ ಅದರಲ್ಲಿ ಅವರೂ ನನಗಾಗಿ ಆಟವಾಡಲು ಫಿರಂಗಿ ತೋಪಿನ ಗಾಡಿ ಸಿದ್ಧ ಮಾಡಿ ಇಟ್ಟಿರುತ್ತಿದ್ದರು. ಬಾನುವಾರ ಬಂತೆಂದರೆ ಸಾಕು, ನನ್ನ ಬೇಟೆ ಶುರುವಾಗುತ್ತಿತ್ತು. ನಾನು ಮಾಡಿಟ್ಟ ಬಿಲ್ಲು ಬಾಣಗಳ ಎದೆಗೇರಿಸಿಕೊಂಡು ಗೆಳೆಯರ ದಂಡಿನೊಂದಿಗೆ ತೋಟದ ಸಾಲುಗಳಲ್ಲಿ ನಮ್ಮ ಮನೆಗಳಲ್ಲಿ ನಮಗಾಗಿಯೇ ಸಾಕಿದ್ದ ನಾಯಿ ಮರಿಗಳ ಸೈನ್ಯ ದೊಂದಿಗೆ ಸಂಚರಿಸುತ್ತಿದ್ದೆವು.

ತೋಟಗಳಲ್ಲಿ ಮರದ ಮೇಲೆ ಕುಳಿತ ಹದ್ದು,ಕಾಗೆಗಳು ನಮ್ಮ ಕಣ್ಣಿಗೆ ಶತ್ರು ಸೈನಿಕರಂತೆ ಕಂಡು ಅವುಗಳ ಮೇಲೆ ನಮ್ಮ ಬಿಲ್ವಿದ್ಯೆಯನ್ನೆಲ್ಲ ಪ್ರಯೋಗಿಸಲು ಹೋಗುತ್ತಿದ್ದೆವು. ಆಗ ಅವುಗಳು ಒಮ್ಮೆ ನಮ್ಮತ್ತ ನಕ್ಕಂತೆ ಮಾಡಿ ಪುರ್ರಂತ ಹಾರಿ ಆಕಾಶದಲ್ಲಿ ಮರೆಯಾಗುತ್ತಿದ್ದವು. ನಮ್ಮ ಶಕ್ತಿಯ ಬಗ್ಗೆ ಅಚಲ ನಂಬಿಕೆಯಿದ್ದ ನಾವುಗಳು ಇದರಿಂದ ವಿಚಲಿತರಾಗದೇ, ತಕ್ಷಣ ಬೇಲಿಸಾಲಿನ ಮೇಲೆ, ತಲೆ ಈಚೆ ಹಾಕಿ ಮೇಲಕ್ಕೂ ಕೆಳಕ್ಕೂ ಕುಣಿಸುತ್ತಿದ್ದ ಹೆಂಟೆಗೊದ್ದಗಳಿಗೆ ಗುರಿಯಿಡುತ್ತಿದ್ದೆವು. ಅವುಗಳೋ ನಾವು ಬಿಲ್ಲೆತ್ತಿ ಬಾಣ ಹೂಡುವುದರೊಳಗೆ ಬೇಲಿಯೊಳಗಿನ ಹಸಿರಿನ ಮರೆಯಲ್ಲಿ ಕಣ್ಮರೆಯಾಗಿ ಬಿಡುತ್ತಿದ್ದವು. ನಿರಾಸೆಗೊಂಡ ನಾವುಗಳು ನಮ್ಮ ಶ್ವಾನದಳಕ್ಕೆ ಹುರಿದುಂಬಿಸಿ ಅವುಗಳನ್ನು ಹುಡುಕಲು ಹಚ್ಚುತ್ತಿದ್ದೆವು.

ಪ್ರಕೃತಿಯ ಪ್ರಿಯರ ಜೊತೆಗಿನ ಯುದ್ಧದಲ್ಲಿ ಸೋತು ಸುಣ್ಣವಾಗಿ ಕೊನೆಗೆ, ನಾವುಗಳೇ ಎರಡು ತಂಡಗಳಾಗಿ ಆ ರಾಜ್ಯ ಮತ್ತು ಈ ರಾಜ್ಯಗಳ ನಡುವೆ ಯುದ್ಧ ಸಾರಿಬಿಡುತ್ತಿದ್ದೆವು. ನಮ್ಮ ಬಿಲ್ಲು ಬಾಣಗಳು ಒಮ್ಮೊಮ್ಮೆ ಚೂಪಾದ ಜಾಲಿ ಮುಳ್ಳಿನ ತುದಿಹೊಂದಿದ್ದು ನಿಜಕ್ಕೂ ನಮ್ಮ ವೈರಿ ಪಡೆಯವರಿಗೆ ತಾಗಿ ಚುಚ್ಚಿ ರಕ್ತಬಂದ ಕಾರಣಕ್ಕೆ ನಮಗೆ ನಮ್ಮ ಮನೆಯವರಿಂದ ಪೆಟ್ಟುಬಿದ್ದು ನಮ್ಮ ಯುದ್ದಗಳು ಮತ್ತಷ್ಟು ಗುಪ್ತವಾಗಿ ನಡೆಯುತ್ತಿದ್ದವು. ಈ ರೀತಿಯ ಗುಪ್ತವಾದ ಮತ್ತು ಆಪ್ತರ ನಡುವೆ ಮಾತ್ರ ನಡೆಯುತ್ತಿದ್ದ ಯುದ್ಧಗಳು ಮತ್ತು ಅದರಿಂದುಂಟಾದ ಅನಾಹುತಗಳು ಮನೆಯವರಿಗೆ ವರದಿಯಾದದ್ದೇ ಕಡಿಮೆ. ಗೆಳೆತನದಲ್ಲಿ ಬಿರುಕುಬಿಡುವ ತನಕ ಈ ಅನಾಹುತಗಳು ಗೌಪ್ಯವಾಗಿರುತ್ತಿದ್ದವು.

ಮತ್ತೆ ನಮ್ಮ ಚಿತ್ರಿತ ಕಥೆಗಳ ಯುದ್ಧದ ಕನಸುಗಳು ಸಾಕಾರಗೊಳ್ಳುತ್ತಿದ್ದುದು ನಮ್ಮೂರು ಜಾತ್ರೆಗಳಿಗಾಗಿ ನಡೆಯುತ್ತಿದ್ದ ಕುರುಕ್ಷೇತ್ರ ನಾಟಕಗಳಲ್ಲಿ ನಮ್ಮನ್ನು ಯಾವುದೋ ರಾಜನ ಪಕ್ಕ ನಿಲ್ಲುವ ಸೈನಿಕರ ವೇಶಕ್ಕೆ ಸೇರಿಸಿಕೊಂಡಾಗ. ಆ ದಿನಗಳಲ್ಲಿ ನಮಗೆ ಮೈತುಂಬಾ ನೇತಾಡುವಂತೆ ಧರಿಸುತ್ತಿದ್ದ ಧಿರಿಸುಗಳಲ್ಲಿ ನಾವು ಅದೇ ದೇಶಗಳ ರಾಜರೇನೋ ಎಂಬಂತೆ ಬೀಗಿಕೊಂಡು ಮರೆಯದೆ ಫೋಟೋ ಹಿಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿಕೊಂಡಿರುತ್ತಿದ್ದೆವು. ನಾಟಕ ಮುಗಿದರೂ ಹಲವಾರು ತಿಂಗಳುಗಳ ತನಕ ಊರುತುಂಬಾ ನಮ್ಮ ಗೆಳೆಯರ ಸಂಗಡವಿದ್ದಾಗ ಅದೇ ಐತಿಹಾಸಿಕ ನಾಟಕದ ಸಂಭಾಷಣೆಗಳು ಮರುಬಳಕೆಗೊಳ್ಳುತ್ತಿದ್ದವು.

ಮತ್ತೆ ನನ್ನೊಳಗಿನ ಯುದ್ಧದ ನೆನಪುಗಳು ಕಾಡುವುದು ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭಂದವಾಗಿ ನಡೆಸಲ್ಪಡುತ್ತಿದ್ದ ನಾಟಕಗಳು, ವಿವಿಧ ವೇಶಭೂಷಣಗಳ ಸ್ಪರ್ಧೆಗಳ ಸಂಧರ್ಭಗಳಲ್ಲಿ. ನಾವು ನಾವೇ ತಂಡ ಕಟ್ಟಿಕೊಂಡು ನಮ್ಮ ಮೆಚ್ಚಿನ ದೈಹಿಕ ಶಿಕ್ಷಕರ ಮನವೊಲಿಸಿ ಆದಷ್ಟೂ ಐತಿಹಾಸಿಕ ಕಾದಂಬರಿಗಳನ್ನೇ ಆರಿಸಿಕೊಳ್ಳಲು ದಂಬಾಲು ಬೀಳುತ್ತಿದ್ದೆವು. ಅದರಲ್ಲಿ ನನಗೆ ಈ ಪಾತ್ರ ನಿನಗೆ ಈ ಪಾತ್ರವೆಂದು ಮೊದಲೇ ಪೂರ್ವನಿಯೋಜನೆಗೊಳಿಸಿಕೊಂಡು ಅದರಂತೆ ನಮ್ಮ ಶಿಕ್ಷಕರಲ್ಲಿ ನಿವೇದನೆ ಮಾಡುತ್ತಿದ್ದೆವು.

ಅವರು ಅದಕ್ಕೇನಾದರೂ ಒಪ್ಪಿ ಬಿಟ್ಟರೆ ನಮ್ಮಗಳ ಖುಷಿಗೆ ಮಿತಿಯೇ ಇಲ್ಲಾ. ತಕ್ಷಣವೇ ನಮ್ಮ ತಯಾರಿ ಪ್ರಾರಂಭಿಸಿಬಿಡುತ್ತಿದ್ದೆವು. ಶಾಲೆ ಮುಗಿದರೂ ನಮ್ಮ ಯುದ್ಧಗಳೂ ಆ ನಮ್ಮ ನಮ್ಮ ವೇಶಗಳೊಳಗೆ ಉಳಿದಿರುತ್ತಿದ್ದ ಆ ರಾಜರ ಭಾವಾವೇಶಗಳು ಮಾತ್ರ ಮುಗಿದಿರುತ್ತಿರಲಿಲ್ಲ. ನಮ್ಮ ಈ ಮುಗಿಯದ ಯುದ್ದಗಳಿಗೆ ಒಮ್ಮೊಮ್ಮೆ ನಮ್ಮನ್ನು ಹುಡುಕಿಕೊಂಡು ಶಾಲೆಯ ಬಳಿಯೋ, ನಮ್ಮ ಮಾಮೂಲಿ ದೇವಸ್ಥಾನದ ಹಿಂದಿನ ಬಯಲಿಗೋ, ಬಂದ ನಮ್ಮ ಮನೆಯ ನಾಯಿಗಳು ನಮ್ಮ ಯುದ್ಧದ ಕುದುರೆಗಳಾಗಿ ಮಾರ್ಪಾಡಾಗುತ್ತಿದ್ದವು.ಅವುಗಳ ಕಿವಿಗಳನ್ನೇ ಒಂದು ಕೈಯಲ್ಲಿ ಹಿಡಿದುಕೊಂಡು, ಎರಡೂ ತೊಡೆಗಳಿಂದ ಅದರ ಹೊಟ್ಟೆ ಭದ್ರವಾಗಿ ಹಿಡಿದುಕೊಂಡು ನಮ್ಮ ಯುದ್ಧದ ಸಂಭಾಷಣೆಗಳು ನಡೆಸಲ್ಪಡುತ್ತಿದ್ದವು.

ಇದಾವುದೂ ಅರ್ಥವಾಗದ ನಮ್ಮ ನಾಯಿಗಳು ಒಮ್ಮೊಮ್ಮೆ ಗೊಂದಲಗೊಂಡು ನಮ್ಮನ್ನು ಕೆಳಕ್ಕೆ ಕೆಡವಿ,ಹಿಂತಿರುಗಿ ನೋಡದಂತೆ ನಮ್ಮ ಕೈಗೆ ಮತ್ತೆ ಸಿಗದಂತೆ ಮಾಯವಾದದ್ದಿದೆ. ಇದೇ ಸಂಧರ್ಭಕ್ಕೆ ಕಾದಿದ್ದ ನಮ್ಮ ಎದುರಾಳಿಗಳು ಯುದ್ಧದಲ್ಲಿ ನಮ್ಮ ರಾಜ್ಯಕ್ಕೆ ಸೋಲುಂಟಾಯಿತೆಂದು ನಮ್ಮನ್ನು ಯುದ್ಧಕೈದಿಯನ್ನಾಗಿಸಿ ಕೀಳಾಗಿ ನಡೆಸಿಕೊಂಡದ್ದೂ ಇದೆ. ಈ ನಾಯಿಗಳ ಸಹವಾಸ ಬಹಳ ಕಷ್ಟವೆಂದರಿತು ನಮ್ಮ ಯುದ್ಧ ಪರಿಣತರು ಭಾನುವಾರಗಳಂದು ನಮ್ಮೂರಿನ ಮನೆಗಳಿಂದ ಬಯಲಲ್ಲಿ ಮೇಯಲು ಬರುವ ಎಮ್ಮೆಗಳನ್ನು ಆಯ್ಕೆಮಾಡಿಕೊಂಡದ್ದಿದೆ.

ಅವುಗಳ ಮೇಲೆ ಹತ್ತುವುದಷ್ಟೇ ನಮಗೆ ಸ್ವಲ್ಪ ಕಷ್ಟದ ಕೆಲಸ. ಸೈನಿಕರೆನಿಸಿಕೊಂಡವರ ಸಹಕಾರದಿಂದ ರಾಜನಾದವನು ಒಮ್ಮೆ ಎಮ್ಮೆಗಳ ವಿಶಾಲವಾದ ಬೆನ್ನಿನ ಮೇಲೆ ಹತ್ತಿ ಕುಳಿತರೆ ಮುಗಿಯಿತು. ಎಮ್ಮೆಗಳು ಅವುಗಳ ಪಾಡಿಗೆ ಹುಲ್ಲು ಮೇಯುತ್ತಿದ್ದರೆ ಮೆಲೆ ಕುಳಿತ ನಮ್ಮ ನಕಲಿ ರಾಜರುಗಳು ವೀರಾವೇಶದಿಂದ ಹೋರಾಟದ ಸಂಭಾಷಣೆಗಳಲ್ಲಿ ತಲ್ಲೀನರಾಗಿರುತ್ತಿದ್ದರು. ಅಲ್ಲಿಂದಲೇ ಅವರ ಬಿಲ್ಲು ಬಾಣಗಳನ್ನು ಹೂಡಿ ಎದುರು ದೇಶದ ಸೈನಿಕರನ್ನು ಗುರಿಯಾಗಿಸಿ “ಸುಯ್-ಸುಯ್” ಎಂಬ ಶಬ್ಧಸಹಿತವಾದ ಬಾಣಗಳನ್ನು ಬಿಡುತ್ತಿದ್ದರು. ಇವರಿಗೆ ಎದುರಾಗಿ ಮೇಯುವ ಎಮ್ಮೆಯ ಮೇಲೆ ಕುಳಿತ ಶತ್ರು ರಾಜನೂ ಇವರಿಗಿನ್ನ ಮೀರಿದ ಧ್ವನಿಯಲ್ಲಿ “ರೊಯ್- ರೊಯ್” ಎಂಬ ಶಬ್ಧಸಹಿತವಾದ ಬಾಣಗಳನ್ನು ಬಿಡುತ್ತಿದ್ದನು. ನೆಲದಲ್ಲಿ ಮರದ ತುಂಡುಗಳ ಮೊಂಡು ಕತ್ತಿಗಳೊಂದಿಗೆ ವೀರಾವೇಶದಿಂದ ಹೋರಾಡುತ್ತಿದ್ದ ಸೈನಿಕರು ಅವರವರ ರಾಜರ ಬಾಣಗಳನ್ನು ಗುರುತಿಟ್ಟುಕೊಂಡು ಮತ್ತೆ ಮತ್ತೆ ಆರಿಸಿ ಅವರವರದ್ದೇ ಬತ್ತಳಿಕೆಗಳಿಗೆ ತುಂಬಿಸಲು ಸಹಕರಿಸಬೇಕಿತ್ತು.

ಎಮ್ಮೆಗಳು ಹೊಟ್ಟೆತುಂಬಾ ಮೇಯ್ದು ಪಕ್ಕದಲ್ಲಿದ್ದ ನೀರುತುಂಬಿದ ಕಾಲುವೆಗಳ ಕಡೆ ನೀರು ಕುಡಿಯಲು ನಡೆದಾಗ ಮೇಲಿದ್ದ ರಾಜರುಗಳು ಕೆಳಗೆ ಹಾರಿ ತಪ್ಪಿಸಿಕೊಳ್ಳದಿದ್ದರೆ ಅವರ ಗತಿ ದೇವರೇ ಗತಿಯಾಗುತ್ತಿತ್ತು. ರಾಜರುಗಳನ್ನು ಹೊತ್ತುಕೊಂಡೇ ಎಮ್ಮೆಗಳು ನೀರಿನಲ್ಲಿ ಹಾಯಾಗಿ ಈಜಲು ಹೋದ ಸಂದರ್ಭಗಳಲ್ಲಿ ಈಜಲು ಬಾರದ ರಾಜರುಗಳು “ಲಬೋ ಲಬೋ” ಎಂದು ಬೊಬ್ಬೆ ಹೊಡೆದು ದಡದಲ್ಲಿದ್ದವರನ್ನು ಕರೆಯದಿದ್ದರೆ ಅವರ ನಾಟಕದ ರಾಜನ ಪಾತ್ರದಾರಿ ಅವರೊಂದಿಗೆ ಜೀವಂತ ನೀರುಪಾಲಾಗುತ್ತಿದ್ದುದು ಖಂಡಿತಾ.

sha 8

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s